Realtime blog statisticsweb statistics
udupibits.in
Breaking News
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ- ಶಂಕಿತ ಹಂತಕ ಬಿಜಾಪುರ ಸಿಂಧಗಿಯ ಪರಶುರಾಮ ವಾಗ್ಮೊರೆ ಬಂಧನ.

ಮೂಲ ದಾಖಲೆ ತಿದ್ದಿ, ನಕಲಿ ದಾಖಲೆ ಸೃಷ್ಟಿಸಿ ಅಧಿಕಾರಿಗಳಿಂದ ಭೂಹಗರಣ: ತನಿಖೆಗೆ ಡಿಸಿ ಆದೇಶ- ಎಸಿಯಿಂದ ತನಿಖೆ ಆರಂಭ

# ಶ್ರೀರಾಮ ದಿವಾಣ

ಉಡುಪಿ: ಮಕ್ಕಳಿಲ್ಲದ ಮಹಿಳೆ ಸರಕಾರಿ ಹೆರಿಗೆ ಆಸ್ಪತ್ರೆಗಾಗಿ ದಾನ ಮಾಡಿದ 30 ಕೋಟಿಗೂ ಅಧಿಕ ಮೊತ್ತದ ಭೂಮಿಯನ್ನು ಕಂದಾಯ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳು ಸೇರಿಕೊಂಡು ಮೂಲ ದಾಖಲೆಗಳನ್ನು ತಿದ್ದಿ, ನಕಲಿ ದಾಖಲೆ ಸೃಷ್ಟಿಸಿ ಸರಕಾರಕ್ಕೆ ವಂಚಿಸಿದ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಉಡುಪಿ ಜಿಲ್ಲಾಧಿಕಾರಿಯವರು ಕುಂದಾಪುರ ಉಪವಿಭಾಗದ ಅಸಿಸ್ಟೆಂಟ್ ಕಮಿಷನರ್ ಅವರಿಗೆ ಆದೇಶಿಸಿದ್ದಾರೆ.

ಪ್ರಕರಣದ ಬಗ್ಗೆ ಖುದ್ದು ತನಿಖೆ ನಡೆಸುವಂತೆಯೂ, ನಿಯಮಾನುಸಾರ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಂಡು,ಕೈಗೊಂಡ ಕ್ರಮದ ಬಗ್ಗೆ ಜಿಲ್ಲಾಡಳಿತಕ್ಕೆ ಜರೂರು ವರದಿ ಸಲ್ಲಿಸುವಂತೆಯೂ ಜಿಲ್ಲಾಧಿಕಾರಿಗಳಾದ ಟಿ.ವೆಂಕಟೇಶ್ ಐಎಎಸ್ ಅವರು ಅಸಿಸ್ಟೆಂಟ್ ಕಮಿಷನರ್ ಸಿ.ಟಿ.ಶಿಲ್ಪನಾಗ್ ಐಎಎಸ್ ಅವರಿಗೆ ಆದೇಶ ಮಾಡಿದ್ದಾರೆ.

ನಾರಾಯಣಿ ಅಮ್ಮಾಳ್ ರಿಂದ ಭೂದಾನ

ಉಡುಪಿ ತಾಲೂಕು ಉಡುಪಿ ನಗರದ ಮೂಡನಿಡಂಬೂರು ಗ್ರಾಮ ನಿವಾಸಿಯಾಗಿದ್ದ ನಾರಾಯಣಿ ಅಮ್ಮಾಳ್ ಯಾನೆ ನಾರಾಯಣಿ ಬಾಯಿ ಎಂಬವರು 1944ರ ಎಪ್ರಿಲ್ ಒಂದರಂದು ಮೂಡನಿಡಂಬೂರು ಗ್ರಾಮದ ಸರ್ವೇ ನಂಬ್ರ 89/5 ಮತ್ತು 89/10, 89/11ಎ ಮತ್ತು 89/11ಬಿ ರಲ್ಲಿದ್ದ ಒಟ್ಟು 2.37.00 ಎಕರೆ ಆಸ್ತಿಯನ್ನು ಆಗ ಉಡುಪಿಯಲ್ಲಿದ್ದ ‘ಉಡುಪಿ ಲೋಕಲ್ ಫಂಡ್ ಆಸ್ಪತ್ರೆ’ ಗೆ ದಾನವಾಗಿ ನೀಡಿದ್ದರು.

ಬೆಲೆಬಾಳುವ ಮರಮಟ್ಟುಗಳು ಮತ್ತು ಮನೆಗಳಿದ್ದ ಈ ಬಾಗಾಯ್ತು ಸ್ಥಿರ ಆಸ್ತಿಯ ಅಂದಿನ ಬೆಲೆ ಎರಡು ಲಕ್ಷ ರು. ಎಂದು ಅಂದಾಜಿಸಲಾಗಿತ್ತು. ಇದು ನಾರಾಯಣಿ ಅಮ್ಮಾಳ್ ರವರ ಸ್ವರ್ಜಿತ ಆಸ್ತಿಯಾಗಿತ್ತು. ಅಮ್ಮಾಳ್ ಅವರು ಈ ಭೂಮಿಯನ್ನು ನಿರ್ಗತಿಕ ಮಹಿಳೆಯರಿಗೆ ಹೆರಿಗೆ ಸೌಲಭ್ಯ ಒದಗಿಸಬೇಕೆಂಬ ಸದುದ್ಧೇಶ ಮತ್ತು ಕಾಳಜಿಯಿಂದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ದಾನಪತ್ರ ಬರೆದಿದ್ದರು.

ನ್ಯಾಯಾಲಯ ತೀರ್ಪು

ನಾರಾಯಣಿ ಅಮ್ಮಾಳ್ ರವರು 1965ರ ಜುಲೈ 14ರಂದು ಸಂತತಿ ಇಲ್ಲದೆಯೇ ನಿಧನರಾಗಿದ್ದರು. ಈ ನಡುವೆ ಅಚ್ಚುತನ್ ಎಂಬವರು, ನಾರಾಯಣಿ ಅಮ್ಮಾಳ್ ಅವರು ತನ್ನ ಪತ್ನಿಯಾಗಿದ್ದು, ಇವರನ್ನು ತಾನು ಮುಂಬಯಿಯ ಕಾಂಗ್ರೆಸ್ ಭವನದಲ್ಲಿ ಶಾಸ್ತ್ರೋಕ್ತವಾಗಿ ವಿವಾಹವಾಗಿದ್ದೇನೆ ಎಂದು ಹೇಳಿಕೊಂಡು ನಾರಾಯಣಿ ಅಮ್ಮಾಳ್ ರವರ ವೀಲುನಾಮೆಯನ್ನು ಅಸಿಂಧುಗೊಳಿಸಬೇಕು ಎಂದು ಕೋರಿ ಉಡುಪಿ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿಶ್ವನಾಥ ರೈ ಅವರು, ಅರ್ಜಿದಾರ ಅಚ್ಚುತನ್ ಪರವಾಗಿ ವಾದಿಸಿದ ವಕೀಲ ಬಿ.ಯೋಗೀಶ್ ಹೊಳ್ಳ ಹಾಗೂ ಸರಕಾರದ ಪರವಾಗಿ ವಾದಿಸಿದ ಸಿ.ಎಸ್.ಹೆಗ್ಡೆ ಇವರಿಬ್ಬರ ವಾದವನ್ನೂ ಆಲಿಸಿ, ಅಂತಿಮವಾಗಿ ನಾರಾಯಣಿ ಅಮ್ಮಾಳ್ ಅವರು ಬರೆದಿಟ್ಟ ವೀಲುನಾಮೆಯಂತೆ ಭೂಮಿ ಆರೋಗ್ಯ ಇಲಾಖೆಗೆ ಸೇರಿದ್ದು ಎಂದು ಅಂತಿಮ ತೀರ್ಪು ನೀಡಿದ್ದರು.

ಅಚ್ಚುತನ್ ಹಾಗೂ ನಾರಾಯಣಿ ಅಮ್ಮಾಳ್ ಅವರು ಗಂಡ ಹೆಂಡಿರಂತೆ ಜೊತೆಯಾಗಿ ಜೀವನ ನಡೆಸುತ್ತಿದ್ದರೆಂದು ನ್ಯಾಯಾಲಯದಲ್ಲಿ ಕೆಲವರು ಸಾಕ್ಷ್ಯ ನುಡಿದಿದ್ದರು. ಆದರೆ, ನಾರಾಯಣಿ ಅಮ್ಮಾಳ್ ರವರ ವೀಲುನಾಮೆಗೆ ಅಚ್ಚುತನ್ ಅವರು ಒಪ್ಪಿಗೆ ನೀಡಿದ್ದರು ಎಂಬುದು ನ್ಯಾಯಾಲಯದಲ್ಲಿ ಸಾಬೀತಾಗಿತ್ತು. ಮಾತ್ರವಲ್ಲ, ದಾನ ಮಾಡಿದ ಭೂಮಿ ನಾರಾಯಣಿ ಅಮ್ಮಾಳ್ ರವರ ಸ್ವರ್ಜಿತ ಆಸ್ತಿ ಎಂಬುದು ನ್ಯಾಯಾಲಯಕ್ಕೆ ಸ್ಪಷ್ಟವಾಗಿತ್ತು. ಸ್ವಲ್ಪ ಕಾಲ ಈ ಭೂಮಿಯ ಪವರ್ ಆಫ್ ಅಟಾರ್ನಿ ಅಚ್ಚುತನ್ ಹೆಸರಿಗೆ ಇದ್ದ ಕಾರಣಕ್ಕೆ ಅಚ್ಚುತನ್ ಅವರಿಗೆ ರೂ. 6,206.31 ನೀಡುವಂತೆಯೂ, ವೀಲುನಾಮೆ ಸಿಂಧುವಾಗಿದ್ದು, ಈ ಭೂಮಿ ಆರೋಗ್ಯ ಇಲಾಖೆಯ ಸ್ವಾಧೀನದಲ್ಲಿರಬೇಕು ಎಂದು ನ್ಯಾಯಾಲಯ ತೀರ್ಪು ನೀಡಿತ್ತು.

ಮೂಲ ದಾಖಲೆ ತಿದ್ದುಪಡಿ, ನಕಲಿ ದಾಖಲೆ ಸೃಷ್ಟಿ

ನಾರಾಯಣಿ ಅಮ್ಮಾಳ್ ಅವರು ಆರೋಗ್ಯ ಇಲಾಖೆಗೆ ಸೇರಿದ ಉಡುಪಿ ಲೋಕಲ್ ಫಂಡ್ ಆಸ್ಪತ್ರೆಗೆ ಎಂದು ವೀಲುನಾಮೆ ಬರೆದಿಟ್ಟು ದಾನ ಮಾಡಿದ 30 ಕೋಟಿ ರು.ಗೂ ಅಧಿಕ ಬೆಲೆ ಬಾಳುವ 2.37.00 ಎಕರೆ ಸರಕಾರೀ ಭೂಮಿಯನ್ನು, ಇದೀಗ ಅಚ್ಚುತನ್ ರವರ ಪತ್ನಿ ಕೃಷ್ಣೀ ಬಾಯಿ ದಂಪತಿಗಳ ಮಕ್ಕಳಾದ ಅರವಿಂದ, ನಳಿನಿ, ಮೀನಾಕ್ಷಿ, ವಿಮಲ, ಮಾಧವ, ಭಾಸ್ಕರ, ರಾಘವ, ಜಗನ್ನಾಥ ಹಾಗೂ ಕೃಷ್ಣೀ ಬಾಯಿ ಎಂಬವರು ಕಂದಾಯ ಇಲಾಖೆಯ ಪರಮ ಭ್ರಷ್ಟ ಅಧಿಕಾರಿಗಳ ಮೂಲಕ ದಾಖಲೆಗಳನ್ನು ತಿದ್ದಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಹೆಸರಿಗೆ ಆರ್.ಟಿ.ಸಿ ಮತ್ತು ಖಾತೆ ಮಾಡಿಸಿಕೊಂಡು ಅಕ್ರಮವಾಗಿ ತಮ್ಮದನ್ನಾಗಿ ಮಾಡಿಕೊಂಡಿದ್ದಾರೆ.

ಹುಟ್ಟಿಯೇ ಇಲ್ಲದ ವ್ಯಕ್ತಿಯ ಹೆಸರಲ್ಲಿ ಆರ್.ಟಿ.ಸಿ

2.37 ಎಕರೆ ಭೂಮಿಗೆ ಸಂಬಂಧಿಸಿದ ಮೂಲ ಆರ್ ಟಿ ಸಿಯಲ್ಲಿ ‘ನಾರಾಯಣಿ’ ಎಂದು ದಾಖಲಾಗಿದ್ದು, ಕಂದಾಯ ಇಲಾಖಾ ಅಧಿಕಾರಿಗಳು ‘ನಾರಾಯಣಿ’ಯನ್ನು ‘ನಾರಾಯಣ, ಕಾಡಬೆಟ್ಟು, ಉಡುಪಿ’ ಎಂದು ತಿದ್ದುಪಡಿ ಮಾಡಿ ಅಕ್ಷಮ್ಯ ಅಪರಾಧವೆಸಗಿದ್ದಾರೆ. ‘ನಾರಾಯಣ ಕಾಡಬೆಟ್ಟು, ಉಡುಪಿ’ ಎಂಬ ವ್ಯಕ್ತಿಯೇ ಇಲ್ಲವಾಗಿದ್ದು, ಈ ಹೆಸರೇ ನಕಲಿಯಾಗಿದೆ. ಈ ಇಲ್ಲದ ವ್ಯಕ್ತಿಯ ಹೆಸರಿನಿಂದ ಇದೀಗ ಅತ್ಯಂತ ವ್ಯವಸ್ಥಿತವಾಗಿ ಸರಕಾರಕ್ಕೆ ಸೇರಿದ 2.37 ಎಕರೆ ಭೂಮಿಯನ್ನು ಅಚ್ಚುತನ್ ರವರ ಮಕ್ಕಳ ಹೆಸರಿಗೆ ಆರ್ ಟಿ ಸಿ ಮಾಡಿಕೊಳ್ಳಲಾಗಿದೆ.

ಈ ಭಾರೀ ಅಕ್ರಮ ಭೂ ಹಗರಣದಲ್ಲಿ ಉಡುಪಿ ತಾಲೂಕು ತಹಶೀಲ್ದಾರರು, ಉಪ ತಹಶೀಲ್ದಾರರಾದ ಗೋಪಾಲ ಶೇರಿಗಾರ್, ತಹಶೀಲ್ದಾರ್ ಕಚೇರಿಯ ಮತ್ತು ಭೂಮಿ ಕೇಂದ್ರದ ಕೆಲವು ಮಂದಿ ಅಧಿಕಾರಿಗಳು, ಸಿಬ್ಬಮದಿಗಳು, ನೋಂದಣಿ ಇಲಾಖೆಯ ಅಧಿಕಾರಿಗಳು ಹಾಗೂ ಉಡುಪಿ ನಗರಸಭೆಯ ಅಧಿಕಾರಿಗಳು ನೇರವಾಗಿ ಶಾಮೀಲಾಗಿದ್ದರೆ, ಕೆಲವು ಮಂದಿ ರಾಜಕೀಯ ಪುಢಾರಿಗಳು ತೆರೆಮರೆಯಲ್ಲಿ ಕೆಲಸ ಮಾಡಿದ್ದಾರೆ.

ಅಧಿಕಾರಿಗಳಿಂದ ಅಪರಾಧ

ಆರೋಗ್ಯ ಇಲಾಖೆಯ ಅಧಿಕಾರಿಗಳು ಈ ಭೂಮಿಯನ್ನು ವಶಪಡಿಸಿಕೊಂಡು ಸದ್ವಿನಿಯೋಗಪಡಿಸಿಕೊಳ್ಳಬೇಕಾಗತ್ತು. ಅಥವಾ ಈ ಭೂಮಿ ಆರೋಗ್ಯ ಇಲಾಖೆಗೆ ಸೇರಿದ್ದು ಎಂಬ ಫಲಕವನ್ನಾದರೂ ಸ್ಥಳದಲ್ಲಿ ಅಳವಡಿಸಬೇಕಾಗಿತ್ತು. ಇದಾವುದನ್ನೂ ಮಾಡದ ಆರೋಗ್ಯ ಇಲಾಖೆ ಮತ್ತು ಕಂದಾಯ ಇಲಾಖಾ ಅಧಿಕಾರಿಗಳ ಬೇಜವಾಬ್ದಾರಿ ಒಂದೆಡೆಯಾದರೆ, ಅಧಿಕಾರಿಗಳ ಕರ್ತವ್ಯಲೋಪ ಇನ್ನೆಂದೆಡೆ ಈ ಪ್ರಕರಣದಲ್ಲಿ ಸ್ಪಷ್ಟವಾಗುತ್ತದೆ.

ನಿರ್ಗತಿಕ ಮಹಿಳೆಯರ ಹೆರಿಗೆ ಆಸ್ಪತ್ರೆಗೆಂದು ಸಂತತಿ ಇಲ್ಲದ ಮಹಿಳೆ ನಾರಾಯಣಿ ಅಮ್ಮಾಳ್ ರವರು ಸರಕಾರಕ್ಕೆ ದಾನ ಮಾಡಿದ 30 ಕೋಟಿ ರು.ಗೂ ಅಧಿಕ ಮೌಲ್ಯದ ಭೂಮಿಯನ್ನು ಸರಕಾರ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಖಾಸಗಿ ವ್ಯಕ್ತಿಗಳು ಅಧಿಕಾರಿಗಳೊಂದಿಗೆ ಶಾಮೀಲಾಗಿ ಮೂಲ ದಾಖಲೆಗಳನ್ನು ತಿದ್ದುಪಡಿ ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಆರ್.ಟಿ.ಸಿ. ಮತ್ತು ಖಾತೆ ಬದಲಾವಣೆ ಮಾಡಿಕೊಂಡು ತಮ್ಮ ಹೆಸರಿಗೆ ಮಾಡಿಕೊಂಡ ಈ ಭಾರೀ ಭೂಹಗರಣದ ಬಗ್ಗೆ ನವೆಂಬರ್ 4ರಂದು udupibits.in ಬಹಿರಂಗಪಡಿಸಿತ್ತು.

land-scam

 

 

Leave a Reply

Your email address will not be published. Required fields are marked *