Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಪ್ರತಿಯೊಂದು ಸಿದ್ಧಾಂತಗಳೂ ವೇದಗಳಲ್ಲಿ ಅಡಕವಾಗಿವೆ

# ಬ್ರಹ್ಮಾಂಡದ ಬಗ್ಗೆ ವಿಜ್ಞಾನ ಇಂದು ಕಂಡುಹಿಡಿದ ಬಹಳಷ್ಟು ವಿಷಯಗಳನ್ನು ವೇದಗಳಲ್ಲಿ ಸಾವಿರಾರು ರ್ಷಗಳ ಹಿಂದೆಯೇ ಸ್ಪಷ್ಟವಾಗಿ ವಿವರಿಸಲಾಗಿದೆ. ಆದರೆ ಅಂದಿನ ದಿನಗಳಲ್ಲಿ ಅತ್ಯಂತ ಸಂಕೀರ್ಣ ಸಂಗತಿಯಾದ ಸೃಷ್ಟಿ ವೈಚಿತ್ರ್ಯವನ್ನು ಜನಸಾಮಾನ್ಯರಿಗೆ ಅರ್ಥಮಾಡಿಕೊಳ್ಳುವ ಸಾಧ್ಯತೆ ಇರಲಿಲ್ಲ. ಹಾಗಾಗಿ ವ್ಯಾಸಮುನಿಗಳು ವೇದಗಳ ಸಾರವನ್ನು ಜನಸಾಮಾನ್ಯರಿಗೆ ಅರ್ಥವಾಗಬಹುದಾದಂಥ ಕಥೆಗಳ ಮೂಲಕ ವಿವರಿಸುವ ಪ್ರಯತ್ನವನ್ನು ಮಾಡಿದರು. ಅಂತಹ ಕಥಾಹಂದರಗಳೇ ನಮಗೆ ಈಗ ಲಭ್ಯವಿರುವ ಪುರಾಣಗಳು. ಆದರೆ ಅಂತಹ ಪುರಾಣಗಳಿಗೆ ಆಧಾರವಾದ ಪರಿಪೂರ್ಣ ಜ್ಞಾನವಾದ ವೇದಗಳು ಮಾತ್ರ ಜನರಿಂದ ದೂರವಾಗಿಯೇ ಉಳಿದವು. ಪುರಾಣಗಳೇ ನಮ್ಮ ಮಾರ್ಗದರ್ಶಿಗಳಾದವು.

ವೇದಗಳನ್ನು ಸಾಮಾನ್ಯ ಮಾನವನ ಆಲೋಚನಾ ವ್ಯಾಪ್ತಿಯೊಳಗೆ ತರುವ ಕಾರ್ಯ ಸುಲಭ ಸಾಧ್ಯವಲ್ಲದ ಕಾರಣ ಅಂತಹ ಜ್ಞಾನವೊಂದನ್ನು ಸರಳಗೊಳಿಸುವ ಸರಳಗೊಳಿಸವ ಕಾರ್ಯದಲ್ಲಿ ಹಲವರು ತಮ್ಮ ತಮ್ಮ ಕರ್ತವ್ಯವನ್ನು ನಿಭಾಯಿಸಿದರು. ವೇದಗಳಲ್ಲಿ ವಿವರಿಸಿದ ಹಲವು ಶಕ್ತಿ ರೂಪಗಳನ್ನು ಒಲಿಸಿಕೊಳ್ಳುವ ಕೆಲವು ಆರಾಧನಾ ಪದ್ಧತಿಗಳೂ ರೂಪಗೊಂಡವು. ಅಂತಹ ಆರಾಧನಾ ಕ್ರಿಯೆಗಳಿಗೆ ಅಗತ್ಯ ಎನಿಸಿದ ಮಡಿಮೈಲಿಗೆಗಳೆಲ್ಲ ಜಾರಿಗೆ ಬಂದವು. ಈ ಎಲ್ಲಾ ಬೆಳವಣಿಗೆಗಳಲ್ಲಿ ಕೆಲವು ಎಡಟ್ಟುಗಳೂ ನಡೆದುಹೋದವು.

ವೇದಗಳು ವಿಶ್ವದ ಸಮಗ್ರ ಜ್ಞಾನರೂಪಗಳಾದ ಕಾರಣ ಪ್ರತಿಯೊಂದು ಸಿದ್ಧಾಂತಗಳೂ ಅದರೊಳಗೆ ಅಡಕವಾಗಿವೆ. ದ್ವೈತ, ಅದ್ವೈತ, ಆಸ್ತಿಕವಾದ, ನಾಸ್ತಿಕವಾದ, ಏಕದೇವತಾರಾಧನೆ, ಹಾಗೇನೇ ಬಹುದೇವತಾರಾಧನೆ, ಪೂಜೆ, ಪ್ರಾರ್ಥನೆ, ಧ್ಯಾನ, ತಪಸ್ಸು, ಹೀಗೆ ಎಲ್ಲಾ ರೀತಿಯ ಚಿಂತನೆಗಳನ್ನು ವೇದಗಳಲ್ಲಿ ಪ್ರಸ್ತಾಪಿಸಲಾಗಿದೆ. ಜನರು ತಮ್ಮ ತಮ್ಮ ಅಭಿರುಚಿಗಳ ನೆಲೆಯಲ್ಲಿ ವೇದಗಳಿಂದ ತತ್ತ್ವಗಳನ್ನು ಆರಿಸಿ ತೆಗೆದು ಅದಕ್ಕೆ ವ್ಯಾಖ್ಯಾನವನ್ನು ಕೊಟ್ಟು ಅದರ ಸಮರ್ಥನೆಗೆ ಮುಂದಾದರು. ಅದೇ ಇಂದು ನಮ್ಮಲ್ಲಿ ಇಷ್ಟೊಂದು ಸೈದ್ಧಾಂತಿಕ ಗೊಂದಲ, ಜಾತಿ, ಮತ ಪಂಥ, ತಾರತಮ್ಯಗಳಿಗೆ ಅನುವು ಮಾಡಿಕೊಟ್ಟಿದೆ. ವೇದಗಳಲ್ಲಿ ಅವೆಲ್ಲ ಸಿದ್ಧಾಂತ ನಂಬಿಕೆಗಳು ಅರ್ಥಗರ್ಭಿತವಾಗಿ ಹೆಣೆದುಕೊಂಡು ಸಮಗ್ರ ಚಿಂತನೆಯಾಗಿ ಕಾಣಿಸಿಕೊಂಡಿದೆ. ಆದರೆ ಹಿಂದಿನ ದಿನಗಳಲ್ಲಿ ಅಂತಹ ಸಮಗ್ರತೆಯನ್ನು ಅರ್ಥಮಾಡಿಕೊಳ್ಳಬಲ್ಲ ಮಾನಸಿಕ ಬೆಳವಣಿಗೆ ಹೆಚ್ಚಿನವರಲ್ಲಿ ಇಲ್ಲದೇ ಇದ್ದ ಕಾರಣ ವೇದ ವಿಜ್ಞಾನವು ವಿಭಿನ್ನ ದೃಷ್ಟಿಕೋನದ ಜನರ ಯೋಚನಾಮಾನದಲ್ಲಿ ಭಿನ್ನಭಿನ್ನವಾಗಿ ಅಳೆಯಲ್ಪಟ್ಟು ಜನರನ್ನು ತಲುಪಿದವು.

– ತೀರ್ಥರಾಮ ವಳಲಂಬೆ (‘ಪುನರ್ಜನ್ಮ ಮತ್ತು ಪುರುಷಾರ್ಥ’ ಗ್ರಂಥದಿಂದ)

Leave a Reply

Your email address will not be published. Required fields are marked *