Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಮಾಹಿತಿ ಆಯುಕ್ತರಿಂದ ಅನುಚಿತ ಆದೇಶ: ಪ್ರಕರಣಗಳ ಮರುವಿಚಾರಣೆಗೆ ಪ್ರತ್ಯೇಕ ಪೀಠ ಸ್ಥಾಪಿಸಲು ಆಗ್ರಹ

ಉಡುಪಿ: ಕರ್ನಾಟಕ ಮಾಹಿತಿ ಆಯೋಗದ ನ್ಯಾಯಾಲಯ ಸಭಾಂಗಣ- 7ರ ರಾಜ್ಯ ಮಾಹಿತಿ ಆಯುಕ್ತರಾದ ಡಾ.ಸುಚೇತನ ಸ್ವರೂಪ ಹಾಗೂ ನ್ಯಾಯಾಲಯ ಸಭಾಂಗಣ- 4ರ ರಾಜ್ಯ ಮಾಹಿತಿ ಆಯುಕ್ತರಾದ ಎಸ್.ಪಿ.ರಮೇಶ್ ಅವರು ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ದುರುದ್ಧೇಶದಿಂದ, ಭ್ರಷ್ಟಾಚಾರ ಮತ್ತು ಭ್ರಷ್ಟರ ಪರವಾಗಿ, ಕಾರ್ಯಾಂಗದ ಅಧಿಕಾರಿಗಳ ಪಕ್ಷಪಾತಿಯಾಗಿ, ಅರ್ಜಿದಾರರ ದಾರಿ ತಪ್ಪಿಸುವಂಥ ಆದೇಶ ನೀಡಿ ಪ್ರಕರಣವನ್ನು ವಿಲೇವಾರಿ ಮಾಡಿದ್ದಾರೆ. ಉಳಿದ ಒಂದೆರಡು ರಾಜ್ಯ ಮಾಹಿತಿ ಆಯುಕ್ತರ ಕೆಲವು ಆದೇಶಗಳೂ ಇದೇ ರೀತಿ ಇವೆ. ಆದುದರಿಂದ, ಇಂಥ ಅನುಚಿತ ಆದೇಶಗಳನ್ನು ರದ್ದುಪಡಿಸಿ, ಪ್ರಕರಣದ ಮರು ವಿಚಾರಣೆ ನಡೆಸುವ ಅಗತ್ಯವಿರುವುದರಿಂದ, ರಾಜ್ಯ ಮುಖ್ಯ ಮಾಹಿತಿ ಆಯುಕ್ತರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ವಿಭಾಗೀಯ ಪೀಠವನ್ನು ಸ್ಥಾಪಿಸಬೇಕು ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಅವರು ರಾಜ್ಯ ಮುಖ್ಯ ಮಾಹಿತಿ ಆಯುಕ್ತರಿಗೆ ಸಲ್ಲಿಸಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.

ಪ್ರಕರಣ ಸಂಖ್ಯೆ ಕೆಐಸಿ 1773 ಎಪಿಎಲ್ 2015ನೇ ಪ್ರಕರಣದಲ್ಲಿ ರಾಜ್ಯ ಮಾಹಿತಿ ಆಯುಕ್ತರಾದ ಡಾ.ಸುಚೇತನ ಸ್ವರೂಪ ಅವರು ನೀಡಿದ ಆದೇಶವನ್ನು ಅರ್ಜಿದಾರರೂ, ಮೇಲ್ಮನವಿದಾರರೂ ಆದ ಶ್ರೀರಾಮ ದಿವಾಣ ಅವರು ಸ್ಪಷ್ಟವಾಗಿ ವಿರೋಧಿಸಿದ್ದು, ಆಕ್ಷೇಪ ವ್ಯಕ್ತಪಡಿಸಿ ದೂರು ಸಲ್ಲಿಸಿದ್ದು, ಈ ದೂರಿನಲ್ಲಿ ಅನುಚಿತ ಆದೇಶಗಳ ಮರು ವಿಚಾರಣೆಗೆ ಪ್ರತಯೇಕ ಪೀಠ ಸ್ಥಾಪಿಸುವಂತೆ ಆಗ್ರಹಿಸಿದ್ದಾರೆ.

ಎ.ಕೆ.ಎಂ. ನಾಯಕ್ ಅವರು ಕರ್ನಾಕಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾಗಿದ್ದ ಅವಧಿಯಲ್ಲಿ, ಆಯೋಗದಲ್ಲಿ ಪ್ರತ್ಯೇಕ ಪೀಠವನ್ನು ಸ್ಥಾಪಿಸಿ ಹಲವು ಪ್ರಕರಣಗಳನ್ನು, ಆದೇಶಗಳನ್ನು ಮರು ವಿಚಾರಣೆಗೆ ಒಳಪಡಿಸುತ್ತಿದ್ದರು. ರಾಜ್ಯ ಮಾಹಿತಿ ಆಯುಕ್ತರಾದ ತಂಗರಾಜು, ರಾಮ ನಾಯ್ಕ್ ಹಾಗೂ ಶೇಖರ್ ಡಿ. ಸಜ್ಜನರ್ ಅವರು ಈ ಪೀಠದ ಸದಸ್ಯರಾಗಿದ್ದರು. ಎ..ಕೆ.ಎಂ.ನಾಯಕ್ ನಿವೃತ್ತರಾದ ಬಳಿಕ ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ರಾಜ್ಯ ಮುಖ್ಯ ಮಾಹಿತಿ ಆಯುಕ್ತರು ಪ್ರತ್ಯೇಕ ಪೀಠ ವ್ಯವಸ್ಥೆಯನ್ನು ಮುಂದುವರಿಸದ ಕಾರಣ, ಅನೇಕ ಮಂದಿ ಅರ್ಜಿದಾರರಿಗೆ ಮತ್ತು ಮೇಲ್ಮನವಿದಾರರಿಗೆ ಅನ್ಯಾಯವಾಗಿದೆ, ಸಹಜ ನ್ಯಾಯದಿಂದ ವಂಚಿತರಾಗಿದ್ದಾರೆ, ಈಗಲೂ ನಿರಂತರವಾಗಿ ನ್ಯಾಯ ವಂಚಿತರಾಗುತ್ತಲಿದ್ದಾರೆ.

2013ರ ಮಾರ್ಚ್ 25ರಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ನೀಡಿದ ಆದೇಶದಂತೆ, ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಬಹುಕೋಟಿ ಮೊತ್ತದ ಖರೀದಿ ಹಗರಣದ ತನಿಖೆ ನಡೆಸಿದ ಇಲಾಖೆಯ ಜಾಗೃತಕೋಶದ ಅಂದಿನ ಮುಖ್ಯ ಜಾಗೃತಾಧಿಕಾರಿಯಾಗಿದ್ದ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ತನಿಖಾ ವರದಿಯನ್ನು 2013ರ ಮೇ 17ರಂದು ಆಯುಕ್ತರಿಗೆ ಸಲ್ಲಿಸಿದ್ದರು. ಈ ತನಿಖಾ ವರದಿಯನ್ನು ಒದಗಿಸುವಂತೆ ಮೇಲ್ಮನವಿದಾರನಾದ ಶ್ರೀರಾಮ ದಿವಾಣ ಅವರು 2014ರ ಅಕ್ಟೋಬರ್ 16ರಂದು ಮಾಹಿತಿ ಹಕ್ಕು ಅಧಿನಿಯಮದ ಕಲಂ 7 (1) ಮತ್ತು 6 (1)ರಂತೆ ಆಯುಕ್ತರ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯವರಿಗೆ ಮಾಹಿತಿ ಹಕ್ಕು ಅಧಿನಿಯಮ 2005ರಂತೆ ಅರ್ಜಿ ಸಲ್ಲಿಸಿ ಮಾಹಿತಿ ಕೋರಿದ್ದರು. ಪಿಐಒ ಅವರು ಮಾಹಿತಿ ನೀಡಲು ನಿರಾಕರಿಸಿದ ಕಾರಣ ಮೇಲ್ಮನವಿ ಪ್ರಾಧಿಕಾರಕ್ಕೆ ಒಂದನೇ ಅಪೀಲ್ ಸಲ್ಲಿಸಿದ್ದರು. ಮೇಲ್ಮನವಿ ಪ್ರಾಧಿಕಾರವೂ ಮಾಹಿತಿ ಒದಗಿಸದ ಕಾರಣ, 2015ರ ಜನವರಿ 21ರಂದು ಕಲಂ 19 (3)ರಂತೆ ಕರ್ನಾಟಕ ಮಾಹಿತಿ ಆಯೋಗಕ್ಕೆ ಎರಡನೇ ಅಪೀಲ್ ಸಲ್ಲಿಸಿದ್ದರು.

ಮುಖ್ಯ ಜಾಗೃತಾಧಿಕಾರಿಯವರು ತನಿಖೆ ನಡೆಸಿದ್ದು ಒಂದು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಿದೆ. ತನಿಖಾ ವರದಿ ಸಲ್ಲಿಸಿದ್ದು ಭ್ರಷ್ಟಾಚಾರಕ್ಕೆ ವಿರುದ್ಧವಾಗಿ. ಆದರೆ, ಪ್ರಸ್ತುತ ನ್ಯಾಯಾಲಯ ಸಭಾಂಗಣ- 7ರ ರಾಜ್ಯ ಮಾಹಿತಿ ಆಯುಕ್ತರಾದ ಡಾ.ಸುಚೇತನ ಸ್ವರೂಪ ಅವರು ಆದೇಶ ನೀಡಿರುವುದು ಭ್ರಷ್ಟಚಾರದ ಪರವಾಗಿ ಆದಂತೆ ಆಗಿದೆ. ಭ್ರಷ್ಟಾಚಾರದ ಹಗರಣಕ್ಕೆ ಸಂಬಂಧಪಟ್ಟ ಕಡತವನ್ನು ಮುಚ್ಚಿಡುವಂತದ್ದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಭ್ರಷ್ಟಾಚಾರದ ಹಗರಣಕ್ಕೆ ಸಂಬಂಧಿಸಿದ ಕಡತವನ್ನು ಮುಚ್ಚಿಡಬೇಕು ಎಂದು ಮಾಹಿತಿ ಹಕ್ಕು ಅಧಿನಿಯಮ ರಚಿಸಿದ್ದಲ್ಲ. ಆಡಳಿತ ಪಾರದರ್ಶಕವಾಗಿರಬೇಕು ಮತ್ತು ಬಹುತೇಕ ಸರಕಾರೀ ಕಡತಗಳು ಸಾರ್ವಜನಿಕರಿಗೆ ಲಭಿಸುವಂತಾಗಬೇಕು ಎಂಬ ಕಾರಣಕ್ಕೇ ಈ ಅಧಿನಿಯಮವನ್ನು ರಚಿಸಿದ್ದಾಗಿದೆ. ಆದರೆ, ಇಲ್ಲಿ ಮಾತ್ರ ರಾಜ್ಯ ಮಾಹಿತಿ ಆಯುಕ್ತರು, ಹಗರಣಕ್ಕೆ ಸಂಬಂಧಿಸಿ ತನಿಖೆ ನಡೆಸಿ ಸಲ್ಲಿಸಿದ ತನಿಖಾ ವರದಿಯನ್ನು ಮುಚ್ಚಿಡುವ ಪ್ರಕ್ರಿಯೆಗೆ ಪೂರಕವಾಗಿ ಆದೇಶ ನೀಡುವ ಮೂಲಕ, ಮಾಹಿತಿ ಹಕ್ಕು ಅಧಿನಿಯಮಕ್ಕೆ ಅಪಚಾರ ಎಸಗಿರುತ್ತಾರೆ. ಮಾಹಿತಿ ಹಕ್ಕು ಅಧಿನಿಯಮ 2005ನ್ನು ಸರಕಾರ ಯಾವ ಉದ್ಧೇಶದಿಂದ ರಚಿಸಿ ಜ್ಯಾರಿಗೊಳಿಸಿ ಅನುಷ್ಠಾನಗೊಳಿಸಿತ್ತೋ, ಆ ಸದುದ್ಧೇಶಕ್ಕೆ ತೀರಾ ವ್ಯತಿರಿಕ್ತವಾಗಿದೆ ಎಂದು ಶ್ರೀರಾಮ ದಿವಾಣ ಅವರು ಮುಖ್ಯ ಮಾಹಿತಿ ಆಯುಕ್ತರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಒಂದು ಭ್ರಷ್ಟಾಚಾರ ಹಗರಣಕ್ಕೆ ಸಂಬಂಧಿಸಿದ ತನಿಖಾ ವರದಿಯನ್ನು ಅರ್ಜಿದಾರನಿಗೆ ನೀಡುವ ವಿಷಯಕ್ಕೆ ಮಾಹಿತಿ ಹಕ್ಕು ಅಧಿನಿಯಮ 8 (ಹೆಚ್) ನ್ನು ಉಲ್ಲೇಖಿಸುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿ ಡಾ. ಕೆ. ಎಚ್. ನರಸಿಂಹಮೂರ್ತಿ ಅವರು ತನಿಖಾ ವರದಿಯನ್ನು ಆಯುಕ್ತರಿಗೆ ಸಲ್ಲಿಸಿ ಮತ್ತು ಆಯುಕ್ತರು ವರದಿಯನ್ನು ಸಕ್ಷಮ ಪ್ರಾಧಿಕಾರಕ್ಕೆ ಸಲ್ಲಿಸಿ ಈಗಾಗಲೇ ಸುಧೀರ್ಘವಾದ ಮೂರು (3) ವರ್ಷಗಳೇ ಕಳೆದಿವೆ. ಆ ವರದಿಯ ಮೇಲೆ ಸಕ್ಷಮ ಪ್ರಾಧಿಕಾರ ಇದುವರೆಗೂ ಯಾವುದೇ ಕ್ರಮಗಳನ್ನು ತೆಗೆದುಕೊಂಡಿಲ್ಲ. ಮಾತ್ರವಲ್ಲ, ತನಿಖಾ ವರದಿಯನ್ನು ಭ್ರಷ್ಟರನ್ನು ರಕ್ಷಿಸುವ ಸಲುವಾಗಿ ಮುಚ್ಚಿಟ್ಟಿದೆ, ಈ ಮೂಲಕ ತಪ್ಪಿತಸ್ಥರನ್ನು ರಕ್ಷಣೆ ಮಾಡಿದೆ ಎಂದು ದೂರಿನಲ್ಲಿ ಗಂಭೀರ ಆರೋಪ ಮಾಡಲಾಗಿದೆ.

ಒಂದೆಡೆಯಲ್ಲಿ, ಪಿಐಒ ಅವರು ಮಾಹಿತಿ ನೀಡಲು ನಿರಾಕರಿಸಿದ ಕಾರಣ, ”ತನಿಖಾ ಕ್ರಮಕ್ಕೆ ಅಥವಾ ಅಪರಾಧಿಗಳ ದಸ್ಥಗಿರಿಗೆ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡಚಣೆಯನ್ನುಂಟುಮಾಡುವಂಥ ಮಾಹಿತಿ” ಎಂದಾಗಿದೆ. ಒಂದನೆಯದಾಗಿ ಮಾಹಿತಿ ಕೇಳಿರುವುದು ತನಿಖಾ ಕಾರ್ಯ ಪೂರ್ಣಗೊಂಡು ತನಿಖಾಧಿಕಾರಿಯವರು ತನಿಖಾ ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಿದ ಬಳಿಕ ಎನ್ನುವುದು. ಎರಡನೆಯದಾಗಿ, ತನಿಖಾ ವರದಿ ಸಲ್ಲಿಸಿ ಈಗಾಗಲೇ ಸುಧೀರ್ಘ ಮೂರು ವರ್ಷಗಳೇ ಕಳೆದಿವೆ. ಆದರೆ, ಇದುವರೆಗೂ ಯಾವನೇ ಒಬ್ಬ ಅಪರಾಧಿಯನ್ನೂ ದಸ್ಥಗಿರಿ ಮಾಡಿಲ್ಲ. ಅಂದರೆ, ನೀಡಿರುವ ಕಾರಣ ದುರುದ್ದೇಶದಿಂದ ಕೂಡಿದೆ ಮತ್ತು ಸುಳ್ಳು ಕಾರಣವಾಗಿದೆ ಎಂದು ತಿಳಿಸಲಾಗಿದೆ.

ಇನ್ನೊಂದು ಕಡೆ, ಅಂದಿನ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರು 15.12.2014ರಂದು ವಿಧಾನ ಪರಿಷತ್ ನಲ್ಲಿ ಸದಸ್ಯರಾದ ಪಟೇಲ್ ಶಿವಾರಾಂ ಅವರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ, ”ಯಾವುದೇ ಕ್ರಮ ಅಗತ್ಯವಿಲ್ಲ, ಆದ್ದರಿಂದ ಇದನ್ನು ಮುಕ್ತಾಯಗೊಳಿಸಿದೆ” ಎಂದು ಘೋಷಿಸಿದ್ದಾರೆ. ಮುಕ್ತಾಯಗೊಳಿಸಲಾದ ಪ್ರಕರಣವೊಂದರ ತನಿಖಾ ವರದಿಯನ್ನು ಮಾಹಿತಿ ಹಕ್ಕು ಅಧಿನಿಯಮದ ಅಡಿಯಲ್ಲಿ ಅರ್ಜಿದಾರನಿಗೆ ನೀಡಲು ಅಡ್ಡಿಯಾಗುವುದಾದರೂ ಏನು ? ಯಾಕೆ ಅಡ್ಡಿ ? ಆದ್ದರಿಂದ, ರಾಜ್ಯ ಮಾಹಿತಿ ಆಯುಕ್ತರ ದುರುದ್ಧೇಶವಷ್ಟೇ ಇಲ್ಲಿ ಕಂಡುಬರುತ್ತದೆ ಬಿಟ್ಟರೆ ಬೇರೇನೂ ಕಾರಣಗಳಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇಲ್ಲಿ 8 (ಹೆಚ್)ನ್ನು ದುರುದ್ಧೇಶದಿಂದ ಉಪಯೋಗಿಸಲಾಗಿದೆ. ಈ ಮೂಲಕ ಅರ್ಜಿದಾರನ ದಾರಿ ತಪ್ಪಿಸುವ ಯತ್ನವನ್ನು ರಾಜ್ಯ ಮಾಹಿತಿ ಆಯುಕ್ತರು ಮಾಡಿರುತ್ತಾರೆ ಎಂದು ಶ್ರೀರಾಮ ದಿವಾಣ ಅವರು ಮುಖ್ಯ ಮಾಹಿತಿ ಆಯುಕ್ತರಿಗೆ ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

ಕೆಐಸಿ 10157 ಎಪಿಎಲ್ 2015ನೇ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಸಭಾಂಗಣ- 4ರಲ್ಲಿ ದಿನಾಂಕ 09.08.2016ರಂದು ವಿಚಾರಣೆ ನಡೆದಿದೆ. ವಿಚಾರಣೆ ನಡೆಸಿದ ರಾಜ್ಯ ಮಾಹಿತಿ ಆಯುಕ್ತರಾದ ಎನ್.ಪಿ.ರಮೇಶ್ ಅವರು ಪ್ರಕರಣವನ್ನು ಪ್ರತಿವಾದಿಗಳ ಪರವಾಗಿ ದುರುದ್ಧೇಶದಿಂದ ವಿಲೇವಾರಿ ಮಾಡಿ ಆದೇಶ ನೀಡಿರುತ್ತಾರೆ. ಈ ಆದೇಶ, ಪೂರ್ಣವಾಗಿಯೂ ಅನುಚಿತವಾಗಿರುತ್ತದೆ, ಆಕ್ಷೇಪಕಾರಿಯಾಗಿರುತ್ತದೆ, ಅವೈಜ್ಞಾನಿಕ, ಅಸಮರ್ಥನೀಯವೂ ಆಗಿರುತ್ತದೆ. ಮಾತ್ರವಲ್ಲ, ಇದೊಂದು ಕಾರ್ಯಂಗ ಪಕ್ಷಪಾತಿಯಾಗಿ ನೀಡಿದ ಆದೇಶವಾಗಿರುತ್ತದೆ ಎಂದು ಮುಖ್ಯ ಮಾಹಿತಿ ಆಯುಕ್ತರಿಗೆ ಬರೆದ ಪತ್ರದಲ್ಲಿ ಶ್ರೀರಾಮ ದಿವಾಣ ಆರೋಪಿಸಿದ್ದಾರೆ.

ದಿನಾಂಕ 01.11.2014ರಂದು ಮಾಹಿತಿ ಹಕ್ಕು ಅಧಿನಿಯಮ 2005ರ ವಿಧಿ 7 (1) ಮತ್ತು 6 (1)ರಡಿಯಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಪ್ರಧನ ಕಾರ್ಯದರ್ಶಿಗಳ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯವರಿಗೆ ಮಾಹಿತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಕೋರಿದ ಮಾಹಿತಿ: ”ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ರಕ್ತನಿಧಿ ವಿಭಾಗದ ಡಾ.ಶರತ್ ಕುಮಾರ್ ರಾವ್ ಅವರನ್ನು ಅಮಾನತುಗೊಳಿಸುವ ಪ್ರಕ್ರಿಯೆಗೆ (ಪತ್ರ ಸಂಖ್ಯೆ: ಆಕುಕ 166 ಎಂಎಸ್ಎ 2013, ದಿನಾಂಕ 07.09.2013) ಒಪ್ಪಿಗೆ, ಸಹಮತ ಸೂಚಿಸಿ ಬರೆದ ಟಿಪ್ಪಣಿ, ಪತ್ರ ಬರೆದ ಸಚಿವರುಗಳ, ಶಾಸಕರು, ಮಾಜಿ ಜನಪ್ರತಿನಿಧಿಗಳು, ಹಾಲಿ ಜನಪ್ರತಿನಿಧಿಗಳು ಹಾಗೂ ಇತರ ವ್ಯಕ್ತಿಗಳು ಬರೆದ ಪತ್ರ , ಟಿಪ್ಪಣಿಗಳ ದೃಢೀಕೃತ ಯಥಾ ಪ್ರತಿಗಳು”. ಪಿಐಒ ಮಾಹಿತಿ ನೀಡದ ಕಾರಣ, ದಿನಾಂಕ 10.09.2016ರಂದು ಮಾಹಿತಿ ಹಕ್ಕು ಅಧಿನಿಯಮ 2005ರ ವಿಧಿ 19 (3)ರಡಿಯಲ್ಲಿ ಮೇಲ್ಮನವಿ ಪ್ರಾಧಿಕಾರಕ್ಕೆ ಒಂದನೇ ಅಪೀಲ್ ಸಲ್ಲಿಸಲಾಗಿತ್ತು. ಎಫ್ಎಎ ಅವರೂ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಘನ ಕರ್ನಾಟಕ ಮಾಹಿತಿ ಆಯೋಗಕ್ಕೆ ಎರಡನೇ ಅಪೀಲ್ ಸಲ್ಲಿಸಲಾಗಿತ್ತು. ಆಯೋಗವು ದಿನಾಂಕ 08.07.2016ರಂದು ನೋಟಿಸ್ ಜಾರಿಗಿಳಿಸಿ, ಪ್ರಕರಣದ ವಿಚಾರಣೆಗೆ ದಿನಾಂಕ ನಿಗದಿಪಡಿಸಿತ್ತು.

ದಿನಾಂಕ 09.08.2016ರಂದು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಸಭಾಂಗಣ- 4ರ ರಾಜ್ಯ ಮಾಹಿತಿ ಆಯುಕ್ತರಾದ ಎನ್.ಪಿ.ರಮೇಶ್ ಅವರು, ಅರ್ಜಿದಾರರು ಕೋರಿರುವಮಾಹಿತಿಯು ”ಕಲಂ 8 (1) (ಜೆ) ಅಡಿಯಲ್ಲಿ ವೈಯಕ್ತಿಕ ಮಾಹಿತಿಯಾಗಿದೆ” ಎಂದು ನಿರ್ಣಯಿಸಿ, ಪ್ರಕರಣವನ್ನು ವಿಲೇವಾರಿ ಮಾಡಿರುತ್ತಾರೆ.

ಅರ್ಜಿದಾರರು ನಿಸ್ಸಂಶಯವಾಗಿಯೂ ಸಾರ್ವಜನಿಕ ಹಿತಾಸಕ್ತಿಯಲ್ಲಿ ಮಾಹಿತಿಯನ್ನು ಕೋರಿದ್ದಾಗಿದೆ. ಕಾರಣ, ಡಾ.ಶರತ್ ಕುಮಾರ್ ರಾವ್ ಅವರನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಲ್ಲಿಸಿದ ಸುಳ್ಳು ದೂರಿನ ಆಧಾರದಲ್ಲಿ ತನಿಖೆ ನಡೆಸದೆಯೇ ಅಮಾನತು ಪಡಿಸಲಾಗಿದೆ. ಡಾ.ಶರತ್ ಕುಮಾರ್ ರಾವ್ ಇಲಾಕೆಯಲ್ಲಿ ನಡೆದ ಬಹುಕೋಟಿ ರಾಸಾಯನಿಕ ಹಗರಣದ ಬಗ್ಗೆ ಇಲಾಖಾಧಿಕಾರಿಗಳಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಹಾಗೂ ಇತರರ ಜೊತೆಗೆ ಶಾಮೀಲಾಗಿಕೊಂಡು ಸುಳ್ಳು ದೂರು ಸಲ್ಲಿಕೆಯಾಗುವಂತೆ ಮಾಡಿಕೊಂಡು ಡಾ.ಶರತ್ ಅವನ್ನು ಅಮಾನತು ಪಡಿಸಿದ್ದಾಗಿರುತ್ತದೆ. ಆದುದರಿಂದ, ಇದು ಖಸಗಿ ವಿಷಯವಾಗಲೀ, ವೈಯಕ್ತಿಕ ಮಾಹಿತಿಯಾಗಲೀ ಖಂಡಿತಾ ಆಗಿರುವುದಿಲ್ಲ. ವೈಯಕ್ತಿಕ ಮಾಹಿತಿ ಎಂದು ನಿರ್ಣಯಿಸಿದ ರಾಜ್ಯ ಮಾಹಿತಿ ಆಯುಕ್ತರು, ಯಾವ ವ್ಯಕ್ತಿಯ ವೈಯಕ್ತಿಕ ಮಾಹಿತಿ ಎಂಬುದನ್ನು ಉಲ್ಲೇಖಿಸಿರುವುದಿಲ್ಲ. ಯಾವ ವೈಯಕ್ತಿಕ ಮಾಹಿತಿಯೋ, ಆ ವ್ಯಕ್ತಿಯ ಅಭಿಪ್ರಾಯ ಪಡೆದ ಬಳಿಕ ಬೇಕಾದರೆ, ಸ್ವತಹಾ ಆ ವ್ಯಕ್ತಿಯೇ ಅದು ತನ್ನ ವೈಯಕ್ತಿಕ ಮಾಹಿತಿಯಾಗಿದೆ, ಹಾಗಾಗಿ ಮಾಹಿತಿ ಕೊಡಬಾರದು ಎಂದು ಭಿನ್ನವಿಸಿಕೊಳ್ಳುತ್ತಿದ್ದರೆ, ಆಗ ರಾಜ್ಯ ಮಾಹಿತಿ ಆಯುಕ್ತರು ಮಾಹಿತಿ ಕೋರಿಕೆಯನ್ನು 8 (1) (ಜೆ) ಅಡಿಯಲ್ಲಿ ತರುತ್ತಿದ್ದರೆ, ಸ್ವಲ್ಪವಾದರೂ ಮೌಲ್ಯವಿರುತ್ತಿತ್ತು, ಅರ್ಥ ಬರುತ್ತಿತ್ತು. ಆದರೆ, ಇಲ್ಲಿ ಎಲ್ಲವನ್ನೂ ರಾಜ್ಯ ಮಾಹಿತಿ ಆಯುಕ್ತರೇ ತೀರ್ಮಾನಿಸಿರುತ್ತಾರೆ. ಅದೂ ಅಸಹಜವಾಗಿ ಮತ್ತು ಅವೈಜ್ಞಾನಿಕವಾಗಿ. ಕಾರಣ, ಇದಕ್ಕೆ ರಾಜ್ಯ ಮಾಹಿತಿ ಆಯುಕ್ತರ ಹಾಗೂ ಪಿಐಒ ಮತ್ತು ಎಫ್ಎಎ ಅವರ ದುರುದ್ಧೇಶವಾಗಿದೆ.

ಕೋರಿರುವ ಮಾಹಿತಿಯು ಖಚಿತವಾಗಿಯೂ ಸಾರ್ವಜನಿಕ ಹಿತಾಸಕ್ತಿಯ ಪರವಾಗಿದೆ, ಅನ್ಯಾಯದ ವಿರುದ್ಧವಾಗಿದೆ, ಬಹುಕೋಟಿ ಭ್ರಷ್ಟಾಚಾರ ಹಗರಣವನ್ನು ಬಯಲುಪಡಿಸುವ ಪ್ರಕ್ರಿಯೆಯಲ್ಲಿ ನಡೆಸಿದ ಒಂದು ಪ್ರಕ್ರಿಯೆಯಾಗಿದೆ. ಆದರೆ, ಇಲ್ಲಿ ರಾಜ್ಯ ಮಾಹಿತಿ ಆಯುಕ್ತರು ಪಿಐಒ ಹಾಗೂ ಎಫ್ಎಎ ರವರ ಹಿತಾಸಕ್ತಿಗನುಗುಣವಾಗಿ, ದುರುದ್ಧೇಶದಿಂದ, ಅಸಮರ್ಪಕವಾದ, ಅನುಚಿತವಾದ, ಅವೈಜ್ಞಾನಿಕವಾದ, ಅಸಜಹವಾದ ಆದೇಶವನ್ನು ನೀಡುವ ಮೂಲಕ ಮಾಹಿತಿ ಹಕ್ಕು ಅಧಿನಿಯಮ 2005ನ್ನು ಸರಕಾರ ಯಾವ ಸದುದ್ಧೆಸಕ್ಕಾಗಿ ರಚಿಸಿ ಜಾರಿಗೊಳಿಸಿದೆಯೋ, ಆ ಮೂಲ ಉದ್ಧೇಶಕ್ಕೆ ಧಕ್ಕೆಯನ್ನುಂಟುಮಾಡಿದೆ.

ಆದುದರಿಂದ, ದಿನಾಂಕ 09.08.2016ರಂದು ರಾಜ್ಯ ಮಾಹಿತಿ ಆಯುಕ್ತರಾದ ಎನ್.ಪಿ.ರಮೇಶ್ ಅವರು ನ್ಯಾಯಾಲಯ ಸಭಾಂಗಣ- 4ರಲ್ಲಿ ನೀಡಿದ ಅರ್ಜಿದಾರನನ್ನು ದಾರಿ ತಪ್ಪಿಸುವಂಥ, ಅನುಚಿತವಾದ, ದುರುದ್ಧೇಶದಿಂದ ಕೂಡಿದ ಆದೇಶವನ್ನು ರದ್ದುಗೊಳಿಸಬೇಕು, ರಾಜ್ಯ ಮುಖ್ಯ ಮಾಹಿತಿ ಆಯುಕ್ತರಾದ ತಮ್ಮ ನೇತೃತ್ವದಲ್ಲಿ ರಾಜ್ಯ ಮಾಹಿತಿ ಆಯುಕ್ತರಾದ ಎನ್.ಪಿ.ರಮೇಶ್ ಹಾಗೂ ಡಾ.ಸುಚೇತನ ಸ್ವರೂಪ ಇವರನ್ನು ಹೊರತುಪಡಿಸಿದ ಇಬ್ಬರಿಗಿಂತ ಹೆಚ್ಚು ಮಂದಿ ರಾಜ್ಯ ಮಾಹಿತಿ ಆಯುಕ್ತರನ್ನೊಳಗೊಂಡ ಪ್ರತ್ಯೇಕ ಪೀಠ (ಬೆಂಚ್)ವನ್ನು ಸ್ಥಾಪಿಸಿ, ಪ್ರಕರಣವನ್ನು ನಿಷ್ಪಕ್ಷಪಾತವಾದ ರೀತಿಯಲ್ಲಿ ಮರು ವಿಚಾರಣೆಗೆ ಒಳಪಡಿಸಬೇಕು, ಈ ಮೂಲಕ ಮಾಹಿತಿ ಹಕ್ಕು ಅಧಿನಿಯಮವನ್ನು ಸರಕಾರ ಯಾವ ಸದುದ್ಧೇಶಕ್ಕಾಗಿ ರಚಿಸಿ ಜ್ಯಾರಿಗೊಳಿಸಿ, ಅನುಷ್ಟಾನಗೊಳಿಸಿತ್ತೋ, ಆ ಸದುದ್ಧೇಶಕ್ಕೆ ಪೂರಕವಾಗುವಂತೆ ನಡೆದುಕೊಳ್ಳಬೇಕು ಎಂದು ಶ್ರೀರಾಮ ದಿವಾಣ ಅವರು ಮುಖ್ಯ ಮಾಹಿತಿ ಆಯುಕ್ತರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

 

One Comment

  1. Gopikrishna55@gmail.com'

    GopiKrishna

    September 4, 2016 at 5:39 am

    ವರದಿಗಳು ಚೆನ್ನಾಗಿ ಬರುತ್ತವೆ.

Leave a Reply

Your email address will not be published. Required fields are marked *