Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 20 ಮಂದಿ ಗ್ರಾಮ ಲೆಕ್ಕಾಧಿಕಾರಿಗಳಿಗೆ (ವಿಎ) ವರ್ಗಾವಣೆ

ಯಾವೊಬ್ಬ ರಾಜಕಾರಣಿಯೂ ಟಿವಿ ಚಾನೆಲ್ ಗಳಷ್ಟು ಕ್ರೂರಿಗಳಲ್ಲ !

# ಮೇಟಿ ಯೋಗ್ಯ ಅಲ್ಲ. ಆದರೆ ಈ ಇಲೆಕ್ಟ್ರಾನಿಕ್ ಮೀಡಿಯಾಗಳು ಅದಕ್ಕಿಂತಲೂ ಅಯೋಗ್ಯ. ಒಬ್ಬ ಮಹಿಳೆಯ ಚಾರಿತ್ರ್ಯ ವಧೆ ಮಾಡುವುದಕ್ಕಿಂತ ದೊಡ್ಡ ಅಪರಾಧ ಜಗತ್ತಿನಲ್ಲಿ ಯಾವುದೂ ಇರಲು ಸಾಧ್ಯವಿಲ್ಲ. ಮೇಟಿ ಆ ಕೆಲಸವನ್ನು ಮಾಡಲಿಲ್ಲ. ನನ್ನದೊಂದು ಪ್ರಶ್ನೆ ಇದೆ. ಆ ಒಬ್ಬ ಮಹಿಳೆಯನ್ನು ಹೊರತುಪಡಿಸಿದರೆ ಇಡೀ ರಾಜ್ಯದಲ್ಲಿರುವ ಯಾರೊಬ್ಬರೂ ಎಂದೂ ಮನಸ್ಸಿನಲ್ಲಿ ಕೂಡ ವ್ಯಭಿಚಾರ ಮಾಡಿಲ್ಲವೇನು ? ಅಫ್ಕೋರ್ಸ್ ತಪ್ಪಾಗಿದೆ. ಆದರೆ ತಪ್ಪು ಮಾಡಿದ ಮನುಷ್ಯನಿಗೆ ಬದುಕುವುದಕ್ಕೇ ಹಕ್ಕನ್ನು ಕೊಡದ ಒಂದು ಸಮಾಜಕ್ಕೆ ಸಮಾಜ ಎಂದು ಅನಿಸಿಕೊಳ್ಳುವ ಅರ್ಹತೆ ಇದೆಯೇ ?ಹಾಗೆ ನೋಡಿದರೆ ಕಾನೂನು ದ್ರಷ್ಟಿಯಲ್ಲಿ ಇದು ತಪ್ಪೇ ಅಲ್ಲ. ಏನಿದ್ದರೂ ಸಾಮಾಜಿಕ ದ್ರಷ್ಟಿಯಲ್ಲಿ ತಪ್ಪು ಅಷ್ಟೆ.

ನಾಗಮಂಡಲದ ಕಥೆ ನೆನಪಿಸಿಕೊಳ್ಳಿ. ಅನೈತಿಕತೆಯನ್ನು ಒಡಲೊಳಗೆ ಹಾಕಿಕೊಂಡು ಒಬ್ಬ ಮಹಿಳೆಯನ್ನು ಬಾಳಿಸಲು ಗೊತ್ತಿದ್ದ ಸಮಾಜ ಅದು. ನಾವಿರುವ ಸಮಾಜವು ಅದಕ್ಕಿಂತ ನೂರು ಪಟ್ಟು ಕ್ರೂರವೂ, ಬರ್ಭರವೂ ಆಗಿದೆ. ಭಾರತದ ಯಾವೊಬ್ಬ ರಾಜಕಾರಣಿಯೂ ಟಿವಿ ಚಾನೆಲ್ ಗಳಷ್ಟು ಕ್ರೂರಿಗಳಲ್ಲ. ಆದ್ದರಿಂದ ಯಾವ ರಾಜಕಾರಣಿಯನ್ನೂ ಟೀಕಿಸುವ ನೈತಿಕತೆಯನ್ನು ಟಿವಿ ಚಾನೆಲ್ ಗಳು ಉಳಿಸಿಕೊಂಡಿಲ್ಲ. ಕರೆನ್ಸಿ ನೋಟನ್ನು ನಿಷೇಧಿಸುವ ಬದಲು ಟಿವಿ ಸುದ್ದಿ ವಾಹಿನಿಗಳಲ್ಲಿ ಸೆಕ್ಸ್ ಮತ್ತು ಹಿಂಸೆಗಳನ್ನು ಪ್ರಧಾನಮಂತ್ರಿಯವರು ನಿಷೇಧಿಸಿದರೆ ಅವರಿಗೆ ಥ್ಯಾಂಕ್ ಯೂ ಸರ್ ಎನ್ನಲು ಕೋಟಿ ಕೋಟಿ ಕುಟುಂಬಗಳು ಕಾದು ನಿಲ್ಲುತ್ತವೆ.

ಗಾಂಧಿಗೆ ಸಂಬಂಧಿಸಿದ ಒಂದು ಪ್ರಕರಣ. ಗಾಂಧಿ ಒಂದು ಹೊಳೆ ದಾಟುತ್ತಾ ಹೋಗುವಾಗ ಸ್ವಲ್ಪ ದೂರದಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ಬಟ್ಟೆ ಹೊಳೆಯ ಸೆಳೆತಕ್ಕೆ ಕೊಚ್ಚಿ ಹೋಗುತ್ತದೆ. ಮಹಿಳೆ ನೀರಿನಲ್ಲಿ ಕುಳಿತುಕೊಳ್ಳುತ್ತಾಳೆ. ಗಾಂಧಿಗೆ ಪರಿಸ್ಥಿತಿ ಅರ್ಥವಾಗುತ್ತದೆ. ತನ್ನ ಹೆಗಲಿನ ಶಾಲನ್ನು ನೀರಿನಲ್ಲಿ ಹರಿಯಬಿಟ್ಟು ಗಾಂಧಿ ತನ್ನ ಪಾಡಿಗೆ ಹೋಗುತ್ತಾರೆ.

ಮಹಾಭಾರತದ ಒಂದು ಪ್ರಸಂಗ. ವೇದ ವ್ಯಾಸರ ಮಗ ಶುಕ ಮಹರ್ಷಿ ನಗ್ನವಾಗಿಯೇ ಇರುವವರು. ಶುಕ ಮಹರ್ಷಿ ಹೋಗುವ ದಾರಿಯಲ್ಲಿ ಕೆಲವು ಮಹಿಳೆಯರು ಅವರ ಪಾಡಿಗೆ ಹೊಳೆಯಲ್ಲಿ ಸ್ನಾನ ಮಾಡುತ್ತಿರುತ್ತಾರೆ. ಶುಕ ಹೋದ ನಂತರ ಹಿಂದಿನಿಂದ ವ್ಯಾಸರು ಬರುತ್ತಾರೆ. ವ್ಯಾಸರು ಬರುತ್ತಿದ್ದಂತೆ ಮಹಿಳೆಯರು ಅವಸರವಸರವಾಗಿ ಸೀರೆ ಉಟ್ಟುಕೊಳ್ಳುತ್ತಾರೆ. ಆಗ ವ್ಯಾಸರು “ನನ್ನ ಮಗ ಯುವಕ. ಅವನು ಬಂದಾಗ ಇಲ್ಲದ ನಾಚಿಕೆ ಮುದುಕನಾದ ನಾನು ಬಂದಾಗ ಏಕೆ” ಎಂದು ಕೇಳುತ್ತಾರೆ. ಆಗ ಮಹಿಳೆಯರ, “ನಿಮ್ಮ ಮಗನಿಗೆ ನಮ್ಮ ಕಡೆ ನೋಡುವ ಕುತೂಹಲವೂ ಇರಲಿಲ್ಲ. ಅವರ ಪಾಡಿಗೆ ಅವರು ಹೋದರು. ನಮ್ಮ ಬಗ್ಗೆ ಆಸಕ್ತಿ ಇರುವುದು ನಿಮಗೇನೆ, ಅದಕ್ಕೆ”ಎಂದರು.

ಈ ಪ್ರಕರಣಗಳು ಒಬ್ಬ ಮಹಿಳೆಯೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ತಿಳಿಸುತ್ತವೆ. ಒಬ್ಬ ಮಹಿಳೆ ಏನಾದರೂ ಮಾಡಿಕೊಂಡಿದ್ದರೆ ಅದು ಅವಳ ದೇಹ, ಅವಳ ದೇಹವನ್ನು ಹೇಗೆ ಬೇಕಾದರೂ ಉಪಯೋಗಿಸಿಕೊಳ್ಳುವುದು ಅವಳ ಹಕ್ಕು. ಅದನ್ನು ಪ್ರಶ್ನಿಸಬೇಕಾದರೆ ಆಕೆಯ ಗಂಡ ಪ್ರಶ್ನಿಸುತ್ತಾನೆ. ಟಿವಿ ಯವರು ಪ್ರಶ್ನಿಸಲು ಹೋಗಬಾರದು. ಒಬ್ಬ ಕೆಟ್ಟ ಸಚಿವರನ್ನು ತೆಗೆಯುವುದು ಮತ್ತು ಒಬ್ಬ ಮಹಿಳೆಯ ಗೌರವವನ್ನು ರಕ್ಷಿಸುವುದರ ನಡುವೆ ಆಯ್ಕೆಗಳು ಬಂದಾಗ ಮಹಿಳೆಯ ಗೌರವವನ್ನು ರಕ್ಷಿಸುವುದೇ ಸಮಾಜದ ಆಯ್ಕೆಯಾಗಿರಬೇಕು. ಮಾತೆತ್ತಿದರೆ ಟಿವಿ ಚಾನೆಲ್ ಗಳು ಮಾನ ಮರ್ಯಾದೆ ಇದೆಯೇನ್ರಿ ಇವ್ರಿಗೆ ಎಂದೇ ಪ್ರಾರಂಭ ಮಾಡುತ್ತವೆ. ಆದರೆ ಚಾನೆಲ್ ನವರಿಗೆ ಏನಾದ್ರು ಮಾನ ಮರ್ಯಾದೆ ಇದೆಯೇನ್ರಿ ಎಂದು ಕೇಳಲೇ ಬೇಕಾದ್ದು ಸಮಾಜದ ಧರ್ಮ. ವ್ಯವಸ್ಥೆ ಇನ್ನೂ ಪುರುಷ ಪ್ರಧಾನವೇ ಇದೆ. ಆದ್ದರಿಂದ ಈ ವಿಚಾರದಲ್ಲಿ ಗಂಡಸರ ಜವಾಬ್ದಾರಿ ಜಾಸ್ತಿ ಇದೆ. ಗಂಡಸರಿಗೆ ಅಷ್ಟೂ ಸಂಸ್ಕಾರ ಇಲ್ವಾ ಹಾಗಾದರೆ…….

– ARAVINDA CHOKKADI.

Leave a Reply

Your email address will not be published. Required fields are marked *