Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕೇರಳ ಸರಕಾರದಿಂದ ಕಾಸರಗೋಡು ಜಿಲ್ಲೆಯ ಪಶು ಚಿಕಿತ್ಸಾಲಯಗಳ ಕಡೆಗಣನೆ !

ಉಪ್ಪಳ: ಕಾಸರಗೋಡು ಜಿಲ್ಲೆಯ ಬಹುತೇಕ ಪಶು ಚಿಕಿತ್ಸಾಲಯಗಳಲ್ಲಿ ವೈದ್ಯರ ಹಾಗೂ ಸಿಬ್ಬಂದಿಗಳ ಕೊರತೆಯಿಂದ ಪಶು ಸಂಗೋಪನೆಯ ಮೇಲೆ ತೀವ್ರ ದುಷ್ಪರಿಣಾಮ ಬೀರಿ ಅತಂತ್ರ ಸ್ಥಿತಿಯಲ್ಲಿ ಹೈನುಗಾರರು ಹೈರಾಣರಾಗುತ್ತಿದ್ದಾರೆ.

ಜಿಲ್ಲೆಯ 42 ಪಶು ಚಿಕಿತ್ಸಾಲಯಗಳಲ್ಲಿ 18 ಮಂದಿ ವೈದ್ಯರು ಮಾತ್ರ ಕಾರ್ಯಾಚರಿಸುತ್ತಿದ್ದು, ಪ್ರತಿಯೊಬ್ಬ ವೈದ್ಯನಿಗೆ ಎರಡಕ್ಕಿಂತ ಹೆಚ್ಚು ಆಸ್ಪತ್ರೆಗಳಲ್ಲಿ ಹೆಚ್ಚುವರಿ ಸೇವೆ ವಹಿಸಿಕೊಡಲಾಗಿದೆ. ಇದರಿಂದಾಗಿ ವೈದ್ಯರು ಹಾಗೂ ಹೈನುಗಾರರು ಕಷ್ಟಪಡಬೇಕಾದ ಶೋಚನೀಯ ಪರಿಸ್ಥಿತಿ ಸೃಷ್ಠಿಯಾಗಿದೆ.

ಇದರಿಂದಾಗಿ ಪಶು ಸಂಗೋಪನಾ ಇಲಾಖೆಯ ವಿವಿಧ ಯೋಜನೆಗಳು ಮತ್ತು ತ್ರಿಸ್ತರ ಪಂಚಾಯಿತಿಗಳು ಮೀಸಲಿರಿಸುವ ಯೋಜನೆಗಳ ಜಾರಿಗೆ ಅಡಚಣೆಯುಂಟಾಗಿದೆ. ಜೊತೆಗೆ, 15 ಲೈವ್ಸ್ ಟಾಕ್ ಇನ್ಸ್ ಪೆಕ್ಟರ್ ಗಳ ಹುದ್ದೆ ತೆರವಿದೆ. ಜಿಲ್ಲೆಯಲ್ಲಿ 24 ವೆಟಿನರಿ ವೈದ್ಯರುಗಳ ಹುದ್ದೆ ತೆರವಾಗಿದೆ. ಇದರಲ್ಲಿ 16 ಹುದ್ದೆಗಳನ್ನು ಪಿ.ಎಸ್.ಸಿ ಮೂಲಕ ಭರ್ತಿಗೊಳಿಸಲು ವರದಿ ಸಲ್ಲಿಸಲಾಗಿದ್ದರೂ, ಇದುವರೆಗೆ ಕೇವಲ ಆರು ಮಂದಿಯನ್ನು ಮಾತ್ರ ನೇಮಕಗೊಳಿಸಿ, ಉಳಿದಂತೆ ಕಡೆಗಣಿಸಲಾಗಿದೆ.

19 ವಾರ್ಡ್ ಗಳನ್ನು ಹೊಂದಿರುವ ಪೈವಳಿಕೆ ಗ್ರಾಮ ಪಂಚಾಯತ್ ಗೆ ಕಾಯರ್ಕಟ್ಟೆ ಸಮೀಪದ ಲಾಲ್ ಬಾಗ್ ನಲ್ಲಿರುವ ಪಶು ಚಿಕಿತ್ಸಾಲಯ ಇದೀಗ ಇದ್ದೂ ಇಲ್ಲದಂತೆ ಉಪಯೋಗಕ್ಕೆ ಲಭ್ಯವಾಗುತ್ತಿಲ್ಲ. ಕಳೆದ ಕೆಲವು ವರ್ಷಗಳಿಂದ ಇಲ್ಲಿಗೆ ಖಾಯಂ ವೈದ್ಯರ ನೇಮಕಾತಿಯಾಗದ ಕಾರಣಕ್ಕೆ ಹೈನುಗಾರರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಕುರುಡಪದವು, ಸಿರಂತ್ತಡ್ಕ, ಚಿಪ್ಪಾರು, ಕಳಾಯಿ, ಪೈವಳಿಕೆ, ಅಂಬಿಕಾನ, ಬೀಡುಬೈಲು, ಮಾಣಿಪ್ಪಾಡಿ ಮುಂತಾದ ಪ್ರಮುಖ ಕೃಷಿ ಪ್ರಧಾನ ಪ್ರದೇಶಗಳು ಈ ಚಿಕಿತ್ಸಾಲಯ ವ್ಯಾಪ್ತಿಗೆ ಒಳಪಟ್ಟಿದೆ. ಇದೀಗ ಇಲ್ಲಿ ಅರೆ ಕಾಲಿಕ ವೈದ್ಯರಿರುವುದರಿಂದ ವೈದ್ಯರ ಲಭ್ಯ ವೇಳೆ ಮತ್ತು ಹೈನುಗಾರರ ಅಗತ್ಯದ ನಡುವೆ ಅಂತರಗಳು ಏರ್ಪಟ್ಟು ಚಿಕಿತ್ಸಾ ಕೇಂದ್ರ ಉಪಯೋಗ ಶೂನ್ಯವಾಗಿದೆ. ಒಬ್ಬರು ವೈದ್ಯರು, ಒಬ್ಬರು ಲೈವ್ ಸ್ಟಾಕ್ ಇನ್ಸ್ ಪೆಕ್ಟರ್, ಒಬ್ಬರು ಔಷಧಿ ವಿತರಕರು ಹಾಗೂ ಸಹಾಯಕರ ಅಗತ್ಯವಿದ್ದು, ಇದೀಗ ಸಹಾಯಕರೊಬ್ಬರು ಮಾತ್ರ ಪೂರ್ಣಾವಧಿ ಕೆಲಸ ನಿರ್ವಹಿಸುತ್ತಿದ್ದಾರೆ.

ಔಷಧಗಳ ಕೊರತೆ

ಇಲ್ಲಿಯ ಪಶು ಚಿಕಿತ್ಸಾಲಯದಲ್ಲಿ ವೈದ್ಯರ ಕೊರತೆ ಮಾತ್ರವಲ್ಲ, ಅಗತ್ಯ ಪ್ರಮಾಣದ ಔಷಧಗಳು ಸಹ ಲಭ್ಯವಾಗುತ್ತಿಲ್ಲವೆಂದೂ ಹೈನುಗಾರರು ಅವಲತ್ತುಕೊಂಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಕಟ್ಟಡಗಳಿಗೆ ಪ್ರತಿವರ್ಷ ಧನ ವಿನಿಯೋಗಿಸುತ್ತಿರುವುದು ಕಂಡು ಬರುತ್ತಿದ್ದು, ಆದರೆ ಆ ಮೊತ್ತವನ್ನು ಪಶು ಔಷಧಿಗಳಿಗಾಗಿ ಸಮರ್ಪಕಕವಾಗಿ ಬಳಸುತ್ತಿರುವುದು ಕಂಡುಬರುತ್ತಿಲ್ಲ.

ಸುಮಾರು ಎಂಟು ಸಾವಿರಕ್ಕಿಂತಲೂ ಅಧಿಕ ಮಂದಿ ಹೈನುಗಾರರಿಗೆ ಉಪಯೋಗಕ್ಕೆ ಅತ್ಯಗತ್ಯವಿರುವ ಈ ಪಶು ಚಿಕಿತ್ಸಾಲಯಕ್ಕೆ ಅಗತ್ಯ ಪೂರ್ಣಕಾಲಿಕ ವೈದ್ಯರನ್ನು ನೇಮಿಸಬೇಕಿದೆ. ಮಳೆಗಾಲ ಸಮೀಪಿಸುತ್ತಿರುವಂತೆ ಗೊರಸು ಸೀಳುವಿಕೆಯಂತಹ ಹಲವು ಕಾಯಿಲೆಗಳು ಹಸುಗಳಿಗೆ ಕಾಣಿಸಿಕೊಳ್ಳುತ್ತಿದ್ದು, ಈ ಸಂದರ್ಭ ಹೈನುಗಾರರಿಗೆ ಅಗತ್ಯ ಮಾರ್ಗದರ್ಶನ ಮತ್ತು ಚಿಕಿತ್ಸೆಗೆ ಸಮರ್ಥ ವೈದ್ಯರ ಅಗತ್ಯವಿರುತ್ತದೆ.
ಪ್ರಸ್ತುತ, ಈ ಪಶುಚಿಕಿತ್ಸಾ ಕೇಂದ್ರ ವ್ಯಾಪ್ತಿಯ ಹೈನುಗಾರರು ಕೃತಕ ಗರ್ಭಧಾರಣೆ ಸಹಿತ ಹಸು, ಕೋಳಿ, ಆಡು ಮೊದಲಾದ ಸಾಕು ಪ್ರಾಣಿಗಳ ಚಿಕಿತ್ಸೆಗೆ ನೆರೆಯ ಕರ್ನಾಟಕ ರಾಜ್ಯದ ವಿವಿಧ ಚಿಕಿತ್ಸಾ ಕೇಂದ್ರಗಳನ್ನು ಆಶ್ರಯಿಸುವಂತಾಗಿದೆ. ನಿರ್ವಹಣಾ ವೆಚ್ಚ ಮತ್ತು ಸಂದರ್ಭಕ್ಕನುಸರಿಸಿ ವೈದ್ಯರ ಸೇವೆ ಲಭ್ಯವಾಗದ ಸ್ಥಿತಿಯಿಂದ ಅನೇಕರು ಈಗಾಗಲೇ ಪಶುಸಂಗೋಪನೆಯಿಂದ ದೂರವಾಗುವ ಬಗ್ಗೆ ಯೋಚಿಸತೊಡಗಿದ್ದಾರೆ.
ಸ್ಥಳೀಯ ಆಡಳಿತ ಸಂಸ್ಥೆಗಳು ಮತ್ತು ಕೇರಳ ರಾಜ್ಯ ಸರಕಾರ ಮತ್ತು ಪಶುಸಂಗೋಪನಾ ಇಲಾಖಾಧಿಕಾರಿಗಳು ಕಾಸರಗೋಡು ಜಿಲ್ಲೆಯಲ್ಲಿರುವ ಪಶು ಚಿಕಿತ್ಸಾಲಯಗಳಲ್ಲಿನ ವೈದ್ಯರ ಸಹಿತ ಇತರ ಸಮಸ್ಯಗಳನ್ನು ಮನಗಂಡು ಅವುಗಳ ಪರಿಹಾರಕ್ಕೆ ತುರ್ತು ಕ್ರಮಗಳನ್ನು ಕೈಗೊಳ್ಳುವ ಅಗತ್ಯವಿದೆ.

Leave a Reply

Your email address will not be published. Required fields are marked *