Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ವೇದ, ಉಪನಿಷತ್ತು ಮತ್ತು ಪುರಾಣಗಳು

# ವೇದಗಳು ಸಾಮಾನ್ಯರಿಗೆ ಅರ್ಥಮಾಡಿಕೊಳ್ಳಲು ಸುಲಭವಾಗುವಂತೆ-ಋಷಿ ಮುನಿಗಳು-ಬ್ರಾಹ್ಮಣ ಗ್ರಂಥಗಳು, ಉಪನಿಷತ್ತು ಇತ್ಯಾದಿಗಳನ್ನೂ ರಚಿಸಿದರು. ಉಪನಿಷತ್ತುಗಳೇ ವೇದಾಂತದ ತಿರುಳು-ಎಂಬಷ್ಟು ಮಟ್ಟಿಗೆ ಪ್ರಖ್ಯಾತವಾದಾಗ ಕವಿಪುಂಗವರು ತಮ್ಮದೇ ಆದ ವಿಶಿಷ್ಟವಾದ ಅರ್ಥಸರಣಿಯನ್ನು ಪ್ರಚಾರ ಮಾಡಲು ಹೊಸ ಹೊಸ ಉಪನಿಷತ್ತುಗಳನ್ನು ರಚಿಸಿದರು. ಈ ಉಪನಿಷತ್ತುಗಳು ಸಾಕಷ್ಟು ಸಂಖ್ಯೆಯಲ್ಲಿ ಬೆಳೆದಿದ್ದರೂ ವೇದವಿದ್ವಾಂಸರು ಕೇವಲ ಹತ್ತನ್ನು ಮಾತ್ರ ಸರ್ವಮಾನಿತವೆನ್ನಬಹುದೆಂದು ಅಭಿಪ್ರಾಯಪಟ್ಟಿರುವರು.

ಉಪನಿಷತ್ತು-ಎಂಬ ಹೆಸರು ಬಂದೊಡನೆ, ಅದರ ಬಗ್ಗೆ ಅಪಾರ ಗೌರವ ಜನತೆಯಲ್ಲಿ ಬೆಳೆದು ಬಂದಿರುವುದರಿಂದ ನಾಲ್ಕು ಶತಕದಷ್ಟು ಉಪನಿಷತ್ತುಗಳ ರಚನೆಯಾಯಿತು. ಎಷ್ಟಾದರೂ ಮಾನವ ಸ್ವಭಾವ ಪರಿವರ್ತನಶೀಲ ಹಾಗೂ ಹೊಸತನ್ನು ಕಾಣುವ ಮನೋಭಾವಕ್ಕನುಸಾರ ನವೀನ ಸಾಹಿತ್ಯದ ಕಡೆಗೆ ಆಕರ್ಷಿತರಾದರು.

ಉಪನಿಷತ್ತುಗಳೂ ಸಹಾ ಸಾಮಾನ್ಯ ಜನರಿಗೆ ಅರಿತುಕೊಳ್ಳಲು ಸಾಧ್ಯವಾಗದೆಂದೂ, ಸರಳವಾದ ಭಾಷೆಯಲ್ಲಿ ಕಥಾರೂಪದಲ್ಲಿ ಬರುವ ಸಾಹಿತ್ಯದಿಂದ ಜನರಿಗೆ ಧರ್ಮದ ಬಗ್ಗೆ ಹೆಚ್ಚಾಗಿ ತಿಳಿಸಬಹುದೆಂದು ಅರಿವಾದೊಡನೆ ಪುರಾಣಗಳ ರಚನೆಗೆ ಪ್ರಾರಂಭವಾಯಿತು. ಹೆಚ್ಚಾಗಿ ಮಾತನಾಡುವ, ಓದುವ ಭಾಷೆ ಸಂಸ್ಕೃತವೇ ಆಗಿದ್ದ ಕಾರಣ ಪುರಾಣಗಳೂ ಸಹಾ ಸಂಸ್ಕೃತ ಭಾಷೆಯಲ್ಲಿಯೇ ರಚಿಸಲ್ಪಟ್ಟು ಬೆಳಕಿಗೆ ಬಂದವು.

ವೈದಿಕ ಭಾಷೆಯ ವೈಖರಿಯೇ ಬೇರೆಯಾದ ಕಾರಣ ಧರ್ಮಾಧರ್ಮಗಳನ್ನು ಸುಲಭವಾಗಿ ಅರಿಯಲು ಆ ನಂತರ ರಚಿಸಲ್ಪಟ್ಟ ಪುರಾಣಗಳು ಜನರಿಗೆ ಹೆಚ್ಚು ಆಕರ್ಷಕವಾದವು. ರಾಮಾಯಣ, ಭಾರತ, ಭಾಗವತಾದಿ ಪುರಾಣಗಳು ಪ್ರಾರಂಭದಲ್ಲಿ ಪಠ್ಯ ಪುಸ್ತಕವಾಗಿದ್ದ ವಿಚಾರ ಭೋಜಪ್ರಬಂಧವನ್ನು ಓದಿದವರಿಗೆ ಅರಿವಾಗಬಹುದು.

ಆದರೆ ಕವಿಗಳ, ಸಾಹಿತಿಗಳ ಸಂಖ್ಯೆ ಬೆಳೆದಂತೆ ಪುರಾಣಗಳ ಮೂಲರೂಪ ಬದಲಾಗಿ ಹೊಸ ಹೊಸ ರೂಪ ತಾಳಿದವಲ್ಲದೆ, ಸಂಖ್ಯೆಯೂ ಅದೇ ಅದೇ ಪ್ರಕಾರ ಬೆಳೆಯಿತು. ಜನರನ್ನು ಆಕರ್ಷಿಸಲು ಹೊರಟ ಪುರಾಣಗಳು ವಾಸ್ತವಿಕತೆಯನ್ನು ಬಿಟ್ಟು ಮನೋರಂಜನೆಗೆ ಹೊರಟು ಒಬ್ಬೊಬ್ಬ ಕವಿ ಒಂದೊಂದು ವಿಧವಾಗಿ ಬರೆಯುತ್ತಾ, ತಮ್ಮ ಕವಿತಾ ಪ್ರೌಢಿಮೆಯನ್ನು ಪ್ರದರ್ಶಿಸಲು ಹೊರಟರಲ್ಲದೆ ಪರಸ್ಪರ ವಿರೋಧ ಬರುವ ವಿಚಾರಗಳ ಕಡೆಗೂ ಗಮನವೀಯಲಿಲ್ಲ. ಕೊನೆಗೆ ಎಲ್ಲವನ್ನೂ ವ್ಯಾಸರ ಹೆಸರಿನಲ್ಲಿ ಪ್ರಕಟಿಸಿ ತಮ್ಮ ಸಾಹಿತ್ಯಕ್ಕೆ ಬೆಲೆ ಬರುವಂತೆ ಮಾಡಿಕೊಂಡರು.

(ವೈದಿಕ ಸಾಹಿತ್ಯ ಪ್ರಕಾಶನ ಸಮಿತಿ ಪ್ರಕಟಿಸಿದ ‘ಋಗ್ವೇದ ದರ್ಶನ’ದಿಂದ)

Leave a Reply

Your email address will not be published. Required fields are marked *