Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವಾಣಿಜ್ಯ ಸಂಸ್ಥೆಗಳಲ್ಲಿ ಬಿಲ್ ರಹಿತ ವ್ಯವಹಾರ: ಕಳ್ಳ ಲೆಕ್ಕ ನೀಡಿ ಸರಕಾರಕ್ಕೆ ತೆರಿಗೆ ವಂಚನೆ, ಗ್ರಾಹಕರ ನಿರ್ಲಕ್ಷ್ಯ- ಅಧಿಕಾರಿಗಳ ಜಾಣಮೌನ !

ಉಡುಪಿ: ಉಡುಪಿಯ ಬಹುತೇಕ ವಾಣಿಜ್ಯ ಸಂಸ್ಥೆಗಳು ತಮ್ಮ ಸಂಸ್ಥೆಗಳಿಂದ ವಸ್ತುಗಳನ್ನು ಖರೀದಿ ಮಾಡಿದ ಗ್ರಾಹಕರಿಗೆ ಪ್ರಾಮಾಣಿಕವಾಗಿ ನೀಡಬೇಕಾದ ಬಿಲ್ (ರಶೀದಿ)ಗಳನ್ನು ನೀಡದೇ ರಾಜಾರೋಷವಾಗಿ ಅನೈತಿಕ ವ್ಯವಹಾರ ನಡೆಸುತ್ತಿರುವುದು ಕಳೆದ ಅನೇಕ ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ.

ವ್ಯಾಪಾರ ವ್ಯವಹಾರದಲ್ಲಿನ ಮೂಲ ಲಾಭಂಶವನ್ನು ಅಧಿಕೃತವಾಗಿ ಕಡತಗಳಲ್ಲಿ ತೋರಿಸದೆ, ಸರಕಾರಕ್ಕೆ ಪಾವತಿಸಬೇಕಾದ ಆದಾಯವನ್ನು ಮರೆಮಾಚಿ ಕಪ್ಪು ಹಣ (ಬ್ಲ್ಯಾಕ್ ಮನಿ)ವನ್ನು ಕೂಡಿಟ್ಟುಕೊಳ್ಳುವುದೇ, ಗ್ರಾಹಕರಿಗೆ ಬಿಲ್ ಗಳನ್ನು ನೀಡದೆ ವಂಚಿಸಲು ಕಾರಣವಾಗಿದೆ.

ಕೆಲವು ನಿರ್ಧಿಷ್ಟ ವ್ಯಾಪಾರಗಳಿಗೆ ಮತ್ತು ಕೆಲವೊಂದು ನಿರ್ಧಿಷ್ಟ ವರ್ಗದ ಗ್ರಾಹಕರಿಗೆ ಹಾಗೂ ಕೆಲವೊಮ್ಮೆ ಕೇಳಿದವರಿಗೆ ಮಾತ್ರವೇ ಖರೀದಿಸಿದ ವಸ್ತುಗಳಿಗೆ ಬಿಲ್ ಗಳನ್ನು ನೀಡುವ ವಾಣಿಜ್ಯ ಸಂಸ್ಥೆಗಳ ಮಾಲಕರು, ಕೆಲವರು ಕೇಳಿದರೂ ಬಿಲ್ ಗಳನ್ನು ನೀಡದಿರುವುದು ಕಂಡುಬಂದಿದೆ. ಜಿಲ್ಲೆಯ ಗ್ರಾಹಕರು ಜಗಳಕ್ಕಿಳಿಯದ ಶಾಂತಿಪ್ರಿಯರಾಗಿರುವುದು ಮತ್ತು ಬಿಲ್ ನೀಡದೇ ಇರುವುದುರ ವಿರುದ್ಧ ಸಂಬಂಧಿಸಿದ ಇಲಾಖೆಗಳಿಗೆ ದೂರು ನೀಡಲು ಮುಂದಾಗದೇ ಇರುವ ಮನಸ್ಥಿತಿಯವರಾಗಿರುವುದೇ ವಾಣಿಜ್ಯ ಸಂಸ್ಥೆಗಳ ಮಾಲೀಕರ ಈ ಗ್ರಾಹಕ ಉಡಾಫೆಯ ವರ್ತನೆಗೆ ಕಾರಣವಾಗಿದೆ.

ಉಡುಪಿಯ ಬಹುತೇಕ ಮೆಡಿಕಲ್ ಗಳಲ್ಲಿ ಗ್ರಾಹಕರಿಗೆ ಬಿಲ್ ನೀಡುವ ಪರಿಪಾಠವೇ ಇಲ್ಲ. ನಗರದ ಸಿಟಿ ಬಸ್ ನಿಲ್ದಾಣ ಬಳಿ ಮತ್ತು ಕವಿ ಮುದ್ದಣ ಮಾರ್ಗದಲ್ಲಿರುವ ರಾಧಾ ಮೆಡಿಕಲ್ ಗಳು ಮಾತ್ರ ಇದಕ್ಕೆ ಅಪವಾದ. ಎಷ್ಟೇ ಸಣ್ಣ ಮೊತ್ತದ ಔಷಧವನ್ನು ಖರೀದಿಸಿರೂ, ಇಲ್ಲಿ ಬಿಲ್ ನೀಡಲಾಗುತ್ತದೆ. ಇಂಥ ಒಂದೆರಡು ಮೆಡಿಕಲ್ ಗಳನ್ನು ಹೊರತುಪಡಿಸಿದರೆ, ಉಳಿದ ಯಾವುದೇ ಮೆಡಿಕಲ್ ಗಳ ಅಧಿಕೃತರಿಗೂ, ತಾವು ಗ್ರಾಹಕರಿಗೆ ಬಿಲ್ ನೀಡುವುದು ಅಗತ್ಯ ಎಂಬ ಪರಿಜ್ಞಾನವೇ ಇಲ್ಲದಂತೆ ಉದಾಸೀನತೆ ಪ್ರದರ್ಶಿಸುತ್ತಿರುವುದು ಸಾಮಾನ್ಯ. ಆದರೆ, ಬಹುತೇಕ ಬಟ್ಟೆ ಅಂಗಡಿಗಳಲ್ಲಿ ಬಿಲ್ ನೀಡುವ ಕೆಲಸ ನಡೆಯುತ್ತಿರುವುದು ಕಂಡುಬಂದಿದ್ದು, ಇವರು ಬಿಲ್ ವಿಚಾರದಲ್ಲಿ ಮಾದರಿ ಸೇವೆ ಸಲ್ಲಿಸುತ್ತಿದ್ದಾರೆ.

ಉಡುಪಿ ಮಿಷನ್ ಕಂಪೌಂಡ್ ಬಳಿಯ ಅಮ್ಮಣ್ಣಿ ರಾಮಣ್ಣ ಸಭಾಂಗಣ ಪಕ್ಕದ ಮಾರುತಿ ಟ್ರೇಡರ್ಸ್, ಬಾಬಾ ರಾಮ್ ದೇವ್ ರವರ ಪತಂಜಲಿ ಉತ್ಪನ್ನಗಳ ಮಾರಾಟ ಮಳಿಗೆಗಳ ಸಹಿತ ನಗರದ ಬಹುತೇಕ ಯಾವುದೇ ವಾಣಿಜ್ಯ ಸಂಸ್ಥೆಗಳ ಮಾಲೀಕರಿಗೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಪಾಲಿಸುವುದರಲ್ಲಿ ಆಸಕ್ತಿ ಇಲ್ಲದಿರುವುದು, ಗ್ರಾಹಕರ ಬಗ್ಗೆ ಕನಿಷ್ಟ ಕಾಳಜಿಯೂ ಇಲ್ಲದಿರುವುದು ಸ್ಪಷ್ಟವಾಗಿದೆ.

ಯಾವುದೇ ವಾಣಿಜ್ಯ ಸಂಸ್ಥೆಗಳಲ್ಲಿ, ಆ ಸಂಸ್ಥೆಗಳ ಮಾಲೀಕರು ಅಥವಾ ನೌಕರರು ಗ್ರಾಹಕರು ಖರೀದಿಸಿದ ವಸ್ತುಗಳಿಗೆ ಪ್ರತಿಯಾಗಿ ಗ್ರಾಹಕರಿಗೆ ಬಿಲ್ ಗಳನ್ನು ನೀಡದೇ ಇದ್ದಲ್ಲಿ ಗ್ರಾಹಕರು ವಾಣಿಜ್ಯ ಇಲಾಖೆಗೆ ಆ ಕೂಡಲೇ ಸ್ಥಳದಿಂದಲೇ ದೂರು ನೀಡಬಹುದಾಗಿದ್ದು, ವಾಣಿಜ್ಯ ಇಲಾಖೆಯ ‘ಜಾಗೃತ್’ ಎಂಬ ಸಂಚಾರಿ ವಾಹನ ಸ್ಕ್ವಾಡ್ ತಕ್ಷಣವೇ ವಾಣಿಜ್ಯ ಸಂಸ್ಥೆ ಇರುವಲ್ಲಿಗೆ ಬಂದು ಬಿಲ್ ನೀಡುವಂತೆ ಮಾಡುತ್ತದೆ. ಆದರೆ, ಬಹುತೇಕ ಗ್ರಾಹಕರಿಗೆ ಇಂಥದೊಂದು ವ್ಯವಸ್ಥೆ ಇರುವುದು ಅರಿವಿಲ್ಲ. ಕಾರಣ, ಇಲಾಖೆ ಕೂಡಾ ಈ ಬಗ್ಗೆ ಸಾಕಷ್ಟು ಪ್ರಚಾರ ಮತ್ತು ಜನಜಾಗೃತಿ ಮಾಡದಿರುವುದೇ ಆಗಿದೆ.

2012ರ ಆಗಸ್ಟ್ ನಲ್ಲಿ ಜಗದೀಶ ಶೆಟ್ಟಿರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ‘ಜಾಗೃತ್’ ನಂಥ ಉತ್ತಮ ವ್ಯವಸ್ಥೆಗೆ ಚಾಲನೆ ನೀಡಲಾಗಿದೆಯಾದರೂ, ಇದರ ಪರಿಣಾಮಕಾರಿ ಅನುಷ್ಠಾನಕ್ಕೆ ಇಲಾಖಾಧಿಕಾರಿಗಳು ಆಸಕ್ತಿ ತೋರಿಸದಿರುವುದು ಅನುಮಾನಕ್ಕೆ ಕಾರಣವಾಗಿದೆ. ಪ್ರತೀ ಜಿಲ್ಲೆಯಲ್ಲೂ ‘ಜಾಗೃತ್’ ವಾಹನಗಳಿದ್ದು, ಈ ವಾಹನ ಪ್ರತೀ ಎಲ್ಲೆಲ್ಲಾ ಸಂಚರಿಸುತ್ತದೆ, ಯಾವ ಘನಂದಾರಿ ಕೆಲಸ ಮಾಡುತ್ತದೆ ಎಂಬುದನ್ನು ಉನ್ನತ ಮಟ್ಟದ ಪರಿಶೀಲನೆ, ತಪಾಸಣೆ, ತನಿಖೆಗೆ ಗುರಿಪಡಿಸಿದರೆ ಬಹುದೊಟ್ಟ ಗೋಲ್ ಮಾಲ್ ಪ್ರಕರಣವೊಂದು ಬೆಳಕಿಗೆ ಬರುವುದು ಗ್ರಾರಂಟಿ.

ಜಿಲ್ಲೆಯ ವಾಣಿಜ್ಯ ಸಂಸ್ಥೆಗಳ ಮಾಲೀಕರು ಗ್ರಾಹಕರಿಗೆ ಬಿಲ್ ಗಳನ್ನು ನೀಡದೆ ಅಕ್ರಮ ಸಂಪತ್ತು ಸಂಗ್ರಹಿಸುತ್ತಿರುವುದು ಮತ್ತು ಸರಕಾರಕ್ಕೆ ವಾಸ್ತವ ಆದಾಯವನ್ನು ತೋರಿಸಿದೆ ಕಳ್ಳ ಲೆಕ್ಕವನ್ನು ತೋರಿಸುವ ಮುಖಾಂರ ತೆರಿಗೆ ವಂಚನೆ ಎಸಗುತ್ತಿರುವ ವಿಷಯ ವಾಣಿಜ್ಯ ತೆರಿಗೆ ಇಲಾಖಾಧಿಕಾರಿಗಳ ತಿಳಿದಿರುವ ವಿಷಯವೇ ಆಗಿದೆ. ಆದರೆ, ವರ್ಷಕ್ಕೊಂರಡು ಬಾರಿ ಇಂಥ ವಾಣೀಜ್ಯ ಸಂಸ್ತೆಗಳಿಗೆ ಬಂದು ತಮ್ಮ `ಪವರ್’
ತೋರಿಸುವ ನಾಟಕವಾಡಿ, ಆಗ ಸಂಸ್ಥೆಗಳ ಮಾಲೀಕರು ನೀಡುವ ‘ಯಥಾನುಶಕ್ತಿ ಪ್ರಸಾದ’ ವನ್ನು ಜೇಬಿಗಿಳಿಸಿಕೊಂಡು ಬಂದ ದಾರಿಯಲ್ಲೇ ನಿರ್ಗಮಿಸುವುದಷ್ಟೇ ಇವರ ಕರ್ತವ್ಯ ಪಾಲನೆಯಾಗಿರುವುದು ಗುಟ್ಟಾಗಿ ಉಳಿದಿಲ್ಲ.
jagruth

* ‘ಜಾಗೃತ್’ ವ್ಯವಸ್ಥೆಗೆ ಚಾಲನೆ ಸಿಕ್ಕಿದ ಸಂದರ್ಭದ ಸಂಗ್ರಹ ಚಿತ್ರ

Leave a Reply

Your email address will not be published. Required fields are marked *