Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 20 ಮಂದಿ ಗ್ರಾಮ ಲೆಕ್ಕಾಧಿಕಾರಿಗಳಿಗೆ (ವಿಎ) ವರ್ಗಾವಣೆ

ಜಿಲ್ಲಾಸ್ಪತ್ರೆಗಳ ಮೇಲ್ಮನವಿ ಪ್ರಾಧಿಕಾರದ ಬಗ್ಗೆ ಅಧಿಕಾರಿಗಳ ನಡುವೆಯೇ ಗೊಂದಲ, ಅಸ್ಪಷ್ಟತೆ: ಅರ್ಜಿದಾರರಿಗೆ ಕಿರುಕುಳ !

ಉಡುಪಿ: ಮಾಹಿತಿ ಹಕ್ಕು ಅಧಿನಿಯಮ- 2005 ಅನುಷ್ಠಾನಕ್ಕೆ ಬಂದು ಸುಧೀರ್ಘ 11 ವರ್ಷಗಳೇ ಕಳೆದಿದೆಯಾದರೂ, ಈ ನಡುವೆ ವಿವಿಧ ಇಲಾಖಾ ಅಧಿಕಾರಿಗಳಿಗಾಗಿ ಅಧಿನಿಯಮದ ಬಗ್ಗೆ ರಾಜ್ಯ ಮಟ್ಟದಲ್ಲಿ ಮತ್ತು ಜಿಲ್ಲಾ ಮಟ್ಟದಲ್ಲಿ ತರಬೇತಿ ಶಿಬಿರಗಳನ್ನು ನಡೆಸಲಾಗಿದೆಯಾದರೂ, ಜಿಲ್ಲಾ ಸರಕಾರಿ ಆಸ್ಪತ್ರೆಗಳಿಗೆ ಮೇಲ್ಮನವಿ ಪ್ರಾಧಿಕಾರ ಯಾರು ಎಂಬ ಬಗ್ಗೆ ಮಾತ್ರ ಇನ್ನೂ ಸಹ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾ ಅಧಿಕಾರಿಗಳಿಗೆ ಕನಿಷ್ಟ ಸ್ಪಷ್ಟತೆಯೇ ಇಲ್ಲ, ಗೊಂದಲ ಗೊಂದಲವಾಗಿಯೇ ಮುಂದುವರಿದಿದೆ. ಇದರಿಂದಾಗಿ ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಜಿಲ್ಲಾ ಸರಕಾರಿ ಆಸ್ಪತ್ರೆಗಳಿಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸುವವರಿಗೆ ತೊಂದರೆಯಾಗಿದೆ.

ಮುಖ್ಯವಾಗಿ, ಗೊಂದಲ ಮತ್ತು ಅಸ್ಪಷ್ಟತೆ ಇರುವುದು ಬೆಂಗಳೂರಿನ ಆನಂದ ರಾವ್ ವೃತ್ತದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದಶನಾಲಯದ ಅಧಿಕಾರಿಗಳು ಹಾಗೂ ಉಡುಪಿಯ ಅಜ್ಜರಕಾಡಿನಲ್ಲಿರುವ ಜಿಲ್ಲಾ ಸರಕಾರಿ ಆಸ್ಪತ್ರೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳ ನಡುವೆ.

ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ ಹಾಗೂ ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಇದುವರೆಗೂ ಅಧಿನಿಯಮದ ಕಲಂ 4 ಮತ್ತು 5 (1), (2)ರ ಪ್ರಕಾರ ತಮ್ಮ ತಮ್ಮ ಕಚೇರಿಗಳಲ್ಲಿ 17 ಅಂಶಗಳ ಕುರಿತು ವಿವರವಾದ ಮಾಹಿತಿಗಳನ್ನು ಪ್ರಕಟಿಸಿಯೇ ಇಲ್ಲ. ಪ್ರಕಟಿಸಲಾದ ಮಾಹಿತಿಗಳಲ್ಲಿಯೂ ಸ್ಪಷ್ಟತೆಯೇ ಇಲ್ಲ. ಅಸ್ಪಷ್ಟತೆಯೇ ಎಲ್ಲ. ಗೊಂದಲವೇ ಇವರ ಮಾಹಿತಿ.

ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ ಬಳಿಕ, ಕಾಯ್ದೆಯಂತೆ ನಿಗದಿತ ಅವಧಿಯಲ್ಲಿ ಕೋರಲಾದ ಮಾಹಿತಿ ಲಭಿಸದೇ ಇದ್ದಲ್ಲಿ ಅರ್ಜಿದಾರ ಯಾರಿಗೆ, ಯಾವ ವಿಳಾಸಕ್ಕೆ ಒಂದನೇ ಅಪೀಲ್ (ಪ್ರಥಮ ಮೇಲ್ಮನವಿ ಪ್ರಾಧಿಕಾರ) ಸಲ್ಲಿಸಬೇಕು ಎಂಬ ಬಗ್ಗೆ ಸೂಕ್ತ ಮಾಹಿತಿ ಇಲ್ಲವಾಗಿದೆ.

ಮಾಹಿತಿ ಹಕ್ಕು ಕಾಯ್ದೆಯ ಸಂಪನ್ಮೂಲ ವ್ಯಕ್ತಿಗಳ ಪ್ರಕಾರ, ಜಿಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿರುವ ಜಿಲ್ಲಾ ಸರ್ಜನ್ ರವರೇ ಪ್ರಥಮ ಮೇಲ್ಮನವಿ ಪ್ರಾಧಿಕಾರಿವಾಗಿರಬೇಕು. ಆದರೆ, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಪ್ರಕಟಿಸಲಾದ ಮಾಹಿತಿಯಲ್ಲಿ ಬೆಂಗಳೂರಿನ ಆನಂದ ರಾವ್ ವೃತ್ತದಲ್ಲಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದಲ್ಲಿರುವ ಮುಖ್ಯ ಆಡಳಿತಾಧಿಕಾರಿಗಳೇ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಪ್ರಥಮ ಮೇಲ್ಮನವಿ ಪ್ರಾಧಿಕಾರ. ಹಾಗಾಗಿ, ಮಾಹಿತಿ ಹಕ್ಕು ಅರ್ಜಿದಾರರು ಮುಖ್ಯ ಆಡಳಿತಾಧಿಕಾರಿಯವರ ಬೆಂಗಳೂರು ವಿಳಾಸಕ್ಕೆ ಒ0ದನೇ ಅಪೀಲ್ ನ್ನು ಸಲ್ಲಿಸಬೇಕಾಗಿದೆ.

ಬೆಂಗಳೂರಿನ ನಿರ್ದೇಶನಾಲಯದಲ್ಲಿರುವ ಮುಖ್ಯ ಆಡಳಿತಾಧಿಕಾರಿಗಳು, ಮಾಹಿತಿ ಹಕ್ಕು ಅರ್ಜಿದಾರರ ಒಂದನೇ ಅಪೀಲ್ ಗಳನ್ನು ಮೊದಲಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳೇ ಪ್ರಥಮ ಮೇಲ್ಮನವಿ ಪ್ರಾಧಿಕಾರ ಎಂದು ತಿಳಿಸಿ ಅಪೀಲ್ ನ್ನು ಇವರಿಗೆ ವರ್ಗಾಯಿಸಿ ಕೈತೊಳೆದುಕೊಳ್ಳುತ್ತಾರೆ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಯವರು, ‘ನಾವು ಪ್ರಥಮ ಮೇಲ್ಮನವಿ ಪ್ರಾಧಿಕಾರವಲ್ಲ, ನೀವೇ ಪ್ರಥಮ ಮೇಲ್ಮನವಿ ಪ್ರಾಧಿಕಾರ’ ಎಂದು ಉತ್ತರ ನೀಡಿ ಒಂದನೇ ಅಪೀಲ್ ನ್ನು ಮತ್ತೆ ಮುಖ್ಯ ಆಡಳಿತಾಧಿಕಾರಿಗಳಿಗೆ ಮರಳಿಸುತ್ತಾರೆ.

ಮುಖ್ಯ ಅಡಳಿತಾಧಿಕಾರಿಗಳು ಮತ್ತೆ ಇದೇ ಒಂದನೇ ಅಪೀಲ್ ನ್ನು ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ರವರಿಗೆ ವರ್ಗಾಯಿಸುತ್ತಾರೆ. ಜಿಲ್ಲಾ ಸರ್ಜನ್ ರವರು ಕೂಡಾ, ‘ನಮ್ಮ ಆಸ್ಪತ್ರೆಗೆ ನಾವು ಮೇಲ್ಮನವಿ ಪ್ರಾಧಿಕಾರವಲ್ಲ, ನೀವೇ ಮೇಲ್ಮನವಿ ಪ್ರಾಧಿಕಾರ’ ಎಂದು ಹೇಳಿ ಒಂದನೇ ಅಪೀಲ್ ನ್ನು ಮತ್ತೆ ಮುಖ್ಯ ಆಡಳಿತಾಧಿಕಾರಿಗಳಿಗೆ ಮರಳಿಸುತ್ತದೆ.

ಮಂಗಳೂರಿನಲ್ಲಿರುವ ಜಿಲ್ಲಾ ಸರಕಾರಿ ವೆನ್ ಲಾಕ್ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದರೆ, ನಿಗದಿತ ಅವಧಿಯಲ್ಲಿ ಮಾಹಿತಿ ಲಭಿಸದೇ ಇದ್ದಲ್ಲಿ ಮತ್ತು ಲಿಖಿತ ಮಾಹಿತಿ ಒದಗಿಸುವ ಸಂದರ್ಭದಲ್ಲಿ, ಒದಗಿಸಲಾದ ಮಾಹಿತಿಯ ಬಗ್ಗೆ ಅರ್ಜಿದಾರರಾದ ನಿಮಗೆ ತೃಪ್ತಿ ಇಲ್ಲದೇ ಆದಲ್ಲಿ ಜಿಲ್ಲಾ ಸರ್ಜನ್ ರವರಿಗೆ ಪ್ರಥಮ ಮೇಲ್ಮನವಿ ಸಲ್ಲಿಸಬಹುದು ಎಂದು ತಿಳಿಸಲಾಗುತ್ತದೆ.

ಮಾಹಿತಿ ಹಕ್ಕು ಅಧಿನಿಯಮದಲ್ಲಿ, ದ.ಕ.ಜಿಲ್ಲಾ ಸರಕಾರಿ ಆಸ್ಪತ್ರೆಗೆ ಒಂದು ರೀತಿ ಮತ್ತು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ಇನ್ನೊಂದು ರೀತಿ ಎಂದು ಇರಲು ಸಾದ್ಯವಿಲ್ಲ. ಇಲ್ಲಿ ಗೊಂದಲ ಮತ್ತು ಅಸ್ಪಷ್ಟತೆ ಇರುವುದು ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯವರಿಗೆ ಹಾಗೂ ಬೆಂಗಳೂರಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶನಾಲಯದ ಮುಖ್ಯ ಆಡಳಿತಾಧಿಕಾರಿಗಳಿಗೆ ಎನ್ನುವುದು ಸ್ಪಷ್ಟ. ಇವರುಗಳ ನಡುವೆ ಇರುವ ಗೊಂದಲ ಮತ್ತುಅ ಸ್ಪಷ್ಟತೆಯ ಕಾರಣ, ಮಾಹಿತಿ ಹಕ್ಕು ಅರ್ಜಿದಾರರು ಇದೀಗ ಸಮಸ್ಯೆ, ಕಿರುಕುಳ ಅನುಭವಿಸಬೇಕಾಗಿ ಬಂದಿದೆ.

 

Leave a Reply

Your email address will not be published. Required fields are marked *