Realtime blog statisticsweb statistics
udupibits.in
Breaking News
ಉಡುಪಿ: ಬೈಲೂರು ನಿವಾಸಿ, ಮಿಷನ್ ಕಂಪೌಂಡ್ ಸ್ಟಾಂಡ್ ನ ರಿಕ್ಷಾ ಚಾಲಕ, ಮಾಲಕ ರಾಘವೇಂದ್ರ ಭಟ್ (ರಾಘು ಭಟ್) ನಿಧನ.

ಆಸ್ಪತ್ರೆ ಹಸ್ತಾಂತರ ವಿವಾದ: ಸರಕಾರ, ಬಿ.ಆರ್. ಶೆಟ್ಟಿ ವಿರುದ್ಧ ಉಡುಪಿ ಕೋರ್ಟಲ್ಲಿ ದಾವೆ ದಾಖಲು

ಉಡುಪಿ: ನಗರದ ಹೃದಯಭಾಗವಾದ ಕವಿ ಮುದ್ದಣ ಮಾರ್ಗದಲ್ಲಿರುವ ಹಾಜಿ ಅಬ್ದುಲ್ಲಾ ಸ್ಮಾರಕ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು, ರಾಜ್ಯದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ಬೆಲೆಬಾಳುವ ಜಮೀನಿನ ಸಹಿತ ವಹಿಸಿಕೊಟ್ಟಿರುವುದರ ವಿರುದ್ಧ ಉಡುಪಿಯ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಲಯದಲ್ಲಿ ಹಾಜಿ ಅಬ್ದುಲ್ಲಾರವರ ವಂಶಸ್ಥರಾದ ಖುರ್ಷಿದ್ ಅಹಮ್ಮದ್ ಹಾಗೂ ಸಾರ್ವಜನಿಕರು ದಾವೆ ದಾಖಲಿಸಿದ್ದಾರೆ.

*ಖುರ್ಷಿದ್ ಅಹಮ್ಮದ್ 

ಖುರ್ಷಿದ್ ಹಾಗೂ ಸಾರ್ವಜನಿಕರು ಜಂಟಿಯಾಗಿ ಸಲ್ಲಿಸಿದ ದಾವೆಯ ಮೇಲೆ ವಕೀಲರ ವಾದವನ್ನು ಮಾರ್ಚ್ 27ರಂದು ಆಲಿಸಿದ ಪ್ರಿನ್ಸಿಪಲ್ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶೆ ಮಿಲನ ಅವರು, ಪ್ರಕರಣವನ್ನು ವಿಚಾರಣೆಗೆ ಸ್ವೀಕರಿಸಿದ್ದಾರೆ. ನ್ಯಾಯಾಲಯದಿಂದ ಇನ್ನು ಕೆಲವೇ ದಿನಗಳಲ್ಲಿ ಸರಕಾರಕ್ಕೆ ಹಾಗೂ ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ನೊಟೀಸ್ ಜಾರಿಯಾಗಲಿದೆ.

ಶ್ರೀಮಂತರು, ಮಹಾದಾನಿಗಳೂ ಆಗಿದ್ದ ಹಾಜಿ ಅಬ್ದುಲ್ಲಾ ಸಾಹೇಬರು, ಬಡವರ ಉಚಿತ ಚಿಕಿತ್ಸೆಗಾಗಿ ಆಸ್ಪತ್ರೆ ನಿರ್ಮಿಸಿ ಭೂಮಿ ಸಹಿತ ಆಸ್ಪತ್ರೆ ಕಟ್ಟಡವನ್ನು ಅಂದಿನ ಮೆಡ್ರಾಸ್ ಸರಕಾರಕ್ಕೆ ದಾನ ಮಾಡಿದ್ದರು. ಈ ಸಂದರ್ಭದಲ್ಲಿ ಉಡುಪಿ ತಾಲೂಕು ಬೋರ್ಡ್ ಗೆ ಮತ್ತು ಮೆಡ್ರಾಸ್ ಸರಕಾರಕ್ಕೆ ಒಂದು ಒಪ್ಪಂದ (ಇಂಡೆಂಚರ್) ಆಗಿದ್ದು, ಪ್ರಸ್ತುತ ರಾಜ್ಯ ಸರಕಾರ ಬಿ.ಆರ್.ಶೆಟ್ಟಿಯವರಿಗೆ ಜಮೀನು ಸಹಿತ ಆಸ್ಪತ್ರೆಯನ್ನು ಹಸ್ತಾಂತರಿಸುವ ಪ್ರಕ್ರಿಯೆಯಲ್ಲಿ ಈ ಮೂಲ ಒಪ್ಪಂದವನ್ನು ಕಡೆಗಣಿಸಲಾಗಿದೆ ಮತ್ತು ಉಲ್ಲಂಘಿಸಲಾಗಿದೆ ಎಂದು ದಾವೆಯಲ್ಲಿ ಉದಾಹರಣೆ ಮತ್ತು ದಾಖಲೆ ಸಹಿತ ವಾದಿಸಲಾಗಿದೆ.

* ಹಾಜಿ ಅಬ್ದುಲ್ಲಾ ಸಾಹೇಬರು ಮತ್ತು ಅಸ್ಪತ್ರೆ ಕಟ್ಟಡ

ಮೂಲ ಒಪ್ಪಂದದ ಪ್ರಕಾರ ಆಸ್ಪತ್ರೆಯ ಹೆಸರನ್ನು ಬದಲಾಯಿಸುವಂತಿಲ್ಲ, ಹೊಸ ಕಟ್ಟಡವನ್ನು ಜಮೀನಿನ ಬೇರೆ ಸ್ಥಳದಲ್ಲಿ ನಿರ್ಮಿಸುವಂತಿಲ್ಲ, ವಾಣಿಜ್ಯ ಉದ್ದೇಶಕ್ಕೆ ಉಪಯೋಗಿಸಲು ಅವಕಾಶವಿಲ್ಲ. ಆದರೆ, ಬಿ.ಆರ್.ಶೆಟ್ಟಿಯವರು ಈಗಾಗಲೇ ಆಸ್ಪತ್ರೆಗೆ ತಮ್ಮ ತಾಯಿಯ ಹೆಸರನ್ನು ಇರಿಸಿದ್ದಾರೆ. ನಿರ್ಮಿಸಲಿರುವ ಆಸ್ಪತ್ರೆ ಕಟ್ಟಡದಲ್ಲಿ 400 ಬೆಡ್ ನ ಆಸ್ಪತ್ರೆಯನ್ನು ವಾಣಿಜ್ಯ ಉದ್ಧೇಶಕ್ಕೆ ಉಪಯೋಗಿಸಲಿರುವುದಾಗಿ ಈಗಾಗಲೇ ಘೋಷಿಸಿದ್ದಾರೆ. ಆಸ್ಪತ್ರೆ ಕಟ್ಟಡವನ್ನು ಪ್ರಸ್ತುತ ಆಸ್ಪತ್ರೆ ಇರುವ ಸ್ಥಳಕ್ಕಿಂದ ಹೊರತಾದ ಪ್ರತ್ಯೇಕ ಸ್ಥಳದಲ್ಲಿ ನಿರ್ಮಿಸುತ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಮುಂದಿರಿಸಿಕೊಂಡು ಹಾಜಿ ಅಬ್ದುಲ್ಲಾ ಸಾಹೇಬರ ವಂಶಸ್ಥರಾದ ಖುರ್ಷಿದ್ ಹಾಗೂ ಇತರರು ನ್ಯಾಯಾಲಯದಲ್ಲಿ ದಾವೆ ದಾಖಲಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಖುರ್ಷಿದ್ ರವರ ಪರವಾಗಿ ಉಡುಪಿಯ ಖ್ಯಾತ ನ್ಯಾಯವಾದಿ ಎನ್.ಕೃಷ್ಣರಾಜ ಆಚಾರ್ಯ ಅವರು ವಾದಿಸಿದ್ದಾರೆ. ಖುರ್ಷಿದ್ ರವರು, ಹಾಜಿ ಅಬ್ದುಲ್ಲ ಸಾಹೇಬರ ವಂಶಸ್ಥರ ಪೈಕಿ ಪ್ರಸ್ತುತ ಇರುವವರಲ್ಲಿ ಅತ್ಯಂತ ಹಿರಿಯರಾಗಿದ್ದಾರೆ. ಹಾಜಿ ಅಬ್ದುಲ್ಲಾರವರ ಜೀವನ ಸಾಧನೆಯನ್ನು ಬಿಂಬಿಸುವ ಪುಸ್ತಕವನ್ನು ಸಹ ಇವರು ಪ್ರಕಟಿಸಿರುತ್ತಾರೆ.

Leave a Reply

Your email address will not be published. Required fields are marked *