Realtime blog statisticsweb statistics
udupibits.in
Breaking News
ಮೂಡುಬೆಳ್ಳೆ: ನೆಲ್ಲಿಕಟ್ಟೆ ತಬೈಲ್ ನಿವಾಸಿ ಶಂಕರ ಶೆಟ್ಟಿ ನಿಧನ

ಯೋಧರ ನಿರ್ಲಕ್ಷ್ಯ ಸರಿಯಲ್ಲ: ಹಗರಣ ಬಯಲಿಗೆಳೆದವನನ್ನೇ ಕಟಕಟೆಯಲ್ಲಿ ನಿಲ್ಲಿಸುವುದು ಅಕ್ಷಮ್ಯ: ಕೇಂದ್ರ ಸರಕಾರವೇ ನೇರ ಹೊಣೆ !

  • ಶ್ರೀರಾಮ ದಿವಾಣ

# ದೇಶ ಕಾಯುವ ದೇಶಪ್ರೇಮಿ ಯೋಧರಿಗೆ ಕಳಪೆ ಆಹಾರ ವಿತರಿಸುತ್ತಿದ್ದ ಅಕ್ಷಮ್ಯ ಅಪರಾಧದ ಮತ್ತು ದೇಶದ್ರೋಹದ ಪ್ರಕರಣವೊಂದು ಬಯಲಾಗಿದೆ. ಜಮ್ಮು ಕಾಶ್ಮೀರದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿಎಸ್ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಎಂಬವರು ತಮಗೆ ಕಳಪೆ ಗುಣಮಟ್ಟದ ಆಹಾರ ತಯಾರಿಸಿ ಬಡಿಸಲಾಗುತ್ತಿತ್ತು ಎಂಬ ಶೋಚನೀಯ ಮಾಹಿತಿಯನ್ನು ವಿಡಿಯೋ ಮಾಡಿ ಸಾಕ್ಷ್ಯಾಧಾರ ಸಹಿತ ಬಹಿರಂಗಪಡಿಸಿದ್ದಾರೆ. ಈ ಮೂಲಕ ದೇಶ ಭಕ್ಷಕರನ್ನು ಅನಾವರಣಗೊಳಿಸಿದ ತೇಜ್ ಬಹದ್ದೂರ್ ಅವರನ್ನು ದೇಶದ ಸಮಸ್ತ ಜನತೆ ಅಭಿನಂದಿಸಬೇಕು.

ಇತ್ತೀಚೆಗೆ ನಡೆಸಲಾಯಿತು ಎನ್ನಲಾಗುವ ಸರ್ಜಿಕಲ್ ಸ್ಟೈಕ್ ಎಂಬ ಸೈನಿಕರ ಸಾಹಸವನ್ನು, ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ತಮ್ಮದೇ ಸಾಧನೆ, ತಾವೇ ಮಾಡಿದ ಸಾಹಸ ಎಂಬಂತೆ ಬಿಂಬಿಸಲು ಯತ್ನಿಸಿದ್ದರು. ಅವರ ಅಂಧಾಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ರಸ್ತೆ ಬದಿ ಸಾರ್ವಜನಿಕ ಸ್ಥಖಳಗಳಲ್ಲಿ ಸರ್ಜಿಕಲ್ ಸ್ಟೈಕ್ ನಡೆಸಿದ್ದಕ್ಕಾಗಿ ನರೇಂದ್ರ ಮೋದಿಯವರನ್ನು ಅಭಿನಂದಿಸುವಂಥ ಫ್ಲೆಕ್ಸ್ ಗಳನ್ನು ಅಲ್ಲಲ್ಲಿ ಅಳವಡಿಸುವ ಮೂಲಕ ಅಸಹ್ಯ ಹುಟ್ಟುವಂತೆ ಮಾಡಿದ್ದರು.

ಹುಟ್ಟು ಹಬ್ಬವನ್ನು ಸೈನಿಕರ ಜೊತೆಗೆ ಆಚರಿಸಿದರೆಂದೂ ಪ್ರಚಾರ ನಡೆಸಲಾಯಿತು. ದೇಶಪ್ರೇಮದ ಬಗ್ಗೆ ಬಹಳ ಮಾತನಾಡುವ ತಮ್ಮ ಸರಕಾರದ ಕೈಕೆಳಗೆ ದೇಶ ಕಾಯುವ ಸೈನಿಕರಿಗೆ ಕಳಪೆ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಲಾಗುತ್ತಿದೆ ಎಂಬುದು ಮಾತ್ರ ಇವರಿಗೆ ಗೊತ್ತಿರಲಿಲ್ಲ.

ಯಾವ ಮಾಹಿತಿಯನ್ನೂ ನೀಡದೆ ದೇಶ ಕಾಯುವ ಸೈನಿಕರಿರುವಲ್ಲಿಗೆ ತೆರಳಿ ಅವರ ಜೊತೆಗೆ ಕುಳಿತು ಅವರು ಸೇವಿಸುವ ಆಹಾರವನ್ನೇ ಪ್ರಧಾನಿ ನರೇಂದ್ರ ಮೋದಿಯವರೋ, ರಕ್ಷಣಾ ಮಂತ್ರಿ ಮನೋಹರ್ ಪರಿಕ್ಕರ್ ರವರೋ ಸೇವಿಸುತ್ತಿದ್ದರೆ ಆಗ ಇವರಿಗೆ ವಾಸ್ತವ ಪರಿಸ್ಥಿತಿಯ ಅರಿವಾಗುತ್ತಿತ್ತು. ಆದರೆ ಇವರಾರಿಗೂ ಅದು ಬೇಕಾಗಿಲ್ಲ. ವಿದೇಶ ಪ್ರವಾಸದಲ್ಲೇ ಕಾಲ ಕಳೆಯುವ ಮೋದಿಯಂಥ ಪ್ರಧಾನಿಗೆ ದೇಶದೊಳಗೆ ಗಡಿಯಲ್ಲಿ ಸೈನಿಕರಿಗೆ ಯಾವ ರೀತಿಯ ಆಹಾರ ವಿತರಣೆಯಾಗುತ್ತಿದೆ ಎಂದು ತಿಳಿದುಕೊಳ್ಳಲು ಪುರುಸೊತ್ತಿಲ್ಲ.

ದೇಶದ ರಕ್ಷಣಾ ಇಲಾಖೆಯಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದರೆ, ದೇಶವನ್ನು ಕಾಯುವ ಸೈನಿಕರ ಆರೋಗ್ಯವನ್ನೇ ನಿರ್ಲಕ್ಷಿಸಲಾಗುತ್ತಿದೆ ಎಂದರೆ, ಇದು ಕಡೆಗಣಿಸುವ ವಿಷಯ ಅಲ್ಲವೇ ಅಲ್ಲ. ಅತ್ಯಂತ ಗಂಭೀರವಾದ ವಿಷಯವಿದು. ಇಂಥ ಹಗರಣವೊಂದನ್ನು ಸಾಕ್ಷಿ ಸಹಿತ ಬಯಲಿಗೆಳೆದ ಯೋಧ, ಈ ವಿಷಯವನ್ನು ತನ್ನ ಯಾವನೇ ಒಬ್ಬ ಮೇಲಿನ ಅಧಿಕಾರಿಗಳಿಗೆ ಅಥವಾ ರಕ್ಷಣಾ ಮಂತ್ರಿ ಇಲ್ಲವೇ ಪ್ರಧಾನಿಯವರ ಗಮನಕ್ಕೂ ತಾರದೆ ನೇರವಾಗಿ ದೇಶದ ಜನತೆಯ ಗಮನಕ್ಕೆ ತಂದಿದ್ದಾರೆ ಎಂದರೆ, ಈ ಯೋಧರಿಗೆ ತಮ್ಮ ಮೇಲಾಧಿಕಾರಿಗಳ ಮೇಲಾಗಲೀ, ಮಂತ್ರಿಗಳ ಮೇಲಾಗಲೀ ನಂಬಿಕೆ, ವಿಶ್ವಾಸ ಇರಲಿಲ್ಲ ಎಂದು ಭಾವಿಸಬಹುದಾಗಿದೆ.

ಬಿಜೆಪಿಯ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ ಡಿಎ ಸರಕಾರ ನಿರೀಕ್ಷೆಯಂತೆಯೇ ಸಾಕ್ಷ್ಯಾಧಾರ ಸಹಿತ ಹಗರಣ ಬಯಲಿಗೆಳೆದ ಬಿಎಸ್ ಎಫ್ ಯೋಧ ತೇಜ್ ಬಹದ್ದೂರ್ ಯಾದವ್ ಅವರನ್ನು ವರ್ಗಾವಣೆ ಮಾಡಿದೆ. ಮಾತ್ರವಲ್ಲ, ಉತ್ತಮ ಆಹಾರವನ್ನು ಒದಗಿಸಿ ಎಂದು ಕೇಳಿದ ತಪ್ಪಿಗೆ ಅವರನ್ನು ಪ್ಲಂಬರ್ ಕೆಲಸಕ್ಕೆ ನಿಯುಕ್ತಿಗೊಳಿಸಿದೆ. ತೇಜ್ ಮದ್ಯ ವ್ಯವಸನಿಯಾಗಿದ್ದ, ಆತ ಅವಿಧೇಯನಾಗಿದ್ದ ಎಂಬಿತ್ಯಾದಿಯಾಗಿ ಆರೋಪಿಸಿ ಮಾನಹಾನಿ ಮಾಡುವ ಯತ್ನವನ್ನೂ ನಾಚಿಕೆ ಇಲ್ಲದೆ ಮಾಡತೊಡಗಿದೆ. ತೇಜ್ ಬಹದ್ದೂರ್ ಒಬ್ಬ ಮದ್ಯ ವ್ಯಸನಿ ಎಂಬುದೇ ನಿಜವಾಗಿದ್ದರೆ ಆತನಿಗೆ ಮದ್ಯ ವ್ಯಸನ ವಿಮುಕ್ತಿಗಾಗಿ ಅಗತ್ಯ ಚಿಕಿತ್ಸೆ ಅಥವಾ ಸೂಕ್ತ ಶಿಬಿರಕ್ಕೆ ಸೇರ್ಪಡೆಗೊಳಿಸುವ ಕೆಲಸವನ್ನು ಮೇಲಾಧಿಕಾರಿಗಳು ಯಾಕೆ ಮಾಡಿಲ್ಲ ಎಂಬ ಜನರ ಪ್ರಶ್ನೆಗಳಿಗೆ ಮೊತ್ತ ಮೊದಲು ಉತ್ತರಿಸಬೇಕಾಗುತ್ತದೆ.

 

ಕಳಪೆ ಆಹಾರ ಸರಬರಾಜು ಬಗ್ಗೆ ತನಿಖೆಗೆ ಆದೇಶಿಸರುವುದಾಗಿ ಗೃಹ ಮಂತ್ರಿ ರಾಜನಾಥ್ ಸಿಂಗ್ ಪ್ರಕಟಿಸಿದ್ದಾರೆ. ಹಗರಣದ ನ್ಯಾಯ ಸಮ್ಮತ ತನಿಖೆಗೆಗಾಗಿ ಹಗರಣ ಬಯಲಿಗೆಳೆದ ತೇಜ್ ಬಹದ್ದೂರ್ ಯಾದವ್ ಅವರನ್ನು ವರ್ಗಾವಣೆಗೊಳಿಸಲಾಗಿದೆ ಎಂದು ಬಿಎಸ್ ಎಫ್ ಇನ್ಸ್ ಪೆಕ್ಟರ್ ಜನರಲ್ ಡಿ.ಕೆ.ಉಪಾಧ್ಯಾಯ ಅವರು ಘೋಷಿಸಿದ್ದಾರೆ.

ಇಲ್ಲಿ ನ್ಯಾಯ ಸಮ್ಮತ ತನಿಕೆ ನಡೆಯಬೇಕಾದರೆ ವರ್ಗಾವಣೆ ಮಾಡಬೇಕಾದುದು ಡಿ.ಕೆ.ಉಪಾಧ್ಯಾಯ ಸಹಿತ ಉನ್ನತ ಅಧಿಕಾರಿಗಳನ್ನೇ ಹೊರತು, ಹಗರಣ ಬಯಲಿಗೆಳೆದ ತೇಜ್ ಬಹದ್ದೂರ್ ರವರನ್ನು ಅಲ್ಲ. ಹಗರಣವನ್ನು ಮುಚ್ಚಿ ಹಾಕುವ ಸಾಮರ್ಥ್ಯ ಇರುವುದು, ಹಗರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನುನಾಶಪಡಿಸುವ ತಾಕತ್ತು ಇರುವುದು ಉನ್ನತ ಅಧಿಕಾರಿಗಳಿಗೇ ಹೊರತು ಒಬ್ಬ ಸಾಮಾನ್ಯ ಯೋಧನಿಗಲ್ಲ.

ಈ ಸತ್ಯ ಯಾವನೇ ಒಬ್ಬ ಸಾಮಾನ್ಯನಿಗಾದರೂ ಅರ್ಥವಾಗುವಂಥದ್ದೇ. ಆದರೆ, ಈ ಬಗ್ಗೆ ಗೃಹ ಮಂತ್ರಿಯಾಗಲೀ, ರಕ್ಷಣಾ ಮಂತ್ರಿಯಾಗಲೀ ನ್ಯಾಯ ಪಕ್ಷಪತಿಗಳಾಗಿ ನಡೆದುಕೊಳ್ಳದಿರುವುದು ಕಂಡುಬರುತ್ತದೆ. ಅಂದರೆ, ಹಗರಣವನ್ನು ಮುಚ್ಚಿ ಹಾಕುವುದೇ, ಹಗರಣವನ್ನು ಬಯಲಿಗೆಳೆದ ತೇಜ್ ಬಹದ್ದೂರ್ ಯಾದವ್ ಅವರಿಗೆ ಶಿಕ್ಷೆ ನೀಡುವುದೇ ಸರಕಾರದ ಉದ್ಧೇಶವಾಗಿದೆಯೇ ಎಂದು ಜನತೆ ಭಾವಿಸುವಂತಾಗಿದೆ.

ಪ್ರಧಾನಿ ನರೇಂದ್ರ ಮೋದಿ ಸಹಿತ ಗೃಹ ಮಂತ್ರಿ ರಾಜನಾಥ್ ಸಿಂಗ್, ರಕ್ಷಣಾ ಮಂತ್ರಿ ಮನೋಹರ್ ಪರಿಕ್ಕರ್ ಯೋಧರಿಗೆ ಕಳಪೆ ಆಹಾರ ವಿತರಣೆ ಮಾಡುತ್ತಿದ್ದುದಕ್ಕೆ ಇನ್ನಾದರೂ ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಮಂತ್ರಿಗಳು ಈ ಕೂಡಲೇ ಖುದ್ದು ತೇಜ್ ಬಹದ್ದೂರ್ ಅವರನ್ನು ಭೇಟಿಯಾಗಿ, ಅವರನ್ನು ಅಭಿನಂದಿಸಿ, ಯೋಧರ ಸಮಸ್ಯೆಗಳು ಮತ್ತು ಬೇಡಿಕೆಗಳ ಬಗ್ಗೆ ಅವರಿಂದಲೇ ತಿಳಿದುಕೊಂಡು ಬಂದು ಸ್ವಚ್ಛಗೊಳಿಸುವ ಕೆಲಸ ನಡೆಸಬೇಕಾಗಿದೆ. ಮಾಡಬೇಕಾದ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಸಮರ್ಥವಾಗಿ ನಿರ್ವಹಿಸಲು ಕೇಂದ್ರ ಸರಕಾರ ಸಿದ್ಧವಾಗಬೇಕಾಗಿದೆ.

 

 

Leave a Reply

Your email address will not be published. Required fields are marked *