Realtime blog statisticsweb statistics
udupibits.in
Breaking News
ಉಡುಪಿ: ಅಂಬಲಪಾಡಿ ಶ್ರೀ ಮಹಾಕಾಳಿ-ಜನಾರ್ದನ ದೇವಸ್ಥಾನ ಸಾರ್ವಜನಿಕರಿಗೆ ಸೇರಿದ್ದು- ಜಿಲ್ಲಾಧಿಕಾರಿಗಳಿಂದ ಧಾರ್ಮಿಕ ದತ್ತಿ ಇಲಾಖಾ ಆಯಕ್ತರಿಗೆ ವರದಿ.

ಎಡ-ಬಲ, ಸಾಹಿತಿ-ಪ್ರಚಾರಪ್ರಿಯತೆ, ಪ್ರಶಸ್ತಿ-ಲಾಬಿ, ಆಡಳಿತ ಪಕ್ಷ-ವಿರೋಧ ಪಕ್ಷ

# ನಮ್ಮಗಳ ರಾಷ್ಟ್ರೀಯ ಚರ್ಚೆ ಹೇಗಿದೆ ಎಂದರೆ, ಒಬ್ಬ ಸಾಹಿತಿ ತಾನು ಎಡಪಂಥೀಯ ಎಂದರೆ ಬಲಪಂಥೀಯರಿಗೆ ಅವನು ವಿರೋಧಿ. ಇದನ್ನು ಸಹಜ ಎನ್ನಬಹುದು. ಆದರೆ ಅವನು ನಂದಿಗ್ರಾಮದ ಕೊಲೆಗಳನ್ನು ಸಮರ್ಥಿಸತಕ್ಕದ್ದು ಎಂದು ಎಡಪಂಥೀಯರೂ ತೀರ್ಮಾನ ತಗೋತಾರೆ. ಆದರೆ ಒಬ್ಬ ಸಾಹಿತಿ ಕೊಲೆಯನ್ನು ಸಮರ್ಥಿಸಲಿಕ್ಕಾಗ್ತದಾ ?

ಒಬ್ಬ ಸಾಹಿತಿ ತಾನು ಬಲಪಂಥೀಯ ಎಂದರೆ ಸಾಕು, ಎಡಪಂಥೀಯರಿಗೆ ಅವನು ಹೇಗೂ ವಿರೋಧಿಯೇ. ಆಮೇಲೆ ಅವನು ಗೋದ್ರಾ ಹತ್ಯೆಗಳನ್ನು ಸಮರ್ಥಿಸತಕ್ಕದ್ದೆಂಬ ತೀರ್ಮಾನವನ್ನು ಬಲಪಂಥೀಯರೇ ತಗೋತಾರೆ.

ಇನ್ನು ಒಬ್ಬ ಸಾಹಿತಿ ಸರಿ ಇಲ್ಲದ್ದನ್ನು ಯಾರೇ ಮಾಡಿದರೂ ತಾನು ಸರಿ ಇಲ್ಲ ಎಂದೇ ಹೇಳುತ್ತೇನೆ ಎಂದರೆ, ಅವನಿಗೆ ನಿಲುವು ಇಲ್ಲ ಎಂದು ಆಯಿತು. ಅವನು ಯಾರಿಗೂ ಬೇಡ. ಒಂದು ಪ್ರೆಸ್ ಸ್ಟೇಟ್ ಮೆಂಟನ್ನು ಕೊಟ್ಟರೆ ಆ ಸಾಹಿತಿಗೆ ಪ್ರಚಾರಪ್ರಿಯತೆ ಎಂದಾಯಿತು.

ಎಲ್ಲ ಸಂಘಟಕರೂ ಪ್ರಶಸ್ತಿ ಪುರಸ್ಕೃತರನ್ನೇ ಕರೆದು ಹೊಗಳುತ್ತಾರೆ. ಆದರೆ ಪ್ರಶಸ್ತಿಯನ್ನು ತಗೊಳೋದೆ ಲಾಬಿ ಮಾಡಿ ಎಂದೇ ಅರ್ಥೈಸುತ್ತಾರೆ. ಪ್ರಶಸ್ತಿ ಪಡೆದುಕೊಂಡವರು ಅಯೋಗ್ಯರು ಎಂಬುದೆ ನಿಜವಾದ ನಿಲುವಾದರೆ ಅಂಥವರನ್ನೇ ಹುಡುಕಿ ಆಹ್ವಾನಿಸುವುದೇಕೆ ? ಪ್ರಶಸ್ತಿ ಅರ್ಹತೆ ಎನ್ನುವುದಾದರೆ ಪ್ರಶಸ್ತಿಯ ಪ್ರಕ್ರಿಯೆಯನ್ನು ಟೀಕಿಸುವುದೇಕೆ ? ಲಾಬಿಯೇ ಮಾಡಿದ್ದಾರೆ ಎಂದು ಭಾವಿಸೋಣ. ಎಲ್ಲರಿಗೂ ಮನೆ ಬೇಕು, ಮದುವೆ ಆಗಬೇಕು ಎಂಬಿತ್ಯಾದಿ ಏನೇನೋ ಆಸೆಗಳಿರುತ್ತವೆ. ಹಾಗೆಯೇ ಸಾಹಿತಿಯಾದವನಿಗೂ ಕೆಲವು ಆಸೆಗಳಿದ್ದರೆ ತಪ್ಪೇನು ? ತಮ್ಮ ತಮ್ಮ ಆಸೆಗಳಿಗಾಗಿ ಅವರವರ ಸಾಮರ್ಥ್ಯದ ಮಟ್ಟದಲ್ಲಿ ಲಾಬಿ ಮಾಡೇ ಮಾಡ್ತಾರೆ. ಭೋಜರಾಜನಿಗೆ “ಶಿವನು ಒಂದು ತಟ್ಟೆಯಲ್ಲಿ ನಿನ್ನ ಕೀರ್ತಿಯನ್ನೂ, ಇನ್ನೊಂದರಲ್ಲಿ ಕೈಲಾಸ ಪರ್ವತ, ನಂದಿ, ಚಂದ್ರ ಎಲ್ಲರನ್ನೂ ಇಟ್ಟರೂ ನಿನ್ನ ಕೀರ್ತಿಯೇ ಅಧಿಕವಾಯಿತು” ಎಂದದ್ದು ಲಾಬಿ ಅಲ್ಲದೆ ಬೇರೇನು.

ರಾಜಕಾರಣಕ್ಕೆ ಬಂದರೆ, ವಿರೋಧ ಪಕ್ಷ ಸರಕಾರದ ಒಂದು ನಿರ್ಧಾರವನ್ನು ಪ್ರಶ್ನಿಸಿದೊಡನೆ, ಆಡಳಿತ ಪಕ್ಷ, ವಿರೋಧ ಪಕ್ಷವು ಸರಕಾರದ ನಿರ್ಧಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ ಎಂದು ಆರೋಪಿಸುತ್ತವೆ. ವಿರೋಧ ಪಕ್ಷ ಎಂದ ಮೇಲೆ ಸರಕಾರದ ಯಾವುದೆ ನಿರ್ಧಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುವುದು ಅವುಗಳ ಹಕ್ಕು. ಅಧಿಕಾರಕ್ಕೆ ಬರಬೇಕೆಂಬ ಆಸೆ ವಿರೋಧ ಪಕ್ಷಕ್ಕೆ ಇರಬಾರದಾ ? ವಿರೋಧ ಪಕ್ಷಕ್ಕೆ ಟೀಕಿಸಲು ಆಗದಂತೆ ನಿರ್ಧಾರ ತೆಗೆದುಕೊಳ್ಳಬೇಕಾದ್ದು ಆಡಳಿತದಲ್ಲಿರುವವರ ಕೆಲಸ ಹೊರತು ಆಕ್ಷೇಪಿಸದೆ ಇರಬೇಕಾದ್ದು ವಿರೋಧ ಪಕ್ಷದ ಕೆಲಸವಲ್ಲ.

ಒಬ್ಬ ಸ್ವಾಮಿ, ಸಂಪ್ರದಾಯನಿಷ್ಠನಾಗಿದ್ದರೆ ಕರ್ಮಠ, ಪ್ರಗತಿ ವಿರೋಧಿ ಎಂದಾಯಿತು. ಒಬ್ಬ ಸ್ವಾಮಿ ಪ್ರಗತಿಪರವಾಗಿ ಆಲೋಚಿಸಿದರೆ, ಅವನು ಪ್ರಗತಿಪರತೆಯ ಸೋಗು ಹಾಕಿ ವಂಚಿಸುತ್ತಿದ್ದಾನೆ ಎಂದಾಯಿತು.

ಹಾಗಿದ್ದರೆ ಒಟ್ಟಿನಲ್ಲಿ ಬದುಕಬೇಕಾದ್ದು ಹೇಗೆ ? ಯಾರಿಗಾದರೂ ಗೊತ್ತಿದ್ದರೆ  ತಿಳಿಸಬೇಕು.

– aravinda chokkadi

Leave a Reply

Your email address will not be published. Required fields are marked *