Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹೆರಿಗೆ ಆಸ್ಪತ್ರೆಗೆಂದು ಮಹಿಳೆ ಸರಕಾರಕ್ಕೆ ದಾನ ಮಾಡಿದ 30 ಕೋಟಿ ಮೌಲ್ಯದ ಭೂಮಿ ಅಕ್ರಮ ಪರಭಾರೆ: ನಕಲಿ ದಾಖಲೆ ಸೃಷ್ಟಿ- ಅಧಿಕಾರಿಗಳು ಶಾಮೀಲು !

# ತನಿಖಾ ವರದಿ: ಶ್ರೀರಾಮ ದಿವಾಣ.

ಉಡುಪಿ: ಸಂತತಿ ಇಲ್ಲದ ಕಾರಣಕ್ಕೆ ಮಹಿಳೆಯೊಬ್ಬರು ಸರಕಾರಕ್ಕೆ ದಾನ ಮಾಡಿದ ಬೆಲೆಬಾಳುವ ಭೂಮಿಯನ್ನು ಸರಕಾರ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಖಾಸಗಿ ವ್ಯಕ್ತಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ನಕಲಿ ದಾಖಲೆ ಸೃಷ್ಟಿಸಿ ಅಕ್ರಮವಾಗಿ ತಮ್ಮ ಹೆಸರಿಗೆ ಆರ್.ಟಿ.ಸಿ. ಮತ್ತು ಖಾತೆ ಬದಲಾವಣೆ ಮಾಡಿಸಿಕೊಂಡ ಭಾರೀ ಭೂಹಗರಣವನ್ನು udupibits.in ಇದೀಗ ಈ ಮೂಲಕ ಬಯಲುಪಡಿಸುತ್ತಿದೆ.

ಉಡುಪಿ ತಾಲೂಕು ಉಡುಪಿ ನಗರದ ಮೂಡನಿಡಂಬೂರು ಗ್ರಾಮದ ನಿವಾಸಿಯಾಗಿದ್ದ ನಾರಾಯಣಿ ಅಮ್ಮಾಳ್ ಯಾನೆ ನಾರಾಯಣಿ ಬಾಯಿ ಎಂಬವರು 1944ರ ಎಪ್ರಿಲ್ ಒಂದರಂದು ಮೂಡನಿಡಂಬೂರು ಗ್ರಾಮದ ಸರ್ವೇ ನಂಬ್ರ 89/5, 89/11ಏ ಮತ್ತು 89/10ರಲ್ಲಿದ್ದ 2.37.00 ಎಕರೆ ಆಸ್ತಿಯನ್ನು ಆಗ ಉಡುಪಿಯಲ್ಲಿದ್ದ ‘ಉಡುಪಿ ಲೋಕಲ್ ಫಂಡ್ ಆಸ್ಪತ್ರೆ’ ಗೆ ವೀಲುನಾಮೆ ಬರೆದಿಟ್ಟು ದಾನವಾಗಿ ನೀಡಿದ್ದರು.

ಬೆಲೆಬಾಳುವ ಮರಮಟ್ಟುಗಳು ಮತ್ತು ಮನೆಗಳಿದ್ದ ಈ ಬಾಗಾಯ್ತು ಸ್ಥಿರ ಆಸ್ತಿಯ ಅಂದಿನ ಬೆಲೆ ಎರಡು ಲಕ್ಷ ರು. ಎಂದು ಅಂದಾಜಿಸಲಾಗಿತ್ತು. ಇದು ನಾರಾಯಣಿ ಅಮ್ಮಾಳ್ ರವರ ಸ್ವರ್ಜಿತ ಆಸ್ತಿಯಾಗಿತ್ತು. ಅಮ್ಮಾಳ್ ಅವರು ಈ ಭೂಮಿಯನ್ನು ನಿರ್ಗತಿಕ ಮಹಿಳೆಯರಿಗೆ ಹೆರಿಗೆ ಸೌಲಭ್ಯ ಒದಗಿಸಬೇಕೆಂಬ ಸದುದ್ಧೇಶ ಮತ್ತು ಕಾಳಜಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ನೀಡಿದ್ದರು.

ನಾರಾಯಣಿ ಅಮ್ಮಾಳ್ ರವರು 1965ರ ಜುಲೈ 14ರಂದು ಸಂತತಿ ಇಲ್ಲದೆಯೇ ನಿಧನರಾಗಿದ್ದರು. ಈ ನಡುವೆ ಅಚ್ಚುತನ್ ಎಂಬವರು, ನಾರಾಯಣಿ ಅಮ್ಮಾಳ್ ಅವರು ತನ್ನ ಪತ್ನಿಯಾಗಿದ್ದು, ಇವರನ್ನು ತಾನು ಮುಂಬಯಿಯ ಕಾಂಗ್ರೆಸ್ ಭವನದಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದೇನೆ ಎಂದು ಹೇಳಿಕೊಂಡು ನಾರಾಯಣಿ ಅಮ್ಮಾಳ್ ರವರ ವೀಲುನಾಮೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಉಡುಪಿ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಶ್ವನಾಥ ರೈ ಅವರು, ಅರ್ಜಿದಾರ ಅಚ್ಚುತನ್ ಪರವಾಗಿ ವಾದಿಸಿದ ವಕೀಲ ಬಿ.ಯೋಗೀಶ್ ಹೊಳ್ಳ ಹಾಗೂ ಸರಕಾರದ ಪರವಾಗಿ ವಾದಿಸಿದ ಸಿ.ಎಸ್.ಹೆಗ್ಡೆ ಇವರಿಬ್ಬರ ವಾದವನ್ನೂ ಆಲಿಸಿ, ಅಂತಿಮವಾಗಿ ನಾರಾಯಣಿ ಅಮ್ಮಾಳ್ ಅವರು ಬರೆದಿಟ್ಟ ವೀಲುನಾಮೆಯಂತೆ ಭೂಮಿ ಆರೋಗ್ಯ ಇಲಾಖೆಗೆ ಸೇರಿದ್ದು ಎಂದು ತೀರ್ಪು ನೀಡಿದ್ದರು.

scales-of-justice

ಅಚ್ಚುತನ್ ಹಾಗೂ ನಾರಾಯಣಿ ಅಮ್ಮಾಳ್ ಅವರು ಗಂಡ ಹೆಂಡಿರಂತೆ ಜೊತೆಯಾಗಿ ಜೀವನ ನಡೆಸುತ್ತಿದ್ದರೆಂದು ನ್ಯಾಯಾಲಯದಲ್ಲಿ ಕೆಲವರು ಸಾಕ್ಷ್ಯ ನುಡಿದಿದ್ದರು. ಆದರೆ, ನಾರಾಯಣಿ ಅಮ್ಮಾಳ್ ರವರ ವೀಲುನಾಮೆಗೆ ಅಚ್ಚುತನ್ ಅವರು ಒಪ್ಪಿಗೆ ನೀಡಿದ್ದರು ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ಮಾತ್ರವಲ್ಲ, ದಾನ ಮಾಡಿದ ಭೂಮಿ ನಾರಾಯಣಿ ಅಮ್ಮಾಳ್ ರವರ ಸ್ವ ರ್ಜಿತ ಆಸ್ತಿ ಎಂಬುದನ್ನು ನ್ಯಾಯಾಲಯ ಸ್ಪಷ್ಟಪಡಿಸಿತ್ತು. ಸ್ವಲ್ಪ ಕಾಲ ಈ ಭೂಮಿಯ ಪವರ್ ಆಫ್ ಅಟಾರ್ನಿ ಅಚ್ಚುತನ್ ಹೆಸರಿಗೆ ಇದ್ದ ಕಾರಣಕ್ಕೆ, ಅಚ್ಚುತನ್ ಅವರಿಗೆ ರೂ. 6,206.31 ಪರಿಹಾರ ನೀಡುವಂತೆಯೂ, ವೀಲು ನಾಮೆ ಸಿಂಧುವಾಗಿದ್ದು, ಈ ಭೂಮಿ ಆರೋಗ್ಯ ಇಲಾಖೆಯ ಸ್ವಾಧೀನದಲ್ಲಿರಬೇಕು ಎಂದು ನ್ಯಾಯಾಲಯ ತೀರ್ಪು ಪ್ರಕಟಿಸಿತ್ತು.

ನಾರಾಯಣಿ ಅಮ್ಮಾಳ್ ಅವರು ವೀಲುನಾಮೆ ಬರೆದಿಟ್ಟು ಆರೋಗ್ಯ ಇಲಾಖೆಗೆ ಸೇರಿದ ಉಡುಪಿ ಲೋಕಲ್ ಫಂಡ್ ಆಸ್ಪತ್ರೆಗೆ ಎಂದು ದಾನ ಮಾಡಿದ ಪ್ರಸ್ತುತ 30 ಕೋಟಿ  ರು. ಬೆಲೆ ಬಾಳುವ 2.37.00 ಎಕರೆ ಸರಕಾರೀ ಭೂಮಿಯನ್ನು ಇದೀಗ ಅಚ್ಚುತನ್ ಹಾಗೂ ಅರವಿಂದ, ನಳಿನಿ, ಮೀನಾಕ್ಷಿ, ವಿಮಲ, ಮಾಧವ, ಭಾಸ್ಕರ, ರಾಘವ, ಜಗನ್ನಾಥ ಹಾಗೂ ಕೃಷ್ಣೀ ಬಾಯಿ ಎಂಬವರು ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಹೆಸರಿಗೆ ಆರ್.ಟಿ.ಸಿ ಮತ್ತು ಖಾತೆ ಮಾಡಿಕೊಂಡು ಅಕ್ರಮವಾಗಿ ತಮ್ಮದನ್ನಾಗಿ ಮಾಡಿಕೊಂಡಿದ್ದಾರೆ.

ಈ ಭಾರೀ ಅಕ್ರಮ ಭೂಹಗರಣದಲ್ಲಿ ವಿಎ, ಆರ್ ಐ, ತಹಶೀಲ್ದಾರರು, ತಹಶೀಲ್ದಾರ್ ಕಚೇರಿಯ ಕೆಲವು ಮಂದಿ ಸಿಬ್ಬಂದಿಗಳು, ನೋಂದಣಿ ಇಲಾಖೆಯ ಅಧಿಕಾರಿಗಳು ಹಾಗೂ ಉಡುಪಿ ನಗರಸಭೆಯ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದರೆ, ಕೆಲವು ಮಂದಿ ರಾಜಕೀಯ ಪುಢಾರಿಗಳು ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ.

ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಭೂಮಿಯನ್ನು ಸದ್ವಿನಿಯೋಗಪಡಿಸಿಕೊಳ್ಳಬಹುದಿತ್ತು. ಅಥವಾ ಈ ಭೂಮಿ ಆರೋಗ್ಯ ಇಲಾಖೆಗೆ ಸೇರಿದ್ದು ಎಂಬ ಫಲಕವನ್ನಾದರೂ ಸ್ಥಳದಲ್ಲಿ ಅಳವಡಿಸುಬಹುದಾಗಿತ್ತು. ಇದಾವುದನ್ನೂ ಮಾಡದ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖಾ ಅಧಿಕಾರಿಗಳ ಬೇಜವಾಬ್ದಾರಿ ಒಂದೆಡೆಯಾದರೆ, ಅಧಿಕಾರಿಗಳ ಕರ್ತವ್ಯಲೋಪ ಇನ್ನೊಂದೆಡೆ ಸ್ಪಷ್ಟವಾಗುತ್ತದೆ.

Leave a Reply

Your email address will not be published. Required fields are marked *