Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

ಕೃಷಿ ಯಂತ್ರೋಪಕರಣಗಳ ಯೋಜನೆಯಲ್ಲಿ ಭ್ರಷ್ಟಾಚಾರ ನಿಲ್ಲಿಸಲು ರೈತ ಸಮಾವೇಶ ಒತ್ತಾಯ

ಉಡುಪಿ: ಸರಕಾರದ ಇಲಾಖೆಗಳಿಂದ ಸಹಾಯಧನ ಪಡೆದು ಕೃಷಿ ಯಂತ್ರೋಪಕರಣಗಳನ್ನು ಪಡೆದುಕೊಳ್ಳುವಾಗ, ಅದೇ ಯಂತ್ರೋಪಕರಣಗಳಿಗೆ ಕೃಷಿಕರು ಮಾರುಕಟ್ಟೆ ಮೊತ್ತಕ್ಕಿಂತಲೂ ಅಧಿಕ ಮೊತ್ತ ನೀಡುವಂಥ ಪರಿಸ್ಥಿತಿ ಸೃಷ್ಟಿಯಾಗಿದೆ. ಸಹಾಯಧನ ಪಡೆದು ಮಾರುಕಟ್ಟೆ ದರಕ್ಕಿಂತ ಅಧಿಕ ಮೊತ್ತ ಪಾವತಿಸಿ ಯಂತ್ರೋಪಕರಣ ಪಡೆದುಕೊಳ್ಳುವಂತಾದರೆ ಕೃಷಿಕನಿಗಾಗುವ ಲಾಭವಾದರೂ ಏನು, ಆದುದರಿಂದ ಈ ರೀತಿಯ ಭ್ರಷ್ಟಾಚಾರವನ್ನು ಕೂಡಲೇ ನಿಲ್ಲಿಸಬೇಕು ಎಂದು ಫೆಬ್ರವರಿ 26ರಂದು ಉಡುಪಿ ಕುಂಜಿಬೆಟ್ಟು ಶಾರದಾ ಮಂಟಪದಲ್ಲಿ ನಡೆದ ರೈತ ಸಮಾವೇಶ- 2017ರಲ್ಲಿ ರೈತರು ನಿರ್ಣಯ ತೆಗೆದುಕೊಳ್ಳಲಾಯಿತು.

ಕೃಷಿಯ ಪ್ರತ್ಯೇಕ ಬಜೆಟ್ ನಲ್ಲಿ ಆವರ್ತ ನಿಧಿಯನ್ನು ಒಂದು ಸಾವಿರ ಕೋಟಿ ರೂಪಾಯಿಗೆ ಏರಿಸಿ ಜಿಲ್ಲೆಯಲ್ಲಿ ಬೆಳೆಯುವ ಎಲ್ಲಾ ಬೆಳೆಗಳಿಗೆ ವೈಜ್ಞಾನಿಕ ಬೆಂಬಲ ಬೆಲೆಯನ್ನು ನಿಗದಿಪಡಿಸಿ ವರ್ಷ ಪೂರ್ತಿ ಖರೀದಿಸುವ ವ್ಯವಸ್ಥೆ ಮಾಡಬೇಕು, ಕಳೆದ 120 ವರ್ಷಗಳಿಂದ ಅನುಭವಿಸಿಕೊಂಡು ಬರುತ್ತಿರುವ ರೈತರ ಕುಮ್ಕಿ ಹಕ್ಕನ್ನು ಯಾವುದೇ ಕಾರಣಕ್ಕೂ ರದ್ದುಗೊಳಿಸಬಾರದು, ಉತ್ತಮ ಗುಣಮಟ್ಟದ ಭತ್ತ, ದ್ವಿದಳ ಧಾನ್ಯ, ತರಕಾರಿ ಬೀಜಗಳು, ಸಾವಯವ ಹಾಗೂ ರಾಸಾಯನಿಕ ಗೊಬ್ಬರಗಳು ಮತ್ತು ಕೀಟ ನಾಶಕಗಳು ರೈತರಿಗೆ ಕ್ಲಪ್ತ ಸಮಯದಲ್ಲಿ ಸ್ಥಳೀಯವಾಗಿ ಸರಕಾರ ನಿಗದಿಪಡಿಸಿದ ದರದಲ್ಲಿ ಲಭಿಸಬೇಕು ಎಂದು ಸಮಾವೇಶ ಸರಕಾರವನ್ನು ಒತ್ತಾಯಿಸಿತು.

ಹೊಸದಾಗಿ ಸಂಶೋಧನೆ ಮಾಡಿರುವ ನೀರಾ ತಯಾರಿಸುವ ಪದ್ದತಿಯನ್ನು ಆದಷ್ಟು ಬೇಗ ರೈತರಿಗೆ ತಲುಪಿಸುವ ಯೋಜನೆ ಜಾರಿಗೊಳಿಸಬೇಕು, ಜಿಲ್ಲೆಯಲ್ಲಿ ಬೆಳೆಯುವ ಎಲ್ಲಾ ಬೆಳೆಗಳಿಗೂ ಪೂರ್ವಯೋಜಿತ ಮಾರುಕಟ್ಟೆ ವ್ಯವಸ್ಥೆ ಮಾಡಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡಿ ಮಾರುಕಟ್ಟೆಯನ್ನು ವಿಸ್ತರಿಸಿ ರೈತರನ್ನು ಪ್ರೋತ್ಸಾಹಿಸಬೇಕು, ನಂದಿನಿ ಹಾಲು ಶೇಖರಣೆಯಂತೆ ತರಕಾರಿ, ಹಣ್ಣುಗಳು ಮತ್ತು ಮಲ್ಲಿಗೆ ಹೂಗಳನ್ನು ಸಂಗ್ರಹಿಸಿ ಮಾರುಕಟ್ಟೆಗೆ ಒದಗಿಸಬೇಕು, ಪ್ರತೀ ವರ್ಷವೂ ಇವಿಗಳ ಬೆಲೆಯನ್ನು ಪರಿಷ್ಕರಿಸಬೇಕು ಎಂದು ರೈತ ಸಮಾವೇಶ ಸರಕಾರವನ್ನು ಆಗ್ರಹಿಸಿತು.

ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಸಂಘಗಳಲ್ಲಿ ವಿಳಂಬವಿಲ್ಲದೆ ರೈತರಿಗೆ ಬಡ್ಡಿ ರಹಿತ ಸಾಲ ೊದಗಿಸಬೇಕು, ಯಾವುದೇ ಕಾರಣಕ್ಕೂ ರೈತರ ಜಮೀನು ಹರಾಜು ಆಗುವುದನ್ನು ನಿಲ್ಲಿಸಬೇಕು, ಬೆಳೆ ನಷ್ಟವಾದ ಸಂದರ್ಭದಲ್ಲಿ ಬ್ಯಾಂಕುಗಳು ವಿಮಾ ಸೌಲಭ್ಯಗಳನ್ನು ರೈತರಿಗೆ ಒದಗಿಸಿಕೊಡಬೇಕು ಹಾಗೂ ರೈತರನ್ನು ಋಣಮುಕ್ತರನ್ನಾಗಿ ಮಾಡಬೇಕು.

ಬೆಳೆ ವಿಮೆ ನಿಯಮಗಳನ್ನು ಸರಳಗೊಳಿಸಬೇಕು, ಎಲ್ಲಾ ಬೆಳೆಗಳಿಗೂ ಬೆಳೆ ವಿಮೆಯನ್ನು ವಿಸ್ತರಿಸಬೇಕು, ಬೆಳೆವಿಮೆಯು ಬೆಲೆ ಮತ್ತು ನಷ್ಟವನ್ನು ಒಳಗೊಂಡಿರಬೇಕು, ಪ್ರಾಕೃತಿಕ ವಿಕೋಪಗಳಿಗೆ ತೆಂಗಿನಮರ ಮತ್ತು ಅಡಿಕೆಮರ ತುತ್ತಾದಾಗ ಪ್ರತೀ ಮರಕ್ಕೆ ಕನಿಷ್ಟ ರು. 2 ಸಾವಿರ, ಭತ್ತ ಹಾಗೂ ದ್ವಿದಳ ಧಾನ್ಯಗಳಿಗೆ ಹೆಕ್ಟೇರಿಗೆ 20 ಸಾವಿರ, ಜಿಲ್ಲೆಯಲ್ಲಿ ಬೆಳೆಯುವ ವಿವಿಧ ತೋಟಗಾರಿಕಾ ಬೆಳೆಗಳಿಗೆ ಹೆಕ್ಟೇರಿಗೆ ರು. 30 ಸಾವಿರ ನೀಡಬೇಕು ಎಂದು ರೈತರು ಸಮಾವೇಶದಲ್ಲಿ ನಿರ್ಣಯ ತೆಗೆದುಕೊಂಡರು.

ವರ್ಷಪೂರ್ತಿ ಕೊಬ್ಬರಿಯನ್ನು ಕಿಲೋ ಒಂದಕ್ಕೆ 100 ರು. ಬೆಂಬಲ ಬೆಲೆಯಲ್ಲಿ ಖರೀದಿಸುವ ವ್ಯವಸ್ಥೆ ಮಾಡಬೇಕು, ಮುಂಗಾರು ಹಂಗಾಮಿನ ಭತ್ತವನ್ನು ಅಕ್ಟೋಬರ್ ತಿಂಗಳಿನಿಂದ ಪ್ರಾರಂಭಿಸಿ ವರ್ಷಪೂರ್ತಿ ಬೆಂಬಲ ಬೆಲೆಯಲ್ಲಿ ಖರೀದಿಸುವ ವ್ಯವಸ್ಥೆ ಮಾಡಬೇಕು, ಕೃಷಿ ಆಧಾರಿತ ಉಪ ಕಸುಬುಗಳಾದ ಹೈನುಗಾರಿಕೆ, ಕೋಳಿ ಸಾಕಣೆ, ಜೇನು ಸಾಕಣೆ, ಹಂದಿ ಸಾಕಣೆ, ಮೊಲ ಸಾಕಣೆ, ಮೀನು ಸಾಕಣೆ ಇತ್ಯಾದಿಗಳಿಗೆ ಸರಕಾರ ಪ್ರೋತ್ಸಾಹಧನ ನೀಡಬೇಕು, ಉತ್ತಮ ಗುಣಮಟ್ಟದ ಪಶು ಆಹಾರವನ್ನು ರಿಯಾಯಿತಿ ದರದಲ್ಲಿ ಪೂರೈಸಬೇಕು, ರೈತರಿಗೆ ಸಬ್ಸಿಡಿ ದರದಲ್ಲಿ ಡೀಸೆಲ್ ಪಂಪ್ ಸೆಟ್ ಮತ್ತು ಪವರ್ ಟಿಲ್ಲರ್ ಗೆ ಸೀಮೆ ಎಣ್ಣೆ ಮತ್ತು ಡಿಸೇಲ್ ಒದಗಿಸಬೇಕು, ಟ್ರಾಕ್ಟರ್, ಪವರ್ ಟಿಲ್ಲರ್, ಪವರ್ ವೀಡರ್, ಪವರ್ ಸ್ಪ್ರೇಯರ್, ಭತ್ತ ನಾಟಿ ಯಂತ್ರ, ಭತ್ತ ಕಟಾವು ಮತ್ತು ಒಕ್ಕಣೆ ಯಂತ್ರಗಳನ್ನು 75 ಶೇಕಡಾ ಸಹಾಯಧನದಲ್ಲಿ ಒದಗಿಸಬೇಕು, ಯಾಂತ್ರೀಕರಣದ ಸಹಾಯಧನದ ನಿಯಮಗಳನ್ನು ಸರಳೀಕರಿಸಬೇಕು ಎಂದು ರೈತ ಸಮಾವೇಶ ಸರಕಾರಕ್ಕೆ ಮನವಿ ಮಾಡಿದೆ.

 

Leave a Reply

Your email address will not be published. Required fields are marked *