Realtime blog statisticsweb statistics
udupibits.in
Breaking News
ಮೂಡುಬೆಳ್ಳೆ: ನೆಲ್ಲಿಕಟ್ಟೆ ತಬೈಲ್ ನಿವಾಸಿ ಶಂಕರ ಶೆಟ್ಟಿ ನಿಧನ

ಅಂಬಲಪಾಡಿ ಸಾರ್ವಜನಿಕ ದೇವಸ್ಥಾನ ಬಲ್ಲಾಳ ಕುಟುಂಬಕ್ಕೆ ಹಸ್ತಾಂತರ ಸರಿಯಲ್ಲ

# ಉಡುಪಿ ತಾಲೂಕು ಅಂಬಲಪಾಡಿಯಲ್ಲಿರುವ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನವು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿನಿಯಮದಂತೆ ಅಧಿಸೂಚಿತ ಪಟ್ಟಿಯಲ್ಲಿರುವ ದೇವಸ್ಥಾನವಾಗಿದ್ದು, ಇದೀಗ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ನೀ.ಬೀ.ವಿಜಯ ಬಲ್ಲಾಳರು ದೇವಸ್ಥಾನವನ್ನು ಅಧಿಸೂಚಿತ ಪಟ್ಟಿಯಿಂದ ಕೈಬಿಡುವ ಮೂಲಕ ತನ್ನ ಖಾಸಗೀ ವಶಕ್ಕೆ ಒಪ್ಪಿಸಬೇಕು ಎಂದು ಸರಕಾರವನ್ನು ಕೋರಿಕೊಂಡಿದ್ದಾರೆ.

ಈ ಸಂಬಂಧ, ನೀ.ಬೀ.ವಿಜಯ ಬಲ್ಲಾಳರು ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತಿನಲ್ಲಿ ಪ್ರಕರಣ ದಾಖಲಿಸಿದ್ದು, ರಾಜ್ಯ ಧಾರ್ಮಿಕ ಪರಿಷತ್ತು ಅಂಬಲಪಾಡಿ ದೇವಸ್ಥಾನವನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧಾರ್ಮಾದಾಯ ದತ್ತಿಗಳ ಅಧಿಸೂಚಿತ ಪಟ್ಟಿಯಿಂದ ಕೈಬಿಡುವ ಬಗ್ಗೆ ಸಾರ್ವಜನಿಕರಿಂದ ಹಾಗೂ ಭಕ್ತಾಧಿಗಳಿಂದ ಯಾವುದೇ ರೀತಿಯ ಆಕ್ಷೇಪಣೆಗಳು, ಸಲಹೆ, ಸೂಚನೆಗಳು ಇದ್ದಲ್ಲಿ ಮಾರ್ಚ್ 28ರ ಒಳಗೆ ಸಲ್ಲಿಸುವಂತೆ ಉಡುಪಿ ಮಣಿಪಾಲದ ರಜತಾದ್ರಿಯಲ್ಲಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಜಿಲ್ಲಾಧಿಕಾರಿಗಳು ದಿನ ಪತ್ರಿಕೆಗಳಲ್ಲಿ ಪ್ರಕಟಣೆ (ಡಿಸಿ ಯುಡಿಪಿ-19011(12)/110/2016ಇ-10956, ದಿನಾಂಕ: 18.01.2017) ನೀಡುವ ಮೂಲಕ ತಿಳಿಸಿದ್ದಾರೆ.

ವಾರ್ಷಿಕ 5 ಕೋಟಿ ರೂಪಾಯಿಗಳಿಗೂ ಅಧಿಕ ಆದಾಯವಿರುವ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಅಧಿಸೂಚಿತ ಪಟ್ಟಿಯಲ್ಲಿರುವ ಸಾರ್ವಜನಿಕರಿಗೆ ಸೇರಿದ ಅಂಬಲಪಾಡಿ ದೇವಸ್ಥಾನವನ್ನು ಒಬ್ಬ ವ್ಯಕ್ತಿಯ ಖಾಸಗೀ ಒಡೆತನಕ್ಕೆ ಒಪ್ಪಿಸಿ ಅವರಿಗೆ ಲಾಭ ಮಾಡಿಕೊಡುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ. ಸಾರ್ವಜನಿಕ ದೇವಸ್ಥಾನವನ್ನು ತನ್ನ ಖಾಸಗೀ ಒಡೆತನಕ್ಕೆ ಒಪ್ಪಿಸಬೇಕು ಎಂದು ಕೇಳುವುದು ಸಹ ಸಮರ್ಥನೀಯವಲ್ಲ. ಈ ಪ್ರಕ್ರಿಯೆಯೇ ಖಂಡನೀಯ. ಭಕ್ತಾಧಿಗಳು ಈ ಅಸಮರ್ಥನೀಯ ಪ್ರಕ್ರಿಯೆಗೆ ಖಡಾಖಂಡಿತ ವಿರೋಧ ವ್ಯಕ್ತಪಡಿಸಿ ಈಗಾಗಲೇ ಸಹಿ ಸಂಗ್ರಹ ಚಳುವಳಿಯನ್ನು ಆರಂಭಿಸಿದ್ದು, ಇದು ಸ್ವಾಗತಾರ್ಹವಾಗಿದೆ.

‘ಅಮ್ಮನಪಾಡಿ’ಯೇ ಕಾಲಕ್ರಮೇಣ ಅಂಬಲಪಾಡಿಯಾಗಿದೆ. ‘ಅಮ್ಮ’ ಎಂದರೆ ಶ್ರೀ ಮಹಾಕಾಳಿ, ‘ಪಾಡಿ’ ಎಂದರೆ ಹಳೆಗನ್ನಡದಲ್ಲಿ ‘ಊರು’ ಎಂದರ್ಥ. ಶ್ರೀ ಮಹಾಕಾಳಿ ದೇವಿಯ ಊರು ಅಂಬಲಪಾಡಿಯಾಗಿದ್ದು, ಈ ಅಂಬಲಪಾಡಿಯಲ್ಲಿರುವ ಊರಿನ ಜನರ ದೇವಸ್ಥಾನವಾಗಿದೆ. ಮಾತ್ರವಲ್ಲ, ಖ್ಯಾತ ಇತಿಹಾಸಜ್ಞರಾದ ಪ್ರೊ.ಪಾದೂರು ಗುರುರಾಜ ಭಟ್ ಅವರು 1967ರಲ್ಲಿ ಬರೆದ ‘ಅಂಬಲಪಾಡಿಯ ಇತಿಹಾಸ’ ಎಂಬ ಶಾಸನಾಧಾರಗಳ ಪರಿಚಯ ಗ್ರಂಥದಲ್ಲಿ, ಶ್ರೀ ಜನಾರ್ದನ ಸ್ವಾಮಿಯ ದೇವಳವು ನಿಡಂಬೂರು ಮಾಗಣೆಯ ದೇವಳವಾಗಿದ್ದು, ಇದಕ್ಕೆ ಸಂಬಂಧಿಸಿದ ಸುಮಾರು 6 ದೇವಾಲಯಗಳಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಇಂಥ ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನವು ಬಲ್ಲಾಳ ಕುಟುಂಬದ ಸೊತ್ತಾಗಿದ್ದಿರಲು ಎಂದಿಗೂ ಸಾಧ್ಯವೇ ಇಲ್ಲ ಎನ್ನುವುದನ್ನು ಯಾರು ಬೇಕಾದರೂ ಅರ್ಥಮಾಡಿಕೊಳ್ಳಬಹುದು.

ಅಂಬಲಪಾಡಿಯಲ್ಲಿ ಶ್ರೀ ಮಹಾಕಾಳಿ ದೇವಿಯ ಶಕ್ತಿಯ ಆರಾಧನೆಯು ಯಾವಾಗ ಆರಂಭವಾಯಿತೆಂದು ಹೇಳುವುದು ಕಷ್ಟ. ಕಾಳಿಯ ವಿಗ್ರಹವು ಮರದಿಂದ ನಿರ್ಮಿತವಾದುದು ಎಂಬುದೇ ಇದು ಬಹಳ ಪುರಾತನವಾದುದು ಮತ್ತು ಪ್ರಾಚೀನವಾದುದು ಎಂಬುದಕ್ಕೆ ಸಾಕ್ಷಿಯಾಗಿದೆ.

ನೀ.ಬೀ.ವಿಜಯ ಬಲ್ಲಾಳರ ತಂದೆಯವರಾದ ನೀ.ಬೀ.ಅಣ್ಣಾಜಿ ಬಲ್ಲಾಳರೇ ಹೇಳುವ ಪ್ರಕಾರ, ಇವರ ಕುಟುಂಬಸ್ಥರು ಮೂಲತಹ ಕಂದಾವರದ ‘ಉಡುಪ’ರು. ಅನುಮಾನಕ್ಕೆ ಎಡೆಯೇ ಇಲ್ಲದ ಒಂದು ಸತ್ಯವೆಂದರೆ, ಶ್ರೀ ಜನಾರ್ದನ ದೇವರ ವಿಗ್ರಹವನ್ನು ಅಂಬಲಪಾಡಿಗೆ ತಂದುದು ಕಡೆಕಾರಿನಿಂದ. ‘ಕಡೆಕಾರಿನಲ್ಲಿ ಪ್ರತಿಷ್ಟೆಗೊಂಡಿದ್ದ ಜನಾರ್ದನ ದೇವರ ವಿಗ್ರಹವನ್ನು ಅಂಬಲಪಾಡಿಗೆ ಸಾಗಿಸಿ ತರುವ ಕಾರ್ಯದಲ್ಲಿ ಬಲ್ಲಾಳರಿಗೆ ಕಿದಿಯೂರಿನ ಬಾಯರಿತ್ತಾಯ ಭಟ್ಟರ ಮನೆತನದವರು ನೆರವಾದರು. ಅನಂತರ ದೇವಾಲಯದ ಅರ್ಚಕತನವನ್ನೂ ಆ ಮನೆತನದವರೇ ವಹಿಸಿಕೊಂಡರು. ನಿಷ್ಠಾವಂತ ಅರ್ಚಕರಾಗಿ ಹತ್ತು ಹಲವು ಮುಖಗಳಿಂದ ದೇವಾಲಯದ ಅಭಿವೃದ್ಧಿಗೆ ಕಾರಣಿಭೂತರಾದರು’. ಹಾಗಾಗಿ ಶ್ರೀ ಜನಾರ್ದನ ದೇವರು ಉಡುಪ ಯಾನೆ ಬಲ್ಲಾಳರ ಮನೆ ದೇವರು ಅಲ್ಲವೇ ಅಲ್ಲ ಎನ್ನುವುದು ವಿದಿತವಾಗುತ್ತದೆ.

‘ಶಿಲಾಸಾಸನವೊಂದರ ಪ್ರಕಾರ, ಶ್ರೀ ಶಿವಾಲಯ ಕ್ರಿ.ಶ. 1570ರಲ್ಲಿ ಸಂಪೂರ್ಣ ಶಿಲಾಮಯವಾಗಿ ನಿರ್ಮಾಣವಾಯಿತು. ಶಾಸನ ಆಧಾರದಲ್ಲಿ ನೋಡುವುದಾದರೆ ಇದೊಂದು ಕೆಳದಿ ಅರಸರ ಪ್ರಾರಂಭಿಕ ಕಾಲದ ರಚನೆಯುಳ್ಳ ದೇವಾಲಯ. ಆದರೆ ಇದೊಂದು ವಾಸ್ತವವಾಗಿ ಪ್ರಾಚೀನ ದೇವಾಲಯ. ಅದರ ಮೂಲ ಕುರುಹು ಇರುವುದು ಪೂಜೆಗೊಳ್ಳುತ್ತಿರುವ ಮೂಲ ಅರ್ಚನ ವಿಗ್ರಹದಲ್ಲಿ’. ‘ಶ್ರೀ ಮಹಾಕಾಳಿ ದೇವಿಯ ವಿಗ್ರಹವು ಅತ್ಯಂತ ಪ್ರಾಚೀನವಾದುದು. ಪ್ರಾಯಶಃ ಶ್ರೀ ಜನಾರ್ದನ ವಿಗ್ರಹಕ್ಕಿಂತಲೂ ಪ್ರಾಚೀನವಾದುದು. ನಿಡಂಬೂರು ಮಾಗಣೆಯ ಎಂಟು ಗ್ರಾಮಗಳ ಜನರ ಆರಾಧ್ಯ ದೇವತೆ ಈ ಮಹಾಕಾಳಿ. ಪ್ರಸ್ತುತ ಈ ಮಾಗಣೆಯ ಸುತ್ತಮುತ್ತ ಇರುವ ಸಾಮಾಜಿಕ ಪರಿಸ್ಥಿತಿ ಮತ್ತು ಧಾರ್ಮಿಕ ನಡಾವಳಿಗಳನ್ನು ಗಮನಿಸಿದರೆ ಅಂಬಲಪಾಡಿಯ ದೇವಿಯು ಪ್ರಾಚೀನತೆ ಪ್ರಾಯಶಃ ಕ್ರಿ.ಶ. 5-6ನೆಯ ಶತಮಾನದಷ್ಟು ಹಿಂದಕ್ಕೆ ಹೋಗುತ್ತದೆ. ಇತಿಹಾಸ ಪ್ರಸಿದ್ಧ ಮತ್ತು ಪವಿತ್ರವಾಗಿದ್ದ ಶಿವಳ್ಳಿ ಅಗ್ರಹಾರದ ಸೆರಗಿನಲ್ಲಿದ್ದ ನಿಡಂಬೂರು ಮಾಗಣೆ ಶಿವಳ್ಳಿಯ ಏಳು ಬೀಳುಗಳಿಗೆ ಸ್ಪಂದಿಸಿರುವಂತೆ ಅಂಬಲಪಾಡಿಯ ಪ್ರಾಚೀನ ದೇವಿಯೂ (ಆಕೆಯ ನಿವಾಸವೂ) ಸ್ಪಂದಿಸಿರಬೇಕು. ಜನಸಾಮಾನ್ಯರಿಗೊಲಿದಿರುವ ಈ ದೇವಿ ಅತ್ಯಂತ ಪ್ರಾಚೀನ ಕಾಲದಲ್ಲಿ ಪ್ರಾಯಶಃ ಜನಸಾಮಾನ್ಯರಿಂದಲೇ ಪೂಜೆಗೊಂಡಿರಬೇಕು. ಕಾಲಕ್ರಮೇಣ ವೈದಿಕ ವಿಧಿ ವಿಧಾನಗಳ ಚೌಕಟ್ಟಿಗೆ ಸೇರಿ ಬ್ರಾಹ್ಮಣ ಅರ್ಚಕರಿಂದ ನಿತ್ಯಪೂಜೆ ಸ್ವೀಕರಿಸಿರಬೇಕು. ದೇವಿಯ ಆರಾಧನೆಯಲ್ಲಿ ಕಂಡುಬರುವ ಇಂತಹ ಬದಲಾವಣೆ ಅಪರೂಪದ್ದೇನಲ್ಲ. ಅಂಬಲಪಾಡಿಯ ಶ್ರೀ ದೇವಿಯ ಕೈಂಕರ್ಯದಲ್ಲಾದ ಮಾರ್ಪಾಡು ಕ್ರಿ.ಶ.8-9 ಶತಮಾನದಷ್ಟು ಹಿಂದೆಯೇ ಆಗಿರಬೇಕು. ಏಕೆಂದರೆ ಆ ಸಮಯಕ್ಕೆ ದೇವೀ ಆಲಯದ ಕ್ಷೇತ್ರದಲ್ಲೆ ಆಗಮೋಕ್ತ ದೇವಾಲಯವೊಂದರ ನಿರ್ಮಾಣ ಸಾಗಿತ್ತು ಅಥವಾ ಸಣ್ಣ ರೀತಿಯಲ್ಲಿ ಅಸ್ತಿತ್ವದಲ್ಲಿತ್ತು.  (‘ದಕ್ಷಿಣ ಕನ್ನಡದ ದೇವಾಲಯಗಳು’, ಸಂಪಾದಕರು: ಪ್ರೊ.ಮುರಳೀಧರ ಉಪಾಧ್ಯ ಹಿರಿಯಡಕ, ಡಾ.ಪಿ.ಎನ್.ನರಸಿಂಹಮೂರ್ತಿ). ಈ ಸಣ್ಣ ರೀತಿಯಲ್ಲಿ ಅಸ್ತಿತ್ವದಲ್ಲಿದ್ದ ದೇವಾಲಯವೇ ಶಿವಾಲಯ ಅಥವಾ ಜನಾರ್ದನ ದೇವಾಲಯ.

ಈ ದೇವಾಲಯವನ್ನೇ, ‘ಕ್ರಿ.ಶ.1571ರಲ್ಲಿ ಶ್ರೀಧರ ನಿಡಂಬೂರರು ತಾನು ರಾಮೇಶ್ವರ ಯಾತ್ರೆಯನ್ನು ಮಾಡಿ ಮುಗಿಸಿದ ಸ್ಮರಣಾರ್ಥವಾಗಿ ಪುನರ್ನಿಮಾಣ ಮಾಡಿದರೆಂದು ಅಂಬಲಪಾಡಿಯಲ್ಲಿ ದೊರಕಿದ ಶಾಸನವೊಂದು ತಿಳಿಸುತ್ತದೆ. ಆದರೆ ದೇವಳದ ಯಾವ ಭಾಗವು ಪುನರ್ನಿಮಿತವೆಂಬುದು ಶಾಸನದಿಂದ ವಿಷದವಾಗಿಲ್ಲ. ಪುನರ್ನಿಮಾಣ ಕಾರ್ಯದಲ್ಲಿ ದೇವಳದ ಹಿಂದಿನ ರಚನೆಯಲ್ಲಿ ಸೇರಿದ್ದ ಅನೇಕ ಭಾಗಗಳನ್ನು ಉಪಯೋಗಿಸಿದಂತೆ ಕಂಡುಬರುತ್ತದೆ. ಪ್ರದಾನ ಬಲಿಪೀಠವು ಇದಕ್ಕೆ ಸಾಕ್ಷಿ. ಗರ್ಭಗುಡಿಯ ಕತ್ತಲೆಸುತ್ತಿನ ಒಳಭಾಗದ ಕಲ್ಲಿನಗೋಡೆಯು ಇನ್ನೊಮದು ದೃಷ್ಠಾಂತ (‘ಅಂಬಲಪಾಡಿಯ ಇತಿಹಾಸ’, ಲೇಖಕರು: ಪ್ರೊ.ಪಿ.ಗುರುರಾಜ ಭಟ್).

ಕಿದಿಯೂರು, ಕಡೆಕಾರು, ಕನ್ನರ್ಪಾಡಿ, ಒಡ್ಡಾಡಿ, ಮೂಡನಿಡಂಬೂರು, ಕುತ್ತುಪಾಡಿ (ಕುತ್ಪಾಡಿ), ಕಪ್ಪೆಟ್ಟು, ಮತ್ತು ಅಂಬಲಪಾಡಿ ಎಂಬ ಎಂಟು ಗ್ರಾಮಗಳ ಕೂಟವಾದ ನಿಡಂಬೂರು ಮಾಗಣೆಯನ್ನು ಆಳುತ್ತಿದ್ದ ಬಂಗ ವಂಶದ ಜೈನರಸರ ಕಾಲದಿಂದಲೇ ಇಲ್ಲಿ ಮರಗಳ ಮಧ್ಯೆ ಕಂಗೊಳಿಸುತ್ತಿದ್ದ ಶ್ರೀ ಮಹಾಕಾಳಿ ದೇವಿಯನ್ನು ಊರ ಹಾಗೂ ಪರವೂರ ಭಕ್ತಾಧಿಗಳು ಆರಾಧಿಸಿಕೊಂಡು ಬರುತ್ತಿದ್ದರು. ‘ಈಗಲೂ ಕೂಡಾ ದೇವಸ್ಥಾನದ ವಿಶೇಷ ಸಮಾರಂಭಗಳಲ್ಲಿ ಪ್ರತೀ ಗ್ರಾಮದ ಪ್ರತಿನಿಧಿಗಳಾಗಿ ಸಂಬಂಧಪಟ್ಟ ಮನೆತನದವರು ಬಂದು ಸಹಕರಿಸಿ ಚಂದಗಾಣಿಸಿ ಕೊಡುವ ಸಂಪ್ರದಾಯ ಹಾಗೂ ಆಡಳಿತೆಯ ಅವರನ್ನು ಗೌರವಿಸುವ ಮಾಮೂಲು ಹಿಂದಿನ ಕೂಡುಕಟ್ಟಿನ ಪ್ರತೀಕವಾಗಿ ಉಳಿದುಬಂದಿದೆ’.

‘ಇಡೀ ಮಾಗಣೆಗೆ ಸಾಂಕ್ರಾಮಿಕ ರೋಗ ವ ಇತರ ಗಂಡಾಂತರ ಬಂದಾಗ ಶ್ರೀ ಕಾಳಿಯ ದರ್ಶನದೊಂದಿಗೆ ಅಲ್ಲಲ್ಲಿನ ಗ್ರಾಮದ ದೈವ ದೇವರ ಸೇರುವಿಕೆಯಿಂದ ಮಾಗಣೆ ಮಾರಿಯ ಹೆಸರಿನಿಂದ ಸಂಚರಿಸಿ ಬಂದು ಗಂಡಾಂತರ ಪರಿಹಾರದ ಅಭಯ ನೀಡುವ ಪದ್ದತಿ ಮಾಗಣೆಯ ಕೂಡುಕಟ್ಟನ್ನು ಎತ್ತಿ ತೋರುತ್ತದೆ. ಸಂಬಂಧಪಟ್ಟ ಮನೆತನದ ಮನೆಗಳಿಂದ ವಂಶ ಪಾರಂಪರ್ಯವಾಗಿ ನಡೆದು ಬರುವ ಕೆಲವು ಸೇವೆಗಳಂತೂ ಈ ಒಕ್ಕೂಟಕ್ಕೆ ವಿಶೇಷ ನಿದರ್ಶನವಾಗಿದೆ’.

ಸರ್ವೇ ನಂಬ್ರ 30/2ರ 1.02.00 ಎಕರೆ ಸರಕಾರೀ ಜಮೀನಿನಲ್ಲಿ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನವಿದೆ ಎಂದು ಪಹಣಿ ಪತ್ರಿಕೆ ಸ್ಪಷ್ಟಪಡಿಸುತ್ತದೆಯಾದರೆ, ಈ ದೇವಸ್ಥಾನವು ಒಂದು ಸಾರ್ವಜನಿಕ ದೇವಸ್ಥಾನವೆಂದೂ, ಇದನ್ನು ಬಲ್ಲಾಳ ಕುಟುಂಬಕ್ಕೆ ಹಸ್ಥಾ0ತರಿಸುವುದು ಸಾಧುವಲ್ಲವೆಂದೂ ಉಡುಪಿಯ ಪ್ರಿನ್ಸಿಪಲ್ ಸೀನಿಯರ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಕೆ.ಎ.ನಾಗಜ್ಯೋತಿಯವರು 2014ರಲ್ಲಿ ತೀರ್ಪು ನೀಡಿರುವುದನ್ನು ಇಲ್ಲಿ ಮತ್ತೊಮ್ಮೆ ನೆನಪಿಸಬಹುದು (ಒ.ಎಸ್.ನಂ.13/2003).

ಈ ಎಲ್ಲಾ ಕಾರಣಕ್ಕೆ, ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನವನ್ನು ಈಗಾಗಲೇ ತನ್ನ ವಯಕ್ತಿಕ ಸ್ವಾರ್ಥ ಸಾಧನೆಗಾಗಿ ದುರುಪಯೋಗಪಡಿಸಿಕೊಳ್ಳುತ್ತಿರುವ ಸ್ಥಾಪಿತ ಹಿತಾಸಕ್ತಿಗಳಿಗೆ ಮತ್ತೆ ದೇವಳದ ಆದಾಯವನ್ನು ಸಂಪೂರ್ಣವಾಗಿ ಕೊಳ್ಳೆ ಹೊಡೆಯಲು ಅನುವಾಗುವಂತೆ ದೇವಸ್ಥಾನವನ್ನು ಒಂದು ಕುಟುಂಬದ ಖಾಸಗೀ ಒಡೆತನಕ್ಕೆ ಒಪ್ಪಿಸುವುದು ಅಕ್ಷಮ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಭಕ್ತಾಧಿಗಳು ಈಗಾಗಲೇ ಸಹಿ ಸಂಗ್ರಹ ಕಾರ್ಯ ಆರಂಭಿಸಿದ್ದು, ಸಾರ್ವಜನಿಕರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ಬಿರುಸು ಪಡೆದುಕೊಂಡಿದೆ.

-ಶ್ರೀಶ ಆಚಾರ್ಯ, ಉಡುಪಿ

 

 

 

 

One Comment

  1. mnacharya@icloud.com'

    M n acharya

    February 7, 2017 at 4:18 pm

    I agree Temple belongs to all

Leave a Reply

Your email address will not be published. Required fields are marked *