Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ವೇದಜ್ಞಾನ ಶಾಶ್ವತ ಜ್ಞಾನ, ವೇದಜ್ಞಾನದ ನಾಶ ಅಸಾಧ್ಯ

# ಸೃಷ್ಟಿಯ ಆದಿ, ಅಂತ್ಯ, ಅಗಾಧತೆ, ಅದ್ಭುತಗಳನ್ನು ಸುಲಭದಲ್ಲಿ ಅರಿಯುವುದು ಸಾಧ್ಯವಾಗದ ಮಾತು. ಹಾಗಾಗಿ ಜನಸಾಮಾನ್ಯರಿಗೂ ವೇದಗಳಲ್ಲಿನ ಜ್ಞಾನವನ್ನು ತಿಳಿಸುವ ಉದ್ಧೇಶದಿಂದ ರಚನೆಗೊಂಡ ಕಥಾರೂಪಕಗಳೇ ಪುರಾಣಗಳು. ಆದರೆ ಜನರು ಪುರಾಣಗಳಲ್ಲಿನ ಕಥೆಗಳಿಗೆ ಮಾತ್ರ ಒತ್ತುಕೊಟ್ಟು ಅದರ ತಾತ್ಪರ್ಯವನ್ನು ಕಡೆಗಣಿಸಿರುವುದರಿಂದ ಜನರಿಗೆ ಲಾಭಕ್ಕಿಂತ ನಷ್ಟವೇ ಅಧಿಕವಾಯಿತು. ವೇದಗಳನ್ನು ಅರ್ಥಮಾಡಿಕೊಳ್ಳಲಾಗದೆ, ಪುರಾಣಗಳಿಂದ ಉತ್ತರವೂ ದೊರಕದೆ ಯೋಚನೆಗೊಳಗಾದ ಜನತೆಗೆ ಇಂದು ಆಕಾಶದಲ್ಲೆಲ್ಲೋ ಇರುವ ದೇವನೊಬ್ಬನಿಂದ ನಡೆಸಲ್ಪಡುವ ಈ ಸೃಷ್ಟಿಯ ಸುಲಭ ಕಲ್ಪನೆ ಗೊಂದಲಗಳಿಗೆ ತಾತ್ಕಾಲಿಕ ಪರಿಹಾರವನ್ನು ಕೊಡುವುದು ಸಹಜವೇ ಆಗಿದೆ.

ವೇದಗಳಲ್ಲಿ ವಿವರಿಸಿರುವ ಜ್ಞಾನವನ್ನು ‘ಸನಾತನ’ ಅಥವಾ ‘ಶಾಶ್ವತ ಜ್ಞಾನ’ ಎಂದು ಹೇಳಲಾಗುತ್ತದೆ. ಆ ಜ್ಞಾನವನ್ನು ಯಾರಿಗೂ ನಾಶಮಾಡಲು ಸಾಧ್ಯವಿಲ್ಲ. ಹಾಗಾಗಿ ವೇದಗಳನ್ನು ಯಾರಾದರೂ ಹೊಗಳಿದರೂ ತೆಗಳಿದರೂ ಅದಕ್ಕೆ ಪ್ರತಿಕ್ರಿಯಿಸಬೇಕಾಗಿ ಬರುವುದಿಲ್ಲ. ವೇದಗಳನ್ನು ಯಾರ ಮೇಲೂ ಹೇರುವಂತಿಲ್ಲ. ಮನೆ ಮನೆಗೆ ತೆರಳಿ ಒತ್ತಾಯದಿಂದ ಮನವರಿಕೆ ಮಾಡಲು ಸಾಧ್ಯವಾಗುವ ವಿಷಯ ಅದಲ್ಲ. ಆ ಜ್ಞಾನವನ್ನು ಹೊಂದುವ ಬಯಕೆ ಜೀವಿಯೊಂದಕ್ಕೆ ತಾನಾಗಿ ಬರಬೇಕಾಗುತ್ತದೆ.

ರೇಡಿಯಂನ ಅಸಂಖ್ಯಾತ ಎಲೆಕ್ಟ್ರಾನ್ ಗಳಲ್ಲಿ ಕೆಲವು ಮಾತ್ರ ಹೊರ ಚಿಮ್ಮುತ್ತಾ ರೇಡಿಯಂನ ತುಣುಕನ್ನು ನಿತ್ಯ ಬೆಳಗಿಸುವಂತೆ ವಿಶ್ವದಾದ್ಯಂತ ಇರುವ ಅಸಂಖ್ಯಾತ ಭೂಮಿಗಳಲ್ಲಿ ಕೆಲವೇ ಕೆಲವು ಜೀವಿಗಳು ಮಾತ್ರ ಅಂತಹ ಋತಜ್ಞಾನವನ್ನು ಪಡೆದು ಮುಕ್ತಿಯನ್ನು ಹೊಂದಿ ತಮ್ಮ ತಮ್ಮ ಭೂಮಿಗಳನ್ನು ಬೆಳಗಿಸುತ್ತಾರೆ.

ಸಾಗರಕ್ಕೆ ಕಸ ಎಸೆದರೂ ವಿಷ ಸುರಿದರೂ ಏನೇನೂ ವ್ಯತ್ಯಾಸವಾಗುವುದಿಲ್ಲ. ಅದು ನೇರವಾಗಿ ಕುಡಿಯಲು ಬರುವುದಿಲ್ಲ. ಆದರೆ ನಾವು ಯಾವ ಪಾನೀಯವನ್ನು ಕುಡಿದರೂ ಅದರ ಮೂಲ ಸಾಗರವೇ ಇರುತ್ತದೆ. ಅದೇ ರೀತಿ ವಿಶ್ವದ ಯಾವುದೇ ಸಿದ್ಧಾಂತವನ್ನು ನಾವು ಸ್ವೀಕರಿಸಿದರೂ ಅದು ವೇದಗಳಿಂದಲೇ ಪ್ರಾರಂಭವಾಗಿ ವೇದಗಳಲ್ಲೇ ಕೊನೆಗೊಳ್ಳುತ್ತದೆ. ಸೃಷ್ಟಿಯ ಬಗ್ಗೆ, ಪ್ರಕೃತಿಯ ಬಗ್ಗೆ ಅದೇನೇ ಅರಿವನ್ನು ಬೆಳೆಸಿಕೊಂಡರೂ ಅದು ವೇದಗಳ ಸಾರವೇ ಆಗಿರುತ್ತದೆ.

ಹಾಲನ್ನು ಕುಡಿಯುವವರಿಗೆ ಸಾಗರವನ್ನು ಅರಿತುಕೊಂಡು ಏನು ಪ್ರಯೋಜನ ಎಂದು ಅನಿಸುವುದು ಸಹಜವೇ ಆದರೂ ನಮ್ಮ ಹಿರಿಯರು ನಮಗೆ ಬಳುವಳಿಯಾಗಿ ಕೊಟ್ಟ ಅದ್ಭುತ ಜ್ಞಾನ ಭಂಡಾರವಾದ ವೇದಗಳನ್ನು ಅರಿತುಕೊಳ್ಳುವುದರಿಂದ ನಮ್ಮ ಯಾವುದೇ ಸಿದ್ಧಾಂತದ ಅಡಿಪಾಯ ಇನ್ನಷ್ಟು ಗಟ್ಟಿಯಾಗುತ್ತದೆ.

ಆಸ್ತಿಕರಾದರೂ, ನಾಸ್ತಿಕರಾದರೂ, ದೇವರನ್ನು ಮೂರ್ತರೂಪದಲ್ಲಿ ಆರಾಧಿಸುತ್ತಿದ್ದರೂ ಅಮೂರ್ತರೂಪದಲ್ಲಿ ಪರಿಗಣಿಸುತ್ತಿದ್ದರೂ, ಒಂದೇ ದೇವರ ಕಲ್ಪನೆ ಇದ್ದರೂ ನೂರಾರು ದೇವರುಗಳ ಬಗ್ಗೆ ನಂಬಿಕೆ ಇದ್ದರೂ, ದ್ವೈತ ಸಿದ್ಧಾಂತಿಯಾಗಿದ್ದರೂ ಅದ್ವೈತಿಯಾಗಿದ್ದರೂ ವೇದಗಳನ್ನು ತಿಳಿದುಕೊಳ್ಳುವುದರಿಂದ ಅವರವರ ನಂಬಿಕೆಗಳಿಗೆ ಹೆಚ್ಚು ಅರ್ಥ ಬರುತ್ತದೆ. ಅದು ವೇದಗಳ ವಿಶೇಷ. ವೇದ ಎಂದರೆ ಪರಿಪೂರ್ಣ ಜ್ಞಾನ. ಹಾಗಾಗಿ ಅದು ನಮ್ಮನ್ನು ಯಾವುದೇ ಧರ್ಮ, ಪಂಥ, ಜಾತಿ, ನೀತಿ, ಸಿದ್ಧಾಂತಗಳಿಗೆ ಸೀಮಿತಗೊಳಿಸುವುದಿಲ್ಲ.

– ತೀರ್ಥರಾಮ ವಳಲಂಬೆ (‘ಪುನರ್ಜನ್ಮ ಮತ್ತು ಪುರುಷಾರ್ಥ’ ಗ್ರಂಥದಿಂದ)

Leave a Reply

Your email address will not be published. Required fields are marked *