Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮುಕುಂದೂರು ಸ್ವಾಮಿಗಳ ಕುರಿತು…

# ‘ಯೇಗ್ದಾಗೆಲ್ಲಾ ಐತೆ’ (ಶ್ರೀ ಮುಕುಂದೂರು ಸ್ವಾಮಿಗಳನ್ನು ಕುರಿತು ನೆನಪು), ಲೇಖಕರು: ಬೆಳಗೆರೆ ಕೃಷ್ಣ ಶಾಸ್ತ್ರೀ,

ಪ್ರಕಾಶನ: ಅಭಿನವ, ವಿಜಯನಗರ, ಬೆಂಗಳೂರು. ಪುಟಗಳು: 120, ಬೆಲೆ: 50.00, ಹನ್ನೆರಡನೇ ಮುದ್ರಣ: 2012.

ತುಂಬಿ (ಕವನ ಸಂಕಲನ), ಹಳ್ಳಿ ಚಿತ್ರ, ಹಳ್ಳಿ ಮೇಷ್ಟ್ರು, ಮರೆಯಲಾದೀತೇ (ಅಧ್ಯಾತ್ಮಿಕ ಸಾಧಕರು, ಸಮಾಜಸೇವಾ ಬಂಧುಗಳು, ಸಾಹಿತಿಗಳು ಮತ್ತು ಗ್ರಾಮೀಣ ಪ್ರತಿಭೆಗಳೊಡಗಿನ ನೆನಪುಗಳು), ಸಾಹಿತಿಗಳ ಸ್ಮೃತಿ (ಬೇಂದ್ರೆ, ವೀಸಿ, ರಾಜರತ್ನಂ, ಮಾಸ್ತಿ, ಡಿವಿಜಿ, ದೇವುಡು ಅವರೊಂದಿಗಿನ ನೆನಪುಗಳು), ಎಲೆಮರೆಯ ಅಲರು (ಮತ್ತಷ್ಟು ನೆನಪುಗಳು), ಪಾಶುಪತಾಸ್ತ್ರ (ನಾಟಕ) ಇತ್ಯಾದಿ ಕೃತಿಗಳಲ್ಲದೆ, ಇನ್ನೂ ಕೆಲವು ಅನುವಾದಿತ ಕೃತಿಗಳನ್ನು ನೀಡಿರುವ ಬೆಳಗೆರೆ ಕೃಷ್ಣ ಶಾಸ್ತ್ರೀಗಳು, ಅವಧೂತರೊಂದಿಗಿದ್ದು, ಅವಧೂತರಂತಾದವರು. ತಮ್ಮೂರು ಬೆಳಗೆರೆಯಲ್ಲಿ ಶಾರದಾ ಮಂದಿರ ಶಾಲೆಯನ್ನು ಸ್ಥಾಪಿಸಿ ಮುನ್ನಡೆಸಿದ ಕೃಷ್ಣ ಶಾಸ್ತ್ರೀಗಳು, ಸುಧೀರ್ಘ ಕಾಲ ದೇವನೂರು ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದವರು. ಈ ಅವಧಿಯಲ್ಲಿ ಅವಧೂತ ಶ್ರೀ ಮುಕುಂದೂರು ಸ್ವಾಮಿಗಳ ಜೊತೆಗೆ ಆಪ್ತ ಒಡನಾಟದಲ್ಲಿದ್ದು, ಅದೇ ನೆನಪಿನ ಬುತ್ತಿಯ ಬರಹವೇ ‘ಯೇಗ್ದಾಗೆಲ್ಲಾ ಐತೆ’.

ಸಿದ್ಧಿಗಳನ್ನು ಪಡೆದಿದ್ದರೂ, ಪ್ರಸಿದ್ದಿಗೆ ಬಾರದ ಅವಧೂತರಲ್ಲಿ ಶ್ರೀ ಮುಕುಂದೂರು ಸ್ವಾಮಿಗಳು ಒಬ್ಬರು. ತತ್ವ ಪದಗಳನ್ನು ಹಾಡುತ್ತಾ, ಜನಸಾಮಾನ್ಯರ ಜತೆಗೆ ಜನಸಾಮಾನ್ಯರಂತೆಯೇ ಬೆರೆಯುತ್ತಾ, ಸಾಹಿತಿಗಳ ಸಭೆಯಲ್ಲಿ ಸಾಹಿತಿಗಳ ಜತೆಗೆ ಕುಳಿತು ಅಧ್ಯಕ್ಷತೆ ವಹಿಸಿ ಭಾಷಣ ಮಾಡುತ್ತಿದ್ದ ಸ್ವಾಮಿಗಳು, 1968ರಲ್ಲಿ ಸಮಾಧಿಯಾದರು. ಅಂದಾಜು ನೂರ ನಲವತ್ತು ದಾಟಿ ಬಾಳಿ ಬದುಕಿದ ಮುಕುಂದೂರು ಸ್ವಾಮಿಗಳ ಅಮೂಲ್ಯ ಚಿಂತನೆಗಳು ಈ ಕೃತಿಯಲ್ಲಿ ದಾಖಲಿಸಲ್ಪಟ್ಟಿವೆ.

 • ಅದು ನೋಡಪ್ಪಾ ! ತಮಾಷೆ ಎಂಗೈಯ್ತೆ ! ನೀರೇ ಅದರಷ್ಟಕ್ಕದು ಹರಿದು ಹೋಗುತ್ತೆ. ಆ ಗುಳ್ಳೆಗಳು ಎಷ್ಟೊಂದು ಬಂದ್ವು ಇಲ್ಲಿ ! ಅಂಗೇ ಮುಂದೆ ನಡೀತವೆ ! ಅಗೋ ಅಲ್ಲಿ ನೋಡು ! ಅಲ್ಲಿಗೋಗೋ ಹೊತ್ಗೆ ಒಂದೂ ಇಲ್ಲ. ಿಲ್ಲಿ ಉಟ್ಟಿದ್ಯಾಕೆ ? ಅಲ್ಲಿಗಂಟ ಹೋಗೋದ್ಯಾಕೆ ? ಒಂದೂ ಇಲ್ದಂಗೆ ಹೋಗಿದ್ದೆಲ್ಲಿಗೆ ? (ನಗುತ್ತ) ಇದೊಳ್ಳೆ ಚೆನ್ನಾಗೈತೆ. ಹುಟ್ಟಿದ್ದೆಲ್ಲಿಂದ ? ಅಲ್ಲೀಗಂಟ ನಡೆದಿದ್ದು ಯಾವುದ್ರಾಗೆ ? ಒಂದೂ ಇಲ್ದಂಗೆ ಹೋಗಿದ್ದೆಲ್ಲಿಗೆ !?… ಹುಟ್ಟಿದ್ಯಾವ್ದು, ನಡಿದಿದ್ಯಾವ್ದು, ಹೋದದ್ಯಾವ್ದು ಎಲ್ಲ ನೀರೇ ! ಇಂಗೇ ಅಲ್ವೇ. ಯಾಕೋ ಏನೋ ಹುಟ್ಟೋದು ಅದರ ಸೆಳವಿನಾಗೇ ಅಷ್ಟು ದೂರ ಹೋಗೋದು, ಮತ್ತದರಾಗೆ ಕಾಣದಂಗಾಗೋದು ಇದೇ ಅಲ್ವೇ ಕೌತುಕ. ಯಾವ್ದೂ ಇಷ್ಟೇ, ಅಂತೂ ಕೌತುಕ ಅಂದ್ರೆ ಕೌತುಕ-ಇಲ್ಲಂದ್ರೆ ಏನೂ ಇಲ್ಲ.

 • ಮಸಾಣದಾಗೇ ಶಿವ ಇದ್ಧಾನಂತೆ, ಅರಿಚ್ಚಂದ್ರ ಶಿವನ್ನ ಕಂಡದ್ದು ಇಲ್ಲೇ ಅಂತೆ. ಇದು ರುದ್ರಭೂಮಿ ಅಂತಾರೆ (ನಗು) ಸಿಟ್ ಬಂದ್ರೆ ರುದ್ರ, ತಣ್ಣಗಾದರೆ ಶಿವ. ಎಲ್ಲ ನಮ್ಮೊಳಗೆ ಐತೆ.

 • ದೇವನೂರಿಗೇ ಈ ಊರು ಹತ್ತು ಮೈಲಿ ದೂರಾ ಅಂದ್ರೂ ಒಂದೇ, ಈ ಊರಿಗೆ ದೇವನೂರು ಹತ್ತು ಮೈಲಿ ದೂರಾ ಅಂದ್ರೂ ಒಂದೇ. ಈ ಕೆಳಗೆ-ಮೇಲೆ ದೊಡ್ಡದು ಸಣ್ಣದು ಅಂಬೋವೆಲ್ಲ ಒಂದ್ ಬಿಟ್ಟು ಒಂದಿಲ್ಲ. ಎಲ್ಲಾ ಏರುಪೇರು ಆಗೈತೆ ನೋಡು. ಒಂದೇ ಅಂತ ನೋಡಿದಾಗ ಕೆಳಗೂ ಇಲ್ಲ. ಮ್ಯಾಗೂ ಇಲ್ಲ. ಅಲ್ಲೂ ಇಲ್ಲ, ಇಲ್ಲೂ ಇಲ್ಲ. ಎಲ್ಲಿಂದೆಲ್ಲಿಗೋದ್ರೂ ಮುಗಿಯೋದೇ ಇಲ್ಲ ಅಂಬೋ ಈ ಜಗತ್ತಿನಾಗೇ ಈ ಕಲ್ ಬೆಂಚು ಯಾವ ದೊಡ್ದು ? ಎಷ್ಟು ಚಿಕ್ಕದು.

 • ನೋಡು, ಆ ಕಡೆ ಜೈಮುನಿ ಕತೆ, ಆ ಕತೆ ನಡ್ಸೋನು ಧರ್ಮರಾಯ ಅಂದ್ರೆ ಧರ್ಮಾನೇ ನಡೆಸೋದು. ಯಜ್ಞದ ಕುದ್ರೆ ಕಟ್ಟು ಅದ್ರ ಸವಾಲ್. ಆ ಕುದ್ರೆ ಅಂದ್ರೆ ಮನಸ್ಸು. ಅದರಿಚ್ಚೆ ಬಂದಂಗೆ ಹೋಗುತ್ತೆ. ಇನ್ನೊಬ್ಬರ ಆಜ್ಞೆ ಅದಕ್ಕಿಲ್ಲ. ಅಂದ್ರೆ ಧರ್ಮದ ಯಜ್ಞ ಮಾಡಾಕೆ ಮನಸ್ಸನ್ನು ಕಟ್ಟಬೇಕು. ಅದರಿಚ್ಚೆ ಬಂದಂಗೆ ಬಿಡೋದಲ್ಲ. ಎಲ್ರು ಪ್ರಯತ್ನ ಮಾಡ್ತಾರೆ. ಕೈಲಾಗೊಲ್ಲ. ಆ ಕುದುರೆ ಅಲ್ಲಿಂದ ಹಂಸಧ್ವಜ (ತಮ್ಮ ಮೂಗಿನ ಹೊಳ್ಳೆಗಳನ್ನು ಮುಟ್ಟಿ ಪ್ರಾಣಾಯಾಮದ ರೀತಿಯಲ್ಲಿ ತೋರಿಸುತ್ತಾ) ನೀಲಧ್ವಜ (ಕಣ್ಣು ಮುಚ್ಚಿ) ಬಬ್ರುವಾಹನ (ಕಣ್ಣು ಹುಬ್ಬು ಮತ್ತೆ ಭ್ರೂಮಧ್ಯವನ್ನು ಮುಟ್ಟಿ) ತಾಮ್ರ ಧ್ವಜ (ಶರೀರವನ್ನು ಮುಟ್ಟಿ) ವೀರವರ್ಮ, ಸಾಹಸ ಇವರ್ಯಾರ ಕೈಲು ಆಗಲಿಲ್ಲ. ಕೊನೆಗೆ ನೋಡು ಚಂದ್ರಹಾಸ –ಅಂದ್ರೆ- ಶಾಂತಿ ಸಮಾಧಾನ. ಅಲ್ಲಿ ಯುದ್ಧ ಇಲ್ಲ. ಧರ್ಮರಾಯ ಶಾಂತಿ, ಸಮಾದಾನ ಎಲ್ಲ ಜೊತೆಯಾಯ್ತು. ಸಂತೋಷ ಆನಂದ ಫಲ ಕೊಟ್ಟಿತು. ಆಗ ‘ಬಕದಾಲ ಮುನಿ’  (ಬಕದಾಲ್ಭ್ಯ) ಬಂದು ಆಶಿರ್ವಾದ ಮಾಡಿದ. ಆಗ ಈ ಮನಸ್ಸು ಅನ್ನೋ ಕುದ್ರೇನ ಬಲಿ ಕೊಟ್ಟಂಗಾಯ್ತು. ಅಲ್ಲಿಗೆಲ್ಲಾ ಬಟಾ ಬಯಲಾಗಿ ಒಂದೇ ಉಳಿತು, ಏನ್ ಸೊಗಸಾಗೈತೆ ಕತೇ.

 • ಹಿಂಗೇ ದೇವ್ರಿಗೆ ಕುರಿ, ಕೋಣ ಕಡೀತಾರೆ. ಇವ್ರುಳಗಿರೋ ಮಂಕುತನವೇ ಕುರಿ. ಅದನ್ನು ಕಡಿದ್ರೆ ಒಳ್ಳೆ ತಿಳುವಳಿಕೆ ಬರುತ್ತೆ. ಇವರಲ್ಲಿರೋ ಅಹಂಕಾರವೇ ಕೋಣ. ಅಂದ್ರೆ ಗರ್ವಕೊಂದ್ರೆ ಒಳ್ಳೆ ಸಜ್ಜನ ಆಗ್ತಾನೆ.ಇಂಥಾದ್ದು ಬಿಟ್ಟು ಕೆಟ್ ಗುಣಗಳನ್ನೆಲ್ಲ ಬೆಳೆಸಿಕೊಂಡು ಪಾಲ ಆ ಮೂಕ ಪ್ರಾಣಿಗಳನ್ನು ಕೊಂದು ದೇವ್ರಿಗೆ ಸಂತೋಷ ಮಾಡ್ತೀವಿ ಅಂದ್ರೆ ಅದು ಯಾವ ರೀತಿ !

 • ಭೂತಪ್ಪ, ಮಾರಮ್ಮ, ಹಿಂಗೇ ಹೆಣ್ಣು, ಗಂಡು ದೇವ್ರುಗಳನ್ನು ಹೆಸ್ರ ಕರೀತಾರೆ. ಕಣ್ಣಿಗೆ ಕಾಣೋ ಜಗತ್ತಿನಾಗೇ ಹೆಣ್ಣು ಗಂಡು ಅಂತ ನೋಡ್ತಾರೆ. ಅದ್ರಂತೆ ದೇವ್ರನ್ನೂ ಕರೀತಾರೆ. ಆದ್ರೆ ಇರೋದೊಂದೇ ಶಕ್ತಿ. ಇದೆಲ್ಲದಕ್ಕಿಂತ ಮುಂಚೆನೇ ಇದ್ದದ್ದು. ಅದ್ರಿಂದ್ಲೇ ಅದನ್ನು ಆದಿಶಕ್ತಿ ಅಂದ್ರು. ತಾಯಿ ಅಂದ್ರು. ಯಾಕೆಂದ್ರೆ ಈ ಜಗತ್ತೆಲ್ಲ ಅದರ ಸಂತಾನ. ಹೆಣ್ಣಿಗೆ ವೋಲಿಸ್ಕೊಂಡ್ರು, ಅದಕ್ಕೊಂದು ಗೊಂಬೆ ಮಾಡಿದ್ರು. ನೂರಾರು ಕಾಲು, ಕೈ, ಕಣ್ಣು, ಮೂಗು, ಎಲ್ಲ ಮಾಡಿದ್ರು. ಯಾಕಪ್ಪಾ ಅಂದ್ರೆ ಜಗತ್ ನಾಗೆ ಕಾಣ್ಸೋ ಎಲ್ಲಾ ಕೈಯೀ, ಕಾಲು, ಕಣ್ಣು, ಮೂಗು ಏನೇನೈತೋ ಅದೆಲ್ಲ ಶಕ್ತಿಗೇ ಸೇರಿದ್ದು ಅಂತ ಅದ್ರ ಲೆಕ್ಕ. ಅದು ಬಿಟ್ಟು ಈ ದಡ್ಡ ಜನ ಆ ಶಕ್ತೀನೆ ಹೆಣ್ಣು-ಗಂಡು ಅಂತ ಕರದ್ರೆ ಯಾರೇನ್ ಮಾಡ್ತಾರೆ ! ನೋಡು ಹೆಣ್ಣು ಗಂಡು ಅಂಬೋದೆಲ್ಲ ಸಿಪ್ಪೆ. ಇವರು ಸಿಪ್ಪೇನೇ ಇಡ್ಕಂಡು ಅದು ಬ್ಯಾರೆ ಇದು ಬ್ಯಾರೆ ಅಂತ ಕುಂತ್ರೇ ಹೊರತು ಒಳಗಳ ತಿರುಳು ಯಾರೂ ತಿನ್ಲಿಲ್ಲ.

 • ಒಂದು ಗಂಡು ಒಂದು ಯೆಣ್ಣು. ಪ್ರಪಂಚದ ಆಟ, ಗಂಡೊಂದು ಸಿಪ್ಪೆ. ಯೆಣ್ಣೊಂದು ಸಿಪ್ಪೆ. ಎರಡರ ಒಳಗೆ ಇರೋದೊಂದೇ ತಿರುಳು. ಆ ತಿರುಳು, ಬ್ಯಾರೆ ಅಲ್ಲ. ಅದರ ವರಗಡೆ ನೋಡೋಕೆ ಬ್ಯಾರೆ ಬ್ಯಾರೆ. ಒಂದು ಮೂಲ ವಿಗ್ರ. ಒಂದು ಮರ್ಯೋ ವಿಗ್ರ. ಮೂಲ ವಿಗ್ರ ಸುಂಕೆ ಕುಂತಿರುತ್ತೆ. ಆದರೆ ಮರ್ಯೋ ವಿಗ್ರ ಎಸರಿಗೆ ಸರಿಯಾಗಿ ಊರೆಲ್ಲಾ ಸುತ್ತಾಡಿ ಎಲ್ಲ ಯವರಾನೂ ಮಾಡುತ್ತೆ. ದೊಡ್ಡದು, ಮರ್ಯೋ ವಿಗ್ರ. ಅದಕ್ಕೆ ಅಧಿಕಾರ ಕೊಡೋದು ಮೂಲ. ಇದನ್ನೇ ಪ್ರಕೃತಿ ಪುರುಷ ಅಂದ್ರು. ಪ್ರಕೃತಿ ಪುರುಷಂದೇ, ಪುರುಷನಿಂದಲೇ ಬಂದದ್ದು. ಆದರೆ ಪುರುಷ ಯಾರಿಂದಲೂ ಬಂದಿದ್ದಲ್ಲ. ಅದು ತಾನೇ ತಾನಾಗಿ ಇನ್ನೊಂದರ ಆಧಾರವಿಲ್ಲದೆ, ಇನ್ನೊಂದರ ಕಾರಣವಿಲ್ಲದೆ ತನ್ನಷ್ಟಕ್ಕೆ ತಾನೆ ಐತೆ. ಅದು ಬಂದದ್ದು ಅಲ್ಲ. ಇರೋದು. ಅದು ಬಂದಿಲ್ಲ, ಆದ್ದರಿಂದ ವೋಗಲ್ಲ. ಅದು ವುಟ್ಟಿಲ್ಲ. ಆದ್ದರಿಂದ ಸಾಯೋದಿಲ್ಲ. ‘ನೆನೆಯದೊಣಗದು, ಸುಡದು ಸುಳಿಯದು ಘನ ಚಿದಂಬರವೆಂಬುದು’ ಅಂತ ಆಡ್ತಾರೆ ಅದನ್ನು ಕಂಡೋರು. ಆದರೆ ಆ ಮರ್ಯೋ ವಿಗ್ರ ಇಲ್ದಿದ್ರೆ ಮೂಲ ವಿಗ್ರ ತನ್ನಷ್ಟಕ್ಕೆ ತಾನೇ ಎಲ್ರಿಗೂ ಕಾಣಲ್ಲ. ನಾವು ಈ ಜಗತ್ತನ್ನೇ ಮರ್ಯೋ ವಿಗ್ರ ಅಂತ ನೋಡಬೇಕು. ಈ ಚಂದ್ರ, ಈ ಸೂರ್ಯ, ನಕ್ಷತ್ರಗಳು, ಚುಕ್ಕೆಗಳು, ಗಾಳಿ, ಮಳೆ, ಗಿಡ-ಮರ, ಬಳ್ಳಿ-ಗೂವು, ಹಣ್ಣು-ಕಾಯಿ, ಪ್ರಾಣಿ-ಪಕ್ಷಿ ಎಲ್ಲಾ ಈ ಮರ್ಯೋ ವಿಗ್ರಾನೆ. ಒಂದೇ ಕುಂತ್ಕಂಡು ಇವಕ್ಕೆಲ್ಲಾ ಪವರ್ ಕೊಟ್ಟು ಆಡ್ಸೋದು ಅದೇ ಚಿದಂಬರ ಶಕ್ತಿ. ಅದನ್ನೋಡ್ಕಂಡು ಇದು ಕುಣಿಯುತ್ತೆ. ಅಂತೂ ಇವೆರಡು ಸೇರಿದ್ರೇನೇ ಜಗತ್ತು. ಅಂಗೇ ಎರಡೂ ಕಲೆತು ಅನ್ಯೋನ್ಯವಾಗಿ ನಡೆದರೇನೇ ಸಂಸಾರ. ಇಲ್ದಿದ್ರೆ ನಿಸ್ಸಾರ-ದುಸ್ಸಾರ. ಮದಿವೆ ಅಂದ್ರೆ ಅದೆ ನೋಡಪ್ಪ. ಜೀವ ಅಂಬೋದು ಪಾರ್ವತಿ-ಪರಮೇಶ್ವರ ಸೇರೋದು. ಅರ್ಧ ನಾರೀಶ್ವರ ಅಂದ್ರೂ ಅದೇ.

 • ನೋಡಪ್ಪಾ, ದಸರತ ಅಂತ ಒಬ್ಬ. ಅಂಗಂದ್ರೇನು ? ಕರ್ಮೇಂದ್ರಿಯಗಳು ಐದು. ಜ್ಞಾನೇಂದ್ರಿಯಗಳು ಐದು. ಇವು ಅತ್ತು ಸೇರಿಸಿ ರಥ ಮಾಡಿಕೊಂಡು ಹತ್ತಿ ಸವಾರಿ ಮಾಡಿದ ಅವನು, ಅಂದ್ರೆ ಇಂದ್ರಿಯಗಳನ್ನು ಸ್ವಾಧೀನ ಮಾಡಿಕೊಂಡವನು ಯಾರೇ ಆಗಿರಲಿ ಅವನು ದಸರತ. ಅಂತವನು ಯಾವಗಲೂ ಸಂತೋಸಾನೇ ಪಡೀತಾನೆ. ಆ ಸಂತೋಸಾನೆ ರಾಮ. ಅವನೇ ಆನಂದ. ರಾಮ ಅಂದ್ರೆ ಆನಂದ. ಅವನ ತಮ್ಮಗಳು ಲಕ್ಷ್ಮಣ, ಭರತ, ಸತೃಗ್ನ, ಆನಂದದ ಬೆಳಕು ಮನಾನಂದ, ಆತ್ಮಾನಂದ, ಬ್ರಹ್ಮಾನಂದ. ಸೀತಮ್ಮನಿಗೆ ತಂದೆ ತಾಯಿ ಇಲ್ಲ. ಅಂಗೇ ತಾನಾಗೇ ಬಂದವಳು ಸೀತೆ, ಜ್ಞಾನಾಂಬಿಕೆ. ಜನಕ ರಾಜ ಯಗ್ನ ಮಾಡಿದ. ಸಾಧನೆ ಮಾಡಿದ. ಜ್ಞಾನಾಂಬಿಕೆ ಸಿಕ್ಕಿದಳು. ಕನಕರಾಜನು ರುಸೀನೂ ಆಗಿದ್ದ. ರಾಮ ಧನಸ್ಸು ಮುರಿದ. ಧನಸ್ಸು ಅಂದರೆ ಶರೀರ. ಇದನ್ನು ಮುರಿದ್ರು, ಅಂದ್ರೆ ಸ್ಥೂಲ ಶರೀರ ದಾಟಿ ವೋಗಿ ಸೀತೆಯನ್ನು ಪಡೆದ. ಅಲ್ಲಿಗೆ ರಾಮ ಅಂದರೆ ಆನಂದ, ಸೀತೆ ಅಂದರೆ ಜ್ಞಾನ. ಎರಡೂ ಬಂದದ್ದು ಅಂದರೆ ಜ್ಞಾನಾನಂದ ಅಂಬೋದು ಮೂಡಿಬಂತು. ಇನ್ನು ಮಾಯಾಮೃಗ. ಅದು ಜಿಂಕೆ. ಅಂದಮೇಲೆ ಇದ್ದ ಕಡೆ ಇರೋದಲ್ಲ. ಅದನ್ನ ಹಿಡ್ಕೊಂಡು ಬಾ ಅಂದ್ಲು ಸೀತಮ್ಮ. ರಾಮ ಕೊಂದೇಬಿಟ್ಟ. ಅಂದ್ರೆ ಈ ಜಗತ್ತಿನ ಐಶ್ವರ್ಯದ ಆಸೆ ಮಾಯೆ. ಅದನ್ನು ಕೊಂದುಬಿಟ್ಟ. ಅಂದ್ರೆ ಜ್ಞಾನಾನಂದ ಇದ್ದಲ್ಲಿ ಮಾಯೆ ಸತ್ತು ಹೋಗುತ್ತೆ ಅಂಬೋ ಮಾತು ಅದು. ರಾವಣ ಅತ್ತು ತಲೆ. ಅದೇ ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳು. ದಸರತ ಅವನ್ನೇ ರತ ಮಾಡಿಕೊಂಡು ಸವಾರಿ ಮಾಡ್ದ. ಅಂದ್ರೆ ಅವನ್ನ ತಾನೇಳ್ದಂಗೆ ಕೇಳಾಂಗೆ ಸ್ವಾಧೀನ ಮಾಡಿಕೊಂಡಿದ್ದ. ಅದೇ ರಾವಣಸುರ ಜ್ಞಾನೇಂದ್ರೀಯ, ಕರ್ಮೇಂದ್ರಿಯಗಳನ್ನು ತಲೆ ತುಂಬ ತುಂಬಿಕೊಂಡು ಅವನ್ನೇ ಒತ್ಕೊಂಡು ಓಡಾಡ್ತಿದ್ದ. ಅವು ಅವನ್ತಲೆ ಮೇಲೆ ಕುಂತು ಅವನ್ನ ಆಟ ಆಡಿಸ್ತಿದ್ವು. ಅಂದ್ರೆ ಇಂದ್ರಿಯಗಳಿಗೆ ದಾಸನಾಗಿದ್ದ. ಇವನಿಗೆ ಇಪ್ಪತ್ತು ಕೈಗಳು. ನಿಜ-ನಿಜ ಇಪ್ಪತ್ತು ಕೈಗಳು, ಸಪ್ತಧಾತುಗಳು ಸಪ್ತ ವ್ಯಸನಗಳು, ಅರಿಷಡ್ವರ್ಗಗಳು. ಅಲ್ಲಿಗೆ ಇಪ್ಪತ್ತು ಕೈಗಳು ಆದುವಲ್ಲಾ. ಅವುಗಳದೆ ಕಾರುಬಾರು. ಎಂಗೈತೆ ನೋಡು. ಅವನು ಸೀತಮ್ಮನನ್ನು ಬಯಸಿದ. ಅಂದರೆ ಜ್ಞಾನಾಂಬಿಕೆಯನ್ನು ಅಲ್ಲ. ಸಪ್ತಧಾತುಗಳು, ಸಪ್ತ ವ್ಯಸನಗಳು, ಅರಿಷಡ್ವರ್ಗಗಳನ್ನ ಒತ್ಕೊಂಡು ಮೆರೆಯೋರಿಗೆ ಜ್ಞಾನಾಂಬಿಕೆ ವಶವಾದಳೆ ? ಅವಳು ಅಶೋಕವನದಾಗಿದ್ಲು. ಅವಳಿಗೆ ಶೋಕ ಎಲ್ಲೀದು ? ನೋಡು ಸುಗ್ರೀವ ಅಂದ್ರೆ ಒಳ್ಳೆ ತಲೆ, ಅಂದ್ರೆ ಒಳ್ಳೇ ಯೋಚನೆಗಳು. ಜಾಂಬುವಂತ, ಅವನು ಬ್ರಮ್ಮನ ಮಗ, ಅಂದರೆ ಬ್ರಮ್ಮಾನಂದ. ಇನ್ನು ಆಂಜನೇಯ ಒಳ್ಳೆ ದೃಷ್ಟಿ ಇರೋ ಇವರೆಲ್ಲಾ ಆನಂದಾ ಅಂಬೋ ರಾಮರ ಗುಂಪು. ರಾವಣ ಅಂಬೋ ಅಹಂಕಾರ, ಮಮಕಾರಗಳನ್ನು ಕತ್ತರಿಸಿ ಆಕಿಬಿಟ್ರೆ ಆಗ ಒಳ್ಳೆ ಮನಸ್ಸು, ಒಳ್ಳೆ ದೃಷ್ಟಿ, ಬ್ರಮ್ಮಗ್ನಾನ, ಎಲ್ಲಾ ಒಂಝದಾದವು. ಅಂದ್ರೆ ಗ್ನಾನಾನಂದ ಸಿಕ್ಕಿತು. ನೋಡಪ್ಪ ಸಾಧಿಸಿದರೆ ಎಲ್ಲಾ ಇದ್ರಾಗೆ ಐತೆ ರಾಮಾಯಣ, ಇದೇ ಅದರ ಸಕೀಲು.

 • ಒಬ್ಬ ಅರಿಜನರ ಹುಡುಗ ದೇವರ್ ಗುಡಿಯಾಕೋದ್ರೆ ಆ ದೇವರಿಗೆ ಮೈಲಿಗೆ ಬಂದು ಸೂತ್ಕ ಆಯ್ತು ಅಂದ್ಮೇಲೆ ಆ ಇಂದುಳಿದೊನ ಪೌರು ಯಂತಾದ್ದಿರಬೇಕು ! ದೇವರ ಪವರಿನಿಂದ ಅವನು ಸುದ್ದ ಆಗಿ ಚೊಕ್ಕವಾಗ್ಬೇಕಪ್ಪ. ಅದು ಬಿಟ್ಟು ಅವನ ಸಕ್ತೀನೇ ದೊಡ್ ದಾಗಿ ದೇವರರೇ ಕೆಟ್ಟೋಯ್ತು ಅಂದ್ರೆ ಅದೆಂತ ದೇವ್ರು ?! ಸೋಜ್ಗಾ ನೋಡಪ್ಪ. ಇದಕ್ಕೇನನ್ನಬೇಕು !

ಶ್ರೀ ಮುಕುಂದೂರು ಸ್ವಾಮಿಗಳು ಮತ್ತು ಪುಸ್ತಕದ ಕುರಿತು…

 • ಶ್ರೀ ಸ್ವಾಮಿಗಳೇ ಹೇಳುತ್ತಿದ್ದಂತೆ ‘ಯಾರು ಯಾರಿಗೆ ಎಷ್ಟೆಷ್ಟು ಲಭ್ಯವೋ ಅಷ್ಟ್ಷಟೇ’- ಎಂಬ ಮಾತು ಸತ್ಯ. ಅವರನ್ನು ಸಂಪೂರ್ಣವಾಗಿ ಅರಿಯುವುದಾಗಲಿ, ವಿವರಿಸಿ ಹೇಳುವುದಾಗಲಿ ಅಸಾಧ್ಯದ ಮಾತು. ಅದರೂ ನನ್ನ ಕೈಲಾದಷ್ಟನ್ನು ಇಲ್ಲಿ, ಆಸಕ್ತರ ಮುಂದೆ ನಿವೇದಿಸಿಕೊಂಡಿದ್ದೇನೆ.

 • ಅವರ ಲೋಕಾನುಭವ, ಆಧ್ಯಾತ್ಮಿಕ ದೃಷ್ಟಿ, ಅವರದೇ ರೀತಿಯ ವಿಚಾರ, ನಿರೂಪಣಾ ವಿಧಾನ, ಸದಾ ನಕ್ಕು ನಗಿಸುವ ಸಹಜ ಆನಂದ, ಎಲ್ಲದರಲ್ಲೂ ಅವರದು ವಿಚಿತ್ರ ರೀತಿ. ಯಾವುದೇ ಜಾತಿ-ಮತ-ಸಂಘ, ಮೇಲು-ಕೀಳುಗಳನ್ನು ಮೀರಿ ನಿಂತ ಅವರೊಂದಿಗೆ ಉಂಟಾದ ದೀರ್ಘ ಸಂಪರ್ಕದಿಂದ ಅವರನ್ನು ಸ್ವಲ್ಪ ಮಟ್ಟಿಗಾದರೂ ಅರಿಯಲು ಸಾಧ್ಯವಾದುದು ನನ್ನ ಭಾಗ್ಯ. – ಬೆಳಗೆರೆ ಕೃಷ್ಣ ಶಾಸ್ತ್ರೀ (ಮೊದಲ ಮುದ್ರಣಕ್ಕೆ ಬರೆದ ಲೇಖಕರ ಮಾತು)

 • ಯಾವ ಮಹನೀಯ ಗುರುಗಳ ಸೇವೆ ಮಾಡಿ ಏನು ಉಪದೇಶ ಪಡೆದು, ಸಾಧನೆ ತಪಸ್ಸುಗಳನ್ನು ಮಾಡಿ ಸಿದ್ಧಿಯನ್ನು ಪಡೆದರೋ ಯಾರಿಗೂ ತಿಳಿಯದು. ತಂದೆ ತಾಯಿಗಳು ಯಾರೋ ತಿಳಿಯದು. ಕೇಳಿದರೆ ಪೂರ್ವಾಶ್ರಮದ ವಾಸನೆಯೂ ಗೊತ್ತಾಗದಂಥ ಮಾತುಗಳೇ ಉತ್ತರಗಳು. ವಯಸ್ಸು ಯಾವಾಗ ಎಂಬುದೂ ಖಚಿತವಿಲ್ಲ. ಸುಮಾರು 1952ರಲ್ಲಿ ಎಂಬತ್ತು ವರ್ಷ ವಯಸ್ಸು ದಾಟಿದವರೂ ‘ಈ ಸ್ವಾಮಿಗಳು ನನ್ನ ಮದುವೆಗೆ ಬಂದಿದ್ದರು’ ಎಂದು ಹೇಳುವುದುಂಟು. ಬೆಂಗಳೂರು-ಹರಿಹರ ರೈಲುಮಾರ್ಗ ಪ್ರಾರಂಭವಾದಾಗ ಅಲ್ಲಿ ಇವರು ಮಣ್ಣು ಹೊತ್ತಿದ್ದೂ ಉಂಟು. ಪಟ್ಟು ಬಿದ್ದು ವಯಸ್ಸೆಷ್ಟು ಎಂದು ಕೇಳಿದರೆ ಈ ಬೆಟ್ಟಗುಡ್ಡಕ್ಕೆ ಎಷ್ಟಾಗಿದೆ ಕೇಳಿಕೊಂಡು ಬಾ ಎಂದು ಹೇಳುವ ಉತ್ತರ ! ಬಳಕೆ ಇದ್ದವರ ಅಂದಾಜಿನಲ್ಲಿ ಸ್ವಾಮಿಗಳಿಗೆ ನೂರನಲವತ್ತರ ಅಂದಾಜು. ಆ ವಯಸ್ಸಿನಲ್ಲಿಯೂ ಬೆಟ್ಟಗುಡ್ಡಗಳಲ್ಲಿ ಸ್ವಚ್ಛಂದವಾಗಿ ನಡೆದಾಡುವ, ಕುಣಿದು ಕುಪ್ಪಳಿಸುವ ಶರೀರಸ್ವಾಸ್ಥ್ಯ ಮತ್ತು ‘ಯುವಮನೋಧರ್ಮ !’. ಯಾವ ಊರನ್ನೂ ತನ್ನ ಊರೆಂದು ಭಾವಿಸದ ಅಥವಾ ಎಲ್ಲ ಊರು, ಅಡವಿಗಳನ್ನು ತನ್ನ ಊರೆಂದು ಭಾವಿಸುವ ಪರಿವ್ರಾಜಕ. ಭಕ್ತಿ, ಜ್ಞಾನ, ವೈರಾಗ್ಯಗಳ ಸಮ್ಮೇಳನವಾಗಿದ್ದ ಇವರು ಹಾಸ್ಯ ಬೆರೆತ ಮಾತುಗಳನ್ನು ಬಳಸುವುದು ವಾಡಿಕೆ. ಈ ಮಾತುಗಳಲ್ಲಿ ಯೋಗೀಶ್ವರರ ತತ್ವ ವಿಚಾರ, ಪರಿಣತರ ಶ್ಲೇಷಾಲಂಕಾರ ಇತ್ಯಾದಿಗಳೆಲ್ಲ (ಗ್ರಾಮ್ಯ ಭಾಷೆಯೇ ಆದರೂ) ಯಥೇಚ್ಛವಾಗಿ ಇರುತ್ತಿದ್ದವು. – ಎನ್.ಆರ್.ಕಾಳಿಂಗಕೃಷ್ಣ (ಮೊದಲ ಮುದ್ರಣದ ಮುನ್ನುಡಿಯಿಂದ)

 • ಆಧುನಿಕ ಮನಸ್ಸು ಪ್ರತಿಯೊಂದನ್ನು ಪ್ರಶ್ನಿಸುವ, ಎಚ್ಚರಿಕೆಯಿಂದಲೇ ಗಮನಿಸಬೇಕಾದುದಕ್ಕೆ ಹೊಂದಿಕೊಂಡುಬಿಡುತ್ತದೆ. ಇದು ಆಧುನಿಕ ವಿಜ್ಞಾನ ಮತ್ತು ವೈಚಾರಿಕೆಯ ಫಲ. ಆದರೆ, ಇದು ಗೌಣವಾಗಿರಬೇಕೇ ಹೊರತು ಪ್ರಧಾನವಾಗಕೂಡದು. ಈ ಎಚ್ಚರದ ಆಳದಲ್ಲಿ ಶ್ರೀ ಮುಕುಂದೂರು ಸ್ವಾಮಿಗಳನ್ನು ಕುರಿತಂತೆ ಪುಸ್ತಕವನ್ನು ಓದುವುದೇ ಒಂದು ದಿವ್ಯಾನುಭವ. ಯೋಗ ವಾಸಿಷ್ಠ ಹೇಳುವ ಮಾತು ಹೀಗಿದೆ: ‘ಯಾವ ಗುರುವೂ, ಶಾಸ್ತ್ರವೂ ಎಂದೂ ದೇವರನ್ನು ತೋರಿಸಲಾರವು. ತನ್ನದೇ ಪರಿಶುದ್ಧಗೊಂಡ, ಪರಿಪೂರ್ಣಗೊಂಡ ಒಳದೃಷ್ಟಿಯಿಂದ ಪ್ರತಿಯೊಬ್ಬನು ಭಗವಂತನಲ್ಲಿ ತನ್ನ ಅಂತರಾತ್ಮನನ್ನಾಗಿ ಸಾಕ್ಷಾತ್ಕಾರ ಮಾಡಿಕೊಳ್ಳಬಹುದು. ಜ್ಞಾನಕ್ಕೆ ಇರುವ ಕೇವಲ ಮೂಲ ಒಂದೇ ಒಂದು. ನಮ್ಮ ಪ್ರತ್ಯಕ್ಷ ಅನುಭವ. ಈ ಅನುಭವವೇ ಎಲ್ಲ ಪ್ರಮಾಣಗಳಿಗೂ ಆಧಾರ. ಎಲ್ಲ ನದಿಗಳ ಮೂಲ ಸಮುದ್ರ ಹೇಗೋ ಹಾಗೆ ! ಅತ್ಯಂತ ಆಶ್ಚರ್ಯವೆಂದರೆ ‘ಯೇಗ್ದಾಗೆಲ್ಲಾ ಐತೆ’ ಕೃತಿಯ ಅಂತರ್ ಸಾಗತ್ಯದ ಬಂಧಕ್ಕೂ ಯೋಗವಾಸಿಷ್ಠದಲ್ಲಿರುವ ಬಂಧಕ್ಕೂ ಮೂಲ ಎಳೆ ಒಂದೇ ಇರುವುದು ಇದರಿಂದ ನಮಗೆ ತಿಳಿಯುತ್ತದೆ. ಶ್ರೀ ಮುಕುಂದೂರು ಸ್ವಾಮಿಗಳು ಒಂದು ಕಡೆ ಪವಾಡ ಪುರುಷರಂತೆ, ಮತ್ತೊಂದು ಕಡೆ ದೈವಿಕದಂತೆ, ಮಗದೊಂದು ಕಡೆ ಮುಗ್ದ ಮಗುವಿನಂತೆ ವರ್ತಿಸುತ್ತಾರೆ. ಇಲ್ಲಿರುವ ಪವಾಡವು ಒಂದು ಚಮತ್ಕಾರವಲ್ಲ. ಅದೊಂದು ವಿಶಿಷ್ಟ ಅನುಭವ.

– ಮಲ್ಲೇಪುರಂ ಜಿ. ವೆಂಕಟೇಶ್ (ಬೆರಗ ಬೆಳಗಿನ ಮಾಯೆಯಲ್ಲಿ)

        

 

 

Leave a Reply

Your email address will not be published. Required fields are marked *