Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

4 ವರ್ಷವಾದರೂ ಬಿಡುಗಡೆಯಾಗದ ಮುಖ್ಯಮಂತ್ರಿ ಪರಿಹಾರ ನಿಧಿ: ಅಧಿಕಾರಿಗಳಿಂದ ರೋಗಿಗೆ ವಂಚನೆ- ಬೇಜವಾಬ್ದಾರಿ, ನಿಷ್ಕಾಳಜಿ, ಕರ್ತವ್ಯಲೋಪ !

ಉಡುಪಿ: ಕಳೆದ ನಾಲ್ಕು ವರ್ಷಗಳ ಹಿಂದೆ ರೋಗಿಯೊಬ್ಬರ ಚಿಕಿತ್ಸೆಗಾಗಿ ಮಂಜೂರು ಮಾಡಿದ ಕರ್ನಾಟಕ ಮುಖ್ಯಮಂತ್ರಿಗಳ ಪರಿಹಾರ ನಿಧಿಯ ಹಣವನ್ನು ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳು ಬಿಡುಗಡೆಗೊಳಿಸದೆ ವಂಚನೆ ಎಸಗಿದ ಗಂಭೀರ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಇದು ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳ ಬೇಜವಾಬ್ದಾರಿ, ಕರ್ತವ್ಯಲೋಪ ಮತ್ತು ಜನರ ಬಗೆಗಿನ ನಿಷ್ಕಾಳಜಿಗೆ ಸಾಕ್ಷಿಯಾಗಿದೆ.

2012ರ ಮೇ ತಿಂಗಳಲ್ಲಿಯೇ ಮುಖ್ಯಮಂತ್ರಿಗಳು ಉಡುಪಿಯ ರೋಗಿಯೊಬ್ಬರಿಗೆ ಅಂದಿನ ಶಾಸಕರಾದ ಕೆ.ರಘುಪತಿ ಬಟ್ ಅವರ ಶಿಫಾರಸಿನ ಪ್ರಕಾರ ಹಣ ಮಂಜೂರು ಮಾಡಿದ್ದರು. ಆದರೆ, ಸುಧೀರ್ಘ ನಾಲ್ಕು ವರ್ಷಗಳೇ ಕಳೆದರೂ, ಇದುವರೆಗೂ ಮುಖ್ಯಮಂತ್ರಿಗಳ ಕಚೇರಿ ಅಧಿಕಾರಿಗಳು ರೋಗಿಗೆ ಹಣ ಬಿಡುಗಡೆಗೊಳಿಸಿಲ್ಲ. ಇದಕ್ಕೆ ಕಚೇರಿ ಅಧಿಕಾರಿಗಳ ಬೇಜವಾಬ್ದಾರಿ, ನಿಷ್ಕಾಳಜಿ ಕಾರಣವೋ ಅಥವಾ, ಹಣವನ್ನು ಬಿಡುಗಡೆಗೊಳಿಸದೆ ಅಧಿಕಾರಿಗಳೇ ನುಂಗಿ ಹಾಕಿದ್ದಾರೋ ಎಂಬುದು ಇನ್ನಷ್ಟೇ ಬಹಿರಂಗಕ್ಕೆ ಬರಬೇಕಾಗಿದೆ.

ಉಡುಪಿ ನಗರಸಭಾ ವ್ಯಾಪ್ತಿಯ ಮಂಚಿ ದುರ್ಗಾನಗರ ನಿವಾಸಿ ಕಿಟ್ಟ ಮೂಲ್ಯರವರ ಪುತ್ರ ಶ್ರೀಧರ ಕುಲಾಲ್ ಅವರು 2011ರಲ್ಲಿ ಕರುಳುಬೇನೆಯ ಚಿಕಿತ್ಸೆಗಾಗಿ ಉಡುಪಿಯ ಗಾಂಧಿ ಆಸ್ಪತ್ರೆ ಮತ್ತು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ದಾಖಲಾಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿ ಚಿಕಿತ್ಸೆ ಪಡೆದಿದ್ದರು. ಈ ಚಿಕಿತ್ಸೆಗೆ ಶ್ರೀಧರ ಮೂಲ್ಯರವರ ಮನೆಯವರು ಸುಮಾರು 3 ಲಕ್ಷ ರು. ಗಳನ್ನು ವೆಚ್ಚ ಮಾಡಿದ್ದರು. ಈ ಹಣ ಹೊಂದಿಸಲು ಅವರಿವರಲ್ಲಿ ಕೈ ಸಾಲವನ್ನೂ ಮಾಡಿದ್ದರು.

ಶ್ರೀಧರ ಮೂಲ್ಯರವರ ಕುಟುಂಬ ಬಡವರ್ಗಕ್ಕೆ ಸೇರಿದ್ದಾಗಿದ್ದುದರಿಂದ, ಅವರು ಅಂದು ಶಾಸಕರಾಗಿದ್ದ ಕೆ.ರಘುಪತಿ ಭಟ್ ಅವರಿಗೆ ಚಿಕಿತ್ಸೆಗೆ ಸಂಬಂಧಿಸಿದ ದಾಖಲಾತಿಗಳ ಸಹಿತ ಮನವಿ ಸಲ್ಲಿಸಿ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಒದಗಿಸಿಕೊಡುವಂತೆ ವಿನಂತಿಸಿಕೊಂಡಿದ್ದರು. ಶಾಸಕರಾಗಿದ್ದ ಕೆ.ರಘುಪತಿ ಭಟ್ ಅವರು ಕಾಳಜಿವಹಿಸಿ ರೋಗಿಯ ಚಿಕಿತ್ಸೆಗೆ ಗರಿಷ್ಟ ಮೊತ್ತದ ಪರಿಹಾರ ಧನ ಬಿಡುಗಡೆಗೊಳಿಸುವಂತೆ ಕೋರಿ ಮುಖ್ಯಮಂತ್ರಿಗಳಿಗೆ ಶಿಫಾರಸು ಮಾಡಿದ್ದರು.

k.raghupathi bhat ex mla

ಶಾಸಕರ ಶಿಫಾರಸಿನನ್ವಯ ಅಂದಿನ ಮುಖ್ಯಮಂತ್ರಿಗಳಾಗಿದ್ದ ಡಿವಿ.ಸದಾನಂದ ಗೌಡ ಹಾಗೂ ಜಗದೀಶ ಶೆಟ್ಟಿರ್ ಇವರುಗಳ ಅವಧಿಯಲ್ಲಿ 75 ಸಾವಿರ ರು. ಗಳನ್ನು ಪರಿಹಾರ ಧನವಾಗಿ ಮಂಜೂರು ಮಾಡಲಾಗಿತ್ತು. ಮಂಜೂರು ಆದ ಹಣವನ್ನು ಆಸ್ಪತ್ರೆ ಹೆಸರಿಗೆ ಬಿಡುಗಡೆಗೊಳಿಸಲಾಗುವುದು ಎಂದು 2012ರ ಮೇ 19ರಂದು (ಉಲ್ಲೇಖ ಸಂಖ್ಯೆ: ಸಿ.ಎಂ.8669/ಸಿ.ಎಂ.ಆ.ಎಫ್/12) ಮುಖ್ಯಮಂತ್ರಿಗಳ ಕಚೇರಿಯ ಜಂಟಿ ಕಾರ್ಯದರ್ಶಿಯಾಗಿದ್ದ ಡಾ.ಎಚ್.ಆರ್.ಮಹಾದೇವ್ ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯ ಆಡಳಿತಾಧಿಕಾರಿಗಳಿಗೆ ಪತ್ರ ಬರೆದು ಖಚಿತಪಡಿಸಿದ್ದರು.

dvsjagadish shettar ex cm

ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ ಹಣ ಮಂಜೂರು ಆಗಿ ನಾಲ್ಕು ವರ್ಷಗಳಾಗುತ್ತಾ ಬರುತ್ತಿದ್ದರೂ ಹಣ ಲಭಿಸದೇ ಇರುವ ಬಗ್ಗೆ, 2016ರ ಮಾರ್ಚ್ 21ರಂದು ಶ್ರೀಧರ ಮೂಲ್ಯ ಅವರು ಹಾಲಿ ಉಸ್ತುವರಿ ಸಚಿವರಾಗಿದ್ದ ವಿನಯ ಕುಮಾರ್ ಸೊರಕೆ ಅವರನ್ನು ಖುದ್ದು ಭೇಟಿಯಾಗಿ ಸಂಬಂಧಪಟ್ಟ ಎಲ್ಲಾ ದಾಖಲಾತಿಗಳೊಂದಿಗೆ ಮನವಿ ಸಲ್ಲಿಸಿ ಸಮಸ್ಯೆ ಪರಿಹರಿಸಿಕೊಡುವಂತೆ ವಿನಂತಿಸಿದ್ದರು. ಆದರೆ ಇದುವರೆಗೂ ಯಾವುದೇ ಪ್ರಯೋಜನವಾಗಿಲ್ಲ.

ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಮಂಜೂರು ಆದ ಬಳಿಕ, ಈ ಹಣವನ್ನು ರೋಗಿಗಾಗಲೀ, ಸಂಬಂಧಿಸಿದ ಆಸ್ಪತ್ರೆಗಾಗಲೀ ಬಿಡುಗಡೆಗೊಳಿಸಲು ನಾಲ್ಕು ವರ್ಷಗಳು ಬೇಕೇ ಎಂಬುದೇ ಇಲ್ಲಿ ಉದ್ಭವಿಸುವ ಸಹಜವಾದ ಪ್ರಶ್ನೆಯಾಗಿದೆ. ಮುಖ್ಯಮಂತ್ರಿಗಳ ಕಚೇರಿಯ ಅಧಿಕಾರಿಗಳ ಕರ್ತವ್ಯಲೋಪ, ಬೇಜವಾಬ್ದಾರಿ, ನಿಷ್ಕಾಳಜಿಯ ಜೊತೆಗೆ ಅಮಾಯಕರನ್ನು ವಂಚಿಸುವ ಗಂಭೀರ ಪ್ರಕರಣ ಇದಾಗಿರಬಹುದೇ ಎನ್ನುವ ಬಲವಾದ ಅನುಮಾನ ಇದೀಗ ಕಾಡತೊಡಗಿದೆ.

vinay kumar sorake ex minister

Leave a Reply

Your email address will not be published. Required fields are marked *