Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸಾಹಿತ್ಯ ಸೇವೆಯನ್ನೂ, ಕಾವ್ಯ ರಚನೆಯನ್ನೂ ತಪಸ್ಸಿನಂತೆ ನಡೆಸಿದವರು ಗಣಪತಿ ದಿವಾಣರು

# ಇಂದು, ಅನ್ಯಾಯವಾಗಿ ಕೇರಳಕ್ಕೆ ಸೇರಿಸಲ್ಪಟ್ಟಿದ್ದರೂ, ಕರ್ನಾಟಕದ ಅವಿಭಾಜ್ಯ ಅಂಗವಾದ ಕಾಸರಗೋಡಿನಲ್ಲಿ ಕನ್ನಡದ ಕಾಯಕವೇ ಕೈಲಾಸ ಎಂಬ ಶ್ರದ್ಧೆಯಿಂದ ನಿರಇಂತರ ದುಡಿಯುತ್ತಿರುವ ಸಾರ್ವಜನಿಕ ಸೇವಾ ಧುರಂದರರೂ, ಶ್ರೇಷ್ಠ ಸಾಹಿತಿಗಳೂ, ಪ್ರತಿಭಾನ್ವಿತ ಕವಿಗಳೂ, ಸಜ್ಜನವರೇಣ್ಯರೂ ಆದ ಶ್ರೀ ಗಣಪತಿ ದಿವಾಣರು-ಅವರ ಕುಲನಾಮವಾದ ದಿವಾಣ ಪದ ಸೂಚಿಸುವಂತೆ, ತುಳುನಾಡಿನ ಒಂದು ಸಾಮಂತ ರಾಜರ ದಿವಾಣ ಗಿರಿಯ ವಂಶಸ್ಥರಾಗಿದ್ದರೂ, ಅಂತಹ ಧೀಮಂತ ಶ್ರೀಮಂತ ಕುಟುಂಬದಲ್ಲಿ ಜನ್ಮವೆತ್ತಿದ್ದರೂ, ಬಾಲ್ಯಾರಭ್ಯ ಶ್ರೀಮಂತಿಕೆಯನ್ನು ಕಳೆದುಕೊಂಡು ಕೇವಲ ಧೀಮಂತಿಕೆಯನ್ನು ತನ್ನ ಸಾಹಸಮಯ ಜೀವನ ಶ್ರದ್ಧೆಯಿಂದ ಉಳಿಸಿ ಬೆಳೆಸಿ ಉಳಿದವರು.

ಇವರಿಗೆ ಲೋಕ ಸಮಾಜವೇ ವಿದ್ಯಾಭ್ಯಾಸ ನೀಡಿದ ವಿಶ್ವವಿದ್ಯಾಲಯ. ಕನ್ನಡದ ಸೇವೆಯೇ ಇವರ ಬಿರುದು. ಬಾಲ್ಯಾರಭ್ಯ ಕನ್ನಡವನ್ನು, ಸಾಹಿತ್ಯವನ್ನು, ಸಂಸ್ಕೃತಿಯನ್ನು, ಕಾವ್ಯ ರಚನೆಯನ್ನು ತಪಸ್ಸಿನಂತೆ ನಡೆಸುತ್ತಾ ಬಂದವರೂ ಇಲ್ಲಿನ ಸಾಹಿತ್ಯ ಸೇವಕರಲ್ಲಿ ಕವಿ ಶ್ರೇಷ್ಠರಲ್ಲಿ ಒಬ್ಬರಾಗಿ ಕೀರ್ತಿ ಪಡೆದಿದ್ದಾರೆ.

ಶ್ರೀ ದಿವಾಣರ ಸಾಹಿತ್ಯವನ್ನು ಕನ್ನಡ ನಾಡಿನ ಜನತೆ ಇನ್ನಷ್ಟು ಆಳವಾಗಿ ಅಭ್ಯಸಿಸಿ ಅವರಿಗೆ ನ್ಯಾಯವಾಗಿ ಸಲ್ಲತಕ್ಕ ಗೌರವ ನೀಡಬೇಕು. ಅಂತಹ ಸಾಧನೆಗೆ ಈ ಶ್ರೇಷ್ಠ ಕೃತಿಯೂ ಸಾಧನವಾಗಲಿ ಎಂದು ಹೃತ್ಪೂರ್ವಕ ಹಾರೈಸುತ್ತೇನೆ.

-ಕಯ್ಯಾರ ಕಿಞ್ಞಣ್ಣ ರೈ (‘ಚಿಪ್ಪಿನೊಳಗಿನ ಜೀವ’ಕ್ಕೆ ಬರೆದ ಮುನ್ನುಡಿಯಿಂದ), ಪ್ರಕಟಣೆ: 1998.

 

ಸಾಮಾಜಿಕ, ರಾಜಕೀಯ ಒಳಹೊರಗುಗಳನ್ನು ‘ಕ್ಷಕಿರಣ’ದ ಮೂಲಕ ಗುರುತಿಸಿದ ಬರಹಗಾರ ಗಣಪತಿ ದಿವಾಣರು

# ಈ ಶತಮಾನದ ಮಧ್ಯಕಾಲದಲ್ಲಿ ಜಿಲ್ಲೆಯಲ್ಲಿ ಖ್ಯಾತಿವೆತ್ತ ಮಂಗಳೂರಿನ ‘ಸಂಗಾತಿ’ ವಾರಪತ್ರಿಕೆಯಲ್ಲಿ ದರ್ಪಣಾಚಾರ್ಯರಾಗಿ, ಸಾಮಾಜಿಕ, ರಾಜಕೀಯ ಒಳ ಹೊರಗುಗಳನ್ನು ‘ಕ್ಷಕಿರಣ’ದ ಮೂಲಕ ಗುರುತಿಸಿದ ಬರಹಗಾರ ಶ್ರೀ ಗಣಪತಿ ದಿವಾಣರದು ಐದು ದಶಕಗಳ ಸಾಹಿತ್ಯ ಸೇವೆ !

ಅವರ ಅರ್ಧ ಶತಕದ ವಾಗ್ಮಯ ಸೇವೆ ವಿವಿಧ ವಿಚಾರಗಳ ಕುರಿತಾಗಿ ವಿಪುಲವಾಗಿ ಬೆಳೆದು ಬಂದಿದೆ. ಅವರ ‘ದಿವಾಣ ದರ್ಪಣ’, ‘ಅನ್ನಕ್ಕಾಗಿ’ ಮುಂತಾದ ಕೃತಿಗಳು ಬೆಳಕು ಕಂಡಿವೆ.

‘ಹೋಳಿಗೆ ಜೋಳಿಗೆ’, ವಿಡಂಬನಾತ್ಮಕ ಕೃತಿಯ ಮೂಲಕ ಸಮಾಜದ ವಿವಿಧ ಸ್ತರಗಳ ಜನರ ಜೀವನ ಕ್ರಮ ವಾಸ್ತವ ಸಮಸ್ಯೆಗಳನ್ನು ಅವರು ಕಂಡುಂಡು ಹಾಸ್ಯ ರಸಾಯನವನ್ನು ಇತರರಿಗೂ ಉಣಿಸಿದ್ದಾರೆ. ನಾಜೂಕಾದ ವಿಡಂಬನೆ, ನಿಶಿತ ಶೈಲಿ, ಹಾಸ್ಯದ ಹೊನಲಲ್ಲಿ ಸಿಗುವ ಅವರ ಬರಹ ಅಪ್ಯಾಯಮಾನವಾಗಿದೆ. ಸಮಾಜದ ನೈಜ ಚಿತ್ರಗಳೊಂದಿಗೆ ಲೋಪ ದೋಷಗಳ ವಿಡಂಬನೆ ಗಮನ ಸೆಳೆಯುತ್ತದೆ.

‘ಮೈರಾವಣ ಮಂಜಪ್ಪಣ್ಣ’, ‘ತಂಟೆಮನೆ ಪೇಂಟಪ್ಪಣ್ಣ’, ‘ಅತಿರಸದಜ್ಜ’ ಮೊದಲಾದ ಮಂದಿ ನಮ್ಮ-ನಿಮ್ಮೂರುಗಳಲ್ಲಿ ಕಾಣಸಿಗುವಂಥವರು ! ಖಗಮೃಗಗಳ ಮಹಾಸಭೆ ಮನುಕುಲದ ಕಲಂಕವನ್ನು ಸಾರಿದೆ. ಇವರ ‘ಹೋಳಿಗೆ ಜೋಳಿಗೆ’ಯಲ್ಲಿ ಅತಿರಸ, ನವರಸಗಳ ಕಜ್ಜಾಯಗಳೊಂದಿಗೆ, ಗುಡ್ಕಾಯನ, ವೀರಪ್ಪನ್ ಅಂತವರನ್ನೂ ಜೋಡಿಸಿಕೊಮಡಿರುವದೊಂದು ವಿಸೇಷ ಸುದ್ದಿ !

ನೀರ್ಪಾಜೆ ಭೀಮ ಭಟ್ (‘ಹೋಳಿಗೆ ಜೋಳಿಗೆ’ಯ ಬೆನ್ನುಡಿಯಿಂದ). ಪ್ರಕಟಣೆ: 1997, ಪ್ರಕಾಶನ: ದಿವಾಣ ಪ್ರಕಾಶನ, ಕಟೀಲು.

ಗಣಪತಿ ದಿವಾಣರ ಎರಡು ಹನಿ ಕವನಗಳು

ಸಾಯಲಾರೆನು !

ನಾನಿರುವೆನಿಲ್ಲಿ

ಕಾಸರಗೋಡಿನಲ್ಲಿ

ಬೆರಳು ತೋರಿಸೆ

ಹಸ್ತ ನುಂಗುವವರಲ್ಲಿ

ಸಾಯಲಾರೆನು ಸತ್ಯ

ಲೋಕ ತಿಳಿದಿರಲಿ

ತಾಯಿ ಚರಣದ ಧೂಳಿ

ತಲೆಯ ಮೇಲಿರಲಿ.

ಗಿಳಿ ಪುಟ್ಟ ಕೂಗುವುದು ಕೇಳಿ ನೋಡು

ಕನ್ನಡದ ಶ್ರೀ ಪಾದ

ವಾದ ಕಾಸರಗೋಡು

ಶುದ್ಧ ಕನ್ನಡ ಭಾಷೆ

ಯುಲಿವ ನಡು

ಕುಕ್ಕುತಿಹ ಕಾಗೆಗಳ

ಆಕ್ರಮಣ ಪ್ರತಿಭಟಿಸಿ

ಗಿಳಿ ಪುಟ್ಟ ಕೂಗುವುದು

ಕೇಳಿ ನೋಡು

ಗಣಪತಿ ದಿವಾಣರ ಎರಡು ಒಗಟುಗಳು

 1. ದಿಕ್ಕೆರಡಾತಿಟ್ಟು

ಇಕ್ಕು ಪೀಠಿಕೆ ಪಟ್ಟು

ಬಕ್ಕು ಹತ್ತವತಾರ ಜಾನಪದ ಕಟ್ಟು

ರಕ್ಕಸರ ಹೆಸರಿಟ್ಟು

ಅಕ್ಕ ಮಕ್ಕಳ ಸುಟ್ಟು

ಅಕ್ಕರೆಯ ತಂಗಿ ಮಕ್ಕಳ ಕಾವ ಗುಟ್ಟು

 1. ಮೇಲೆ ಕೆಂಪೆಲೆ ಕೇಳು

ಕೆಳಗೆ ಹಸುರಿಳೆ ತಾಳು

ಬೆಳ್ಳಿಯಲೆಗಳ ನಡುವೆ ನೀಲಸುಳಿಗುರುಳು

ಥಳಥಳಿಸಿ ಬಾನಿನೊಳು

ನಲಿವುತಿರೆ ನಮನಗಳು

ತಿಳಿಯಿರಿದು ನಮ್ಮ ಬದುಕಿನ ಭವ್ಯ ತಿರುಳು

#  ಗಣಪತಿ ದಿವಾಣರ ಕೃತಿಗಳು

ಪ್ರಕಟಿತ

 • ಅನ್ನಕ್ಕಾಗಿ (ನೀಳ್ಗತೆ)
 • ಬೆನ್ಪುನ ನರಮಾನಿ (ತುಳು ಪದ್ಯಾವಳಿ)
 • ಮೀಸೆ ಇತ್ತಿ ಆಣುಗುಳು (ತುಳು ಪದ್ಯಾವಳಿ)
 • ಕಲ್ಲು ಸಕ್ಕರೆ (ಪದ್ಯ ರೂಪದ ಒಗಟುಗಳು)
 • ದಿವಾಣ ದರ್ಪಣ (ಹನಿ ಕವನಗಳು, ಚುಟುಕುಗಳು ಮತ್ತು ಕವನಗಳು)
 • ಅಣ್ಣ ಕಳ್ಳಿಗೆ (ಕಳ್ಳಿಗೆ ಮಹಾಬಲ ಭಂಡಾರಿಯವರ ಬಗ್ಗೆ ಸ್ವಾನುಭವಗಳು)
 • ಕನ್ನಾಟಿ (ಹವೀಕ ಭಾಷಾ ಕವನಗಳು)
 • ಮಲ್ಲಿಕಾರ್ಜುನ ವೈಭವ (ಭಕ್ತಿಗೀತೆಗಳ ಧ್ವನಿ ಸುರುಳಿ)
 • ಶ್ರೀಕೃಷ್ಣ ವೈಭವ (ಉಡುಪಿ ಶ್ರೀಕೃಷ್ಣ ಮತ್ತು ಮುಜುಂಗಾವು ಪಾರ್ಥಸಾರಥಿ ದೇವರ ಭಕ್ತಿಗೀತೆಗಳ ಧ್ವನಿಸುರುಳಿ)
 • ಕೊಂಭು ವಾದ್ಯೊ (ತುಳು ಕವನಗಳು)
 • ಅಕ್ಷರ ಕಜ್ಜಾಯ (ಮಕ್ಕಳಿಗಾಗಿ 19 ಅಕ್ಷರಗಳಿಗೆ 19 ಕವನಗಳು)
 • ಅಮೃತ (26 ದೇವರ ಭಜನೆಗಳು)
 • ಹೋಳಿಗೆ ಜೋಳಿಗೆ (29 ನಗೆ ಬರಹಗಳು)
 • ಚಿಪ್ಪಿನೊಳಗಿನ ಜೀವ (340 ಒಗಟುಗಳು)
 • ಮಗಳಿಗೆ ಪತ್ರ (ಅಂಕಣ ಬರಹಗಳು)

ಅಪ್ರಕಟಿತ

 • ತೊಡಿಕಾನ ದೇವರೆ (ಭಜನೆಗಳು)
 • ಮಾಳೊಡ್ದ್ ಮಂಟಪೊಗು (ತುಳು ಕತೆಗಳು)
 • ಕಲ್ಲು ಸಕ್ಕರೆ ಭಾಗ-2 (ಪದ್ಯ ರೂಪದ ಒಗಟುಗಳು)
 • ಖಾರದ ಸಾರ (ಅಂಕಣ ಬರಹಗಳು)
 • ಸತ್ಯದ ಸಾಕ್ಷಾತ್ಕಾರ (ಅರ್ಥ ಸಹಿತ ಯಕ್ಷಗಾನ ಪ್ರಸಂಗ)
 • ಉಪ್ಪಿಕಾಯಿ (ವಿಡಂಬನಾ ಬರಹಗಳು)
 • ಮಣಿಸರ (ಮಕ್ಕಳಿಗಾಗಿ ಕವನಗಳು)
 • ಪುಟ್ಟನ ಪುರಾಣ (ಮಕ್ಕಳಿಗಾಗಿ ಕತೆಗಳು)
 • ಬಿಚ್ಚಿ – ಮೆಚ್ಚಿ (ಹನಿ ಕವನಗಳು)
 • ಹೈವ – ಭವ (ಹವೀಕ ಭಾಷಾ ಪ್ರಬಂಧಗಳು)

 (ಜನವರಿ 19, ಗಣಪತಿ ದಿವಾಣರ 19ನೇ ಪುಣ್ಯ ದಿನ, ತನ್ನಿಮಿತ್ತ ಈ ಅಕ್ಷರ ಸ್ಮರಣೆ)

One Comment

 1. durgaprasad.diwana@gmail.com'

  Durgaprasad Diwana

  June 16, 2017 at 3:46 pm

  Ajjana bagegina nudinamanagalu uttamavagi moodi bandide… Noorondu namanagalu.

Leave a Reply

Your email address will not be published. Required fields are marked *