Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬಹುಕೋಟಿ ಭೂಹಗರಣ: ವಂಚಕರನ್ನು ಸಮರ್ಥಿಸಿ, ಅಧಿಕಾರಿಗಳನ್ನು ರಕ್ಷಿಸಿ ತಹಶೀಲ್ದಾರ್ ಮಹೇಶಚಂದ್ರರಿಂದ ವರದಿ- ವೀಲುನಾಮೆ, ಜಡ್ಜ್ ಮೆಂಟ್ ಸಹಿತ ತಹಶೀಲ್ದಾರ್ ವಿರುದ್ಧ ಎಸಿಗೆ ದೂರು, ಎಸಿಬಿಯಿಂದ ಕೇಸು ದಾಖಲು, ತನಿಖೆ ಆರಂಭ

ಉಡುಪಿ: ಮಹಿಳೆಯೊಬ್ಬರು ಸರಕಾರಕ್ಕೆ ದಾನಮಾಡಿದ ಭೂಮಿಯನ್ನು ಉಡುಪಿ ತಾಲೂಕಿನ ಕಂದಾಯ ಇಲಾಖೆಯ ಅಧಿಕಾರಿಗಳು ಎಂಟು ಮಂದಿ ಖಾಸಗಿ ವ್ಯಕ್ತಿಗಳ ಹೆಸರಿಗೆ ಸಂತತಿ ನಕ್ಷೆ, ಆರ್.ಟಿ.ಸಿ. ಮತ್ತು ಖಾತೆ ಮಾಡಿಸಿಕೊಟ್ಟ ಬಹುಕೋಟಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆಯ ನಾಟಕ ನಡೆಸಿದ ತಹಶೀಲ್ದಾರ್ ಮಹೇಶ್ ಚಂದ್ರ ಅವರು ಅಕ್ರಮವನ್ನು ಸಮರ್ಥಿಸಿ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಶಿಲ್ಪಾ ನಾಗ್ ಐಎಎಸ್ ಅವರಿಗೆ ವರದಿ ಸಲ್ಲಿಸಿದ್ದು, ಇದರ ವಿರುದ್ಧ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಅವರು ಮಹತ್ವದ ಸಾಕ್ಷ್ಯಾಧಾರಗಳ ಸಹಿತ ಸಹಾಯಕ ಕಮಿಷನರ್ ಹಾಗೂ ಉಡುಪಿಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಕ್ಕೆ ದೂರು ನೀಡಿ ತಪ್ಪಿತಸ್ಥ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದ್ದಾರೆ. ಎಸಿಬಿ ಡಿವೈಎಸ್ಪಿ ಅರುಣ್ ಕುಮಾರ್ ಅವರು ದೂರು ದಾಖಲಿಸಿಕೊಂಡಿದ್ದು, ಪರಿಣಾಮಕಾರಿ ತನಿಖೆ ಆರಂಭಿಸಿದ್ದಾರೆ.

acb, udupi

ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ನಿವಾಸಿಯಾಗಿದ್ದ ನಾರಾಯಣಿ ಬಾಯಿ ಯಾನೆ ನಾರಾಯಣಿ ಅಮ್ಮಾಳ್ ಎಂಬವರು ತಮಗೆ ಮಕ್ಕಳಾಗದ ಕಾರಣಕ್ಕೆ ತಮಗೆ ಸೇರಿದ ಸರ್ವೇ ನಂಬ್ರ 89/5, 89/10, 89/11ಎ ಮತ್ತು 89/11ಬಿ ಯಲ್ಲಿ ಬಾಡಿಗೆ ಮನೆಗಳು ಮತ್ತು ಮರಮಟ್ಟುಗಳಿದ್ದ 2.29 ಎಕರೆ ಭೂಮಿಯನ್ನು ಮೈಸೂರು ಸರಕಾರಕ್ಕೆ ಸೇರಿದ ಉಡುಪಿ ಲೋಕಲ್ ಫಂಡ್ ಆಸ್ಪತ್ರೆಗೆ ನಿರ್ಗತಿಕ ಮಹಿಳೆಯರ ಹೆರಿಗೆ ಆಸ್ಪತ್ರೆ ನಿರ್ಮಿಸುವರೇ ದಾನ ಮಾಡಿ ವೀಲುನಾಮೆ ಬರೆದಿರಿಸಿದ್ದರು. 1944ರ ಎಪ್ರಿಲ್ ಒಂದರಂದು ಬರೆದ ಈ ವೀಲುನಾಮೆಯ ಪ್ರತಿಯನ್ನು ಮಾಹಿತಿ ಹಕ್ಕು ಅಧಿನಿಯಮದಂತೆ ಪಡೆದುಕೊಂಡ ಶ್ರೀರಾಮ ದಿವಾಣ ಅವರು ಇದನ್ನು ಇದೀಗ ಸಹಾಯಕ ಕಮಿಷನರ್ ಹಾಗೂ ಎಸಿಬಿಗೆ ಸಲ್ಲಿಸಿದ್ದಾರೆ.

narayani ammal veeluname

ನಾರಾಯಣಿ ಬಾಯಿ ಯಾನೆ ನಾರಾಯಣಿ ಅಮ್ಮಾಳ್ ಅವರು 1965ರ ಜುಲೈ 14ರಂದು ನಿಧನರಾಗಿದ್ದು, ಇವರ ನಿಧನದ ಬಳಿಕ ಇವರ ಗಂಡ ತಾನೆಂದು ಹೇಳಿಕೊಂಡ ಅಚ್ಚುತನ್ ಎಂಬವರು ನಾರಾಯಣಿ ಅಮ್ಮಾಳ್ ಯಾನೆ ನಾರಾಯಣಿ ಬಾಯಿ ಅವರು ಬರೆದಿರಿಸಿದ ವೀಲುನಾಮೆಯನ್ನು ಅಸಿಂಧುಗೊಳಿಸುವಂತೆ ಕೋರಿ 1968ರಲ್ಲಿ ಉಡುಪಿ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಲಯದಲ್ಲಿ ದಾವೆ ದಾಖಲಿಸಿದ್ದರು. ನ್ಯಾಯಾಧೀಶರಾದ ಬಿ.ವಿಶ್ವನಾಥ ರೈ ಅವರು ಪ್ರಕರನದ ವಿಚಾರಣೆ ನಡೆಸಿ, ಸರಕಾರಕ್ಕೆ ದಾನ ಮಾಡಿದ ಭೂಮಿ ನಾರಾಯಣಿ ಅಮ್ಮಾಳ್ ರವರ ಸ್ವರ್ಜಿತವಾಗಿರುವುದರಿಂದ, ಅದನ್ನು ಪ್ರಶ್ನಿಸುವ ಹಕ್ಕು ಅಚ್ಚುತನ್ ರವರಿಗೆ ಇಲ್ಲವೆಂದು ಅಭಿಪ್ರಾಯಪಟ್ಟು ವೀಲುನಾಮೆಯನ್ನು ಅಸಿಂಧುಗೊಳಿಸಲು ನಿರಾಕರಿಸಿ 1976ರ ತೀರ್ಪು ನೀಡಿದ್ದರು. ನಾರಾಯಣಿ ಅಮ್ಮಾಳ್ ಸರಕಾರಕ್ಕೆ ದಾನ ಮಾಡಿದ ಭೂಮಿಯನ್ನು ವಶಪಡಿಸಿಕೊಳ್ಳುವಂತೆ ಅಂದಿನ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಆದೇಶಿಸಿದ್ದರು. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ಸರಕಾರಿ ಅಭಿಯೋಜಕರಾದ ವೈ.ಸಿ.ಎಸ್.ಹೆಗ್ಡೆ ಹಾಗೂ ಅಚ್ಚುತನ್ ಪರವಾಗಿ ಬಿ.ವೈ.ಹೊಳ್ಳ ಅವರು ವಾದಿಸಿದ್ದರು. ನ್ಯಾಯಾಲಯದ ಈ ತೀರ್ಪಿನ ಪ್ರತಿಯನ್ನು ಸಹ ಆರ್. ಟಿ.ಐ ಕಾರ್ಯಕರ್ತರಾದ ಶ್ರೀರಾಮ ದಿವಾಣ ಅವರು ಸಹಾಯಕ ಕಮಿಷನರ್ ಹಾಗೂ ಎಸಿಬಿಗೆ ಸಲ್ಲಿಸಿದ್ದಾರೆ.

ಮೂಡನಿಡಂಬೂರು ಗ್ರಾಮ ಕರಣಿಕ ಪುನೀತ್ ಎಸ್., ಉಡುಪಿ ಹೋಬಳಿ ಕಂದಾಯ ನಿರೀಕ್ಷಕ ಸುಧಾಕರ ಶೆಟ್ಟಿ, ಉಡುಪಿ ತಾಲೂಕು ಉಪ ತಹಶೀಲ್ದಾರ್ ಗೋಪಾಲ ಶೇರಿಗಾರ್ ಹಾಗೂ ತಹಶೀಲ್ದಾರರು ಈ ಅಕ್ರಮ ಬಹುಕೋಟಿ ಭೂ ಹಗರಣದ ತಪ್ಪಿತಸ್ಥರಾಗಿದ್ದಾರೆ ಎಂದು ದೂರಿನಲ್ಲಿ ಸ್ಪಷ್ಟಪಡಿಸಿಲಾಗಿದ್ದು, ಇವರುಗಳ ವಿರುದ್ಧ ಸೂಕ್ತ ಶಿಸ್ತು ಕ್ರಮ ತೆಗೆದುಕೊಳ್ಳಬೇಕು, ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಮತ್ತು ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆಗಾಗಿ ಸರಕಾರಕ್ಕೆ ಶಿಫಾರಸು ಮಾಡಬೇಕು ಎಂದು ಶ್ರೀರಾಮ ದಿವಾಣ ಅವರು ಸಹಾಯಕ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.

shilpanag, ias, ac kundapur

ಹಗರಣಕ್ಕೆ ಸಂಬಂಧಪಟ್ಟಂತೆ ಶ್ರೀರಾಮ ದಿವಾಣ ಅವರು 2016ರ ನವೆಂಬರ್ 4ರಂದು ಜಿಲ್ಲಾಧಿಕಾರಿಗಳಿಗೆ ದೂರು ಸಲ್ಲಿಸಿದ್ದರು. ಈ ಸಂಬಂಧ ಖುದ್ದ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ನ.8ರಂದು ಜಿಲ್ಲಾಧಿಕಾರಿಗಳು ಕುಂದಾಪುರ ಸಹಾಯಕ ಕಮಿಷನರ್ ಅವರಿಗೆ ಸೂಚಿಸಿ ಆದೇಶಿಸಿದ್ದರು. ಸಹಾಯಕ ಕಮಿಷನರ್ ಅವರು ನ.24ರಂದು ಉಡುಪಿ ತಹಶೀಲ್ದಾರರಿಗೆ ಹಗರಣದ ಬಗ್ಗೆ ಖುದ್ದು ತನಿಖೆ ನಡೆಸಿ ಮೂರು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಆದೇಶಿಸಿದ್ದರು. ತಹಶೀಲ್ದಾರ್ ಮಹೇಶ್ ಚಂದ್ರ ಅವರು ಸಹಾಯಕ ಕಮಿಷನರ್ ಅವರ ಆದೇಶವನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ್ದರು. ತಹಶೀಲ್ದಾರ್ ಮಹೇಶ್ ಚಂದ್ರ ಅವರು ಆರೋಪಿಗಳನ್ನು ರಕ್ಷಿಸುವ ಸಲುವಾಗಿ ಪ್ರಕರಣವನ್ನು ಕಡೆಗಣಿಸುತ್ತಿದ್ದಾರೆ ಎಂದು ಆರೋಪಿಸಿ ಮತ್ತೆ ಸಹಾಯಕ ಕಮಿಷನರ್ ಅವರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಸಹಾಯಕ ಕಮಿಷನರ್ ಅವರು ಡಿಸೆಂಬರ್ 15ರಂದು ಪುನರಪಿ ತಹಶೀಲ್ದಾರರಿಗೆ ಪತ್ರ ಬರೆದು ಎರಡು ದಿನಗಳ ಒಳಗೆ ವರದಿ ಸಲ್ಲಿಸುವಂತೆ ಎರಡನೇ ಬಾರಿ ಆದೇಶಿಸಿದ್ದರು.

ಮೂರು ದಿನದ ಬದಲು ಒಂದೂವರೆ ತಿಂಗಳ ಬಳಿಕ, ಸರಕಾರಕ್ಕೆ ಸೇರಿದ ಭೂಮಿಯನ್ನು ಖಾಸಗಿ ವ್ಯಕ್ತಿಗಳ ಹೆಸರಿಗೆ ಆರ್.ಟಿ.ಸಿ ಮತ್ತು ಖಾತೆ ಬದಲಾವಣೆ ಮಾಡಿ ಕೊಟ್ಟ ಕಂದಾಯ ಇಲಾಖೆಯ ಅಧಿಕಾರಿಗಳ ಕ್ರಮವನ್ನು ಸಮರ್ಥಿಸಿ, ಎಲ್ಲವೂ ಸರಿಯಾಗಿಯೇ ನಡೆದಿದೆ ಎಂದು ಸಮಜಾಯಿಷಿಕೆ ನೀಡಿ ವರದಿ ಸಲ್ಲಿಸಸುವ ಮೂಲಕ ತಪ್ಪಿತಸ್ಥರನ್ನು ರಕ್ಷಿಸಿದ್ದಾರೆ.

ಅಕ್ರಮ ಎಸಗುವ ಸಂದರ್ಭದಲ್ಲಿ ಸರಕಾರಕ್ಕೆ ಸೇರಬೇಕಾದ ಭೂಮಿಯನ್ನು ತಮ್ಮ ಹೆಸರಿಗೆ ಮಾಡಿಸಿಕೊಂಡ ದಿ.ಅಚ್ಚುತನ್ ರವರ ಪುತ್ರ ಅರವಿಂದ ಹಾಗೂ ಇತರರು ಸಂತತಿ ನಕ್ಷೆ ಕೋರಿ ಭೂಮಿ ಕೇಂದ್ರಕ್ಕೆ ಸಲ್ಲಿಸಿದ ಅರ್ಜಿಯಲ್ಲಿ ಮತ್ತು ಪಹಣಿ ಪತ್ರದಲ್ಲಿ ಹೆಸರು ಬದಲಾವಣೆ ಕೋರಿ ಕಂದಾಯ ಇಲಾಖೆಗೆ ಸಲ್ಲಿಸಿದ ಅರ್ಜಿಯಲ್ಲಿ ಮತ್ತು ಹೇಳಿಕೆಗಳಲ್ಲಿ ಸುಳ್ಳು ಮಾಹಿತಿಗಳನ್ನು ನೀಡಿದ್ದರು. ಮಾತ್ರವಲ್ಲ, ಅನೇಕ ಗೊಂದಲಗಳಿಂದ ಕೂಡಿದ ಹೇಳಿಕೆಯನ್ನು ನೀಡಿದ್ದರು. ಅರ್ಜಿದಾರರು ನೀಡಿದ ಮಾಹಿತಿಗಳನ್ನು ಮತ್ತು ದಾಖಲೆಗಳನ್ನು ಸರಿಯಾದ ರೀತಿಯಲ್ಲಿ ಪರಿಶಿಲನೆ ನಡೆಸದೆ, ವಂಚಕರಿಗೆ ಸಹಾಯ ಮಾಡುವ ಉದ್ಧೇಶದಿಂದ ತಹಶೀಲ್ದಾರ್ ಮಹೇಶ್ ಚಂದ್ರ ಅವರು ಸಹಾಯಕ ಕಮಿಷನರ್ ಅವರಿಗೆ ಸಲ್ಲಿಸಿದ ವರದಿಯಲ್ಲಿ ಸಹ ಅದೇ ಸಾಲು ಸಾಲು ಗೊಂದಲಗಳನ್ನು ಉಳಿಸಿಕೊಂಡೇ ವರದಿಯನ್ನು ಸಲ್ಲಿಸಿದ್ದು, ಈ ಎಲ್ಲಾ ಗೊಂದಲಕಾರಿ ಮತ್ತು ಸುಳ್ಳು ಮಾಹಿತಿ ಹಾಗೂ ದಾಖಲೆಗಳನ್ನು ಸಾಕ್ಷ್ಯಾಧಾರಗಳ ಸಹಿತ ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀರಾಮ ದಿವಾಣ ಅವರು ಜಿಲ್ಲಾಧಿಕಾರಿಗಳು ಹಾಗೂ ಸಹಾಯಕ ಕಮಿಷನರ್ ಅವರಿಗೆ ಬರೆದ ಪತ್ರದಲ್ಲಿ ಬಯಲುಪಡಿಸಿದ್ದಾರೆ.

ಇದೀಗ ಈ ಬಹುಕೋಟಿ ಭೂ ಹಗರಣದ ಚೆಂಡು ಸಹಾಯಕ ಕಮಿಷನರ್ ಹಾಗೂ ಜಿಲ್ಲಾಧಿಕಾರಿಗಳ ಅಂಗಳದಲ್ಲಿದ್ದು, ಈ ಐಎಎಸ್ ಅಧಿಕಾರಿಗಳು ನಾರಾಯಣಿ ಅಮ್ಮಾಳ್ ಯಾನೆ ನಾರಾಯಣಿ ಬಾಯಿಯವರು ಬರೆದ ವೀಲುನಾಮೆ ಮತ್ತು ನ್ಯಾಯಾಲಯ ತೀರ್ಪಿನ ಆಧಾರದಲ್ಲಿ ದಕ್ಷತೆಯಿಂದ ದಿಟ್ಟ ಕ್ರಮಗಳನ್ನು ಜರುಗಿಸುತ್ತಾರೋ ಇಲ್ಲವೋ ಎಂಬುದನ್ನು ಕಾದುನೋಡಬೇಕಾಗಿದೆ.

s.no. 89/5, 89/10, 89/11, moodanidamboor

 

Leave a Reply

Your email address will not be published. Required fields are marked *