Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 20 ಮಂದಿ ಗ್ರಾಮ ಲೆಕ್ಕಾಧಿಕಾರಿಗಳಿಗೆ (ವಿಎ) ವರ್ಗಾವಣೆ

ಕಪ್ಪಂದಕರಿಯದಲ್ಲೇ ರುದ್ರಭೂಮಿ ನಿರ್ಮಿಸುವಂತೆ ಹೈಕೋರ್ಟ್ ತೀರ್ಪು: ಹಿಂದೂಗಳ ದಶಕಗಳ ಬೇಡಿಕೆಗೆ ಜಯ- ಪಿಐಎಲ್ ಸಲ್ಲಿಸಿದ ಸುಧಾಕರ ಪೂಜಾರಿ, ಅಶ್ವಿನ್ ಲಾರೆನ್ಸ್ ರವರ ಸಾಧನೆಗೆ ಅಭಿನಂದನೆ

ಉಡುಪಿ: ಉಡುಪಿ ತಾಲೂಕು ಬೆಳ್ಳೆ ಗ್ರಾಮ ಪಂಚಾಯತ್ ನ ಕಟ್ಟಿಂಗೇರಿ ಗ್ರಾಮದ ಕಪ್ಪಂದಕರಿಯದಲ್ಲಿ ರುದ್ರಭೂಮಿಗೆ ಮೀಸಲಿರಿಸಿದ ಸ್ಥಳದಲ್ಲಿಯೇ ಮುಂದಿನ ಆರು ತಿಂಗಳ ಒಳಗಡೆ ರುದ್ರಭೂಮಿಯನ್ನು ನಿರ್ಮಿಸಬೇಕು ಎಂದು ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಸುಬ್ರೋ ಕಮಲ್ ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ರವರ ಪೀಠ ಮಹತ್ವದ ತೀರ್ಪು ನೀಡಿದೆ.

ಕಪ್ಪಂದಕರಿಯದ ಸರ್ವೇ ನಂಬ್ರ 171/1ಸಿ ಯ ಎರಡು ಎಕರೆ ಸರಕಾರಿ ಜಮೀನಿನ 20 ಸೆಂಟ್ಸ್ ಸ್ಥಳವನ್ನು 2000ನೇ ಡಿಸೆಂಬರ್ 10ರಂದು ಸರಕಾರ ಹಿಂದೂರುದ್ರಭೂಮಿಗೆಂದು ನಿಗದಿಪಡಿಸಿ ಬೆಳ್ಳೆ ಗ್ರಾಮ ಪಂಚಾಯತ್ ಗೆ ಹಸ್ತಾಂತರಿಸಿತ್ತು. ಆದರೆ ಕ್ಷುಲ್ಲಕ ರಾಜಕೀಯ ಕಾರಣಗಳಿಂದಾಗಿ ಗ್ರಾಮ ಪಂಚಾಯತ್ ಆಡಳಿತ ವ್ಯವಸ್ಥೆ ಹಿಂದೂ ರುದ್ರಭೂಮಿಯನ್ನು ನಿರ್ಮಿಸದೆ ಜವಾಬ್ದಾರಿಯಿಂದ ನುಣುಚಿಕೊಂಡು ಹಿಂದೂ ಸಮುದಾಯಕ್ಕೆ ದ್ರೋಹವೆಸಗಿತ್ತು.

ಬೆಳ್ಳೆ ಗ್ರಾಮ ಪಂಚಾಯತ್ ಆಡಳಿತವು ಹಿಂದೂ ರುದ್ರಭೂಮಿಗಾಗಿ ನಿಗದಿಪಡಿಸಿದ ಸ್ಥಳದಲ್ಲಿ ರುದ್ರಭೂಮಿ ನಿರ್ಮಿಸದೆ ಅನಗತ್ಯ ಮತ್ತು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದುದರಿಂದ ಬೇಸತ್ತ ನಾಗರೀಕರು ಹಲವು ಬಾರಿ ಮನವಿ ನೀಡಿದರೂ, ಸಭೆ ನಡೆಸಿದರೂ ಫಲ ಸಿಗದ ಹಿನ್ನೆಲೆಯಲ್ಲಿ ಕೊನೆಗೆ ನಾಗರೀಕರ ಪರವಾಗಿ ಗ್ರಾಮ ಪಂಚಾಯತ್ ಸದಸ್ಯ ಮತ್ತು ಸಾಮಾಜಿಕ ಕಾರ್ಯಕರ್ತರಾದ ಸುಧಾಕರ ಪೂಜಾರಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತರಾದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಅವರು ಉಚ್ಛ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಾಲಯವು ಆರು ತಿಂಗಳೊಳಗೆ ರುದ್ರಭೂಮಿ ನಿರ್ಮಿಸುವಂತೆ ತೀರ್ಪು ನೀಡಿದೆ.

ಹಿನ್ನೆಲೆ

ಉಡುಪಿ ತಾಲೂಕಿನ ಎರಡೆನೇ ಅತೀ ದೊಡ್ಡ ಗ್ರಾಮ ಪಂಚಾಯತ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಬೆಳ್ಳೆ ಗ್ರಾಮ ಪಂಚಾಯತ್ ಪ್ರದೇಶವು ಹಿಂದೂ ರುದ್ರಭೂಮಿಯ ಕೊರತೆಯನ್ನು ಎದುರಿಸುತ್ತಿತ್ತು. ಇದು ಗ್ರಾಮ ಪಂಚಾಯತ್ ಗೆ ಕಪ್ಪುಚುಕ್ಕಿಯಾಗಿಯೂ ಪರಿಣಮಿಸಿತ್ತು. ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ನಾಗರೀಕರ ಸಂಕಷ್ಟವನ್ನು ಅರಿತ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ರವರು ನಿಯಮಾವಳಿಯಂತೆ ಸಾರ್ವಜನಿಕ ಆಕ್ಷೇಪ ಆಹ್ವಾನಿಸುವುದ ಜೊತೆಗೆ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ ಬಳಿಕ 2000ನೇ ಡಿ.10ರಂದು ಹಿಂದೂ ರುದ್ರಭೂಮಿಗಾಗಿ 20 ಸೆಂಟ್ಸ್ ಸ್ಥಳವನ್ನು ಮೀಸಲಿರಿಸಿ ಆದೇಶ ಹೊರಡಿಸಿದ್ದರು.

2000ದಿಂದ 2008ರ ವರೆಗೆ ಗ್ರಾಮ ಪಂಚಾಯತ್ ಆಡಳಿತವು ರುದ್ರಭೂಮಿ ನಿರ್ಮಿಸದೆ ಗಂಭೀರ ಕರ್ತವ್ಯಲೋಪವೆಸಗಿತ್ತು. 2008ರಲ್ಲಿ ಗ್ರಾ.ಪಂ. ಆಡಳಿತವು ರುದ್ರಭೂಮಿ ನಿರ್ಮಿಸಲು ಮುಂದಾದಾಗ ಕೆಲವೇ ಕೆಲವು ಮಂದಿ ಗ್ರಾಮ ಪಂಚಾಯತ್ ವಿರುದ್ಧ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ (ಡಬ್ಲ್ಯೂ.ಪಿ.ನಂ.1426/2008) ಸಲ್ಲಿಸಿದ್ದರು. ಆದರೆ, ಈ ಅರ್ಜಿಯಲ್ಲಿ ಯಾವುದೇ ಹುರುಳಿಲ್ಲ ಎಂದು ನ್ಯಾಯಾಲಯವು ಅರ್ಜಿಯನ್ನು ವಜಾಗೊಳಿಸಿತ್ತು. ಆಕ್ಷೇಪ ವಜಾಗೊಂಡ ಬಳಿಕ ಹಿಂದೂ ರುದ್ರಭೂಮಿ ನಿರ್ಮಾಣ ಕಾರ್ಯವನ್ನು ಗ್ರಾ.ಪಂ. ಆಡಳಿತ ಕೈಗೆತ್ತಿಕೊಳ್ಳಬೇಕಾಗಿತ್ತಾದರೂ, ಆಡಳಿತ ವ್ಯವಸ್ಥೆ ತನ್ನ ಕರ್ತವ್ಯವನ್ನು ನಿರ್ವಹಿಸದೆ ಅನಗತ್ಯ ವಿಳಂಬ ಧೋರಣೆ ಮಾಡುತ್ತಾ ಮೊನ್ನೆ ಮೊನ್ನೆವರೆಗೂ ರಾಜಕೀಯ ಬೇಳೆ ಬೇಯಿಸುತ್ತಾ ದಿನ ದೂಡುತ್ತಿತ್ತು.

ಕಳೆದ 17 ವರ್ಷಗಳಿಂದಲೂ ಹಿಂದೂ ರುದ್ರಭೂಮಿಗಾಗಿ ನಿಗದಿಪಡಿಸಿದ ಸ್ಥಳದಲ್ಲಿ ಹಿಂದೂ ರುದ್ರಭೂಮಿ ನಿರ್ಮಿಸುವಲ್ಲಿ ಕನಿಷ್ಟ ಕರ್ತವ್ಯವನ್ನು ನಿರ್ವಹಿಸದೆ ಗ್ರಾ. ಪಂ. ಆಡಳಿತವು ಹಿಂದೂ ಸಮುದಾಯವನ್ನು ನಿರ್ಲಕ್ಷಿಸಿಕೊಂಡು ಬರುತ್ತಿರುವುದನ್ನು ಮನಗಂಡ ಗ್ರಾ.ಪಂ.ಸದಸ್ಯ ಸುಧಾಕರ ಪೂಜಾರಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಅಶ್ವಿನ್ ಲಾರೆನ್ಸ್ ರವರು ಸಾಮಾಜಿಕ ಕಾಳಜಿಯಿಂದ ಸಮಸ್ತ ಹಿಂದೂ ನಾಗರೀಕರ ಪರವಾಗಿ ಕರ್ನಾಟಕ ಉಚ್ಛ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಿದ್ದರು.

ಈ ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು, ಪ್ರಕರಣವನ್ನು ಕೂಲಂಕಷವಾಗಿ ವಿಚಾರಣೆ ನಡೆಸಿತು. ಸರಕಾರೀ ವಕೀಲರ ಅಭಿಪ್ರಾಯನ್ನೂ ಕೇಳಿತು. ಈ ಸಂದರ್ಭದಲ್ಲಿ, ಸರಕಾರೀ ವಕೀಲರು ಸಹ, ಹಿಂದೂ ರುದ್ರಭೂಮಿ ಮಿರ್ಮಿಸುವ ಸಲುವಾಗಿಯೇ ಸರಕಾರವು ಬೆಳ್ಳೆ ಗ್ರಾ.ಪಂ.ಗೆ ಸ್ಥಳ ನೀಡಿದ್ದರೂ, ಗ್ರಾ.ಪಂ. ಹಿಂದೂ ರುದ್ರಭೂಮಿ ನಿರ್ಮಿಸಿಲ್ಲ. ಗ್ರಾ.ಪಂ. ಆಡಳಿತ ವ್ಯವಸ್ಥೆ ಹಿಂದೂ ರುದ್ರಭೂಮಿಗೆಂದು ನಿಗದಿಪಡಿಸಿದ ಸರಕಾರೀ ಸ್ಥಳದಲ್ಲಿ ರುದ್ರಭೂಮಿ ನಿರ್ಮಿಸಲೇಬೇಕು ಎಂಬ ಅಭಿಪ್ರಾಯವನ್ನೇ ನೀಡಿದರು. ಅಂತಿಮವಾಗಿ ನ್ಯಾಯಮೂರ್ತಿಗಳಾದ ಸುಬ್ರೋ ಕಮಲ್ ಮುಖರ್ಜಿ ಹಾಗೂ ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ರವರ ಪೀಠವು ಜೂನ್ 5ರಂದು, ಮುಂದಿನ ಆರು ತಿಂಗಳ ಒಳಗೆ ಕಪ್ಪಂದಕರಿಯದ ಸರ್ವೇ ನಂಬ್ರ 171/1ಸಿಯ 20 ಸೆಂಟ್ಸ್ ಸ್ಥಳದಲ್ಲಿ ರುದ್ರಭೂಮಿ ನಿರ್ಮಿಸಬೇಕೆಂದು ತೀರ್ಪು ನೀಡಿದರು.

ಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಹಿಂದೂ ಸಮುದಾಯದ ದಶಕಗಳ ಅತೀ ಅಗತ್ಯದ ಮೂಲಭೂತ ಬೇಡಿಕೆಯಾಗಿದ್ದ ಹಿಂದೂ ರುದ್ರಭೂಮಿಗಾಗಿ ನ್ಯಾಯಾಲಯದ ಮೆಟ್ಟಿಲೇರಿ ಕಾನೂನು ಹೋರಾಟದ ಮೂಲಕ ರುದ್ರಭೂಮಿ ಬೇಡಿಕೆಯನ್ನು ಈಡೇರಿಸಿಕೊಟ್ಟ ಸುಧಾಕರ ಪೂಜಾರಿ ಹಾಗೂ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಇವರನ್ನು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಮಸ್ತ ಹಿಂದೂ ಸಮುದಾಯವು ಮುಕ್ತ ಕಂಠದಿಂದ ಅಭಿನಂದಿಸಿದೆ.

 

 

Leave a Reply

Your email address will not be published. Required fields are marked *