Realtime blog statisticsweb statistics
udupibits.in
Breaking News
ಮಂಗಳೂರು: ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣರಿಂದ ಹೇಳಿಕೆ- ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪ

ಪಡುಬೆಳ್ಳೆಯಲ್ಲಿ ರುದ್ರಭೂಮಿ ನಿರ್ಮಾಣ ಪ್ರಸ್ತಾಪಕ್ಕೆ ನಾಗರಿಕರ ಆಕ್ಷೇಪ: ಗ್ರಾ.ಪಂ.ಆಡಳಿತಕ್ಕೆ ತಲೆನೋವು- ಮಾಡಿದ್ದುಣ್ಣೋ ಮಹಾರಾಯ !

ಉಡುಪಿ: ಉಡುಪಿ ತಾಲೂಕು ಕಾಪು ಫಿರ್ಕಾದ ಬೆಳ್ಳೆ ಕಂದಾಯ ಗ್ರಾಮದ ಪಡುಬೆಳ್ಳೆ ಪ್ರದೇಶದ ಸರ್ವೇ ನಂಬ್ರ 198ರ ಅರಣ್ಯ ಪ್ರದೇಶದಲ್ಲಿ ಹಿಂದೂ ರುದ್ರಭೂಮಿ ಮತ್ತು ಡಂಪಿಂಗ್ ಯಾರ್ಡ್ (ತ್ಯಾಜ್ಯ ವಿಲೆವಾರಿ ಘಟಕ) ಸ್ಥಾಪಿಸುವ ಮೂಡುಬೆಳ್ಳೆ ಗ್ರಾಮ ಪಂಚಾಯತ್ ನ ಯೋಜನೆಗೆ ಸ್ಥಳೀಯ ನಾಗರಿಕರು ಬಲವಾದ ವಿರೋಧ ವ್ಯಕ್ತಪಡಿಸಿದ್ದಾರೆ.

ಪಡುಬೆಳ್ಳೆ ಪ್ರದೇಶದ ರಕ್ಷಾಪುರ ಕಾಲನಿ, ಮಧ್ವ ಕಾಲನಿ, ಶಿವಗಿರಿ ಕಾಲನಿ, ಹೊಸವೂರು, ಪಾಂಬೂರು ಮತ್ತು ಪಡುಬೆಳ್ಳೆ ಪ್ರದೇಶಗಳ ಖಾಯಂ ನಿವಾಸಿಗಳು ಸರ್ವೇ ನಂಬ್ರ 198ರಲ್ಲಿ ಹಿಂದೂ ರುದ್ರ ಭೂಮಿ ಸ್ಥಾಪಿಸುವ ಗ್ರಾ.ಪಂ. ಪ್ರಸ್ತಾವಕ್ಕೆ ಸ್ಪಷ್ಟ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧದ ಆಕ್ಷೇಪಣೆಯನ್ನು ಈಗಾಗಲೇ ಲಿಖಿತವಾಗಿಯೇ ನಾಗರಿಕರು ಗ್ರಾ.ಪಂ. ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಸಲ್ಲಿಸಿದ್ದಾರೆ. ಈ ಆಕ್ಷೇಪಣೆಯನ್ನು ನಿರ್ಲಕ್ಷಿಸಿ ಗ್ರಾ.ಪಂ. ಆಡಳಿತವು ಪಡುಬೆಳ್ಳೆಯಲ್ಲಿಯೇ ಹಿಮದೂ ರುದ್ರಭೂಮಿ ಸ್ಫಾಪಿಸಲು ಮುಂದಾದುದೇ ಆದಲ್ಲಿ ತೀವ್ರ ಹೋರಾಟ ರೂಪಿಸಲು ನಾಗರಿಕರು ಸ್ಪಷ್ಟ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ.

ಮೂಡುಬೆಳ್ಳೆ ಗ್ರಾಮ ಪಂಚಾಯತ್ ಆಡಳಿತವು ರುದ್ರಭೂಮಿ ಮತ್ತು ತ್ಯಾಜ್ಯ ವಿಲೆವಾರಿ ಘಟಕ ಸ್ಥಾಪಿಸಲು ಗೊತ್ತುಪಡಿಸಿದ ಪಡುಬೆಳ್ಳೆಯ ಸರ್ವೇ ನಂಬ್ರ 198ರ ಕೆಲವೇ ಕೆಲವು ಮೀಟರ್ ಗಳ ಅಂತರದಲ್ಲಿ ನೂರಾರು ಕುಟುಂಬಗಳು ವಾಸಿಸುವ ಕಾಲನಿಗಳೇ ಇವೆ. ಆದುದರಿಂದ, ಇಲ್ಲಿ ರುದ್ರಭೂಮಿ ಮತ್ತು ತ್ಯಾಜ್ಯ ವಿಲೆವಾರಿ ಘಟಕ ಸ್ಥಾಪಿಸಿದಲ್ಲಿ ಬಡ ನಾಗರಿಕರು ತಮ್ಮ ಬದುಕುವ ಹಕ್ಕನ್ನೇ ಕಳೆದುಕೊಂಡತಾಗಲಿದೆ ಎಂದು ನಾಗರಿಕರು ಆತಂಕ ವ್ಯಕ್ತಪಡಿಸಿದ್ದಾರೆ.

ರುದ್ರಭೂಮಿಗೆ ಗೊತ್ತುಪಡಿಸಿದ ಸ್ಥಳಕ್ಕೆ ತಾಗಿಕೊಂಡೇ ಹತ್ತಾರು ಜನರು ದಿನನಿತ್ಯ ಸಂಚರಿಸುವ ಗುಜ್ಜಿಕಾಡು ರಸ್ತೆ ಇದ್ದು, ಇಲ್ಲಿ ರುದ್ರಭೂಮಿ ನಿರ್ಮಾಣ ಮಾಡುವುದರಿಂದ ಈ ರಸ್ತೆಯಲ್ಲಿ ಸಂಚರಿಸುವ ಮತ್ತು ಕಾಲನಿ ನಿವಾಸಿಗಳಾದ ಮಕ್ಕಳಿಗೆ ಹಾಗೂ ಮಹಿಳೆಯರಿಗೆ ಭಯ ಭೀತಿ ಉಂಟಾಗಿದೆ ಎಂದು ನಾಗರಿಕರು ತಿಳಿಸಿದ್ದಾರೆ.

ಮೂಡುಬೆಳ್ಳೆ ಗ್ರಾಮ ಪಂಚಾಯತಿನ ಈ ಹಿಂದಿನ ಬಿಜೆಪಿ ಬೆಂಬಲಿತ ಆಡಳಿತ ಮಂಡಳಿಯು ಕಪ್ಪಂದಕರಿಯ ಪರಿಸರದಲ್ಲಿ ಹಿಂದೂ ರುದ್ರ ಭೂಮಿ ನಿರ್ಮಿಸಲು ನಿರ್ಣಯ ತೆಗೆದುಕೊಂಡಿತ್ತು. ಮಾತ್ರವಲ್ಲ, ಇದಕ್ಕಾಗಿ ಸಮಿತಿಯೊಂದನ್ನೂ ರಚಿಸಿ ಆ ಸಮಿತಿಗೆ ರುದ್ರಭೂಮಿ ನಿರ್ಮಿಸುವ ಹೊಣೆಗಾರಿಕೆಯನ್ನೂ ನೀಡಿತ್ತು. ಆದರೆ, ಇಲ್ಲಿ ರುದ್ರಭೂಮಿ ನಿರ್ಮಿಸಲು ಮುಂದಾದಾಗ ಕಾಂಗ್ರೆಸ್ ಮುಖಂಡರು ತೆರೆಮರೆಯಲ್ಲಿ ನಿಂತು ಒಂದಿಬ್ಬರು ನಾಗರಿಕರ ಹೆಸರಲ್ಲಿ ಕಪ್ಪಂದಕರಿಯದಲ್ಲಿ ರುದ್ರಭೂಮಿ ಸ್ಥಾಪಿಸುವ ಕಾರ್ಯಕ್ಕೆ ವಿರೋಧ ವ್ಯಕ್ತಪಡಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದರು.

ಇದೀಗ ನ್ಯಾಯಾಲಯ ತಡೆಯಾಜ್ಞೆ ತೆರವುಗೊಂಡ ಹಿನ್ನೆಲೆಯಲ್ಲಿ ಬಿಜೆಪಿ ಬೆಂಬಲಿತರಿರುವ ಸಮಿತಿಯು ಕಪ್ಪಂದಕರಿಯ ಪ್ರದೇಶದಲ್ಲಿ ರುದ್ರಭೂಮಿ ನಿರ್ಮಿಸಲು ಮುಂದಾಗಿದೆ. ಆದರೆ, ಪ್ರಸ್ತುತ ಗ್ರಾಮ ಪಂಚಾಯತ್ ಕಾಂಗ್ರೆಸ್ ಬೆಂಬಲಿತ ಸದಸ್ಯರ ಕೈಯ್ಯಲ್ಲಿದ್ದು, ಈ ಆಡಳಿತವು ಕಪ್ಪಂದಕರಿಯದ ಬದಲಾಗಿ ಪಡುಬೆಳ್ಳೆ ಪ್ರದೇಶದಲ್ಲಿ ರುದ್ರಭೂಮಿ ಸ್ಥಾಪಿಸುವ ಪ್ರಯತ್ನದಲ್ಲಿದೆ. ಆದರೆ, ಗ್ರಾ.ಪಂ.ನ ಈ ಯತ್ನಕ್ಕೆ ಇದೀಗ ಸ್ಥಳೀಯ ನಾಗರಿಕರು ವಿರೋಧ ವ್ಯಕ್ತಪಡಿಸಿದ್ದು, ಕುತೂಹಲ ಮತ್ತು ವ್ಯಾಪಕ ಚರ್ಚೆಗೆ ಕಾರಣವಾಗಿದೆ.

 

 

Leave a Reply

Your email address will not be published. Required fields are marked *