Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಸರಕಾರಿ ಆಸ್ಪತ್ರೆಯ ಖಾಸಗೀಕರಣ ವಿವಾದ: RTI ಅರ್ಜಿದಾರರಿಗೆ ಬಿ.ಆರ್.ಎಸ್.ವೆಂಚರ್ಸ್ ಹೆಸರಲ್ಲಿ ವಕೀಲರಿಂದ ಅನಧಿಕೃತ ಕೇವಿಯಟ್ ಪಿಟಿಷನ್ ಮೂಲಕ ಬೆದರಿಕೆ ತಂತ್ರ ?

ಉಡುಪಿ: ಉಡುಪಿ ನಗರದ ಹೃದಯ ಭಾಗವಾದ ಕವಿ ಮುದ್ದಣ ಮಾರ್ಗದಲ್ಲಿರುವ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಅಕ್ರಮ ಮಾರ್ಗದಲ್ಲಿ ಕರ್ನಾಟಕದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದಿಂದ ಪಡೆದುಕೊಂಡಿರುವ ಉಡುಪಿ ಮೂಲದ ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿಯವರ ಬಿ.ಆರ್.ಎಸ್.ವೆಂಚರ್ಸ್ ಯಾನೆ ಬಿ.ಆರ್.ಎಸ್.ಹೆಲ್ತ್ ರಿಸರ್ಚ್ ಇನ್ಸಿಟ್ಯೂಟ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯು, ಇದೀಗ ಆಸ್ಪತ್ರೆ ಹಸ್ತಾಂತರ ಪ್ರಕ್ರಿಯೆಗಳ ಬಗ್ಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿ ಮಾಹಿತಿ ಕೇಳಿದವರಿಗೆ ಅನಧಿಕೃತ ಕೇವಿಯಟ್ ಪ್ರತಿಗಳನ್ನು ಕಳುಹಿಸಿಕೊಡುವ ಮೂಲಕ ಬೆದರಿಕೆ ಹಾಕುತ್ತಿದೆ ಎಂದು ದೂರಲಾಗಿದೆ.

ಸರಕಾರಿ ಆಸ್ಪತ್ರೆಯನ್ನು ಸರಕಾರಿ ಆಸ್ಪತ್ರೆಯನ್ನಾಗಿಯೇ ಉಳಿಸಿಕೊಳ್ಳಬೇಕು, ಬಡವರ ಆಸ್ಪತ್ರೆ ಶ್ರೀಮಂತರ ಆಸ್ಪತ್ರೆಯಾಗಬಾರದು, ಯಾವ ಸದುದ್ಧೇಶದಿಂದ ಹಾಜಿ ಅಬ್ದುಲ್ಲಾರವರು ಭೂಮಿಯನ್ನು ದಾನ ಮಾಡಿದರೋ ಆ ಸದುದ್ಧೇಶಕ್ಕೆ ವಿರುದ್ಧವಾಗಿ ದಾನ ಮಾಡಿದ ಭೂಮಿ ದುರ್ಬಳಕೆಯಾಗಬಾರದು ಎಂಬಿತ್ಯಾದಿ ಆಶಯಗಳೊಂದಿಗೆ ಉಡುಪಿಯ ಕೆಲವು ಮಂದಿ ರಾಜ್ಯ ಸರಕಾರದ ವಿವಿಧ ಇಲಾಖೆಗಳಿಗೆ ಮಾಹಿತಿ ಹಕ್ಕು ಅಧಿನಿಯಮ 2005ರಡಿಯಲ್ಲಿ ಅರ್ಜಿ ಸಲ್ಲಿಸಿ, ಸರಕಾರಿ ಆಸ್ಪತ್ರೆಯ ಖಾಸಗೀಕರಣ ಪ್ರಕ್ರಿಯೆ ಬಗ್ಗೆ ಹಲವಾರು ಮಾಹಿತಿಗಳನ್ನು ಕೇಳಿದ್ದರು.

ಹೀಗೆ ಮಾಹಿತಿ ಕೇಳಿದವರಲ್ಲಿ ಕೆಲವರಿಗೆ ಬಿ.ಆರ್.ಎಸ್.ಹೆಲ್ತ್ ರಿಸರ್ಚ್ ಇನ್ಸಿಟ್ಯೂಟ್ ಪ್ರೈವೆಟ್ ಲಿಮಿಟೆಡ್ ಹೆಸರಲ್ಲಿ ಒಂದಿಬ್ಬರು ಬೇಜವಾಬ್ದಾರಿ ವಕೀಲರು ನ್ಯಾಯಾಲಯಕ್ಕೆ ಸಲ್ಲಿಸಿದ್ದು ಎನ್ನಲಾಗುವ ಕೇವಿಯಟ್ ಪ್ರತಿಗಳನ್ನು ಕಳುಹಿಸಿಕೊಟ್ಟಿದ್ದು, ಸರಕಾರಿ ಆಸ್ಪತ್ರೆಯ ಖಾಸಗೀಕರಣದ ವಿರುದ್ದ ಧ್ವನಿ ಎತ್ತದಂತೆ ಪರೋಕ್ಷ ಬೆದರಿಕೆ ಒಡ್ಡುತ್ತಿದ್ದಾರೆ ಮತ್ತು ಈ ರೀತಿಯ ಬೆದರಿಕೆ ತಂತ್ರಕ್ಕೆ ನ್ಯಾಯಾಲಯವನ್ನು ದುರ್ಬಳಕೆ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.

ಉಡುಪಿಯ ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ಕೋರ್ಟ್ ಗೆ ಸಲ್ಲಿಸಿದ ಕೇವಿಯಟ್ ಪಿಟಿಷನ್ ನ ಪ್ರತಿ ಎಂದು ಹೇಳಲಾಗುವ ಪ್ರತಿಯಲ್ಲಿ ಪಿಟಿಷನ್ ನ ನಂಬರ್ ಆಗಲೀ, ಕೋರ್ಟ್ ನದ್ದಾಗಲೀ, ವಕೀಲರದ್ದಾಗಲೀ ಸೀಲ್ (ರಬ್ಬರ್ ಸ್ಟಾಂಪ್) ಇಲ್ಲ. ವಕೀಲರ ಹೆಸರಾಗಲೀ, ಕೇವಿಯೇಟರ್ ರವರ ಸಹಿಯೂ ಇಲ್ಲ. ಆದರೆ, ಕೇವಿಯಟ್ ಪ್ರತಿಯನ್ನು ಕಳುಹಿಸಿದ ಕವರ್ ನಲ್ಲಿ ಮಾತ್ರ ವಕೀಲರ ಮುದ್ರಿತ ಹೆಸರು ಮತ್ತು ವಿಳಾಸವಿದೆ.

ಇದೇ ರೀತಿ, ರಾಜ್ಯ ಹೈಕೋರ್ಟ್ ಗೆ ಸಲ್ಲಿಸಿದ್ದು ಎನ್ನಲಾದ ಕೇವಿಯಟ್ ಪ್ರತಿಯನ್ನೂ ಮಾಹಿತಿ ಹಕ್ಕು ಅರ್ಜಿದಾರರಿಗೆ ಕಳುಹಿಸಿಕೊಡಲಾಗಿದೆ. ಇದರಲ್ಲಿ ಕೂಡಾ ವಕೀಲರ ಹೆಸರಾಗಲೀ, ಕೇವಿಯೇಟರ್ ರವರ ಸಹಿಯಾಗಲೀ, ಸೀಲ್ ಆಗಲೀ ಇಲ್ಲ. ಇವರ ಕೇವಿಯಟ್ ಪಿಟಿಷನ್ ನ್ನು ನ್ಯಾಯಾಲಯ ಸ್ವೀಕರಿಸಿದ್ದಕ್ಕೆ ಬೇಕಾದ ಕನಿಷ್ಟ ದಾಖಲೆಯೂ ಈ ಕೇವಿಯಟ್ ಪ್ರತಿಯಲ್ಲಿ ಇಲ್ಲದಿರುವುದು ಶಂಕೆಗೆ ಕಾರಣವಾಗಿದೆ. ಮಾತ್ರವಲ್ಲ, ಮಾಹಿತಿ ಹಕ್ಕು ಅರ್ಜಿದಾರರನ್ನು ಬೆರಿಸಲೆಂದೇ ತಯಾರಿಸಲಾದ ನಕಲಿ ಕೇವಿಯಟ್ ಪಿಟಿಷನ್ ಪ್ರತಿಗಳೆಂದು ಅನುಮಾನ ಪಡಲು ಕಾರಣವಾಗಿದೆ.

b.r.shetty

b.r.shetty

ಕೇವಿಯೇಟರ್ ಗೆ ಆರ್ಟಐ ಅರ್ಜಿದಾರರ ವಿಳಾಸ ಕೊಟ್ಟವರಾರರು ?

ಅರ್ಜಿದಾರರು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಗೂ ಇತರ ಅಧಿಕಾರಿ ವರ್ಗಕ್ಕೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು. ಸರಕಾರಿ ಆಸ್ಪತ್ರೆಯ ಖಾಸಗೀಕರಣ ಪ್ರಕ್ರಿಯೆ ಬಗ್ಗೆ ಬಿ.ಆರ್.ಎಸ್. ವೆಂಚರ್ಸ್ ಯಾನೆ ಬಿ.ಆರ್.ಎಸ್. ಹೆಲ್ತ್ ರಿಸರ್ಚ್ ಇನ್ಸಿಟ್ಯೂಟ್ ಪ್ರೈವೆಟ್ ಲಿಮಿಟೆಡ್ ಜೊತೆಗೆ ರಾಜ್ಯ ಸರಕಾರ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದ ಪತ್ರಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಐಎಎಸ್ ಅವರು ಸಹಿ ಹಾಕಿದ್ದು, ನೇರ ಸಂಪರ್ಕದಲ್ಲಿರುವುದರಿಂದ, ಇವರೇ ಅನಧಿಕೃತವಾಗಿ (ಮೌಖಿಕವಾಗಿ) ಮಾಹಿತಿ ಹಕ್ಕು ಅರ್ಜಿದಾರರ ವಿಳಾಸವನ್ನು ಬಿ.ಆರ್.ಎಸ್. ವೆಂಚರ್ಸ್ ಗೆ ನೀಡಿರಬಹುದೆಂದು ಊಹಿಸಲಾಗಿದೆ.

ನವೆಂಬರ್ 7ರಂದು ಮಾಹಿತಿ ಹಕ್ಕು ಅರ್ಜಿಗಳನ್ನು ಇಲಾಖಾಧಿಕಾರಿಗಳಿಗೆ ಕಳುಹಿಸಿಕೊಡಲಾಗಿದ್ದು, ನವೆಂಬರ್ 18ರ ದಿನಾಂಕ ನಮೂದಾಗಿರುವ ಕೇವಿಯಟ್ ಪಿಟಿಷನ್ ಪ್ರತಿಗಳನ್ನು ಅರ್ಜಿದಾರರಿಗೆ ವಕೀಲರು ಕಳುಹಿಸಿಕೊಟ್ಟಿದ್ದಾರೆ. ಕೇವಿಯೇಟರ್ ರವರು ಕೇವಿಯಟ್ ದಾಖಲಿಸಿದ ಬಗ್ಗೆ ನ್ಯಾಯಾಲಯದಿಂದಲೇ ಕೇವಿಯಟ್ ಪಿಟಿಷನ್ ಪ್ರತಿ ಬರುತ್ತಿದ್ದರೆ, ಅದಕ್ಕೊಂದು ಗಂಭಿರತೆ, ಮೌಲ್ಯ, ಮಾನ್ಯತೆ ಇತ್ತು. ಆದರೆ, ಇಲ್ಲಿ ನ್ಯಾಯಾಲಯಕ್ಕೆ ಕೇವಿಯಟ್ ಪಿಟಿಷನ್ ಸಲ್ಲಿಸಲಾಗಿದೆ ಎಂದು ಹೇಳುವ ಅನಧಿಕೃತ ಕೇವಿಯಟ್ ಪಿಟಿಷನ್ ಪ್ರತಿಗಳನ್ನು ಸ್ವತಹಾ ವಕೀಲರುಗಳೇ ಮಾಹಿತಿ ಹಕ್ಕು ಅರ್ಜಿದಾರರಿಗೆ ಕಳುಹಿಸಿಕೊಟ್ಟಿರುವುದರಿಂದ, ಇದೊಂದು ಪರೋಕ್ಷ ಬೆದರಿಕೆ ಎಂದು ಪರಿಗಣಿಸಲಾಗಿದ್ದು, ಇದರ ವಿರುದ್ಧ ದೂರು ನೀಡಲು ಮಾಹಿತಿ ಹಕ್ಕು ಅರ್ಜಿದಾರರು ಚಿಂತನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಒಪ್ಪಂದ ನೋಂದಣಿಯಾಗಿಲ್ಲ !

ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಆಸ್ಪತ್ರೆಯನ್ನು 3.88.00 ಎಕರೆ ಭೂಮಿ ಸಹಿತ ಬಿ.ಆರ್.ಎಸ್.ವೆಂಚರ್ಸ್ ಗೆ ಹಸ್ತಾಂತರಿಸುವ ಒಡಂಬಡಿಕೆ ಇನ್ನೂ ಸಹಿತ ನೋಂದಣಿಯಾಗಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಆರೋಗ್ಯ 1 & 2)ಯ ಸರಕಾರದ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿ ಮತ್ತು ಸರಕಾರದ ಅಧೀನ ಕಾರ್ಯದರ್ಶಿ ಎಸ್.ವಿ.ಕಲಾವತಿ ಅವರು ನವೆಂಬರ್ 29ರಂದು ನೀಡಿದ ಮಾಹಿತಿಯಲ್ಲಿ ಮಾಹಿತಿ ಹಕ್ಕು ಅರ್ಜಿದಾರರಿಗೆ ಮಾಹಿತಿ ನೀಡಿದ್ದಾರೆ.

ಒಂದು ಒಡಂಬಡಿಕೆ ನೋಂದಣಿಯಾಗುವ ತಿಂಗಳ ಮೊದಲೇ ಒಡಂಬಡಿಕೆಗೆ ಸಂಬಂಧಿಸಿದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳು ಶಿಲನ್ಯಾಸ ಮಾಡುವ ಜರೂರತ್ತು ಇತ್ತೇ, ಒಂದು ಪಕ್ಷ ಸರಕಾರಿ ಆಸ್ಪತ್ರೆಯ ಖಾಸಗೀಕರಣ ಪ್ರಕ್ರಿಯೆ ಅಕ್ರಮವೆಂದು ನ್ಯಾಯಾಲಯ ತೀರ್ಪು ನೀಡಿದಲ್ಲಿ ಈ ಅನಧಿಕೃತ ಒಡಂಬಡಿಕೆಗಾಗಿ ಸರಕಾರ ಮಾಡಿದ ಲಕ್ಷಾಂತರ ರು. ವೆಚ್ಚಕ್ಕೆ ಯಾರು ಹೊಣೆ, ಇಷ್ಟೆಲ್ಲಾ ವಿವಾದ ಮತ್ತು ಅತಂತ್ರತೆ ಇರುವಾಗಲೂ ಆಸ್ಪತ್ರೆ ಆವರಣದಲ್ಲಿ ವಾಸವಾಗಿರುವ ಸರಕಾರಿ ಆಸ್ಪತ್ರೆಯ ಸಿಬ್ಬಂದಿಗಳನ್ನು ವಸತಿ ಬಿಟ್ಟೇಳುವಂತೆ ಬೆದರಿಕೆ ಹಾಕುವುದು, ಸರಕಾರಿ ಭೂಮಿಯಲ್ಲಿ ಖಾಸಗಿಯವರಿಗೆ ಕಟ್ಟಡ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಡುವುದು ಸರಿಯೇ ಎಂದು ಸರಕಾರಿ ಆಸ್ಪತ್ರೆಯ ಖಾಸಗೀಕರಣ ವಿರೋಧಿ ಹೋರಾಟಗಾರರು ಪ್ರಶ್ನಿಸಿದ್ದಾರೆ.

hospital-2hospital-1haji-abdulla

 

Leave a Reply

Your email address will not be published. Required fields are marked *