Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

ರಘುಪತಿ ಭಟ್ 4 ವರ್ಷ ಹಿಂದೆ ಅಂಚೆಗೆ ಹಾಕಿದ ಪತ್ರ ಇನ್ನೂ ಸಿಎಂ ಕಚೇರಿ ತಲುಪಿಲ್ಲ: ಜನಪ್ರತಿನಿಧಿಗಳು ಜನರಿಗಾಗಿ ಬರೆಯುವ ಪತ್ರಗಳ ಸ್ಥಿತಿ ಗತಿ ದೇವರೇ ಬಲ್ಲ !

ಉಡುಪಿ: ಶಾಸಕರು, ಸಂಸದರು ಹಾಗೂ ಸಚಿವರು ತಮ್ಮನ್ನು ಭೇಟಿಯಾಗುವ ನಾಗರೀಕರು ಮುಂದಿಡುವ ವಿವಿಧ ಕೋರಿಕೆಗಳನುಸಾರವಾಗಿ ಅವರಿಗಾಗಿ ಸರಕಾರಕ್ಕೆ ಬರೆಯುವ ಪತ್ರಗಳನ್ನು ಮತ್ತು ಮಾಡುವ ಶಿಫಾರಸುಗಳನ್ನು ಅಂಚೆಗೆ ಹಾಕದೆ ದ್ರೋಹವೆಸಗುವ ಸಾಧ್ಯತೆಗಳಿವೆ ಎಂಬ ಶಂಕೆ ಇದೀಗ ಉದ್ಭವಿಸಿದೆ.

ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ ಬಿಜೆಪಿಯ ಕೆ.ರಘುಪತಿ ಭಟ್ ಬರೆದ ಪತ್ರವೊಂದು ತಲುಪಬೇಕಾದವರಿಗೆ ತಲುಪದೇ ಹೋದ ವಿಷಯ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಪತ್ರ, ತಲುಪಬೇಕಾದವರಿಗೆ ತಲುಪದೇ ಇರಲು, ಶಾಸಕರ ಕಚೇರಿಯಿಂದ ಪತ್ರ ಅಂಚೆಗೆ ಹಾಕದಿದ್ದುದೇ ಕಾರಣವಾಗಿರಬಹುದೆಂಬ ಅನುಮಾನ ಪ್ರಸ್ತುತ ಉಂಟಾಗಿದೆ.

raghupathi-bhat

ಉಡುಪಿ ತಾಲೂಕು ಇಂದ್ರಾಳಿ ಮಂಚಿಕೋಡಿಯ ಶ್ರೀಧರ ಕುಲಾಲ್ ಎಂಬವರು ಐದು ವರ್ಷಗಳ ಹಿಂದೆ ಕರುಳುಬೇನೆ ಚಿಕಿತ್ಸೆಗಾಗಿ ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಾಗಿದ್ದರು. ಈ ಸಂದರ್ಭದಲ್ಲಿ ಇವರ ಮನೆಯವರು ಮುಖ್ಯಮಂತ್ರಿಯವರ ವೈದ್ಯಕೀಯ ಪರಿಹಾರ ನಿಧಿಗಾಗಿ ಮನವಿ ಸಲ್ಲಿಸಿದ್ದರು.ಆಗ ಶಾಸಕರಾಗಿದ್ದ ರಘುಪತಿ ಭಟ್ ಅವರು ಮುಖ್ಯಮಂತ್ರಿಗಳ ಪರಿಹಾರ ನಿಧಿಗಾಗಿ ಶಿಫಾರಸು ಮಾಡಿದ್ದು, ಮುಖ್ಯಮಂತ್ರಿಗಳು ಪರಿಹಾರ ನಿಧಿಗೆ ಶ್ರೀಧರ ಕುಲಾಲ್ ಅವರನ್ನು ಆಯ್ಕೆ ಮಾಡಿದ್ದರು. 75 ಸಾವಿರ ರು. ಗಳನ್ನು ಮಂಜೂರು ಮಾಡಿದ್ದರು.

ಈ ಎಲ್ಲಾ ಬೆಳವಣಿಗೆಗಳ ತರುವಾಯ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗಳ ಸೂಚನೆಯಂತೆ ವೆಚ್ಚದ ಮೂಲ ಬಿಲ್ಲು ಮತ್ತು ಬಿಡುಗಡೆ ಸಾರಾಂಶ ಪತ್ರವನ್ನು ಲಗ್ತೀಕರಿಸಿ ರಘುಪತಿ ಭಟ್ ಅವರು ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಹೆಚ್.ಅ.ಮಹಾದೇವ್ ಅವರಿಗೆ ಪತ್ರ ಬರೆದಿದ್ದು, ಈ ಪತ್ರದ ಒಂದು ಪ್ರತಿಯನ್ನು ಸಹಜವಾಗಿಯೇ ಶ್ರೀಧರ ಕುಲಾಲ್ ರವರ ಮನೆಯವರಿಗೆ ನೀಡಲಾಗಿತ್ತು.

cm-parihara-1

ಮುಖ್ಯಮಂತ್ರಿಗಳ ಪರಿಹಾರ ನಿಧಿಯಾಗಿ 75 ಸಾವಿರ ರು. ಮಂಜೂರಾಗಿ ಐದು ವರ್ಷ ಕಳೆದರೂ, ಹಣ ಬಿಡುಗಡೆಯಾಗದ ಹಿನ್ನೆಲೆಯಲ್ಲಿ ಉಡುಪಿಯ ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀರಾಮ ದಿವಾಣ ಅವರು, ಮುಖ್ಯಮಂತ್ರಿಗಳ ಜಂಟೀ ಕಾರ್ಯದರ್ಶಿ ಕಚೇರಿಗೆ ಇತ್ತೀಚೆಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿ, ಶಾಸಕರಾಗಿದ್ದ ರಘುಪತಿ ಭಟ್ ಅವರ ಪತ್ರದ ಬಗ್ಗೆ ಕೆಲವೊಂದು ಅಗತ್ಯ ಮಾಹಿತಿಗಳನ್ನು ಕೋರಲಾಗಿತ್ತು.

ಈ ಮಾಹಿತಿ ಕೋರಿಕೆಯ ಪತ್ರಕ್ಕೆ ಉತ್ತರ ನೀಡಿದ ಮುಖ್ಯಮಂತ್ರಿಗಳ ಜಂಟೀ ಕಾರ್ಯದರ್ಶಿ ಕಚೇರಿಯ ಸಾರ್ವಜನಿಕ ಮಾಹಿತಿ ಅಧಿಕಾರಿಯವರು, ಮೂಲ ವೆಚ್ಚದ ಬಿಲ್ಲು ಮತ್ತು ಬಿಡುಗಡೆಯ ಸಾರಾಂಶ ಪತ್ರವನ್ನು ಲಗ್ತೀಕರಿಸಿರುವ ರಘುಪತಿ ಭಟ್ ರವರ ಯಾವುದೇ ಪತ್ರ ತಮಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

cm-parihara-3

ಮುಖ್ಯಮಂತ್ರಿಗಳ ಜಂಟೀ ಕಾರ್ಯದರ್ಶಿಗಳ ಕಚೇರಿ ಅಧಿಕೃತರು ರಘುಪತಿ ಭಟ್ ಅವರು 05.09.2012ರಂದು ಬರೆದಿದ್ದಾರೆ ಎನ್ನಲಾದ ಪತ್ರ ತಮಗೆ ಬಂದಿಲ್ಲ ಎಂದು ನೀಡಿದ ಸ್ಪಷ್ಟನೆಯ ಕಾರಣ, ಶ್ರೀಧರ ಕುಲಾಲ್ ರವರ ಮನೆಯವರು ತಮಗೆ ಐದು ವರ್ಷಗಳ ಹಿಂದೆ ಮಂಜೂರಾದ ಮುಖ್ಯಮಂತ್ರಿಗಳ ವೈದ್ಯಕೀಯ ಪರಿಹಾರ ನಿಧಿಗಾಗಿ ಮತ್ತೆ ಕೆಲವೊಂದು ಹೊಸ ಪ್ರಕ್ರಿಯೆಗಳನ್ನು ಮಾಡುವ ಅನಿವಾರ್ಯ ಪರಿಸ್ಥಿತಿ ಸೃಷ್ಟಿಯಾಗಿದೆ.

ಸಾರ್ವಜನಿಕರು ತಮ್ಮ ವಿವಿಧ ರೀತಿಯ ಬೇಡಿಕೆಗಳಿಗಾಗಿ ಪ್ರತಿದಿನ ಎಂಬಂತೆ ಸಾಸಕರು, ಸಂಸದರು, ವಿಧಾನ ಪರಿಷತ್ತು ಸದಸ್ಯರು, ರಾಜ್ಯಸಭಾ ಸದಸ್ಯರು, ಸಚಿವರುಗಳ ಕಚೇರಿಗೆ ಭೇಟಿ ನೀಡಿ ವಿವಿಧ ನಮೂನೆಯ ಮನವಿಗಳನ್ನು, ದೂರುಗಳನ್ನು ನೀಡುವುದು ಸಹಜವಾಗಿ ನಡೆದುಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ನಾಗರಿಕರ ಬೇಡಿಕೆಗಳನ್ನು ಈಡೇರಿಸುವ ಸಲುವಾಗಿ ಜನಪ್ರತಿನಿಧಿಗಳು ಆಪ್ತ ಸಹಾಯಕರ ಮೂಲಕ ಪತ್ರವೊಂದನ್ನು ತಯಾರು ಮಾಡುತ್ತಾರೆ ಮತ್ತು ಶಾಸಕರ ಕಚೇರಿಯಿಂದಲೇ ಅಂಥ ಪತ್ರಗಳು ಸರಕಾರದ ವಿವಿಧ ಸಚಿವಾಲಯಗಳಿಗೆ ಅಂಚೆಗೆ ಹಾಕಲ್ಪಡುತ್ತವೆ. ಇಂಥ ಪತ್ರಗಳ ೊಂದು ಪ್ರತಿಯನ್ನು ಮನವಿದಾರರಿಗೂ, ದೂರುದಾರರಿಗೂ ನೀಡಲಾಗುತ್ತದೆ. ತಮ್ಮ ಪರವಾಗಿ ತಮ್ಮ ಜನಪ್ರತಿನಿಧಿಗಳು ಸರಕಾರಕ್ಕೆ ಪತ್ರ ಬರೆದಿದ್ದಾರೆ, ಇನ್ನು ನಮ್ಮ ಕೆಲಸ ಆಗಿಯೇ ತೀರುತ್ತದೆ ಎಂಬ ನಂಬಿಕೆ ನಾಗರಿಕರಲ್ಲಿ ಮೂಡಿರುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ಜನಪ್ರತಿನಿಧಿಗಳಾದವರು ಕೆಲವು ನಿರ್ಧಿಷ್ಟ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸದೆ, ಮೋಸ ಮಾಡಿರುತ್ತಾರೆ. ಆದರೆ, ಈ ಮೋಸ ಜನರ ಗಮನಕ್ಕೆ ಬರುವುದೇ ಇಲ್ಲ. ಸರಕಾರೀ ಇಲಾಖೆಗಳೂ ಸಹ ತಮಗೆ ಸಲ್ಲಿಕೆಯಾಗುವ ಮನವಿ, ದೂರುಗಳನ್ನು ಉನ್ನತ ಮಟ್ಟಕ್ಕೆ ರವಾನಿಸದೆ ದ್ರೋಹ, ಕರ್ತವ್ಯಲೋಪ ಎಸಗಿದ, ಎಸಗುವ ಪ್ರಕರಣಗಳು ಇವೆ.

ಇಂದ್ರಾಳಿಯ ಶ್ರೀಧರ ಕುಲಾಲ್ ರವರಿಗೆ 2011ರಲ್ಲಿ ಮಂಜೂರಾದ 75 ಸಾವಿರ ರು. ಗಳ ಮುಖ್ಯಮಂತ್ರಿಗಳ ವೈದ್ಯಕೀಯ ಪರಿಹಾರ ನಿಧಿ ಐದು ವರ್ಷ ಕಳೆದರೂ ಯಾಕೆ ಬಿಡುಗಡೆಯಾಗಿಲ್ಲ ಎಂಬುದು ಪ್ರಸ್ತುತ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ ಕಾರಣ ಪತ್ತೆಯಾಗಿದೆ. ಇಂಥ ಪ್ರಕರಣಗಳು ರಾಜ್ಯದಲ್ಲಿ ಇತರ ಜನಪ್ರತಿನಿಧಿಗಳಿಂದ ನಡೆದಿರುವ ಸಾಧ್ಯತೆಗಳಿದ್ದು, ಮನವಿದಾರರು, ದೂರುದಾರರು ಈ ಸಂಬಂಧ ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಜನಪ್ರತಿನಿಧಿಗಳ ಪತ್ರದ ಮೇಲೆ ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿ ಕೋರಿದಲ್ಲಿ ಅನೇಕ ಪ್ರಕರಣಗಳು ಬಯಲಾಗುವುದು ಖಚಿತ

cm-parihara-2

Leave a Reply

Your email address will not be published. Required fields are marked *