Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

20 ತಿಂಗಳ ಕಾಲ ಮುಚ್ಚಿಟ್ಟ ಮಾಹಿತಿಯನ್ನು, ಆಯೋಗದ ಆದೇಶದ ಬಳಿಕ ನೀಡಿದ ಆರೋಗ್ಯ ಇಲಾಖೆ !

ಉಡುಪಿ: ಮಾಹಿತಿ ಹಕ್ಕು ಕಾಯಿದೆ 2005ರಂತೆ ಸಲ್ಲಿಸಲಾದ ಅರ್ಜಿ ಸ್ವೀಕರಿಸಿದ ಸುಧೀರ್ಘ 1 ವರ್ಷ 8 ತಿಂಗಳ ಬಳಿಕ (20 ತಿಂಗಳು), ಅದೂ ಕರ್ನಾಟಕ ಮಾಹಿತಿ ಆಯೋಗದ ಆದೇಶದ ನಂತರ ಅನಿವಾರ್ಯವಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಗಳು ಅರ್ಜಿದಾರರಿಗೆ ಕೋರಲಾದ ಮಾಹಿತಿ ನೀಡಿದ್ದು, ಆರೋಗ್ಯ ಇಲಾಖೆಯ ಭ್ರಷ್ಟ ಅಧಿಕಾರಿಗಳು ಕಾಯಿದೆ, ಕಾನೂನು, ಪಾರದರ್ಶಕತೆಗೆ ಎಷ್ಟೊಂದು ಪ್ರಾಮುಖ್ಯತೆ ನೀಡುತ್ತಾರೆ ಎನ್ನುವುದಕ್ಕೆ ಸಾಕ್ಷಿಯಾಗಿದೆ.

ಅರ್ಜಿದಾರ ಶ್ರೀರಾಮ ದಿವಾಣ ಅವರು ಆರೋಗ್ಯ ಇಲಾಖೆಯ ಕಾರ್ಯಕ್ರಮವೊಂದಕ್ಕೆ ಸಂಬಂಧಿಸಿದಂತೆ ಕೆಲವೊಂದು ಅಗತ್ಯ ಮಾಹಿತಿ ಮತ್ತು ದಾಖಲೆಯನ್ನು ಕೋರಿ, 2014ರ ಅಕ್ಟೋಬರ್ 13ರಂದು ಮಾಹಿತಿ ಹಕ್ಕು ಕಾಯಿದೆಯಂತೆ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯವರಿಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಅಕ್ಟೋಬರ್ 15ರಂದು ಟಪ್ಪಾಲು ವಿಭಾಗದಲ್ಲಿ ಸ್ವೀಕೃತಿಯಾಗಿತ್ತು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ವೃಂದ ಮತ್ತು ನೇಮಕಾತಿ)ಯ ಸರಕಾರದ ಅಧೀನ ಕಾರ್ಯದರ್ಶಿಯೂ, ಸಾರ್ವಜನಿಕ ಮಾಹಿತಿ ಅಧಿಕಾರಿಯೂ ಆಗಿರುವ ಚಂದ್ರಹಾಸ ಗಂ. ತಾಳೂಕರ ಅವರು, ಅಕ್ಟೋಬರ್ 23ರಂದು ಮಾಹಿತಿ ಹಕ್ಕು ಕಾಯಿದೆಯ ಸೆಕ್ಷನ್ 6 (3)ರಂತೆ ಅರ್ಜಿದಾರರ ಅರ್ಜಿಯನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಆಯುಕ್ತರಿಗೆ ವರ್ಗಾಯಿಸಿ, ಅರ್ಜಿದಾರರಿಗೆ ನೇರವಾಗಿ ಮಾಹಿತಿ ಒದಗಿಸುವಂತೆ ನಿರ್ದೇಶಿಸಿದ್ದರು. ಮಾತ್ರವಲ್ಲ, ಇದರ ಪ್ರತಿಯನ್ನು ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿ (ನೊಂ) ಇದರ ಅಪರ ನಿರ್ದೇಶಕರಿಗೂ ಕಳುಹಿಸಿಕೊಟ್ಟಿದ್ದರು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಆಡಳಿತಾಧಿಕಾರಿ (ಸಾಮಾನ್ಯ) ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಕೂಡಾ, ಈ ಅರ್ಜಿಯನ್ನು ನವೆಂಬರ್ 6ರಂದು ಮತ್ತೆ ಸೆಕ್ಷನ್ 6 (3)ರಂತೆ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಯ ಅಪರ ನಿರ್ದೇಶಕರಿಗೆ ವರ್ಗಾಯಿಸಿ, ಅರ್ಜಿದಾರರಿಗೆ ನೇರವಾಗಿ ಮಾಹಿತಿ ನೀಡುವಂತೆ ನಿರ್ದೇಶಿಸಿದ್ದರು.

ಕಾಯಿದೆಯಂತೆ ನಿಗದಿತ ಅವಧಿಯಲ್ಲಿ ಕೋರಲಾದ ಮಾಹಿತಿಯನ್ನು ಆರೋಗ್ಯ ಇಲಾಖಾಧಿಕಾರಿಗಳು ಅರ್ಜಿದಾರರಿಗೆ ನೀಡದ ಕಾರಣ, ಅರ್ಜಿದಾರ ಶ್ರೀರಾಮ ದಿವಾಣ ಅವರು, ನವೆಂಬರ್ 17ರಂದು ಆರೋಗ್ಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಮೇಲ್ಮನವಿ ಪ್ರಾಧಿಕಾರಕ್ಕೆ ಒಂದನೇ ಅಪೀಲ್ (ಮೇಲ್ಮನವಿ) ಸಲ್ಲಿಸಿದ್ದರು. ಅರ್ಜಿದಾರರ ಪ್ರಥಮ ಮೇಲ್ಮನವಿಯನ್ನು ಸ್ವೀಕರಿಸಿದ ಆರೋಗ್ಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಅಧೀನ ಕಾರ್ಯದರ್ಶಿ ಮತ್ತು ಸಾರ್ವಜನಿಕ ಮಾಹಿತಿ ಅಧಿಕಾರಿ ಚಂದ್ರಹಾಸ ಗಂ. ತಾಳೂಕರ ಅವರು, ಡಿಸೆಂಬರ್ 2ರಂದು ಆಯುಕ್ತರಿಗೆ ಈ ಬಗ್ಗೆ ಪತ್ರ ಬರೆದು, ಅರ್ಜಿದಾರರಿಗೆ ಅವರು ಕೋರಿದ ಮಾಹಿತಿ/ ದಾಖಲೆಯನ್ನು ಕೂಡಲೇ ನೀಡುವಂತೆ ನಿರ್ದೇಶಿಸಿದ್ದರು. ಮಾತ್ರವಲ್ಲ, ”ಮಾಹಿತಿ ನೀಡದೇ ಇದ್ದಲ್ಲಿ ಮಾಹಿತಿ ಆಯೋಗವು ವಿಧಿಸುವ ದಂಡನೆಗೆ ತಾವೇ ಜವಾಬ್ದಾರರಾಗುತ್ತೀರಿ” ಎಂದೂ ಎಚ್ಚರಿಕೆಯನ್ನೂ ನೀಡಿದ್ದರು.

ಎಚ್ಚರಿಕೆ ನೀಡಿದ ಬಳಿಕ ಎಚ್ಚೆತ್ತುಕೊಂಡ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿ (ಕೆ.ಡಿ.ಎಲ್.ಡಬ್ಲ್ಯು.ಎಸ್.)ಯ ಸಾರ್ವಜನಿಕ ಮಾಹಿತಿ ಅಧಿಕಾರಿ, ಡಿಸೆಂಬರ್ 6ರಂದು ಅರ್ಜಿದಾರರಿಗೆ ಪತ್ರ ಬರೆದು, ತಾವು ”ಕೋರಿದ ಮಾಹಿತಿ/ ದಾಖಲೆ ಈ ಕಚೇರಿಯಲ್ಲಿ ಲಭ್ಯ ಇರುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದರು. ಆರೋಗ್ಯ ಇಲಾಖಾಧಿಕಾರಿಗಳು ನೀಡಿದ ಈ ಉತ್ತರದ ಬಳಿಕ, ಅರ್ಜಿದಾರರಾದ ಶ್ರೀರಾಮ ದಿವಾಣ ಅವರು, 2015ರ ಜನವರಿ 10ರಂದು ಕರ್ನಾಟಕ ಮಾಹಿತಿ ಆಯೋಗಕ್ಕೆ ಎರಡನೇ ಅಪೀಲ್ (ಮೇಲ್ಮನವಿ) ಸಲ್ಲಿಸಿದ್ದರು. ಮೇಲ್ಮನವಿಯನ್ನು ವಿಚಾರಣೆಗೆ ಸ್ವೀಕರಿಸಿದ ಆಯೋಗ, 2016ರ ಮೇ 4ರಂದು ಪ್ರತಿವಾದಿಯಾದ ಆರೋಗ್ಯ ಇಲಾಖೆಯ ಆಯುಕ್ತರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ (ಪಿಐಓ) ಹಾಗೂ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಮೇಲ್ಮನವಿ ಪ್ರಾಧಿಕಾರಿಯವರಿಗೆ ಸಮನ್ಸ್ ಜಾರಿಗೊಳಿಸಿ, ಮೇ 17ರಂದು ನಿಗದಿಪಡಿಸಿದ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದರು.

ಮೇ 17ರಂದು ಪ್ರಕರಣದ ವಿಚಾರಣೆ ನಡೆಸಿದ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತರಾದ ಡಾ.ಸುಚೇತನ ಸ್ವರೂಪ ಅವರು, ”ಅರ್ಜಿದಾರರು ಕೋರಿರುವ ಮಾಹಿತಿಯನ್ನು 30 ದಿನಗಳ ಒಳಗಾಗಿ ಉಚಿತವಾಗಿ ನೊಂದಾಯಿತ ಅಂಚೆ ಸ್ವೀಕೃತಿ ಮುಖಾಂತರ ದೃಢೀಕರಿಸಿ ಒದಗಿಸಬೇಕು” ಎಂದು ಪ್ರತಿವಾದಿ ಪರವಾಗಿ ಆಯೋಗದ ನ್ಯಾಯಾಲಯದಲ್ಲಿ ಹಾಜರಿದ್ದ ಕರ್ನಾಟಕ ಸ್ಟೇಟ್ ಡ್ರಗ್ಸ್ ಲಾಜಿಸ್ಟಿಕ್ಸ್ ಮತ್ತು ವೇರ್ ಹೌಸಿಂಗ್ ಸೊಸೈಟಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯಾಗಿರುವ ಅಪರ ನಿರ್ದೇಶಕರಾದ ಚಂದ್ರಶೇಖರ್ ಅವರಿಗೆ ನಿರ್ದೇಶಿಸಿ ಆದೇಶಿಸಿದ್ದರು.

dr.suchethana swaroop

* ಡಾ.ಸುಚೇತನ

ಆಶ್ಚರ್ಯವೆಂದರೆ, ”ಅರ್ಜಿದಾರರು ಕೋರಿದ ಮಾಹಿತಿ ಈ ಕಚೇರಿಯಲ್ಲಿ ಲಭ್ಯವಿಲ್ಲ” ಎಂದು ಮೊದಲು ಲಿಖಿತವಾಗಿ ತಿಳಿಸಿದ ಇದೇ ಇಲಾಖಾಧಿಕಾರಿಗಳು, ಇದೀಗ ಅಂದರೆ, ಕರ್ನಾಟಕ ಮಾಹಿತಿ ಆಯೋಗದ ಆದೇಶದ ಬಳಿಕ, 2016ರ ಜೂನ್ 14ರಂದು ವಿಷಯಕ್ಕೆ ಸಂಬಂಧಿಸಿದ ದಾಖಲೆಗಳನ್ನು ಉಚಿತವಾಗಿ ನೊಂದಾಯಿತ ಅಂಚೆಯಲ್ಲಿ ಕಳುಹಿಸಿಕೊಟ್ಟಿದ್ದಾರೆ. ಉದ್ಧೇಶಪೂರ್ವಕವಾದ ವಿಳಂಬ ನೀತಿ ಎಂದರೆ ಇದುವೇ. ಭ್ರಷ್ಟಾಚಾರವೂ ಈ ವಿಳಂಬಕ್ಕೆ ಕಾರಣವಾಗಿದೆ.

ಸಾರ್ವಜನಿಕ ಮಾಹಿತಿ ಅಧಿಕಾರಿಯ ಈ ರೀತಿಯ ವಿಳಂಬ ನೀತಿಗೆ ವಿರುದ್ಧವಾಗಿ, ಮಾಹಿತಿ ಹಕ್ಕು ಕಾಯಿದೆ ಪ್ರಕಾರ, ಪ್ರತಿವಾದಿಗೆ 25 ಸಾವಿರ ರು. ದಂಡ ವಿಧಿಸುವ ಮತ್ತು ಅರ್ಜಿದಾರರಿಗೆ ಸೂಕ್ತ ಪರಿಹಾರ ಒದಗಿಸಬೇಕಾಗಿದೆ. ಪ್ರಕರಣದ ಮುಂದಿನ ವಿಚಾರಣೆಯನ್ನು ಆಯೋಗವು ಜುಲೈ 7ರಂದು ನಿಗದಿಪಡಿಸಿದ್ದು, ಅಂದು ಆಯೋಗವು ಪ್ರತಿವಾದಿಗೆ ದಂಡ ವಿಧಿಸುತ್ತಾರೋ, ಇಲ್ಲವೋ ಎನ್ನುವುದನ್ನು ಕಾದುನೋಡಬೇಕಾಗಿದೆ.

Leave a Reply

Your email address will not be published. Required fields are marked *