Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

ಉಡುಪಿ ಭ್ರಷ್ಟಾಚಾರ ನಿಗ್ರಹ ದಳ: ಊಟಕ್ಕಿಲ್ಲದ ಉಪ್ಪಿನಕಾಯಿ !

ಉಡುಪಿ: ಉಡುಪಿ ಕಾಡಬೆಟ್ಟುವಿನ ಬಾಡಿಗೆ ಕಟ್ಟಡದಲ್ಲಿ ಕಾರ್ಯವೆಸಗುತ್ತಿರುವ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ. ಇಲ್ಲಿನ ಎಸಿಬಿ ಸಂಪೂರ್ಣ ಸ್ಥಗಿತ ಸ್ಥಿತಿಯಲ್ಲಿದ್ದು, ಅಧಿಕಾರಿಗಳಿಂದ ಯಾರಿಗೂ ಯಾವುದೇ ರೀತಿಯ ಪ್ರಯೋಜನವಿಲ್ಲದಂತಾಗಿದೆ.

ಉಡುಪಿಯಲ್ಲಿ ಎಸಿಬಿ ಅಸ್ತಿತ್ವಕ್ಕೆ ಬಂದ ಬಳಿಕ ಇದರ ಅಧಿಕಾರಿಗಳು ಒಮದೇ ಒಂದು ದಾಳಿ ಕಾರ್ಯಾಚರಣೆ ನಡೆಸಿದ್ದಾಗಲೀ, ಒಬ್ಬರೇ ಒಬ್ಬರನ್ನು ಬಂಧಿಸಿದ್ದಾಗಲೀ ಇಲ್ಲ. ಭ್ರಷ್ಟಾಚಾರ ಪ್ರಕರಣಗಳ ವಿರುದ್ಧ ಮತ್ತು ಭ್ರಷ್ಟರ ವಿರುದ್ಧ  ಯಾವುದೇ ರೀತಿಯ ಕಾರ್ಯಾಚರಣೆ ನಡೆಸುವ ಕನಿಷ್ಟ ಆಸಕ್ತಿಯೂ ಇಲ್ಲದ ಅಧಿಕಾರಿಗಳು ಉಡುಪಿ ಎಸಿಬಿಯಲ್ಲಿರುವ ಕಾರಣಕ್ಕೆ ಇಲ್ಲಿನ ಎಸಿಬಿ ಸಾರ್ವಜನಿಕರ ಪಾಲಿಗೆ ಇದ್ದೂ ಇಲ್ಲದಂತಾಗಿದೆ.

ಡಿವೈಎಸ್ಪಿ, ಇನ್ಸ್ ಪೆಕ್ಟರ್ ಗಳಂಥ ಉನ್ನತ ಅಧಿಕಾರಿಗಳ ನೇರ ಉಸ್ತುವಾರಿಯಲ್ಲಿರುವ ಭ್ರಷ್ಟಾಚಾರ ನಿಗ್ರಹ ದಳ ಆಗಾಗ ಕಾರ್ಕಳ, ಕುಂದಾಪುರ ಪ್ರವಾಸೀ ಬಂಗಲೆಯಲ್ಲಿ ಉಳಿದುಕೊಂಡು ಅಹವಾಲು ಸ್ವೀಕಾರ ಎಂಬ ಪ್ರಹಸನ ನಡೆಸುತ್ತಾ, ನಾಗರೀಕರ ಮತ್ತು ಸರಕಾರದ ಕಣ್ಣಿಗೆ ಮಣ್ಣೆರಚುವ ಕೆಲಸವನ್ನಷ್ಟೇ ಮಾಡುತ್ತಿದೆ ಬಿಟ್ಟರೆ ಉಳಿದಂತೆ ಇದುವರೆಗೂ ಮಾಡಿದ್ದೇನೂ ಇಲ್ಲ.

ಕೆಲವರ ದೂರುಗಳನ್ನು ದಾಖಲಿಸಿಕೊಂಡಿದ್ದಾರಾದರೂ, ತನಿಖಾ ಪ್ರಕ್ರಿಯೆನ್ನು ನಡೆಸದೆ ನಿರ್ಲಕ್ಷಿಸಿದ್ದಾರೆ. ಇನ್ನು ಕೆಲವರ ದೂರುಗಳನ್ನು ಕಾನೂನು ಪ್ರಕಾರ ದಾಖಲಿಸುವ ಕೆಲಸವನ್ನೂ ಮಾಡದೆ ಕರ್ತವ್ಯಲೋಪ ಎಸಗಿರುವುದು ಮತ್ತು ದೂರುದಾರರನ್ನು ವಂಚಿಸಿರುವುದು ಗಮನಕ್ಕೆ ಬಂದಿದೆ.

ದಾಖಲಿಸದ ದೂರು !

2016ರ ನವೆಂಬರ್ 23ರಂದು ಉಡುಪಿಯ ಮಾಹಿತಿ ಹಕ್ಕು ಕಾರ್ಯಕರ್ತರೊಬ್ಬರು ಉಡುಪಿ ಕಂದಾಯ ಇಲಾಖೆಯ ಅಧಿಕಾರಿಗಳು ಭಾರೀ ಭೂಹಗರಣ ನಡೆಸಿರುವ ಬಗ್ಗೆ ಎಸಿಬಿ ಗೆ ಸಾಕ್ಷ್ಯಾಧಾರಗಳ ಸಹಿತ ದೂರು ನೀಡಿದ್ದಾರೆ. ಆದರೆ, ಈ ದೂರನ್ನು ಇದುವರೆಗೂ ಎಸಿಬಿ ಅಧಿಕಾರಿಗಳ ದಾಖಲಿಸಿಕೊಂಡಿಲ್ಲ.

ದೂರು ನೀಡಿದ ಬಳಿಕ ಕಳೆದ ಎರಡು ತಿಂಗಳ ಅವಧಿಯಲ್ಲಿ ದುರುದಾರರು ಮೂರು ಬಾರಿ ಎಸಿಬಿ ಗೆ ಭೇಟಿ ನೀಡಿ ಅಧಿಕಾರಿಯನ್ನು ಖುದ್ದು ಕಂಡು ನೀಡಲಾದ ದೂರಿನ ಸ್ಥಿತಿ ಗತಿ ಬಗ್ಗೆ ವಿಚಾರಿಸಿದ್ದಾರೆ, ಹಲವು ಬಾರಿ ಮೊಬೈಲ್ ಮೂಲಕವೂ ದೂರಿನ ಪ್ರಗತಿ ಬಗ್ಗೆ ಮಾಹಿತಿ ಕೇಳಿದ್ದಾರೆ. ಆದರೆ ಈತನಕವೂ ದೂರನ್ನು ದಾಖಲಿಸಿಕೊಳ್ಳುವ ಕನಿಷ್ಟ ಕರ್ತವ್ಯವನ್ನೂ ಎಸಿಬಿ ಮಾಡದೆ ಅಧಿಕಾರಿ ಗಂಭೀರ ಪ್ರಮಾದ ಎಸಗಿದ್ದಾರೆ.

ದೂರು ದಾಖಲಿಸಿದರೂ, ತನಿಖೆ ಆರಂಭಿಸದ ಪ್ರಕರಣ !

2016ರ ಡಿಸೆಂಬರ್  12ರಂದು ಉಡುಪಿ ಗುಂಡಿಬೈಲು ನಿವಾಸಿ ಮಾಹಿತಿ ಹಕ್ಕು ಹೋರಾಟಗಾರರಾದ ಜಿ.ಶ್ರೀಪತಿ ರಾವ್ ಎಂಬವರು, ಈ ಹಿಂದೆ ಉಡುಪಿ ನಗರಸಭೆಯ ಪೌರಾಯುಕ್ತರಾಗಿದ್ದು, ಪ್ರಸ್ತುತ ಮಂಗಳೂರು ಮಹಾನಗರಪಾಲಿಕೆಯ ಉಪ ಆಯುಕ್ತರಾಗಿರುವ ಗೋಕುಲದಾಸ ನಾಯಕ್, ಉಡುಪಿ ನಗರಸಭೆಯ ಹಾಲಿ ಪೌರಾಯುಕ್ತರಾದ ಡಿ.ಮಂಜುನಾಥಯ್ಯ, ವಿಷಯ ನಿರ್ವಾಹಕರಾದ ಕೆ.ಸದಾನಂದ ಶೆಟ್ಟಿ, ಕಂದಾಯ ನಿರೀಕ್ಷಕರಾದ ಚಂದ್ರ ಪೂಜಾರಿ ಹಾಗೂ ಎಚ್.ಬೆಳ್ಳ ನಾಯ್ಕ ಎಂಬವರ ವಿರುದ್ಧ ಸಾಕ್ಷ್ಯಾಧಾರ ಸಹಿತ ಎಸಿಬಿಗೆ ದೂರು ನೀಡಿದ್ದಾರೆ. ದೂರನ್ನು ದಾಖಲಿಸಿಕೊಂಡಿರುವ (ನಂ.24/ಪಿಟಿಎನ್/ಎಸಿಬಿ/ಯುಡಿ/2016) ಅಧಿಕಾರಿಗಳು ಇದುವರೆಗೂ ಈ ಸಂಬಂಧ ತನಿಖೆಯನ್ನೇ ಆರಂಭಿಸಿಲ್ಲ.

ಒಂದೆಡೆ ಕೊಟ್ಟ ದೂರುಗಳನ್ನು ದಾಖಲಿಸಿಕೊಳ್ಳದೆ ಕರ್ತವ್ಯಲೋಪ ಎಸಗುತ್ತಿರುವ ಎಸಿಬಿ ಅಧಿಕಾರಿಗಳು, ಇನ್ನೊಂದೆಡೆ ದಾಖಲಿಸಿಕೊಂಡ ಪ್ರಕರಣಗಳಿಗೆ ಸಂಬಂಧಿಸಿ ಪ್ರಾಥಮಿಕ ತನಿಖೆಯನ್ನೇ ಆರಂಭಿಸದೆ ಕಡೆಗಣಿಸುತ್ತಿರುವುದು ನಡೆಯುತ್ತಿದ್ದು, ಇವುಗಳೆಲ್ಲ ಉಡುಪಿ ಎಸಿಬಿ ಅಧಿಕಾರಿಗಳ ಮೇಲೆ ಗಂಭೀರ ಅನುಮಾನಗಳಿಗೆ ಕಾರಣವಾಗಿದೆ.

ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರಕ್ಕೆ ಭ್ರಷ್ಟಾಚಾರವನ್ನು ನಿಗ್ರಹಿಸುವ ಕನಿಷ್ಟ ಆಸಕ್ತಿಯಾಗಲೀ, ಕಾಳಜಿಯಾಗಲೀ ಇಲ್ಲ. ಅತ್ಯುತ್ತಮವಾಗಿ ಕಾರ್ಯವೆಸಗುತ್ತಿದ್ದ ಲೋಕಾಯುಕ್ತವನ್ನು ಉದ್ಧೇಶಪೂರ್ವಕವಾಗಿ ದುರ್ಬಲಗೊಳಿಸಿರುವ ಸರಕಾರ, ಕಾಟಾಚಾರಕ್ಕೆಂಬಂತೆ ಎಸಿಬಿಯನ್ನು ಅಸ್ತಿತ್ವಕ್ಕೆ ತಂದಿದೆಯಾದರೂ, ಇದಕ್ಕೆ ಭ್ರಷ್ಟಾಚಾರ ನಿಗ್ರಹದಲ್ಲಿ ಪ್ರಾಮಾಣಿಕತೆ ಮತ್ತು ದಕ್ಷತೆಯೇ ಇಲ್ಲದ ಅಧಿಕಾರಿ ವರ್ಗವನ್ನು ನೇಮಿಸುವ ಮೂಲಕ ಸ್ವತಹಾ ತಮ್ಮ ಭ್ರಷ್ಟಾಚಾರ ಪ್ರಕರಣಗಳನ್ನು ಮುಚ್ಚಿ ಹಾಕುವ ಮತ್ತು ಇತರ ಭ್ರಷ್ಟರನ್ನು ರಕ್ಷಿಸುವ ತನ್ನ ಕೆಲಸದಲ್ಲಿ ಯಶಸ್ವಿಯಾಗಿದೆ.

 

Leave a Reply

Your email address will not be published. Required fields are marked *