Realtime blog statisticsweb statistics
udupibits.in
Breaking News
ಉಡುಪಿ: ಶಿರೂರು ಸ್ವಾಮೀಜಿ ವಿಧಿವಶ: ದೇಹದಲ್ಲಿ ವಿಶದ ಅಂಶ ಪತ್ತೆಯಾದ ಹಿನ್ನೆಲೆಯಲ್ಲಿ ಕೊಲೆ ಶಂಕೆ- ಉನ್ನತ ತನಿಖೆಗೆ ಒತ್ತಾಯ

ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಕರ್ತವ್ಯನಿಷ್ಟೆ ಅಭಿನಂದನೀಯ, ಅಕ್ರಮ ದಂಧೆಕೋರರ ಹೇಯಕೃತ್ಯಕ್ಕೆ ಪಕ್ಷ, ಸಂಘಟನೆಗಳ ಮೌನಸಮ್ಮತಿ ಶೋಚನೀಯ !

# ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಗಳಾದ ಶ್ರೀಮತಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ರವರ ಮೇಲೆ ಅಕ್ರಮ ಮರಳು ಮಾಫಿಯಾದ ಗೂಂಡಾಗಳು ಆಕ್ರಮಣ ನಡೆಸಿ ಕೊಲೆಗೆ ಯತ್ನಿಸಿದ ಅತ್ಯಂತ ಹೇಯ ಘಟನೆ ಇತ್ತೀಚೆಗೆ ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.

ಜಿಲ್ಲೆಯಲ್ಲಿ ಅಕ್ರಮ ಮರಳು ಮಾಫಿಯಾ ದಂಧೆಕೋರರು ಯಾವ ಮಟ್ಟಿಗೆ ಕೊಬ್ಬಿಹೋಗಿದ್ದಾರೆ ಎನ್ನುವುದಕ್ಕೆ ಈ ಕೃತ್ಯ ಒಂದು ಸಾಕ್ಷಿಯಷ್ಟೆ. ಇದೊಂದು ಕೆಟ್ಟ ಬೆಳವಣಿಗೆ. ಅಕ್ರಮದಿಂದಲೇ ಆರ್ಥಿಕವಾಗಿ ಬಲಿಷ್ಟರಾಗಿರುವ ಮರಳು ದಂಧೆಕೋರರು, ಇದೇ ಹಿನ್ನೆಲೆಯಲ್ಲಿ ರಾಜಕೀಯ ಪ್ರಭಾವಿಗಳು ಆಗಿರುವುದರಿಂದಲೇ ಇಂಥದೊಂದು ಆಕ್ರಮಣಕಾರೀ ಪ್ರವೃತ್ತಿ ಪ್ರದರ್ಶಿಸಲು ಕಾರಣವಾಗಿದೆ.

ರಾತ್ರಿ ಸಮಯದಲ್ಲಿಯೂ ನಿರಂತರವಾಗಿ ಅಕ್ರಮ ಮರಳು ದಂಧೆಯಲ್ಲಿ ತೊಡಗಿರುವ ಇವರಿಗೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳ ಭಯವಿಲ್ಲ. ಕಾರಣ, ಇವರಿಗೆ ದಂಧೆಕೋರರು ಕಾಲ ಕಾಲಕ್ಕೆ ಸಾಕಷ್ಟು ಕಪ್ಪ ಕಾಣಿಕೆ ಸಮರ್ಪಣೆ ಮಾಡಿರುತ್ತಾರೆ. ಆದುದುದರಿಂದ, ತಾವೇನು ಮಾಡಿದರೂ ನಡೆಯುತ್ತದೆ ಎಂಬ ಹಕೀಕತ್ತು ಇವರದ್ದು.

ಅಕ್ರಮ ದಂಧೆ ಉಡುಪಿ ಜಿಲ್ಲೆಗೆ ಹೊಸದಲ್ಲ. ಕಳೆದ ಹಲವು ವರ್ಷಗಳಿಂದ ಅಕ್ರಮ ಮರಳು ದಂಧೆ, ಅಕ್ರಮ ಕಲ್ಲುಗಣಿ ದಂಧೆ, ಭೂಮಿ ದಂಧೆ, ಮಟ್ಕಾ ದಂಧೆ, ಗಾಂಜಾ ದಂಧೆ ಇತ್ಯಾದಿಗಳು ಜಿಲ್ಲೆಯಾದ್ಯಂತ ಅವ್ಯಾಹತವಾಗಿ ನಡೆಯುತ್ತಿದೆ. ಮುಖ್ಯವಾಗಿ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಅಕ್ರಮ ದಂಧೆಕೋರರೊಂದಿಗೆ ಶಾಮೀಲಾಗಿರುವುದೇ ಇಂಥ ದಂಧೆಗಳು ಯಾವುದೇ ಅಡೆತಡೆಗಳೂ ಇಲ್ಲದೆ ಮುಮದುವರಿಯಲು ಕಾರಣವಾಗಿದೆ. ಓಟ್ ಬ್ಯಾಂಕ್ ರಾಜಕಾರಣದ ಕಾರಣಕ್ಕೆ ಇಂಥ ಅಕ್ರಮಗಳ ವಿರುದ್ಧ ಯಾವುದೇ ರಾಜಕೀಯ ಪಕ್ಷಗಳ ನಾಯಕರು, ಕಾರ್ಯಕರ್ತರು ಮತ್ತು ಕಾಲಕಾಲಕ್ಕೆ ದಂಧೆಕೋರರಿಂದ ಡೊನೇಷನ್ ಸಂದಾಯವಾಗುತ್ತಿರುವ ಕಾರಣಕ್ಕೆ ಸಂಘ ಸಂಸ್ಥೆಗಳು ಸಹ ಇಂಥ ಅಕ್ರಮಗಳ ವಿರುದ್ಧ ಧ್ವನಿ ಎತ್ತದೆ ಜಾಣ ಮೌನ ವಹಿಸುತ್ತವೆ. ಒಂದು ಪಕ್ಷ ಧ್ವನಿ ಎತ್ತಿದರೂ ಅದು ಸಾಂಕೇತಿಕವಾಗಿರುತ್ತವೆ ಅಥವಾ ಡೊನೇಷನ್ ಸಂಗ್ರಹಿಸುವ ಹಿಡೆನ್ ಅಜೆಂಡಾ ಹೊಂದಿರುತ್ತವೆ ಎನ್ನುವುದು ಗುಟ್ಟಿನ ವಿಷಯವಾಗೇನೂ ಉಳಿದಿಲ್ಲ.

ಮೊನ್ನೆ ಮೊನ್ನೆಯ ವರೆಗೆ ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿದ್ದ ಪ್ರಿಯಾಂಕ ಮೇರಿ ಫ್ರಾನ್ಸಿಸ್ ರವರು ಇತ್ತೀಚೆಗಷ್ಟೇ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅಧಿಕಾರ ಸ್ವೀಕರಿಸಿದ ಬೆನ್ನಿಗೆ ಅಕ್ರಮ ಮರಳು ದಂಧೆಯನ್ನು ನಿಯಂತ್ರಿಸುವ ಸಲುವಾಗಿ ಮಧ್ಯರಾತ್ರಿ ದಂಧೆ ನಡೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಜಿಲ್ಲಾಧಿಕಾರಿ ಪ್ರಿಯಾಂಕ ರವರ ಕರ್ತವ್ಯನಿಷ್ಠೆ, ದಕ್ಷತೆ ಮತ್ತು ಸಾಮಾಜಿಕ ಕಾಳಜಿಗೆ ಉಜ್ವಲ ನಿದರ್ಶಶನವಾಗಿದೆ ಈ ಕಾರ್ಯಾಚರಣೆ. ಇದಕ್ಕಾಗಿ ಪ್ರಿಯಾಂಕ ಮೇರಿಯವರನ್ನು ರಾಜ್ಯದ ಜನತೆ, ಅದರಲ್ಲೂ ಜಿಲ್ಲೆಯ ಸಮಸ್ತ ಜನತೆ ಹೃತ್ಪೂರ್ವಕವಾಗಿ ಅಭಿನಂದಿಸಬೇಕು.

ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ರವರ ಸಾಮಾಜಿಕ ಕಾಳಜಿ, ಕರ್ತವ್ಯ ನಿಷ್ಠೆ, ದಕ್ಷತೆ, ಧೈರ್ಯವನ್ನು ಮೆಚ್ಚುವ ಬದಲಾಗಿ, ಇದೀಗ ಕೆಲವರು ಅವರು, ದಾಳಿ ನಡೆಸುವ ಸಮಯದಲ್ಲಿ ಪೊಲೀಸರಿಗೆ ಮಾಹಿತಿ ಕೊಡದೆ, ಅವರ ಸಹಾಯ ಪಡೆದುಕೊಳ್ಳದೆ ಹೋಗಿದ್ದೇ ತಪ್ಪು ಎಂಬುದನ್ನು ಮುಂದಿಟ್ಟುಕೊಂಡು ಜಿಲ್ಲಾಧಿಕಾರಿಯವರು ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ದಾಳಿ ನಡೆಸಿದ್ದೇ ಬಹುದೊಡ್ಡ ಅಪರಾಧ ಎಂದು ಬಿಂಬಿಸುವ ಪ್ರಯತ್ನ ನಡೆಸುತ್ತಿದ್ದಾರೆ.

ಸಾಮಾನ್ಯ ಜನರಿಗೆ ಬಿಡಿ, ಜಿಲ್ಲಾಧಿಕಾರಿಯವರಿಗೇ ಜಿಲ್ಲೆಯ ಪೊಲೀಸ್ ವ್ಯವಸ್ಥೆಯ ಬಗ್ಗೆ ನಂಬಿಕೆ, ವಿಶ್ವಾಸ ಇರಲಿಲ್ಲ. ಪೊಲೀಸರಿಗೆ ನೀಡುವ ಮಾಹಿತಿಗಳು ನೇರವಾಗಿ ಅಕ್ರಮ ದಂಧೆಕೋರರಿಗೆ ತಲುಪುತ್ತಿತ್ತು ಎಂಬುದನ್ನು ಸ್ವತಹಾ ಜಿಲ್ಲಾಧಿಕಾರಿಯವರೇ ಅರ್ಥಮಾಡಿಕೊಂಡಿದ್ದರು. ಅದಕ್ಕಾಗಿಯೇ ಯಾರ ಸಹಾಯವೂ ಇಲ್ಲದೆ ಅವರು ಅಕ್ರಮವನ್ನು ಮಟ್ಟಹಾಕುವ ಆಶಯವನ್ನು ಜಾರಿಗೊಳಿಸಲು ಮುಂದಾದರು ಎನ್ನುವುದನ್ನು ಯಾರು ಬೇಕಾದರೂ ಊಹಿಸಬಹುದು. ಇಲ್ಲಿ ಬಹಳ ಮುಖ್ಯವಾದ ವಿಷಯವೆಂದರೆ, ಜಿಲ್ಲಾಧಿಕಾರಿಯವರೇ, ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ವಿಶ್ವಾಸ ಕಳೆದುಕೊಂಡಿದ್ದರು ಎಂದಮೇಲೆ, ಇನ್ನು ಪೊಲೀಸ್ ವ್ಯವಸ್ಥೆಯ ನೇರ ಫಲಾನುಭವಿಗಳಾದ ಶ್ರೀ ಸಾಮಾನ್ಯರಿಗೆ ಜಿಲ್ಲೆಯ ಪೊಲೀಸ್ ವ್ಯವಸ್ಥೆ ಬಗ್ಗೆ ಎಂಥೆಂಥ ಕಹಿ ಅನುಭವಗಳು ಆಗಿರಬೇಡ, ಅವರಾದರೂ ಈ ಹಣದ ಪರವಾಗಿರುವ ಪೊಲೀಸ್ ವ್ಯವಸ್ಥೆಯನ್ನು ಯಾಕಾದರೂ ನಂಬಬೇಕು ಎಂದು ಆಡಳಿತ ವ್ಯವಸ್ಥೆ ಯೋಚಿಸಿದೆಯೇ ಎಂಬುದಾಗಿದೆ.

ಜಿಲ್ಲಾಧಿಕಾರಿ ಪ್ರಿಯಾಂಕರವರಿಗೆ ಕುಲಗೆಟ್ಟ ವ್ಯವಸ್ಥೆಯ ಅರಿವಾಗಿದೆ. ಈ ಅರಿವಿನ ಹಿನ್ನೆಲೆಯೊಂದಿಗೆ ಅವರು ಇನ್ನು ಮುಂದಕ್ಕೆ ಇಂಥ ಕಾರ್ಯಾಚರಣೆಗೆ ದಕ್ಷತೆಯಿಂದ ಮುಂದಾಗಲಾರರು. ಸಮಾಜದ ಬೆಂಬಲವೂ ಪರಿಣಾಮಕಾರಿಯಾಗಿ ಲಭಿಸದೇ ಹೋದಾಗ ಹತಾಷೆ, ನಿರಾಶೆ ಮೂಡುವುದು ಸಹಜ. ಇದರ ನೇರ ನಷ್ಟ ಸಮಾಜಕ್ಕೇ ಹೊರತು ಬೇರಾರಿಗೂ ಅಲ್ಲ. ಲಾಭ ಮಾತ್ರ ನೇರವಾಗಿ ಅಕ್ರಮ ದಂಧೆಕೋರರಿಗೇ ಆಗಿರುತ್ತದೆ. ಪ್ರಿಯಾಂಕ ಮೇರಿ ಫ್ರಾನ್ಸಿಸ್ ರವರು ಒಬ್ಬರು ಐಎಎಸ್ ಅಧಿಕಾರಿ. ಅವರು ನಾಳೆ ಉಡುಪಿಯಿಂದ ವರ್ಗಾವಣೆಯಾಗಬಹುದು. ಆದರೆ, ಸಾಮಾಜಿಕ ಕಾಳಜಿ, ದಕ್ಷತೆ, ಕರ್ತವ್ಯ ನಿಷ್ಟೆ, ಧೈರ್ಯಶಾಲಿಯಾದ ಜಿಲ್ಲಾಧಿಕಾರಿ ಪ್ರಿಯಾಂಕರವರನ್ನು ಈಗ ಬೆಂಬಲಿಸದೇ ಹೋದಲ್ಲಿ, ದಂಧೆಕೋರರ ಹೇಯ ಕೃತ್ಯವನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಪ್ರತಿಭಟಿಸದೇ ಇದ್ದಲ್ಲಿ ಶಾಶ್ವತವಾದ, ತುಂಬಲಾರದ ನಷ್ಟವನ್ನು ಜಿಲ್ಲೆ ಅನುಭವಿಸಬೇಕಾಗಿ ಬರಲಿದೆ ಎನ್ನುವುದನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕಾಗಿದೆ.

ಅನಗತ್ಯ ವಿಷಯಗಳಿಗೆಲ್ಲ ಬೀದಿ ರಂಪ ಹಾದಿ ರಂಪ ಮಾಡುವ ರಾಜಕೀಯ ಪಕ್ಷಗಳು ಮತ್ತು ಸಂಘ ಸಂಸ್ಥೆಗಳು ಕೂಡಾ ಪ್ರಸ್ತುತ ಸಾರ್ವಜನಿಕರ ನಂಬಿಕೆ ಮತ್ತು ವಿಶ್ವಾಸವನ್ನು ಕಳೆದುಕೊಂಡಿದೆ. ಇದೇ ಕಾರಣಕ್ಕೇ, ಇಂಥ ಸಂಘ ಸಂಸ್ಥೆಗಳು ಇದೀಗ ಬಾಡಿಗೆ ಪ್ರತಿಭಟನಾಕಾರರನ್ನು ಅವಲಂಬಿಸಬೇಕಾದ ಶೋಚನೀಯ ಪರಿಸ್ಥಿತಿ ಬಂದಿದೆ. ಇನ್ನದರೂ ಜಿಲ್ಲೆಯ ಸಾಕ್ಷಿ ಪ್ರಜ್ಞೆಯಾಗಬೇಕಾದ ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ತಮ್ಮ ಆಶಯ ಮತ್ತು ಮನಸ್ಥಿತಿಯನ್ನು ಬದಲಾಯಿಸದೇ ಹೋದಲ್ಲಿ, ಇವರುಗಳನ್ನು ಮುಂದಿನ ನಾಗರಿಕ ಸಮಾಜ ಕ್ಷಮಿಸುವುದಿಲ್ಲ. ಎಲ್ಲರೂ ಎಷ್ಟು ಬೇಗ ಎಚ್ಚೆತ್ತುಕೊಂಡರೆ ಅಷ್ಟು ಬೇಗ ಎಲ್ಲರಿಗೂ ಒಳ್ಳೆಯದು.

 

Leave a Reply

Your email address will not be published. Required fields are marked *