Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

ಪಂಚಾಯತ್ ರಾಜ್ ಇಲಾಖೆಯಿಂದ ‘ಪಾರದರ್ಶಕತೆ’ಯ ಹೆಜ್ಜೆ: ಅಧಿಕಾರಿಗಳು ರಂಗೋಲಿಯ ಕೆಳಗೆ ತೂರದಿದ್ದರೆ ಮಾತ್ರ ಸಾರ್ಥಕತೆ !

* ಶ್ರೀರಾಮ ದಿವಾಣ

# ಕರ್ನಾಟಕ ಸರಕಾರದ ಪ್ರಮುಖ ಇಲಾಖೆಗಳಲ್ಲಿ ಪಂಚಾಯತ್ ರಾಜ್ ಇಲಾಖೆ ಒಂದು ಮತ್ತು ಮಹತ್ವದ್ದಾದ ಇಲಾಖೆ. ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಎಂಬ ತ್ರಿಸ್ಥರ ಸ್ಥಳೀಯ ಅಡಳಿತ ಸಂಸ್ಥೆಗಳು, ಸರಕಾರದ ಬೃಹತ್ ಮೊತ್ತದ ಅನೇಕ ಉತ್ತಮ ಯೋಜನೆಗಳು ಈ ಇಲಾಖೆಯ ಅಡಿಯಲ್ಲಿ ಬರುತ್ತವೆ. ಈ ಇಲಾಖೆ, ಇದೀಗ ತನ್ನ ಪಾರದರ್ಶಕತೆಯನ್ನು ವೃದ್ಧಿಪಡಿಸುವ ನಿಟ್ಟಿನಲ್ಲಿ ಮಹತ್ವಪೂರ್ಣವಾದ ಹೆಜ್ಜೆಯೊಂದನ್ನು ಇರಿಸಿದೆ. ಇದಕ್ಕಾಗಿ ಪಂಚಾಯತ್ ರಾಜ್ ಸಚಿವರಾದ ಎಚ್.ಕೆ.ಪಾಟೀಲ್ ಹಾಗೂ ಇಲಾಖಾಧಿಕಾರಿಗಳು ಅಭಿನಂದನೆಗೆ ಪಾತ್ರರು.

ಪ್ರಜೆಗಳಿಂದ, ಪ್ರಜೆಗಳಿಗಾಗಿ, ಪ್ರಜೆಗಳೇ ಆಳುವ ಸರಕಾರ ಎಂಬುದು ನಮ್ಮ ಸಂವಿಧಾನದ ಮೂಲ ಮಂತ್ರವಾದರೂ, ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳೇ ಆಗುತ್ತಾ ಬಂದರೂ, ಸಂವಿಧನದ ಮೂಲಮಂತ್ರ ನಿಜವಾದ ಅರ್ಥದಲ್ಲಿ ಇನ್ನೂ ಜಾರಿಯಾಗದಿರುವುದು, ಅನುಷ್ಠಾನಕ್ಕೆ ಬರದಿರುವುದು ವಾಸ್ತವವಾಗಿರುವಾಗ ಕರ್ನಾಟಕ ಸರಕಾರದ ಪಂಚಾಯತ್ ರಾಜ್ ಇಲಾಖೆಯು ಪಾರದರ್ಶಕತೆಯನ್ನು ವೃದ್ಧಿಗೊಳಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆ ಇರಿಸಿದ ಹಿನ್ನೆಲೆಯಲ್ಲಿ ಈ ಕ್ರಮವನ್ನು ಸ್ವಾಗತಿಸಬೇಕು.

ಪಂಚಾಯತ್ ರಾಜ್ ಇಲಾಖೆ, ತನ್ನ ವೆಬ್ ಸೈಟ್ (http://rdpr.kar.nic.in)ನಲ್ಲಿ ಇನ್ನು ಮುಂದೆ ಇಲಾಖೆಗೆ ಸಂಬಂಧಿಸಿದ ಎಲ್ಲಾ ಎಂದರೆ ಎಲ್ಲಾ ಕಡತಗಳನ್ನೂ ಬಹಿರಂಗಪಡಿಸಲಿದೆಯಂತೆ. ಇನ್ನು ಮುಂದಕ್ಕೆ ಈ ಇಲಾಖೆಯಲ್ಲಿ ‘ಗೌಪ್ಯ ಮಾಹಿತಿ’, ‘ರಹಸ್ಯ ಕಡತ’ ಎಂಬಿತ್ಯಾದಿಗಳು ಇರುವುದೇ ಇಲ್ಲವಂತೆ. ಹೀಗೆಂದು ಹೇಳಲಾಗಿದೆ. ಈ ಘೋಷಣೆ ಎಷ್ಟರ ಮಟ್ಟಿಗೆ ಪಾಲನೆಯಾಗುತ್ತದೆ ಎಂಬುದು ಮಾತ್ರ ಗೊತ್ತಿಲ್ಲ. ಇದು ಗೊತ್ತಾಗಬೇಕಾದರೆ, ಕಾದು ಕುಳಿತುಕೊಳ್ಳುವುದು ಅನಿವಾರ್ಯ.

ಇದುತನಕ ತನ್ನ ವೆಬ್ ಸೈಟ್ ನಲ್ಲಿ ಪಂಚಾಯತ್ ರಾಜ್ ಇಲಾಖೆ, ಇತರೆಲ್ಲಾ ಇಲಾಖೆಗಳಂತೆ ಇಲಾಖೆಗೆ ಸಂಬಂಧಿಸಿದ ಕೆಲವೇ ಕೆಲವು ಸುತ್ತೋಲೆಗಳನ್ನು ಹಾಕುತ್ತಿತ್ತು. ಸಾಮಾನ್ಯ ಕಡತಗಳ ಬಗ್ಗೆ ಮಾಹಿತಿ ನೀಡುತ್ತಿತ್ತು. ಬಹಳ ಮಹತ್ವದ್ದಲ್ಲದ, ಸಾಮಾನ್ಯ ಫೈಲ್ ಗಳನ್ನು ವೆಬ್ ಸೈಟ್ ಗೆ ಅಪ್ ಲೋಡ್ ಮಾಡುವ ಮುಖಾಂತರ ಪಾರದರ್ಶಕತೆ ಎಂಬ ‘ಪ್ರಹಸನ’ ನಡೆಸುತ್ತಿತ್ತು. ಇನ್ನು ಪ್ರಹಸನ ಅಲ್ಲ, ನಿಜವಾಗಿಯೂ ಪಾರದರ್ಶಕತೆ ಕಾಪಾಡುವ ನಿಟ್ಟಿನಲ್ಲಿ ಇಲಾಖೆಗೆ ಸಂಬಂಧಿಸಿದ ಪ್ರತಿಯೊಂದೂ ಸುತ್ತೋಲೆ, ಆದೇಶ, ವಿಷಯಕ್ಕೆ ಸಂಬಂಧಪಟ್ಟಂತೆ ಸಚಿವರ ಪತ್ರ, ಅಭಿಪ್ರಾಯ, ಇಲಾಖಾಧಿಕಾರಿಗಳ ಅಭಿಪ್ರಾಯ, ಟಿಪ್ಪಣಿ ಹೀಗೆ ‘ಎಲ್ಲವನ್ನೂ’ ಸಾರ್ವಜನಿಕರ ಅರಿವಿಗಾಗಿ ವೆಬ್ ಸೈಟ್ ಮೂಲಕ ಬಹಿರಂಗಪಡಿಸುವುದಾಗಿ ಪಂಚಾಯತ್ ರಾಜ್ ಇಲಾಖೆ ಘೋಷಿಸಿಕೊಂಡಿದೆ.

ಇಂಥ ಅಗತ್ಯ ಮಾಹಿತಿಗಳಿಗಾಗಿ ಇದುವರೆಗೂ ಮಾಹಿತಿ ಹಕ್ಕು (ಆರ್ ಟಿಐ) ಕಾರ್ಯಕರ್ತರು ಹಣ ಕರ್ಚು ಮಾಡಿ ಅರ್ಜಿ ಹಾಕಿ ಕನಿಷ್ಟ 30 ದಿನಗಳ ಕಾಲ ಕಾಯಬೇಕಾಗಿತ್ತು. ಕೆಲವೊಮ್ಮೆ ಮಾಹಿತಿ ನೀಡದೇ ಇದ್ದಲ್ಲಿ, ಅಪೂರ್ಣ ಮಾಹಿತಿ ನೀಡಿದಲ್ಲಿ ಒಂದನೇ ಅಪೀಲ್ ಸಲ್ಲಿಸಿ ಮತ್ತೆ 30 ದಿನ ಕಾದುಕುಳಿತುಕೊಳ್ಳಬೇಕಾಗಿ ಬರುತ್ತಿತ್ತು. ಒಂದನೇ ಅಪೀಲ್ ಸಲ್ಲಿಸಿದ ಬಳಿಕವೂ ಮಾಹಿತಿ ಲಭಿಸುತ್ತದೆ ಎಂಬ ಖಚಿತತೆ ಇರಲಿಲ್ಲ. ಮತ್ತೆ ಒಂದಷ್ಟು ದಿನ ಕಾದು ಕರ್ನಾಟಕ ಮಾಹಿತಿ ಆಯೋಗಕ್ಕೆ ಎರಡನೇ ಅಪೀಲ್ ಸಲ್ಲಿಸಬೇಕಾಗಿತ್ತು. ಎರಡನೇ ಅಪೀಲ್ ಸಲ್ಲಿಸಿ, ಈ ಅಪೀಲ್ ವಿಚಾರಣೆಗೆ ಬರುವಾಗ ಆರು ತಿಂಗಳುಗಳು ಸಂದು ಹೋಗುತ್ತಿತ್ತು. ಮಾಹಿತಿ ಕೊಡಿ ಎಂದು ಆಯೋಗ ಆದೇಶ ಕೊಡುವಾಗ ಒಂದು ವರ್ಷವೇ ಆಗಿ ಹೋಗುತ್ತಿತ್ತು. ಆಮೇಲೂ ಇಲಾಖಾಧಿಕಾರಿಗಳು ಮಾಹಿತಿ ನೀಡದೇ ಇರುವುದು ಸಾಮಾನ್ಯವಾಗಿತ್ತು. ಆಯೋಗದ ಕೆಲವು ಮಂದಿ ಆಯುಕ್ತರೂ ಕಾರ್ಯಾಂಗದ ಪರವಾಗಿ ಪಕ್ಷಪಾತದಿಂದ ನಡೆದುಕೊಳ್ಳುವುದೂ ಸಾಮಾನ್ಯವಾಗಿತ್ತು.

karnataka-information-commi

ಇಂಥ ಅವ್ಯವಸ್ಥೆಯ, ಶೋಚನೀಯ, ವಿಷಾದದ ಸಂದರ್ಭದಲ್ಲಿ, ಪಂಷಚಾಯತ್ ರಾಜ್ ಇಲಾಖೆ, ಇಲಾಖೆಗೆ ಸಂಬಂಧಿಸಿದಂತೆ ಇನ್ನು ಮುಂದೆ ಯಾವುದೇ ‘ಗೌಪ್ಯತೆ’, ‘ರಹಸ್ಯ’ ಇರುವುದಿಲ್ಲ. ಎಲ್ಲವನ್ನೂ ಇಲಾಖಾ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಎಂದು ಸ್ಪಷ್ಟಪಡಿಸಿರುವುದು ಸಮಾಧಾನದ, ತೃಪ್ತಿಯ ವಿಷಯ. ಆದರೆ, ಇಲಾಖಾಧಿಕಾರಿಗಳು ಇಲ್ಲೂ ‘ರಂಗೋಲಿಯ ಒಳಗೆ’ ತೂರಲಾರರು ಎನ್ನಲು ಸಾಧ್ಯವಿಲ್ಲ. ಮಾಹಿತಿ ಹಕ್ಕು ಕಾರ್ಯಕರ್ತರು ವೆಬ್ ಸೈಟ್ ನಲ್ಲಿ ಪ್ರಕಟವಾದ ಮಾಹಿತಿಗಳ ಹೊರತಾಗಿಯೂ ಇಲಾಖಾ ಕಾರ್ಯಕ್ರಮಗಳು, ಬೆಳವಣಿಗೆಗಳು, ಕಡತಗಳು ಇತ್ಯಾದಿಗಳ ಮೇಲೆ ಹದ್ದಿನ ಕಣ್ಣು ಇರಿಸುವುದು ಅಗತ್ಯ.

ಪಂಚಾಯತ್ ರಾಜ್ ಸಚಿವರಾದ ಎಚ್.ಕೆ.ಪಾಟೀಲ್ ರವರು ಈ ವಿಚಾರದಲ್ಲಿ ಒಬ್ಬರು ಮಾದರಿ ಸಚಿವರಾದರು ಎಂಬುದರಲ್ಲಿ ಎರಡು ಮಾತಿಲ್ಲ. ಇತರ ಇಲಾಖಾ ಸಚಿವರು ಸಹ ಎಚ್.ಕೆ.ಪಾಟೀಲ್ ರವರ ಮಾದರಿಯನ್ನು ಅನುಸರಿಸಿದರೆ ದೇಶದಲ್ಲಿಯೇ ರಾಜ್ಯ ಮಾದರಿಯಾದೀತು. ಕೇಂದ್ರ ಸರಕಾರದ ಮಂತ್ರಿಗಳು ಕೂಡಾ ಪಾಟೀಲ್ ರವರ ಮಾದರಿಯನ್ನು ಅನುಸರಿಸಿದ್ದೇ ಆದಲ್ಲಿ ಇಡೀ ದೇಶವೇ ಕಲ್ಯಾಣ ರಾಜ್ಯವಾದೀತು.

RTI

Leave a Reply

Your email address will not be published. Required fields are marked *