Realtime blog statisticsweb statistics
udupibits.in
Breaking News
ಉಡುಪಿ: ಬೈಲೂರು ನಿವಾಸಿ, ಮಿಷನ್ ಕಂಪೌಂಡ್ ಸ್ಟಾಂಡ್ ನ ರಿಕ್ಷಾ ಚಾಲಕ, ಮಾಲಕ ರಾಘವೇಂದ್ರ ಭಟ್ (ರಾಘು ಭಟ್) ನಿಧನ.

ಸರಣಿ ವಿಫಲತೆ ಮರೆಮಾಚಲು ನೋಟು ನಿಷೇಧ: ಅಸಮರ್ಥ ಪ್ರಧಾನಿ ನರೇಂದ್ರ ಮೋದಿಯಿಂದ ಭಾಷಣವೇ ಆಡಳಿತವೆಂಬ ಭ್ರಮೆ ಸೃಷ್ಠಿ !

# 2016, ನವೆಂಬರ್ 8ರ ರಾತ್ರಿ ದಿಢೀರನೆ ಒಂದು ಸಾವಿರ ಮತ್ತು ಐನೂರು ರೂಪಾಯಿ ನೋಟುಗಳನ್ನು ನಿಷೇಧಿಸಲಾಗಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಮಾಧ್ಯಮಗಳ ಮೂಲಕ ಘೋಷಿಸಿದ್ದಾರೆ. ವಿದೇಶದಿಂದ ಸರಬರಾಜಾಗಿ ಬಂದು ದೇಶದಲ್ಲಿ ಚಲಾವಣೆಯಲ್ಲಿರುವ ಖೋಟಾನೋಟು ಚಲಾವಣೆಗೆ ಕಡಿವಾಣ ಹಾಕಲು ಮತ್ತು ದೇಶವಾಸಿಗಳಲ್ಲಿರುವ ಭಾರೀ ಕಪ್ಪು ಹಣ (ಬ್ಲ್ಯಾಕ್ ಮನಿ)ವನ್ನು ನಿಯಂತ್ರಿಸಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ, ಒಂದು ಸಾವಿರ ಮತ್ತು ಐನೂರು ರೂಪಾಯಿಗಳ ನೋಟುಗಳ ಬದಲಾಗಿ ಎರಡು ಸಾವಿರ ರೂಪಾಯಿ ನೋಟುಗಳನ್ನು ಒಂದೆರಡು ದಿನಗಳೊಳಗೆಯೇ ಚಲಾವಣೆಗೆ ತರಲಾಗುವುದು ಎಂದು ಪ್ರಧಾನಿ ಪ್ರಕಟಿಸಿದರು.

ಜನರು, ಮುಖ್ಯವಾಗಿ ಸಾಮಾನ್ಯ ಜನರು ಆರಂಭದ ಒಂದೆರಡು ದಿನ ಪ್ರಧಾನಿ ಮೋದಿಯವರ ಈ ಕ್ರಮವನ್ನು ಸ್ವಾಗತಿಸಿದರು. ಕಾರಣ, ಈ ಘೋಷಣೆ ಜನ ಸಾಮಾನ್ಯರಿಗೆ ಅನಿರೀಕ್ಷಿತವೇ ಆಗಿತ್ತು. ನೋಟು ರದ್ದತಿಯ ಪರಿಣಾಮಗಳನ್ನು ಆ ಕ್ಷಣದಲ್ಲಿ ಅಂದಾಜಿಸುವಷ್ಟು ಅವರು ಸಮರ್ಥರಾಗಿರಲಿಲ್ಲ. ಇದೇ ಹೊತ್ತಿನಲ್ಲಿ, ಮೋದಿ ಅಂಧಾಭಿಮಾನಿಗಳು, ಬಿಜೆಪಿ ಪರಿವಾರ ಸಂಘಟನೆಗಳ ಕಾರ್ಯಕರ್ತರು ನರೇಂದ್ರ ಮೋದಿಯವರ ನಿರ್ಧಾರವನ್ನು ಹಿಂದೆ ಮುಂದೆ ನೋಡದೆ ಸಮರ್ಥಿಸಿದರು, ಜೊತೆಗೆ, ಮೋದಿಯವರನ್ನು ಹಾಡಿ ಹೊಗಳುತ್ತಾ ವೈಭವೀಕರಿಸುವುದನ್ನು ಮುಂದುವರಿಸಿದರು. ಮೋದಿ ಏನು ಮಾಡಿದರೂ, ಏನೇ ಹೇಳಿದರೂ ಸಹಜವಾಗಿಯೇ ಅವುಗಳನ್ನೆಲ್ಲಾ ಬೆಂಬಲಿಸುತ್ತಾ, ಸಮರ್ಥಿಸುತ್ತಾ ಬಂದ, ಸಮರ್ಥಿಸುತ್ತಾ ಮುಂದುರಿಯುತ್ತಿರುವ ಮೋದಿಯ ಅಂಧಾಭಿಮಾನಿಗಳು ಮತ್ತು ಯಾವತ್ತಿಗೂ ಬಿಜೆಪಿ ಪರಿವಾರ ಪಕ್ಷಪಾತಿಗಳು ಇಲ್ಲೂ ಈ ವಿಷಯದಲ್ಲೂ ನಿರೀಕ್ಷಿತವಾಗಿಯೇ ಮೋದಿಯನ್ನು ಹೊಗಳೀ ಹೊಗಳಿ ಹೊನ್ನಶೂಲಕ್ಕೇರಿಸುವ ಕೆಲಸ ಮಾಡಿದರು, ಮಾಡುತ್ತಲೇ ಇದ್ದಾರೆ.

ಒಂದು ಸಾವಿರ ಮತ್ತು ಐನೂರು ರೂಪಾಯಿ ನೋಟುಗಳನ್ನು ನಿಷೇಧಿಸಿಸುವ ಕ್ರಮವನ್ನು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿಎ ಸರಕಾರ ತೆಗೆದುಕೊಳ್ಳಬೇಕಾಗಿತ್ತು. ಮಂತ್ರಿ ಮಂಡಲದಲ್ಲಿ ವಿಷಯ ಪ್ರಸ್ತಾಪಿಸಿ, ಸಾಧಕ ಬಾಧಕಗಳ ಬಗ್ಗೆ ಸಮಗ್ರವಾಗಿ ಚರ್ಚಿಸಿ, ದೊಡ್ಡ ಮೊತ್ತದ ಎರಡು ನೋಟುಗಳನ್ನು ನಿಷೇಧಿಸುವ ಅದೇ ಹೊತ್ತಲ್ಲಿ ಯಾವ ಯಾವ ಮೊತ್ತದ ನೋಟುಗಳನ್ನು ಯಾವ ಪ್ರಮಾಣದಲ್ಲಿ ಮುದ್ರಿಸಬೇಕು, ಜನರಿಗೆ ತೊಂದರೆಯಾಗದಂತೆ ಹೇಗೆ ಸರಬರಾಜು ಮಾಡಬೇಕು ಎಂಬಿತ್ಯಾದಿ ವಿಚಾರಗಳನ್ನು ತೀರ್ಮಾನಿಸಿದ ಬಳಿಕ ನೋಟುಗಳ ನಿಷೇಧವೆಂಬ ನಿರ್ಣಯವನ್ನು ಜ್ಯಾರಿಗೊಳಿಸಬೇಕಾಗಿತ್ತು.

ಆದರೆ, ಇಲ್ಲಿ ಮಾತ್ರ ಹಾಗೆ ಆದ ಹಾಗೆ ಕಾಣುತ್ತಿಲ್ಲ. ತನ್ನ ಸಂಪುಟ ಸಹೋದ್ಯೋಗಿಗಳನ್ನೇ ಪ್ರಧಾನಿ ನರೇಂದ್ರ ಮೋದಿ ವಿಶ್ವಾಸಕ್ಕೆ ತೆಗೆದುಕೊಂಡ ಹಾಗೆ ಕಾಣುವುದಿಲ್ಲ. ಅಂದರೆ, ಕೇಂದ್ರ ಸಂಪುಟದಲ್ಲಿರುವ, ಸ್ವತಹಾ ತಾನೇ ಆಯ್ಕೆ ಮಾಡಿ ಮಂತ್ರಿಗಳನ್ನಾಗಿ ಮಾಡಿದ ಜನಪ್ರತಿನಿಧಿಗಳ ಮೇಲೆಯೇ ಪ್ರಧಾನಿ ನರೇಂದ್ರ ಮೋದಿಯವರಿಗೆ ನಂಬಿಕೆ ಇಲ್ಲ. ಮೋದಿಯವರ ಈ ಕ್ರಮ ಅಪ್ರಜಾತಾಂತ್ರಿಕವೂ ಹೌದು, ಸರ್ವಾಧಿಕಾರತ್ವವೂ ಹೌದು, ಆಳುವ ಪಕ್ಷದ ಜನಪ್ರತಿನಿಧಿಗಳು ಪ್ರತಿನಿಧಿಸುವ ಲೋಕಸಭಾ ಕ್ಷೇತ್ರಗಳ ಕೊಟ್ಯಂತರ ಮತದಾರರಿಗೆ ಮಾಡಿದ ಅವಮಾನವೂ ಹೌದು.

ನೋಟುಗಳ ನಿಷೇಧ ಎಂಬ ತೀರ್ಮಾನದಲ್ಲಿ ಸಂಪುಟ ಸಹೋದ್ಯೋಗಿಗಳನ್ನು ಕತ್ತಲಲ್ಲಿರಿಸಿದರು ಅಂದರೆ, ಪ್ರದಾನಿ ನರೇಂದ್ರ ಮೋದಿಯವರು ತಮ್ಮ ಸಂಪುಟ ಸಹೋದ್ಯೋಗಿಗಳನ್ನೇ ನಂಬುವುದಿಲ್ಲ ಎಂದೇ ಅರ್ಥೈಸಬೇಕಾಗುತ್ತದೆ. ತನ್ನ ಸಂಪುಟ ಸಹೋದ್ಯೋಗಿಗಳನ್ನೇ ಪ್ರಧಾನಿ ನಂಬುವುದಿಲ್ಲ ಎಂದಾದರೆ, ಇನ್ನು ಪ್ರಜೆಗಳನ್ನು ನಂಬುವುದಾದರೂ ಹೇಗೆ ? ನಂಬದ ಕಾರಣಕ್ಕೇ ದೇಶವಾಸಿಗಳೆರಲ್ಲೂ ಕಪ್ಪುಹಣ ಇದೆ ಎಂಬಂತೆ ಮೋದಿ ನಡೆದುಕೊಂಡರು ಎಂದು ಅನಿಸುತ್ತದೆ. ಇಲ್ಲದಿದ್ದರೆ ‘ಕೈ ಬೆರಳಿಗೆ ಶಾಯಿ ಹಾಕುವಂಥ ಕ್ರಮ’ ಬೇಕಿತ್ತಾ ?

ಒಂದು ಸಾವಿರ ಮತ್ತು ಐನೂರು ರೂಪಾಯಿ ನೋಟುಗಳನ್ನು ನಿಷೇಧಿಸಿದ ನಮ್ಮ ಸಮರ್ಥ, ದಕ್ಷ ಪ್ರಧಾನಿ ನರೇಂದ್ರ ಮೋದಿಯವರಿಗೆ ಜನರಿಗೆ ವಿತರಿಸಲು ಬೇಕಾಗುವಷ್ಟು ಇತರ ಯಾವುದೇ ನೋಟುಗಳನ್ನೂ ಬ್ಯಾಂಕ್ ಗೆ ಸರಬರಾಜು ಮಾಡಲು ನೋಟುಗಳನ್ನು ನಿಷೇಧಿಸಿ ಎರಡು ವಾರಗಳೇ ಕಳೆದರೂ ಇದುವರೆಗೂ ಸಾಧ್ಯವಾಗಿಲ್ಲ. ಇದಕ್ಕೆ ಕೇಂದ್ರ ಸರಕಾರ ಕಾರಣವೆಂದು ಹೇಳಲಾಗುವುದಿಲ್ಲ. ಕೇಂದ್ರ ಸರಕಾರವನ್ನು ಈ ವಿಷಯದಲ್ಲಿ ಹೊಣೆಗಾರನನ್ನಾಗಿ ಮಾಡುವುದು ತಪ್ಪಾಗುತ್ತದೆ. ಈ ವಿಫಲತೆಗೆ, ಅಸಾಮರ್ಥ್ಯಕ್ಕೆ, ಬೇಜವಾಬ್ದಾರಿತನಕ್ಕೆ, ಹೊಣೆಗೇಡಿತನಕ್ಕೆ ನೇರವಾಗಿಯೂ ಪ್ರಧಾನಿ ನರೇಂದ್ರ ಮೋದಿಯವರೇ ಕಾರಣರಾಗುತ್ತಾರೆ.

head-post-officemanipal-sub-post-office

ಒಂದು ಸಾವಿರ ಮತ್ತು ಐನೂರು ರೂಪಾಯಿಗಳ ನೋಟುಗಳಿಗೆ ಬದಲಾಗಿ ಮದ್ರಿಸಲಾದ ಎರಡು ಸಾವಿರ ರೂಪಾಯಿ ನೋಟುಗಳನ್ನೇ ಬೇಕಾದಷ್ಟು ಪ್ರಮಾಣದಲ್ಲಿ ಮುದ್ರಿಸಲು ಈತನಕ ಮೋದಿಯವರಿಗೆ ಸಾಧ್ಯವಾಗಿಲ್ಲ. ಪರಿಣಾಮ, ಅಂಚೆ ಕಚೇರಿಗಳಲ್ಲಿ, ಬ್ಯಾಂಕ್ ಗಳಲ್ಲಿ ಎಲ್ಲಿಯೂ ಪ್ರಸ್ತುತ ಎರಡು ಸಾವಿರ ರೂಪಾಯಿ ನೋಟುಗಳು ಸಹ ಸರಿಯಾಗಿ ಲಭಿಸುತ್ತಿಲ್ಲ. ಎರಡು ಸಾವಿರ ರೂಪಾಯಿ ನೋಟುಗಳನ್ನು ಪಡೆದುಕೊಂಡ ಜನಸಾಮಾನ್ಯರಿಗೂ ಅದನ್ನು ಚಿಲ್ಲರೆ ಮಾಡಿಕೊಳ್ಳಲು ಸಾಧ್ಯವಾಗದೆ ಬಹಳಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದರೆ, ಈ ವಿಫಲತೆಯ ಹೊಣೆಯನ್ನೂ ಪ್ರಧಾನಿ ನರೇಂದ್ರ ಮೋದಿಯವರೇ ಹೊತ್ತುಕೊಳ್ಳಬೇಕಾಗುತ್ತದೆ.

ಒಂದು ಸಾವಿರ ಮತ್ತು ಐನೂರು ರೂಪಾಯಿಗಳ ಎರಡು ನೋಟುಗಳನ್ನು ನಿಷೇಧಿಸುವ ಸಂದರ್ಭದಲ್ಲಿ ಹಳೆಯ ನೋಟುಗಳ ಬದಲಾಗಿ ಅದೇ ಮೊತ್ತದ ಹೊಸ ನೋಟುಗಳನ್ನು ಮುದ್ರಿಸಬಹುದಿತ್ತು. ಆ ಕೆಲಸವನ್ನು ಕೂಡಾ ಪ್ರಧಾನಿ ಮೋದಿ ಮಾಡಲಿಲ್ಲ ಎನ್ನುವುದು, ನೋಟುಗಳ ನಿಷೇಧದಿಂದಾಗುವ, ಆಗಬಹುದಾದ ಸಮಸ್ಯೆಗಳ ಬಗ್ಗೆ ಪ್ರಧಾನಿ ಮೋದಿ ಮುಂದಾಲೋಚಿಸುವುದರಲ್ಲಿ ಎಡವಿದ್ದಾರೆ ಎನ್ನುವುದನ್ನು ಸ್ಪಷ್ಟಪಡಿಸುತ್ತದೆ.

ನಿಷೇಧಕ್ಕೆ ಒಳಗಾದ ನೋಟುಗಳ ಬದಲಾಗಿ ಬೇರೆ ನೋಟುಗಳನ್ನು ಪಡೆದುಕೊಳ್ಳುವ ಪ್ರಕ್ರಿಯೆಯಲ್ಲಿ 40ಕ್ಕೂ ಅಧಿಕ ಮಂದಿ ಜನ ಸಾಮಾನ್ಯರು ತಮ್ಮ ಜೀವವನ್ನು ಕಳೆದುಕೊಳ್ಳಬೇಕಾಗಿ ಬಂದಿದೆ ಎಂದರೆ, ಇದಕ್ಕೆ ಯಾರು ಹೊಣೆ ? ಕೆಲವೇ ಕೆಲವು ಸಾವಿರ ಜನರನ್ನು ಟಾರ್ಗೆಟ್ ಮಾಡಿ ಮಾಡಬೇಕಾದ, ಮಾಡಬೇಕಾಗಿದ್ದ ಕಾರ್ಯಾಚರಣೆಯಾಗಿತ್ತು ಇದು. ಅದರ ಬದಲು ಇಡೀ ದೇಶವಾಸಿಗಳನ್ನು ಟಾರ್ಗೆಟ್ ಮಾಡಿ ಕಾರ್ಯಾಚರಣೆ ಮಾಡಿದಂತಾಗಿದೆ. ನೂರು ಜನರ ವಿರುದ್ದ ಕಠಿಣ ಕ್ರಮ ಜರುಗಿಸುವ ಬದಲಾಗಿ, ನೂರು ಕೋಟಿ ಜನರ ವಿರುದ್ಧ ಯುದ್ಧ ಸಾರಿ ಇಷ್ಟೂ ಜನರನ್ನೂ ಅರೆಜೀವ ಮಾಡಿದಂತಾಗಿದೆ ನೋಟು ನಿಷೇಧವೆಂಬ ಪ್ರಹಸನ.

ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಕೂಡಲೇ ಮೊತ್ತ ಮೊದಲ ಆದೇಶವಾಗಿ ಇತರ ಇಲಾಖೆಗಳಲ್ಲಿನ ಯಾವುದೇ ನಿರ್ಧಾರಗಳನ್ನೂ, ಇತರ ಖಾತೆದಾರ ಮಂತ್ರಿಗಳ ಬದಲು ತನ್ನ ಗಮನಕ್ಕೆ ತಂದ ಬಳಿಕವೇ ಜ್ಯಾರಿಗೊಳಿಸುವ ಕೆಲಸಕ್ಕೆ ಕೈ ಹಾಕಬೇಕು ಎಂದು ಮೌಖಿಕ ಆದೇಶ ನೀಡಿ ಸರ್ವಾಧಿಕಾರೀ ಮನೋಭಾವವನ್ನು ಪ್ರದರ್ಶಿಸಿದ ನರೇಂದ್ರ ಮೋದಿ, ಬಳಿಕ ಪ್ರದಾನಿಯಾಗಿ ನಡೆದುಕೊಳ್ಳುವ ಬದಲು, ಒಬ್ಬ ವಿದೇಶಾಂಗ ಮಂತ್ರಿ ಎಂಬಂತೆ ನಡೆದುಕೊಂಡರು. ನಿರಂತರವಾಗಿ ವಿದೇಶ ಪ್ರವಾಸ ಮಾಡುತ್ತಾ, ಆಕರ್ಷಕ ಭಾವಾಭಿನಯದೊಂದಿಗೆ ಭಾವನಾತ್ಮಕ ಮತ್ತು ಆಶಾಯಾತಯ್ಮಕ ಭಾಷಣ ಮಾಡುತ್ತಾ, ಪ್ರಚಾರ ಮತ್ತು ಪ್ರಸಿದ್ದಿಯೇ ಸಮರ್ಥ ಹಾಗೂ ದಕ್ಷ ಆಡಳಿತ ಎಂಬಂತೆ ವರ್ತಿಸಿದರು ನರೇಂದ್ರ ಮೋದಿ.

ಸ್ವತಂತ್ರ ಭಾರತದಲ್ಲಿ ವಿದೇಶದ ಸೈನಿಕರಾಗಲೀ, ಉಗ್ರರಾಗಲೀ ದಾಳಿ ನಡೆಸಿ ಒಂದೇ ಸಲಕ್ಕೆ 18 ಮಂದಿ ಸೈನಿಕರನ್ನು ಹತ್ಯೆಗೈದ ಉದಾಹರಣೆ ಇಲ್ಲ. ಈ ಉರಿ ಹತ್ಯಾಕಾಂಡಕ್ಕೆ ಸಾಕ್ಷಿಯಾದುದು ಇದೇ ನರೇಂದ್ರ ಮೋದಿಯ ಆಡಳಿತಾವಧಿ ಎನ್ನುವುದನ್ನು ಮರೆಯಲು ಸಾಧ್ಯವಿಲ್ಲ. ವಿರೋಧ ಪಕ್ಷದಲ್ಲಿದ್ದಾಗ, ಈಗಲೇ ಈ ಕ್ಷಣವೇ ಪಾಕಿಸ್ಥಾನಕ್ಕೆ ಹೋಗಿ ಬಾಂಬ್ ಹಾಕಬೇಕು ಎಂಬಂತೆ ಮಾತನಾಡುತ್ತಿದ್ದ ಮೋದಿ, ಪ್ರಧಾನಿಯಾಗುವ ಹಂತದಲ್ಲೇ ಪಾಕಿಸ್ಥಾನ ಪ್ರದಾನಿಗೆ ರತ್ನಗಂಬಳಿ ಹಾಸಿದರು. ಬೇರೆಲ್ಲಿಂದಲೋ ಬರುವ ದಾರಿಯ ಮಧ್ಯೆ ಯಾರ ಗಮನಕ್ಕೂ ತಾರದೆ ಪಾಕ್ ಗೆ ಹೋಗಿ ಅಲ್ಲಿನ ಪ್ರಧಾನಿಯ ಕೈ ಕುಲುಕಿದರು. ಸಾಲದ್ದಕ್ಕೆ ಅವರ ತಾಯಿಗೆ ಸೀರೆ ಕೊಟ್ಟು ಬಂದರು. ಕೇಂದ್ರದಲ್ಲಿ ಕಾಂಗ್ರೆಸ್ ಸರಕಾರವಿದ್ದಾಗಲೆಲ್ಲಾ, ಕಾಂಗ್ರೆಸ್ ಸರಕಾರ ವಿದೇಶ ನೀತಿಯನುಸಾರ ತೆಗೆದುಕೊಳ್ಳುತ್ತಿದ್ದ ಸಕಾರಾತ್ಮಕ ಕ್ರಮಗಳ ವಿರುದ್ಧ ಭಯಂಕರವಾಗಿ ವರ್ತಿಸುತ್ತಾ, ಆಡಳಿತ ನಿರ್ವಹಣೆಗೆ ಅಡ್ಡಿ ಒಡ್ಡುತ್ತಿದ್ದ, ಪ್ರತಿಯೊಂದು ಹಂತದಲ್ಲೂ ಆಡಳಿತದ ವಿರುದ್ಧ ದಂಗೆ ಏಳಲು ಜನರನ್ನು ಪ್ರಚೋದಿಸುತ್ತಿದ್ದ ಬಿಜೆಪಿ ಪಕ್ಷಪಾತಿಗಳು, ಮೋದಿ ಪ್ರಧಾನಿಯಾಗಿ ಪಾಕ್ ಪ್ರಧಾನಿ ಜೊತೆಗೆ ಸರಸವಾಡುತ್ತಿದ್ದಾಗ ಎಲ್ಲಿಗೆ ಹೋದರೆಂಬುದೇ ಗೊತ್ತಾಗುವುದಿಲ್ಲ.

ಗೋಮಾತೆ, ಗೋಮಾಂಸ ಇತ್ಯಾದಿ ವಿಷಯಗಳನ್ನೇ ಮುಖ್ಯ ಅಜೆಂಡಾವಾಗಿ ಇರಿಸಿಕೊಂಡಿರುವ ಬಿಜೆಪಿ ಪರಿವಾರವೇ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಗೋಮಾಂಸ ರಫ್ತಿನಲ್ಲಿ ನಮ್ಮ ದೇಶವೇ ಮೊದಲ ಸ್ಥಾನದಲ್ಲಿದೆ ಎಂಬ ಸತ್ಯವೇ ತಮಗೀಗ ಗೊತ್ತಿಲ್ಲ ಎಂಬಂತೆ ಇದೀಗ ಇವರು ವರ್ತಿಸುತ್ತಿರುವುದನ್ನು ನೋಡಿದರೆ, ಇವರಿಗೆ ಬೇಕಾಗಿರುವುದು ಕೇವಲ ಅಧಿಕಾರವೇ ಹೊರತು ಬೇರೇನೂ ಅಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇವರಲ್ಲಿ ದ್ವಂದ್ವ, ಗೋಸುಂಬೆತನ ಇಲ್ಲವೆಂದಾದರೇ ಗೋಮಾಂತೆಯ ಪರಮ ಭಕ್ತರು ಈಗ ಮೋದಿ ನೇತೃತ್ವದ ಕೇಂದ್ರ ಸರಕಾರದ ವಿರುದ್ಧ ನಿರಂತರವಾಗಿ ಮತ್ತು ಬೃಹತ್ ಮಟ್ಟದ ಪ್ರತಿಭಟನೆಗಳನ್ನು ನಡೆಸಬೇಕಾಗಿತ್ತು. ಗೋಮಾಂಸ ರಫ್ತನ್ನು ನಿಷೇಧಿಸಲಾಗದೇ ಇದ್ದ ಪಕ್ಷದಲ್ಲಿ ರಾಜೀನಾಮೆ ಕೊಟ್ಟು ಮನೆಗೆ ಹೋಗುವಂತೆ ಖಡಕ್ ಎಚ್ಚರಿಕೆ ಕೊಡುವ ಕೆಲಸವನ್ನೂ ಪರಿಣಾಮಕಾರಿ ರೀತಿಯಲ್ಲಿ ಮಾಡಬೇಕಾಗಿತ್ತು. ಇದಾವುದನ್ನೂ ಬಿಜೆಪಿ, ವಿಶ್ವ ಹಿಂದೂ ಪರಿಷತ್ತು, ಬಜರಂಗ ದಳ, ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇತ್ಯಾದಿ ಪರಿವಾರ ಸಂಘಟನೆಗಳು ಮಾಡದಿರುವುದು ಇವರ ನಿಜ ಬಣ್ಣವನ್ನು ಬಯಲುಪಡಿಸುತ್ತದೆಯಷ್ಟೆ.

ತಾನು ಪ್ರಧಾನಿಯಾದ ಮೇಲೆ ಸಂಭವಿಸುತ್ತಲೇ ಬಂದ ವಿಫಲತೆಗಳನ್ನು ಮರೆಮಾಚಲು ಮೋದಿಗೆ ವರದಾನವಾಗಿ ಕಂಡದ್ದೇ ಈ ನೋಟು ನಿಷೇಧ ಎಂಬ ಕ್ರಮ ಇರಬೇಕು. ಬೃಹತ್ ಮೊತ್ತದ ಕಪ್ಪು ಹಣದಿಂದಲೇ ಓಟಿನಲ್ಲಿ ಸ್ಪರ್ಧಿಸಿ ಗೆದ್ದ ಪಾರ್ಟಿಯೊಂದು, ಅದರ ನಾಯಕನೊಬ್ಬ ತನ್ನನ್ನು ಗೆಲ್ಲಿಸಿದ ಕಪ್ಪು ಹಣದ ಸರದಾರರನ್ನು ರಕ್ಷಿಸಿ ಇತರರ ಕಪ್ಪುಹಣದ ವಿರುದ್ಧ ಯುದ್ಧ ಸಾರಿ, ಭಾರೀ ದೊಡ್ಡ ಸುಭಗನಂತೆ ಫೋಸು ಕೊಡುತ್ತಾ, ಡೈಲಾಗ್ ಬಿಡುತ್ತಾ, ಸರ್ವಾಧಿಕಾರಿಯಾಗಲು ಹೊರಟಿರುವುದು ದೇಶದ ದುರಂತವೇ ಸರಿ.

Leave a Reply

Your email address will not be published. Required fields are marked *