Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

ಸರಕಾರಿ ಆಸ್ಪತ್ರೆ ಖಾಸಗೀಕರಣದಲ್ಲಿ ಭಾರೀ ಭ್ರಷ್ಟಾಚಾರ ಶಂಖೆ-ಎಂಒಯು ಪೂರ್ಣಗೊಳಿಸದೆ ಅಕ್ರಮ ಕಾಮಗಾರಿಗೆ ಚಾಲನೆ

ಉಡುಪಿ: ಉಡುಪಿ ನಗರದ ಹೃದಯ ಭಾಗವಾದ ಕವಿ ಮುದ್ದಣ ಮಾರ್ಗದಲ್ಲಿರುವ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಬೆಲೆಬಾಳುವ ಜಮೀನು ಸಹಿತವಾಗಿ ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ಹಸ್ತಾಂತರಿಸಿ ಖಾಸಗೀಕರಣಗೊಳಿಸಿದ ಪ್ರಕ್ರಿಯೆಯಲ್ಲಿ ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಭ್ರಷ್ಟಾಚಾರ ಎಸಗಿರಬಹುದು ಎಂದು ಬಲವಾಗಿ ಶಂಕಿಸಬಹುದಾದ ಮಹತ್ವದ ಮಾಹಿತಿಗಳು ಉಡುಪಿಬಿಟ್ಸ್ ಗೆ ಲಭಿಸಿದೆ.

siddaramaaiahramesh-kumaru.t.khader-1

ಮುಖ್ಯಮಂತ್ರಿ ಸಿದ್ಧರಾಮಯ್ಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ ಹಾಗೂ ಉದ್ಯಮಿ ಬಿ.ಆರ್.ಶೆಟ್ಟಿ ನಡುವೆ ಹಲವು ಸುತ್ತಿನ ರಹಸ್ಯ ಮಾತುಕತೆಗಳು, ಗುಪ್ತ ಒಪ್ಪಂದಗಳು, ಪೂರ್ವ ತಯಾರಿಗಳೆಲ್ಲವೂ ನಡೆದು ಅನಧಿಕೃತವಾಗಿ ಎಲ್ಲವೂ ಅಂತಿಮಗೊಂಡ ಬಳಿಕ, ಸರಕಾರಿ ಆಸ್ಪತ್ರೆಯ ಖಾಸಗೀಕರಣ ಪ್ರಕ್ರಿಯೆಯನ್ನು ಅಧಿಕೃತಗೊಳಿಸುವ ಪ್ರಕ್ರಿಯೆಯನ್ನು ದಿಢೀರನೇ ನೆರವೇರಿಸಲಾಯಿತು ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುವಂಥ ಕೆಲವೊಂದು ಅಮೂಲ್ಯ ದಾಖಲೆಗಳು ಲಭ್ಯವಾಗಿದ್ದು, ಈ ಬಗ್ಗೆ ಮಾಹಿತಿ ಹಕ್ಕು ಕಾರ್ಯಕರ್ತರು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ನೀಡಲು ಚಿಂತನೆ ನಡೆಸಿದ್ದಾರೆ.

ಕಾರ್ಪೋರೇಷನ್ ಬ್ಯಾಂಕ್ ನ ಸಂಸ್ಥಾಪಕರೂ, ಮಹಾದಾನಿಗಳು, ಸೌಹಾರ್ದಪ್ರೇಮಿಗಳೂ ಆಗಿದ್ದ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲಾ ಹಾಜಿ ಖಾಜಿಂ ಸಾಹೇಬ್ ಬಹದ್ದೂರ್ ರವರು ಶರತ್ತುಬದ್ಧವಾಗಿ ಸರಕಾರಕ್ಕೆ ದಾನ ಮಾಡಿದ ಉಡುಪಿ ನಗರದ ಸರ್ವೇ ನಂಬ್ರ 123/2, 124/2, 125/2, 125/2ಬಿ2, 123/4ಎ, 123/4ಬಿ2, 123/5ಬಿ, 130/1ಎ ಮತ್ತು 125/ರ 3.88 ಎಕರೆ ಜಮೀನಿನಲ್ಲಿರುವ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಜಮೀನು ಸಹಿತ 60 ವರ್ಷಗಳ ಅವಧಿಗೆ ಗುತ್ತಿಗೆಗೆ ಪಡೆದುಕೊಳ್ಳುವ ಸಲುವಾಗಿಯೇ ಉದ್ಯಮಿ ಬಿ.ಆರ್.ಶೆಟ್ಟಿ ಅವರು ‘ಬಿ.ಆರ್.ಎಸ್.ವೆಂಚರ್ಸ್’ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ಧಾಗಿದೆ ಎಂಬ ಅಂಶವೂ ಬಯಲಾಗಿದೆ.

hospital-6hospital-7hospital-5

ಈ ಸಂಸ್ಥೆಗೆ ಆಸ್ಪತ್ರೆ ನಡೆಸಲು ಇರಲೇಬೇಕಾದ ಕನಿಷ್ಟ ಅನುಭವವಾದರೂ ಇದೆಯೇ, ಈ ಹಿಂದೆ ಆಸ್ಪತ್ರೆ ನಡೆಸಿದ್ದು ಇದೆಯೇ, ಎಂಬಿತ್ಯಾದಿ ಯಾವುದೇ ರೀತಿಯ ಕನಿಷ್ಟ ವರದಿಯೂ ಸರಕಾರದಲ್ಲಿ ಇಲ್ಲ ಮತ್ತು ಸರಕಾರ ಈ ಬಗ್ಗೆ ಯಾವುದೇ ಮಾಹಿತಿ, ದಾಖಲೆಗಳನ್ನೂ ಬಿ.ಆರ್.ಶೆಟ್ಟಿಯವರಿಂದ ಕೇಳಿ ಪಡೆದುಕೊಳ್ಳದೆ ಇರುವುದು ಖಚಿತವಾಗಿದ್ದು, ಇದಾವುದನ್ನೂ ಮಾಡದೆ ಬಹುಕೋಟಿ ರು. ಬೆಲೆಬಾಳುವ ಸರಕಾರಿ ಜಮೀನನನ್ನು ಸರಕಾರಿ ಆಸ್ಪತ್ರೆ ಸಹಿತವಾಗಿ ಹಸ್ತಾಂತರಿಸಲು ನಿರ್ಧರಿಸಿತು ಎಂಬುದು ಇದೀಗ ಬಹಿರಂಗವಾಗಿದೆ.

ಬಹಳ ವಿಶಾಲ ಮನೋಭಾವ ಹೊಂದಿದ್ದ ಹಾಜಿ ಅಬ್ದುಲ್ಲಾ ಸಾಹೇಬರು ಬಹುದೊಡ್ಡ ಸದುದ್ಧೇಶದಿಂದ ಸರಕಾರಿ ಆಸ್ಪತ್ರೆಗಾಗಿ ಭೂದಾನ ಮಾಡಿದ್ದು, ಇದೀಗ ಈ ಸಂಬಂಧದ ವೀಲುನಾಮೆ ಸಹಿತ ಯಾವುದೇ ದಾಖಲೆಗಳೂ ಜಿಲ್ಲಾಸ್ಪತ್ರೆಯಲ್ಲಾಗಲೀ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಾಗಲೀ ಇಲ್ಲದೇ ಇರುವುದು ಅಧಿಕಾರಿಗಳ ಮತ್ತು ಸರಕಾರದ ಬೇಜವಾಬ್ದಾರಿ, ಹೊಣೆಗೇಡಿತನ ಮತ್ತು ಕರ್ತವ್ಯಲೋಪಕ್ಕೆ ಸಾಕ್ಷಿಯಾಗಿದೆ. ಕನಿಷ್ಟ ಕೃತಘ್ನತೆಯೂ ಇಲ್ಲದ ಅಧಿಕಾರಿ ವರ್ಗವೇ ಇದಕ್ಕೆ ಕಾರಣವಾಗಿದೆ.

ಹಾಜಿ ಅಬ್ದುಲ್ಲಾ ಸಾಹೇಬರು ತಮ್ಮ ಭೂಮಿಯನ್ನು ಸರಕಾರಿ ಆಸ್ಪತ್ರೆಗಾಗಿ ದಾನ ಮಾಡಿರುವುದಕ್ಕೆ ಸಂಬಂಧಿಸಿದ ವೀಲುನಾಮೆ ಮತ್ತು ಇತರ ಕೆಲವು ದಾಖಲೆಗಳನ್ನು ಮಾಹಿತಿ ಹಕ್ಕು ಹೋರಾಟಗಾರರು ಜಿಲ್ಲಾ ಸರಕಾರಿ ಆಸ್ಪತ್ರೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕೇಳಿದ್ದು, ಕೇಳಿದ ದಾಖಲೆಗಳನ್ನು ಕೊಟ್ಟು ಪಾರದರ್ಶಕತೆ ಪ್ರದರ್ಶಿಸುವುದರ ಬದಲಾಗಿ ಕೇಳಿದ ದಾಖಲೆಗೂ ತಮ್ಮಲ್ಲಿ ಲಭ್ಯವಿಲ್ಲ ಎಂಬ ಸಿದ್ದ ಖಾಯಂ ಉತ್ತರವನ್ನು ಅಧಿಕಾರಿಗಳು ನೀಡಿ ಕೈತೊಳೆದುಕೊಳ್ಳುತ್ತಿರುವುದು ಕೆಲವೊಂದು ಅನುಮಾನಗಳಿಗೂ ಕಾರಣವಾಗಿದೆ.

hospital-4hospital-8

 

ಜಿಲ್ಲಾ ಸರಕಾರಿ ಆಸ್ಪತ್ರೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾಹಿತಿ ಮತ್ತು ದಾಖಲೆ ಕೋರಿದ ಮಾಹಿತಿ ಹಕ್ಕು ಹೋರಾಟಗಾರರಿಗೆ ಉದ್ಧೇಶಪೂರ್ವಕವಾಗಿಯೇ ಅವರು ಕೋರಿದ ಮಾಹಿತಿ ಮತ್ತು ದಾಖಲೆಗಳನ್ನು ನೀಡುತ್ತಿಲ್ಲ ಅಥವಾ ಸ್ಥಾಪಿತ ಹಿತಾಶಕ್ತಿ ಶಕ್ತಿಗಳೊಂದಿಗೆ ಶಾಮೀಲಾದ ಅಧಿಕಾರಿಗಳು ಆಸ್ಪತ್ರೆಗೆ ಸಂಬಂಧಪಟ್ಟ ಅಮೂಲ್ಯ ದಾಖಲೆಗಳನ್ನು ಪೂರ್ವನಿಗದಿತ ಸಂಚಿನ ಭಾಗವಾಗಿ ಕಳವು ಮಾಡಿರಬಹುದೆಂದು ಸಂಶಯಿಸಲಾಗಿದೆ. ಪಾರ್ದರ್ಶಕ ಆಡಳಿತ ನೀಡುವುದಾಗಿ ಮತದಾರರಿಗೆ ಭರವಸೆ ನೀಡಿ, ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಪಾರದರ್ಶಕತ್ವದ ಬದಲು ಎಲ್ಲವನ್ನೂ ರಹಸ್ಯವಾಗಿಯೇ ಮಾಡುತ್ತಾ ಭ್ರಷ್ಟಾಚಾರವನ್ನು ಪೋಷಿಸುವ ಕೆಲಸವನ್ನು ಪ್ರಜ್ಞಾಪೂರ್ವಕವಾಗಿ ಮಾಡುತ್ತಿದೆ.

2016ರ ಜುಲೈ 20ರಂದು ಬಿ.ಆರ್.ಶೆಟ್ಟಿ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ರವರಿಗೆ ಉಡುಪಿಯಲ್ಲಿರುವ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಜಮೀನು ಸಹಿತ 60 ವರ್ಷಕ್ಕೆ ತನಗೆ ಗುತ್ತಿಗೆಗೆ ನೀಡಬೇಕೆಂಬ ಪ್ರಸ್ತಾಪವನ್ನು ಮಂಡಿಸಿದ್ದಾರೆ. ಆದರೆ, ಸರಕಾರಿ ಜಮೀನಿನಲ್ಲಿ ಸರಕಾರಿ ಆಸ್ಪತ್ರೆಯನ್ನು ಧ್ವಂಸಗೊಳಿಸಿ ನೂತನವಾಗಿ ಖಾಸಗೀ ಆಸ್ಪತ್ರೆಯನ್ನು ನಿರ್ಮಿಸುವ ತಮ್ಮ ಸಂಸ್ಥೆಯನ್ನು ಬಿ.ಆರ್.ಶೆಟ್ಟಿಯವರು 2016ರ ಸೆಪ್ಟೆಂಬರ್ 20ರಂದು ಸ್ಥಾಪಿಸಿದ್ದಾರೆ. ಅಂದರೆ, ಒಂದು ಹೊಸ ಸಂಸ್ಥೆಗೆ, ಆ ಸಂಸ್ಥೆಗೆ ಯಾವುದೇ ಅನುಭವ ಇಲ್ಲದಿದ್ದಾಗ್ಯೂ, ಆ ಸಂಸ್ಥೆಯ ಕಾರ್ಯವೈಖರಿಯ ಬಗ್ಗೆ ಯಾವುದೇ ವರದಿಯೂ ಇಲ್ಲದಿದ್ದಾಗ್ಯೂ, ಯಾವುದೇ ವರದಿಯನ್ನೂ ಪಡೆದುಕೊಳ್ಳದೆ ಆರೋಗ್ಯ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ರವರು ಉದ್ಯಮಿ ಬಿ.ಆರ್.ಶೆಟ್ಟಿಯವರ ಪ್ರಸ್ತಾಪವನ್ನು ಒಪ್ಪಿಕೊಂಡು ಕಡತವನ್ನು ಮುಂದುವರಿಸಿ ನೆಪಮಾತ್ರಕ್ಕೆ ಕಾನೂನು ಇಲಾಖೆಯ ಅಭಿಪ್ರಾಯವನ್ನು ಪಡೆದುಕೊಳ್ಳುವ ಕೆಲಸವನ್ನು ಮಾಡಿದ್ದಾರೆ. ಒಟ್ಟಿನಲ್ಲಿ ಕೇವಲ ಎರಡು ಮೂರು ತಿಂಗಳ ಅತ್ಯಲ್ಪ ಅವಧಿಯಲ್ಲಿ ಹಾಜಿ ಅಬ್ದುಲ್ಲಾ ಸಾಹೇಬರು ದಾನ ಸರಕಾರಕ್ಕೆ ದಾನ ಮಾಡಿದ ಜಮೀನು ಸಹಿತವಾಗಿ ಸರಕಾರಿ ಆಸ್ಪತ್ರೆಯನ್ನು ಬಿ.ಆರ್.ಶೆಟ್ಟಿಯವರಿಗೆ ಹಸ್ತಾಂತರಿಸಿರುವುದು ನೋಡಿದರೆ ಇದರ ಹಿಂದಿನ ಹಿಕ್ಮತ್ತನ್ನು ಯಾರು ಬೇಕಾದರೂ ಊಹಿಸಬಹುದಾಗಿದೆ.

hospital-2hospital-3

ಕೋಟಿ ಮೊತ್ತದ ವಾಚ್ ನ್ನು ಯಾರಿಂದಲೋ ಉಡುಗೊರೆಯಾಗಿ ಪಡೆದುಕೊಂಡು ಸಿಕ್ಕಿಬಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯನವರೇ ಖುದ್ದಾಗಿ ಈ ಖಾಸಗೀಕರಣ ಪ್ರಕ್ರಿಯೆಯಲ್ಲಿ ಆಸಕ್ತಿ ವಹಿಸಿರುವುದೂ ಪ್ರಸ್ತುತ ಗುಟ್ಟಾಗಿ ಉಳಿದಿಲ್ಲ. ಸರಕಾರಿ ಜಮೀನಿನಲ್ಲಿ ಬಿ.ಆರ್.ಶೆಟ್ಟಿ ನಿರ್ಮಿಸಲಿರುವ ಖಾಸಗಿ ಆಸ್ಪತ್ರೆಯ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆರಂಭಿಸಿದ ಮುಕ್ಯಮಂತ್ರಿ ಸಿದ್ಧರಾಮಯ್ಯನವರ ಸಮಕ್ರಮದಲ್ಲಿಯೇ ಆರೋಗ್ಯ ಇಲಾಖಾ ಪ್ರಧಾನ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಹಾಗೂ ಬಿ.ಆರ್.ಶೆಟ್ಟಿಯವರು ಸರಕಾರಿ ಜಮೀನು ಸಹಿತ ಆಸ್ಪತ್ರೆ ಹಸ್ತಾಂತರ ಒಪ್ಪಂದ (ಎಂಒಯು)ದ ಕಡತವನ್ನು ಪರಸ್ಪರ ಬದಲಾಯಿಸಿಕೊಂಡಿದ್ದಾರೆ. ವಿಶೆಷವೆಂದರೆ, ಉಡುಪಿ ಬಿಟ್ಸ್ ಗೆ ಲಭಿಸಿದ ನಂಬಲರ್ಹ ಮಾಹಿತಿಯ ಪ್ರಕಾರ, ಈ ಸಂದರ್ಭದಲ್ಲಿ ಈ ಒಪ್ಪಂದ ಪತ್ರ (ಎಂಒಯು)ಕ್ಕೆ ಬಿ.ಆರ್.ಶೆಟ್ಟಿಯವರು ಸಹಿ ಹಾಕಿಲ್ಲ. ಬಿ.ಆರ್.ಎಸ್. ಸಹಿ ಹಾಕದ ಕಾರಣಕ್ಕೇ ಇದುವರೆಗೂ ಈ ಒಪ್ಪಂದವನ್ನು ನೋಂದಣಿ ಮಾಡಿಕೊಳ್ಳಲು ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ರವರಿಗೆ ಸಾಧ್ಯವಾಗಿಲ್ಲ. ನೋಂದಣಿ ಮಾಡುವ ಪ್ರಕ್ರಿಯೆಯನ್ನೂ ಪೂರ್ಣಗೊಳಿಸುವ ಮೊದಲೇ ಸರಕಾರ ಆಸ್ಪತ್ರೆ ಇರುವ ಸರಕಾರೀ ಜಮೀನನ್ನು ಬಿ.ಆರ್.ಎಸ್ ಗೆ ಅನಧಿಕೃತವಾಗಿ ಹಸ್ತಾಂತರಿಸಿದೆ. ಇದೀಗ ಜಿಲ್ಲಾಸ್ಪತ್ರೆಯ ಸರ್ಜನ್ ರವರು ಆಸ್ಪತ್ರೆ ಜಮೀನಿನಲ್ಲಿರುವ ಸರಕಾರಿ ವಸತಿಗೃಹದಲ್ಲಿರುವ ವೈದ್ಯರು ಹಾಗೂ ಸಿಬ್ಬಂದಿಗಳಿಗೆ ಕೂಡಲೇ ವಸತಿ ತೆರವುಗೊಳಿಸುವಂತೆ ಮೌಖಿಕವಾಗಿ ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲ, ಅನಧಿಕೃತವಾಗಿಯೇ ಜಮೀನಿನಲ್ಲಿರುವ ಕೆಲವು ಕಟ್ಟಡಗಳನ್ನು ಕೆಡವಿ ಹಾಕುವ ಮೂಲಕ ಖಾಸಗಿ ಆಸ್ಪತ್ರೆ ನಿರ್ಮಾಣ ಕಾಮಗಾರಿಯನ್ನು ಆರಂಭಿಸಿದ್ದು ಇದು ಆಕ್ಷೇಪಕ್ಕೆ ಕಾರಣವಾಗಿದೆ.

ಜನವರಿ 6: ಬೃಹತ್ ಪ್ರತಿಭಟನೆ

ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗೀ ಉದ್ಯಮಿಗೆ ಅಕ್ರಮವಾಗಿ ಹಸ್ತಾಂತರಿಸಿರುವ ರಾಜ್ಯ ಸರಕಾರದ ಅಕ್ರಮವನ್ನು ವಿರೋಧಿಸಿ ಸಾರ್ವಜನಿಕರು ಜನವರಿ 6ರಂದು ಸಾರ್ವಜನಿಕ ಪ್ರತಿಭಟನೆ ನಡೆಸಲಿದ್ದಾರೆ. ಶುಕ್ರವಾರ ಸಂಜೆ ಗಂಟೆ 4ಕ್ಕೆ ಉಡುಪಿ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ರವರ ಕಚೇರಿ ಬಳಿಯ ಜೋಡುಕಟ್ಟೆಯಿಂದ ನಗರದ ಮುಖ್ಯ ರಸ್ತೆಗಳಲ್ಲಿ ಬೃಹತ್ ಪ್ರತಿಭಟನಾ ಜಾಥಾ ನಡೆಯಲಿದೆ. ಬಳಿಕ ಚಿತ್ತರಂಜನ್ ಸರ್ಕಲ್ ನಲ್ಲಿ ಸಾರ್ವಜನಿಕ ಪ್ರತಿಭಟನಾ ಸಭೆಯನ್ನು ಆಯೋಜಿಸಲಾಗಿದೆ. ಪ್ರತಿಭಟನೆಯ ನಂತರ ನ್ಯಾಯಾಲಯದ ಮೆಟ್ಟಿಲೇರಲೂ ಸರಕಾರಿ ಆಸ್ಪತ್ರೆಯ ಖಾಸಗೀಕರಣ ವಿರೋಧಿ ಹೋರಾಟಗಾರರು ಸಿದ್ಧತೆ ನಡೆಸಿದ್ದಾರೆ.

hospital-1haji-abdulla

 

 

Leave a Reply

Your email address will not be published. Required fields are marked *