Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

‘ಅನೂಚಾ ಡಾಟಾ ಸೊಲ್ಯೋಶನ್ಸ್’ನಿಂದ ಸಾವಿರಾರು ಮಂದಿಗೆ ಪಂಗನಾಮ: ಮನೆಯಲ್ಲಿದ್ದು ಸಂಪಾದಿಸಲು ಇದ್ದುದನ್ನೂ ಕಳೆದುಕೊಂಡರು!

ಉಡುಪಿ: ಹೋಮ್ ಬೇಸ್ಡ್ ಡಾಟಾ ಎಂಟ್ರಿ ಉದ್ಯೋಗದ ಹೆಸರಿನಲ್ಲಿ ಉಡುಪಿ ಮತ್ತು ಮಂಗಳೂರಿನಲ್ಲಿ ಕಚೇರಿ ಹೊಂದಿರುವ ಅನೂಚಾ ಡಾಟಾ ಸೊಲ್ಯೋಶನ್ಸ್ ಪ್ರೈವೆಟ್ ಲಿಮಿಟೆಡ್ ಸೌಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಮತ್ತು ಮಾಲಕ ಹುಬ್ಬಳ್ಳಿ ಮೂಲದ ಮಣಿಪಾಲ ಶಾಂತಿ ನಗರದ ನಿವಾಸಿಗಳಾದ ಚೇತನ್ ಲೋಕೇಶ್ ಹಾಗೂ ಆತನ ಪತ್ನಿ, ಸಂಸ್ಥೆಯ ಡೈರೆಕ್ಟರ್ ಅನುಶಾ ಚೇತನ್ ಲೋಕೇಶ್ ಸೇರಿಗೊಂಡು ಸಾವಿರಾರು ಮಂದಿಗೆ ಲಕ್ಷಾಂತರ ರೂ. ವಂಚಿಸಿ ಪಂಗನಾಮ ಹಾಕಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಸ್ಥೆಯ ಉದ್ಯೋಗಿಗಳಿಗೂ ವೇತನ ನೀಡದೆ ಮೋಸ ಮಾಡಲಾಗಿದ್ದು, ಇದೇ ವ್ಯಕ್ತಿಗಳು ಈ ಹಿಂದೆ ಚಿಕ್ಕಮಗಳೂರಿನಲ್ಲೂ ಭಾರೀ ಅಕ್ರಮ ನಡೆಸಿದ್ದರು ಎನ್ನಲಾಗಿದೆ. ಚಿಕ್ಕಮಗಳೂರಿನಲ್ಲಿ ಇವರ ಕಾರೊಂದನ್ನು ಪೊಲೀಸರು ವಶಪಡಿಸಿಕೊಂಡಿದ್ದರು ಎಂದು ತಿಳಿದುಬಂದಿದೆ.

ಮಣಿಪಾಲದ ಈಶ್ವರ ನಗರದಲ್ಲಿ ಕೇಂದ್ರ ಕಚೇರಿ ಹೊಂದಿರುವ ಸಂಸ್ಥೆಯು ಉಡುಪಿಯ ಹಿಂದ್ ಟವರ್ ಹಾಗೂ ಮಂಗಳೂರಿನ ಉರ್ವ ಸ್ಟೋರ್‍ಸ್ ಬಳಿ ಕಚೇರಿಗಳನ್ನು ಹೊಂದಿದೆ. 2013ರಿಂದ ಈ ಸಂಸ್ಥೆ ಕಾರ್ಯಾಚರಿಸುತ್ತಿದೆ ಎಂಬ ಬಗ್ಗೆ ಮಾಹಿತಿ ಇದೆ. ವೆಬ್‌ಸೈಟ್‌ಗಳು ಮತ್ತು ಫೇಸ್‌ಬುಕ್ ಪೇಜ್‌ಗಳ ಮೂಲಕ ಹೈ ಕಾರ್ಪೊರೇಟ್ ಶೈಲಿಯಲ್ಲಿ  ಪ್ರಚಾರ ನಡೆಸುವ ಚೇತನ್ ದಂಪತಿ, ಕೇವಲ ನಾಲ್ಕು ಸಾವಿರ ರೂ. ಪಾವತಿಸಿದರೆ ಮನೆಯಲ್ಲಿದ್ದೇ ಕೆಲಸ ನಿರ್ವಹಿಸಿ ಸಾವಿರಾರು ರೂ. ಸಂಪಾದಿಸುವ ಆಫರ್ ನೀಡುವ ಮೂಲಕ ಜನರನ್ನು ಬಲೆಗೆ ಬೀಳಿಸುತ್ತಿದ್ದರು. ಮನೆಯಲ್ಲಿದ್ದೇ ಸಾವಿರ ರೂ. ಗಳಿಕೆಯ ಆಫರ್‌ಗೆ ಹಲವರನ್ನು ಆಕರ್ಷಿತರಾಗಿದ್ದು ಹಣ ಪಾವತಿಸಿರುತ್ತಾರೆ. ಆಫರ್‌ಗಳಲ್ಲಿ ಹಲವು ವರ್ಗಗಳಿದ್ದು 4ರಿಂದ 20ಸಾವಿರ ರೂ. ನೋಂದಣಿ ಶುಲ್ಕ ಇರುವ ಆಫರ್‌ಗಳು ಇವೆ. ಹೆಚ್ಚಿನ ಆದಾಯ ಗಳಿಕೆಗೆ ಜನರು ಹೆಚ್ಚಿನ ನೋಂದಣಿ ಶುಲ್ಕ ಕಟ್ಟಿ  ನೋಂದಣಿ ಮಾಡಿಸಿಕೊಳ್ಳಲು ಮುಗಿಬೀಳುತ್ತಿದ್ದರು. ಮಕ್ಕಳನ್ನು ನೋಡಿಕೊಳ್ಳಲು ಮನೆಯಲ್ಲಿರಬೇಕಾದ ಅನಿವಾರ್ಯತೆ ಹೊಂದಿರುವ ಹಲವಾರು ಮಹಿಳೆಯರು ಮನೆಯಲ್ಲಿದ್ದೇ ಸಂಪಾದಿಸಿ ಕುಟುಂಬಕ್ಕೆ ನೆರವಾಗುವ ಆಶಯದಿಂದ ಕಂಪೆನಿ ಬಗ್ಗೆ ಯಾವ ಪರಿಶೀಲನೆಯೂ ನಡೆಸದೆ ಹೆಸರು ನೋಂದಾಯಿಸಿಕೊಂಡು ಸಾವಿರಾರು ರೂ. ಪಾವತಿಸಿ ಕೈ ಸುಟ್ಟುಕೊಂಡಿದ್ದಾರೆ.

img-20161219-wa0017

ಫೇಸ್‌ಬುಕ್ ಚಮಕ್ಕಿಗೆ ಮರುಳಾಗಿ ಟೋಪಿ ಹಾಕಿಸಿಕೊಂಡರು!

ಫೇಸ್‌ಬುಕ್, ವೇಬ್‌ಸೈಟ್‌ಗಳಲ್ಲಿ ಹೈ ಕಾರ್ಪೊರೇಟ್ ಶೈಲಿಯಲ್ಲಿ ಈ ಧೋಕೆಬಾಜ್ ಕಂಪೆನಿಯನ್ನು ಬಿಂಬಿಸಲಾಗಿತ್ತು. ಜತೆಗೆ ಫೇಸ್‌ಬುಕ್‌ನಲ್ಲಿ ಆದಾಯದ ಚೆಕ್ ಪಡೆದುಕೊಂಡು ಸಾಧನೆಯ ನಗೆ ಬೀರಿದವರ ಫೋಟೊಗಳನ್ನು ಹಾಕಲಾಗಿತ್ತು. ಇವುಗಳನ್ನು ಹೆಚ್ಚಿನ ಚೆಕ್‌ಗಳು ಬೌನ್ಸ್ ಆಗಿದ್ದರಿಂದ ಇವರ ನಗು ತತ್‌ಕ್ಷಣವೇ ಕಮರಿ ಹೋಗಿತ್ತು ಎಂಬುದು ತೆರಯ ಮರೆಯಲ್ಲೇ ಉಳಿದಿತ್ತು.  ಸಿಬಂದಿಗಳನ್ನೂ ಫಲಾನುಭವಿಗಳಂತೆ ಬಿಂಬಿಸಿ ಫೋಟೊ ಹಾಕಲಾಗಿತ್ತು. ಇದು ಮನೆಯಲ್ಲಿದ್ದೇ ಶೀಘ್ರ ಹಣ ಮಾಡುವ ಅಸೆ ಹೊಂದಿದವರನ್ನು ಸುಲಭದಲ್ಲಿ ಮಣಿಸಿತು. ಫೇಸ್‌ಬುಕ್ ಚಮಕ್ಕಿಗೆ ಮರುಳಾಗಿ ಇವರೆಲ್ಲರೂ ಟೋಪಿ ಹಾಕಿಸಿಕೊಂಡರು.

ಸ್ಕೂಟಿ ತೆಗೆಸಿಕೊಡುತ್ತೇನೆ ಎಂದಿದ್ದಕ್ಕೆ, ಸಂಬಳ ಕೊಡದವನನ್ನು ನಂಬಿದರು!

ಸಂಸ್ಥೆಯಲ್ಲಿ ಹೆಚ್ಚಾಗಿ ಹುಡುಗಿಯರನ್ನು ನೇಮಕ ಮಾಡಿಕೊಳ್ಳುತ್ತಿದ್ದ ಚೇತನ್ ಲೋಕೇಶ್, ಅವರಿಗೆ ಇಂಟರ್‌ವ್ಯೂ ವೇಳೆ 8-10 ಸಾವಿರ ರೂ. ವೇತನ, ಇನ್‌ಕ್ರಿಮೆಂಟ್, ಪಿಎಫ್, ಹೆಲ್ತ್ ಇನ್ಶೂರೆನ್ಸ್, ಮೊಬೈಲ್ ಡಾಟಾ ಪ್ಯಾಕ್, ಕರೆನ್ಸಿ ನೀಡುವ ಜತೆಗೆ ಸ್ಕೂಟಿ ತೆಗೆಸಿಕೊಡುವ ಆಫರ್ ನೀಡಿ ಪುಸಲಾಯಿಸುತ್ತಿದ್ದ. ಅವರ ಮನೆಯವರನ್ನೂ ಭೇಟಿಯಾಗಿ ತಾನು ವಿಶ್ವಾಸಾರ್ಹ ಎಂದು ಬಿಂಬಿಸುತ್ತಿದ್ದ. ಇದರಿಂದ ವಿಶ್ವವನ್ನೇ ಗೆದ್ದಂತೆ ಹಿಗ್ಗುತ್ತಿದ್ದ ಉದ್ಯೋಗಿಗಳು ಆಫರ್ ಲೆಟರ್ ನೀಡದಿದ್ದರೂ, ಸೇವಾ ಭದ್ರತೆ ಹಾಗೂ ಕಂಪೆನಿಯ ಮಾನ್ಯತೆ ಬಗ್ಗೆ ಒಂದಿನಿತೂ ಚಿಂತಿಸದೆ ಕೆಲಸಕ್ಕೆ ಹಾಜರಾಗುತ್ತಿದ್ದರು. ಆರಂಭದಲ್ಲಿ ಸರಿಯಾಗಿ ವೇತನ ನೀಡದೆ, ಸುಳ್ಳು ಸಬೂಬು ನೀಡಿದರೂ ತಲೆಕೆಡಿಸಿಕೊಳ್ಳದೆ ಕೆಲಸಕ್ಕೆ ಬರುತ್ತಿದ್ದರು. ಕಡೆಗೆ ತಿಂಗಳುಗಳ ವೇತನವೇ ಸಿಗದೆ, ನೀಡಿದ ಚೆಕ್‌ಗಳೂ ಬೌನ್ಸ್ ಆದಾಗ  ಮಾಡಿದ ತಪ್ಪಿನ ಅರಿವಾಗಿ, ಒಂದಿನಿತೂ ಪ್ರತಿಭಟಿಸದೆ ಅಥವಾ ಪ್ರತಿಭಟಿಸುವ ಸಾಮರ್ಥ್ಯ ಇಲ್ಲದೆ ಬೇರೆ ಉದ್ಯೋಗಗಳಿಗೆ ತೆರಳುತ್ತಿದ್ದರು.

ಹೆದರದೆ ಅಕ್ರಮ ಬಯಲಿಗೆಳೆದರು: ಆದರೆ ಸಂಸ್ಥೆಯಲ್ಲಿ ಪ್ರಸ್ತುತ ಕೆಲಸ ಮಾಡುತ್ತಿರುವ ಕೆಲವೊಂದು ಹುಡುಗಿಯರು ಈತ ಮಾಡುತ್ತಿರುವ ಮೋಸವನ್ನು ಬಯಲಿಗೆಳೆದಿದ್ದಾರೆ. ಆತ ಎಷ್ಟೇ ಧಮ್ಕಿ ಹಾಕಿದರೂ ಹೆದರದೆ ಹೋರಾಟ ಆರಂಭಿಸಿದ್ದಾರೆ.

fb_img_1481963662933

ಆರಂಭದಲ್ಲಿ ಕಾರ್ಪೊರೇಟ್ ಸ್ಟೈಲ್, ಕೊನೆಗೆ ರೌಡಿಸಂ!

ಅನೂಚಾ ಡಾಟಾ ಸೊಲ್ಯೂಶನ್ಸ್‌ನಿಂದ ತಮ್ಮ ಕುಟುಂಬದ ಆರ್ಥಿಕ ಸಮಸ್ಯೆಗಳಿಗೆ ಸೊಲ್ಯೂಶನ್ ಸಿಗಬಹುದು ಎಂಬ ಆಶಾವಾದದಿಂದ ಮನೆಯಲ್ಲೇ ಕೆಲಸ ಮಾಡಿ ಆದಾಯ ಗಳಿಸುವುದಕ್ಕಾಗಿ ಹೆಚ್ಚಾಗಿ ಸಣ್ಣ ಮಕ್ಕಳನ್ನು ಹೊಂದಿರುವ ಮಹಿಳೆಯರು ಹಾಗೂ ಅವಿವಾಹಿತ ಹೆಣ್ಣುಮಕ್ಕಳು ಈ ಸಂಸ್ಥೆಯ ಕದ ತಟ್ಟಿದ್ದಾರೆ. ಹೈ ಕಾರ್ಪೊರೇಟ್ ಶೈಲಿಯಲ್ಲಿ ಮಾತನಾಡಿ ನಂಬಿಸುವ ಗಂಡ ಹೆಂಡತಿಯನ್ನು ನಂಬಿದ್ದಾರೆ. ಸಾವಿರಾರು ರೂ. ಪಾವತಿಸಿ ಸ್ಕೀಂಗೆ (ರಿಜಿಸ್ಟ್ರೇಶನ್ ಶುಲ್ಕ) ನೋಂದಣಿ ಮಾಡಿದ್ದಾರೆ. ಆದರೆ ಕೆಲಸ ಮಾಡಿ ವಾರದ ಕೊನೆಗೆ ಕಚೇರಿಗೆ ಬಂದರೆ, ಅಂದು ಕಾರ್ಪೊರೇಟ್ ಶೈಲಿಯಲ್ಲಿ ಮಾತಾಡಿದ್ದ ಗಂಡ-ಹೆಂಡತಿ ಪಕ್ಕಾ ಲೋಕಲ್ ರೌಡಿಗಳಂತೆ ವರ್ತಿಸುತ್ತಾರೆ. ನಿಮ್ಮ ಕೆಲಸ ಸರಿಯಾಗಿಲ್ಲ ಎಂದು ಹೀನಾಯವಾಗಿ ನಿಂದಿಸುತ್ತಾರೆ. ಏರು ದನಿಯಲ್ಲಿ ಮಾತನಾಡಿ ಬೆದರಿಸುತ್ತಾರೆ. ಇದರಿಂದ ಹೆದರುವ ಮಹಿಳೆಯರು ಕಣ್ಣೀರು ನುಂಗಿಕೊಂಡು ಹೊರಹೋಗುತ್ತಾರೆ. ಇನ್ನು ಕೆಲವರಿಗೆ ಡಾಟಾ ಎಂಟ್ರಿಗೆ ಸಾಫ್ಟ್ ವೇರ್ ನೀಡುವುದಾಗಿ ತಿಳಿಸಿ ಇನ್ನಷ್ಟು ಹಣ ಪಡೆಯಲಾಗುತ್ತದೆ. ಕೊನೆಗೆ ಕೆಲಸ ಸರಿಯಾಗಿ ಆಗಿಲ್ಲ ಎಂದು ವೇತನ ನೀಡಲು ನಿರಾಕರಿಸಲಾಗುತ್ತದೆ. ಕೆಲವರಿಗೆ ವೇತನವನ್ನು ಚೆಕ್ ಮೂಲಕ ನೀಡಲಾಗುತ್ತದಾದರೂ, ಚೆಕ್ ಬೌನ್ಸ್ ಆಗುವುದರಿಂದ ತುತ್ತು ಬಾಯಿಗೆ ಬರದಂತಾಗುತ್ತದೆ.

ಆಫ್‌ಲೈನ್ ಫಾರ್ಮ್ ಫಿಲ್ಲಿಂಗ್-ಆನ್‌ಲೈನ್ ಸಬ್‌ಮಿಶನ್, ಕಂಪೆನಿ ಫಾರ್ಮ್ ಫಿಲ್ಲಿಂಗ್, ಇಮೇಜ್ ಟು ನೋಟ್‌ಪ್ಯಾಡ್, ಸ್ಕ್ರಿಪ್ಟ್ ರೈಟಿಂಗ್ ಈತನ ಡಾಟಾ ಸೊಲ್ಯೂಶನ್ಸ್‌ನ ಕೆಲಸಗಳು. ಸ್ಕ್ರಿಪ್ಟ್ ರೈಟಿಂಗ್‌ನಲ್ಲಿ ಬರೆಯುವಾಗ ಕಿಂಚಿತ್ ತಪ್ಪಾದರೂ ವೇತನ (ಪುಟಕ್ಕೆ ರೂ. ೨೫-೩೦) ದೊರೆಯದೆ ಬರೀ ಬೈಗಳು ಸಿಗುತ್ತವೆ.

ಈ ರೀತಿಯ ಪ್ರಕರಣಗಳು ಸಂಭವಿಸಿದ ಬಗ್ಗೆ ಎಷ್ಟೇ ವರದಿಗಳು ಪ್ರಕಟವಾಗಿದ್ದರೂ, ಜಾಗೃತಿ ಮೂಡಿಸಿದರೂ ಜನರು ಮಾತ್ರ ಎಚ್ಚೆತ್ತುಕೊಂಡಂತೆ ಕಾಣುವುದಿಲ್ಲ. ಸುಲಭದಲ್ಲಿ ಹಣ ಸಂಪಾದನೆ ಮಾಡುವ ಬಗೆಗಿನ ಜಾಹೀರಾತುಗಳನ್ನು ನೋಡಿದಾಗ ಒಂಚೂರೂ ವಿವೇಕ ಪ್ರಜ್ಞೆಯಿಂದ ಆಲೋಚಿಸದೆ ಗುಂಡಿಗೆ ಬೀಳುತ್ತಾರೆ.

2 Comments

 1. Ksrppc@gmail.com'

  K sadashiva Rao

  December 20, 2016 at 7:08 am

  This kind of exploitation has been going on by blade business practices. They must be severely punished. Further, wide publicity should be given by media about their fraudulent activities. If the editor checks the truthfulness of an advertisement before publishing, then such instances of outright cheating may come down. KsRao udupi.

  • Ksrppc@gmail.com'

   K sadashiva Rao

   December 20, 2016 at 7:09 am

   Such fraudsters should be publicly punished.

Leave a Reply

Your email address will not be published. Required fields are marked *