Realtime blog statisticsweb statistics
udupibits.in
Breaking News
ಕುಂಬಳೆ: ಮಾಯಿಪ್ಪಾಡಿ ಡಯಟ್ ನ ನಿವೃತ್ತ ಶಿಕ್ಷಕ, ಎಡನಾಡು-ಕಣ್ಣೂರು ಸೇವಾ ಸಹಕಾರಿ ಬ್ಯಾಂಕಿನ ನಿರ್ದೇಶಕ ಕರುಣಾಕರ ಅನಂತಪುರ, ಅಲ್ಪಕಾಲದ ಅನಾರೋಗ್ಯದಿಂದ ನಿಧನ

ಅಂಬಲಪಾಡಿ ದೇವಸ್ಥಾನವನ್ನು ಅಧಿಸೂಚಿತ ಪಟ್ಟಿಯಿಂದ ಕೈಬಿಡುವ ಪ್ರಸ್ತಾಪಕ್ಕೆ ದಾಖಲೆಗಳ ಸಹಿತ ಸಾವಿರಾರು ಜನರ ಸ್ಪಷ್ಟ ಆಕ್ಷೇಪ ಸಲ್ಲಿಕೆ

ಉಡುಪಿ: ಅಂಬಲಪಾಡಿ ಶ್ರೀ ಮಹಾಕಾಳಿ ಮತ್ತು ಜನಾರ್ದನ ದೇವಸ್ಥಾನವನ್ನು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿಗಳ ಸಂಸ್ಥೆಗಳ ಅಧಿಸೂಚಿತ ಪಟ್ಟಿಯಿಂದ ಕೈಬಿಟ್ಟು ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ನೀ.ಬೀ. ವಿಜಯ ಬಲ್ಲಾಳರ ಖಾಸಗೀ ಒಡೆತನಕ್ಕೆ ಒಪ್ಪಿಸುವ ಸರಕಾರದ ಪ್ರಸ್ತಾಪಕ್ಕೆ ದೇವಸ್ಥಾನದ ಸಾವಿರಕ್ಕೂ ಅಧಿಕ ಮಂದಿ ಭಕ್ತರು ಹಾಗೂ ಸಾರ್ವಜನಿಕರು ಸ್ಪಷ್ಟ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಧಾರ್ಮಿಕ ದತ್ತಿ ಆಯುಕ್ತರ 2016, ಡಿಸೆಂಬರ್ 9ರ ಪತ್ರದಂತೆ, ಸರಕಾರದ ಪ್ರಸ್ತಾಪಕ್ಕೆ ಯಾವುದೇ ರೀತಿಯ ಸಲಹೆ, ಸೂಚನೆ, ಆಕ್ಷೇಪಗಳು ಇದ್ದಲ್ಲಿ ಫೆಬ್ರವರಿ 28ರ ಒಳಗೆ ಸಲ್ಲಿಸುವಂತೆ ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಇಲಾಖೆಯ ಉಡುಪಿ ಜಿಲ್ಲಾಧಿಕಾರಿಗಳು ಜನವರಿ 28ರ ದಿನ ಪತ್ರಿಕೆಗಳಲ್ಲಿ ಪ್ರಕಟಣೆ ನೀಡಿದ್ದರು.

ಈ ಪ್ರಕಟಣೆ ನೋಡಿದ ಬೆನ್ನಿಗೆ, ವಾರ್ಷಿಕ ಐದು ಕೋಟಿ ರೂಪಾಯಿಗೂ ಅಧಿಕ ಆದಾಯವಿರುವ ಸಾರ್ವಜನಿಕರ ದೇವಸ್ಥಾನ ಒಬ್ಬ ವ್ಯಕ್ತಿಯ ಖಾಸಗೀ ಒಡೆತನಕ್ಕೆ ಹೋಗುವುದು ಎಷ್ಟು ಮಾತ್ರಕ್ಕೂ ಸರಿಯಲ್ಲ ಎಂಬ ಸಹಜ ತೀರ್ಮಾನಕ್ಕೆ ಬಂದ ಅಂಬಲಪಾಡಿ, ಕಡೆಕಾರು, ಕಿದಿಯೂರು ಮೊದಲಾದ ಗ್ರಾಮಗಳ ಸಾರ್ವಜನಿಕರು ಹಾಗೂ ಭಕ್ತಾದಿಗಳು ಸ್ವಯಂಪ್ರೇರಿತರಾಗಿ ಪ್ರತ್ಯೇ ಪ್ರತ್ಯೇಕವಾಗಿ ನೂರಾರು ಜನರಿಂದ ಸಹಿ ಸಂಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ಸಾರ್ವಜನಿಕರ ಒಂದು ನಿಯೋಗ ಫೆಬ್ರವರಿ 23ರಂದು ಜಿಲ್ಲಾಧಿಕಾರಿಗಳಿಗೆ ಸರಕಾರದ ಪ್ರಸ್ತಾಪಕ್ಕೆ ಖಡಾಖಂಡಿತ ವಿರೋಧ ವ್ಯಕ್ತಪಡಿಸಿದ್ದು, ಅಂಬಲಪಾಡಿ ದೇವಸ್ಥಾನ ಒಂದು ಸಾರ್ವಜನಿಕ ಸಂಸ್ಥೆ ಎಂಬ ಬಗ್ಗೆ 300ಕ್ಕೂ ಅಧಿಕ ಪುಟಗಳ ದಾಖಲಾತಿಗಳ ಸಹಿತ ಜಿಲ್ಲಾಧಿಕಾರಿಗಳಿಗೆ ಆಕ್ಷೇಪ ದಾಖಲಿಸಿದೆ.

ಅಂಬಲಪಾಡಿಯ ಶ್ರೀ ಮಹಾಕಾಳಿ ಮತ್ತು ಶ್ರೀ ಜನಾರ್ದನ ದೇವರು ಸಾರ್ವಜನಿಕರು ಪುರಾತನ ಕಾಲದಿಂದಲೂ ಪೂಜಿಸಿಕೊಂಡು ಬಂದ ದೇವರೆಂದೂ, ಪ್ರಸ್ತುತ ಆಡಳಿತ ನಡೆಸುತ್ತಿರುವ ಖಾಸಗೀ ವ್ಯಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಮತ್ತು ಆರ್ಥಿಕ ಲಾಭಕ್ಕಾಗಿ ದೇವಸ್ಥಾನವನ್ನು ಹೇಗೆಲ್ಲಾ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದನ್ನೂ ಸಾರ್ವಜನಿಕರು ಲಿಖಿತವಾಗಿಯೂ, ಮೌಖಿಕವಾಗಿಯೂ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎಂದು ತಿಳಿದುಬಂದಿದೆ.

ಅಂಬಲಪಾಡಿ ದೇವಸ್ಥಾನವನ್ನು ಅಧಿಸೂಚಿತ ಪಟ್ಟಿಯಿಂದ ಕೈಬಿಡುವ ಪ್ರಸ್ತಾಪದಿಂದ ತೀವ್ರವಾಗಿ ಅಸಮಾಧಾನಗೊಂಡಿರುವ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಸಹಿ ಸಂಗ್ರಹ ಅಭಿಯಾನ ನಡೆಸುತ್ತಿರುವುದು ಗಮನಕ್ಕೆ ಬರುತ್ತಲೇ ವಿಚಲಿತಗೊಂಡಿರುವ ಸ್ಥಾಪಿತ ಹಿತಾಸಕ್ತ ದುಷ್ಟ ಶಕ್ತಿಗಳು ತನ್ನ ಪರವಾಗಿ ಸಹಮತ ವ್ಯಕ್ತಪಡಿಸುವ ಸಾರ್ವಜನಿಕರ ಪತ್ರ ಬೇಕೆಂಬುದನ್ನು ಮನಗಂಡು ತಾವೇ ಬರೆದ ಸುಳ್ಳು ಮಾಹಿತಿಗಳಿಂದ ಕೂಡಿದ ಮನವಿ ಪತ್ರಕ್ಕೆ ಕೆಲವು ಮಂದಿ ಜಾತಿ ಬಾಂಧವರಿಂದ ಆಗ್ರಹಪೂರ್ವಕವಾಗಿ ಸಹಿ ಮಾಡಿಸಿಕೊಂಡು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದ ಬಗ್ಗೆ ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

ಸ್ಥಾಪಿತ ಹಿತಾಸಕ್ತ ಭ್ರಷ್ಟ ಶಕ್ತಿಗಳು, ಪ್ರಸ್ತುತ ಅಸ್ತಿತ್ವದಲ್ಲಿಯೇ ಇಲ್ಲದ ಸಂಘ ಸಂಸ್ಥೆಗಳ ಲೆಟರ್ ಹೆಡ್ ಗಳನ್ನು ಕೆಲವರಿಂದ ಕೇಳುತ್ತಿದ್ದಾರೆ, ಅಸ್ತಿತ್ವದಲ್ಲಿರುವ ಸಂಘ ಸಂಸ್ಥೆಗಳ ಪ್ರಮುಖರನ್ನು ಜಾತಿ ಆಧಾರದಲ್ಲಿ ಸಂಪರ್ಕಿಸಿ ತನ್ನ ಪರವಾಗಿ ಬರೆದ ಪತ್ರಕ್ಕೆ ಸಹಿ ಹಾಕುವಂತೆಯೂ, ಇತರರಿಂದ ಸಹಿ ಹಾಕಿಸುವಂತೆಯೂ ದುಂಬಾಲು ಬೀಳುತ್ತಿದ್ದಾರೆ ಎಂದೂ ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಈ ನಡುವೆ ಕೆಲವು ನಕಲಿ ಲೆಟರ್ ಹೆಡ್ ಗಳನ್ನೂ ತನ್ನ ಬೆಂಬಲಕ್ಕೆ ಬಳಸಿಕೊಳ್ಳಲಾಗಿದೆ ಎಂದೂ ಹೇಳಲಾಗಿದೆ.

ಸರಕಾರೀ ಭೂಮಿಯಲ್ಲಿರುವ ಅಂಬಲಪಾಡಿ ದೇವಸ್ಥಾನ, ಒಂದು ಸಾರ್ವಜನಿಕ ದೇವಸ್ಥಾನ ಎಂಬ ಬಗ್ಗೆ ಈ ಹಿಂದೆಯೇ ಉಡುಪಿ ನ್ಯಾಯಾಲಯ ನೀಡಿದ ತೀರ್ಪು ಮತ್ತು ಬಿಜೆಪಿ ರೈತ ಚೈತನ್ಯ ಯಾತ್ರೆಗೆ ಆಗಮಿಸಿದ ರಾಜಕೀಯ ಪಕ್ಷದ ಕಾರ್ಯಕರ್ತರಿಗೆ ದೇವಸ್ಥಾನದ ಹಣದಲ್ಲಿ ದೇವಸ್ಥಾನದಲ್ಲಿ ಅಡುಗೆ ಮಾಡಿ ಉಚಿತವಾಗಿ ವಿತರಿಸಿದ ಆಡಳಿತ ಮೊಕ್ತೇಸರರಿಗೆ ಇಲಾಖೆ ದಂಡ ವಿಧಿಸಿದ್ದು ಇತ್ಯಾದಿಗಳು ಸಾರ್ವಜನಿಕರ ಆಕ್ಷೇಪಕ್ಕೆ ಪೂರಕ ದಾಖಲೆಯಾಗಿದೆ.

Leave a Reply

Your email address will not be published. Required fields are marked *