Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 20 ಮಂದಿ ಗ್ರಾಮ ಲೆಕ್ಕಾಧಿಕಾರಿಗಳಿಗೆ (ವಿಎ) ವರ್ಗಾವಣೆ

ತನಿಖೆ ನಡೆಸುವುದು ಬಿಟ್ಟು ತಪ್ಪು ವಿಳಾಸಕ್ಕೆ ದೂರರ್ಜಿ ವರ್ಗಾವಣೆ: ಬೇಜವಾಬ್ದಾರಿ, ಅದಕ್ಷತೆ ಮೆರೆದ ಎಸಿಬಿ !

ಉಡುಪಿ: ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ಮಲ್ಲೇಶ್ವರಂನಲ್ಲಿರುವ ಕಚೇರಿಯಲ್ಲಿರುವ ಜಂಟಿ ನಿರ್ದೇಶಕರ ವಿರುದ್ಧ ಬೆಂಗಳೂರಲ್ಲಿರುವ ಭ್ರಚ್ಟಾಚಾರ ನಿಗ್ರಹ ದಳ (ಎಸಿಬಿ)ದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ)ರಿಗೆ ನೀಡಿದ ದೂರನ್ನು, ಅಧಿಕಾರಿಗಳು ಒಂದಿಷ್ಟೂ ಪರಿಶೀಲನೆ ನಡೆಸದೆ ದೂರುದಾರರು ಉಡುಪಿಯವರು ಎಂಬ ಏಕೈಕ ಕಾರಣಕ್ಕೆ ಉಡುಪಿ ಎಸಿಬಿ ಡಿವೈಎಸ್ಪಿಯವರಿಗೆ ವರ್ಗಾಯಿಸಿ ಅತ್ಯಂತ ಬೇಜವಾಬ್ದಾರಿಯುತವಾಗಿ ನಡೆದುಕೊಂಡ ಪ್ರಸಂಗ ನಡೆದಿದೆ.

ಬೆಂಗಳೂರು ಎಸಿಬಿ ಅಧಿಕಾರಿಗಳ ಅದಕ್ಷತೆಯಿಂದಾಗಿ ಉಡುಪಿ ಎಸಿಬಿ ಪೊಲೀಸ್ ಕಚೇರಿಗೆ ವರ್ಗಾಯಿಸಲ್ಪಟ್ಟ ಗಂಭೀರ ಪ್ರಕರಣವೊಂದರ ದೂರರ್ಜಿಯನ್ನು, ಉಡುಪಿ ಎಸಿಬಿ ಅಧಿಕಾರಿಗಳು ಸಹ ಬೆಂಗಳೂರು ಎಸಿಬಿ ಅಧಿಕಾರಿಗಳಂತೆಯೇ ಅತ್ಯಂತ ಬೇಜಾವಾಬ್ದಾರಿಯುತವಾಗಿ ಮಣಿಪಾಲದ ರಜತಾದ್ರಿಯಲ್ಲಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ವರ್ಗಾಯಿಸಿ ಕೈತೊಳೆದುಕೊಳ್ಳುವ ಮೂಲಕ, ಎಸಿಬಿಯನ್ನು ಹಾಸ್ಯಾಸ್ಪದ ಸಂಸ್ಥೆಯನ್ನಾಗಿ ಪರಿವರ್ತಿಸಿದ್ದಾರೆ.

ಒಂದೂರಿಂದ ಇನ್ನೊಂದೂರಿಗೆ, ಒಬ್ಬರ ಮನೆಯಿಂದ ಮತ್ತೊಂದು ಮನೆಗೆ, ಒಂದು ಕಚೇರಿಯಿಂದ ಮಗದೊಂದು ಕಚೇರಿಗೆ ಪತ್ರಗಳನ್ನು ರವಾನಿಸುವ ಕೆಲಸವನ್ನು ಅಂಚೆ ಇಲಾಖೆಯ ಮೂಲಕ ಅಂಚೆ ನೌಕರರು ಅತ್ಯಂತ ವ್ಯವಸ್ಥಿತವಾಗಿ ಸೇವಾ ಮಾದರಿಯಲ್ಲಿ ಮಾಡುತ್ತಾರೆ. ಅಂಚೆ ಕಚೇರಿಗಳ ಮೂಲಕ ಹರಿದಾಡುವ ಪತ್ರಗಳು, ಸರಿಯಾದ ವಿಳಾಸಕ್ಕೆ ಸರಿಯಾದ ಸಮಯಕ್ಕೆ ತಲುಪುತ್ತವೆ. ಆದರೆ ಇಲ್ಲಿ, ಬೆಂಗಳೂರು ಮತ್ತು ಉಡುಪಿ ಭ್ರಚ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಾತ್ರ ತಾವೇ ತನಿಖೆ ನಡೆಸಬೇಕಾದ ಪ್ರಕರಣಕ್ಕೆ ಸಂಬಂಧಿಸಿದ ದೂರರ್ಜಿಯನ್ನು ತಪ್ಪು ವಿಳಾಸಕ್ಕೆ ವರ್ಗಾಯಿಸುವ ಮುಖಾಂತರ ಸಂಪೂರ್ಣ ಅದಕ್ಷತೆ ಮೆರೆದು ಈ ವರದಿಯನ್ನೋದಿದವರಿಂದ ‘ಬೂರ್ನಾಸ್ ಎಸಿಬಿ’ ಎಂದು ತೆಗಳುವಂತ ಶೋಚನೀಯ ಪರಿಸ್ಥಿತಿಯನ್ನು ಸೃಷ್ಟಿಸಿದ್ದಾರೆ.

ಪದವಿಪೂರ್ವ ಶಿಕ್ಷಣ ಇಲಾಖೆಯ ಬೆಂಗಳೂರು ಕಚೇರಿಯಲ್ಲಿರುವ ಜಂಟಿ ನಿರ್ದೇಶಕರು, ತಮ್ಮ ಕರ್ತವ್ಯದಲ್ಲಿ ಉದ್ಧೇಶಪೂರ್ವಕ ವಿಳಂಬಗತಿ, ಕಾನೂನು ಪಾಲನೆಯಲ್ಲಿ ನಿಯಮಾವಳಿ ಉಲ್ಲಂಘನೆ, ಪಕ್ಷಪಾತ, ಅಮಿಷಕ್ಕೆ ಬಲಿಯಾಗಿ, ಒತ್ತಡಕ್ಕೆ ಒಳಗಾಗಿ ಅಕ್ರಮ ಎಸಗಿದ್ದಾರೆ ಎಂಬ ಬಗ್ಗೆ ದೂರ್ಜಿದಾರರು ಆನ್ ಲೈನ್ ಮೂಲಕ ಮತ್ತು ರಿಜಿಸ್ಟರ್ಡ್ ಅಂಚೆ ಮೂಲಕ ಪ್ರತ್ಯೇಕವಾಗಿ ದೂರು ನೀಡಿದ್ದರು.

ಮೇ 8ರಂದು ಸಲ್ಲಿಸಲ್ಪಟ್ಟ ಈ ಲಿಖಿತ ದೂರನ್ನು, ಬೆಂಗಳೂರಿನಲ್ಲಿರುವ ಎಸಿಬಿ ಎಡಿಜಿಪಿ ಕಚೇರಿಯ ಬೇಜವಾಬ್ದಾರಿಯುತ ಮತ್ತು ಅದಕ್ಷ ಅಧಿಕಾರಿಗಳು ಕನಿಷ್ಟ ಮಟ್ಟದಲ್ಲೂ ಪರಿಶೀಲನೆ ನಡೆಸದೆ, ದೂರರ್ಜಿದಾರರು ಉಡುಪಿ ಜಿಲ್ಲೆಯವರು ಎಂಬ ಕಾರಣಕ್ಕೋ ಎಂಬಂತೆ, ಉಡುಪಿ ಎಸಿಬಿ ಡಿವೈಎಸ್ಪಿ ಕಚೇರಿಗೆ ವರ್ಗಾಯಿಸಿದ್ದಾರೆ. ಉಡುಪಿ ಎಸಿಬಿ ಡಿವೈಎಸ್ಪಿ ಕಚೇರಿಯ ಬೇಜವಾಬ್ದಾರಿಯುತ ಮತ್ತು ಅದಕ್ಷ ಅಧಿಕಾರಿಗಳು ಯಥಾ ರಾಜ, ತಥಾ ಪ್ರಜಾ ಎಂಬಂತೆ ಜೂನ್ 12ರಂದು, ‘ದೂರು ಅರ್ಜಿಗೆ ಸಂಬಂಧಿಸಿದ ವಿಚಾರಗಳು ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ರಜತಾದ್ರಿ ಮಣಿಪಾಲ ಇವರ ವ್ಯಾಪ್ತಿಗೆ ಒಳಪಡುವುದರಿಂದ ಅರ್ಜಿಯನ್ನು ಮುಂದಿನ ವಿಚಾರಣೆ ಮತ್ತು ಕ್ರಮದ ಬಗ್ಗೆ ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ ರಜತಾದ್ರಿ ಮಣಿಪಾಲ ಉಡುಪಿ ಜಿಲ್ಲೆ ರವರಿಗೆ ವರ್ಗಾಯಿಸಲಾಗಿದೆ’ ಎಂದು ಬರೆದು ಕೈತೊಳೆದುಕೊಂಡಿದ್ದಾರೆ.

ದೂರುದಾರರು, ದೂರರ್ಜಿಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ಬೆಂಗಳೂರು ಕಚೇರಿ ವಿಳಾಸವನ್ನು ಸ್ಪಷ್ಟವಾಗಿ ನಮೂದಿಸಿದ್ದರು. ಬೆಂಗಳೂರಿನಲ್ಲಿರುವ ಜಂಟಿ ನಿರ್ದೇಶಕರ ವಿರುದ್ಧ ಸಲ್ಲಿಸಿದ ದೂರಿನ ಆಧಾರದಲ್ಲಿ ಬೆಂಗಳೂರಿನ ಎಸಿಬಿ ಅಧಿಕಾರಿಗಳೇ ತನಿಖೆ ನಡೆಸುವುದು ಸರಿಯಾದ ಕ್ರಮವಾಗಿತ್ತು. ಆದರೆ ಬೆಂಗಳೂರಿನ ಎಸಿಬಿ ಅಧಿಕಾರಿಗಳು, ದೂರರ್ಜಿಯನ್ನು ಉಡುಪಿ ಎಸಿಬಿಗೆ ವರ್ಗಾಯಿಸಿ ತಪ್ಪೆಸಗಿದರು. ತಮ್ಮ ಮೇಲಾಧಿಕಾರಿಗಳು ಎಸಗಿದ ತಪ್ಪನ್ನು ಸರಿಪಡಿಸುವ ಕೆಲ ಮಾಡುವುದು ಬಿಟ್ಟು, ಉಡುಪಿ ಎಸಿಬಿ ಅಧಿಕಾರಿಗಳು, ದೂರರ್ಜಿಯನ್ನು ಉಡುಪಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ವರ್ಗಾಯಿಸುವ ಮೂಲಕ ತಪ್ಪಿನ ಮೇಲೆ ತಪ್ಪೆಸಗಿಬಿಟ್ಟಿದ್ದಾರೆ.

ಎಸಿಬಿ ಪೊಲೀಸ್ ಅಧಿಕಾರಿಗಳ ಪ್ರಕಾರ, ಉಡುಪಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಇದೀಗ ತಮ್ಮಿಂದ ಮೇಲಿನ ಅಧಿಕಾರಿಗಳಾದ ಬೆಂಗಳೂರಿನಲ್ಲಿರುವ ಜಂಟಿ ನಿರ್ದೇಶಕರ ವಿರುದ್ಧ ವಿಚಾರಣಾ ಪ್ರಕ್ರಿಯೆಯನ್ನು ಕೈಗೆತ್ತಿಕೊಳ್ಳಬೇಕು. ಇದು ಸಾಧ್ಯವೇ ? ಸಾಧುವೇ ? ತೀರಾ ಹಾಸ್ಯಾಸ್ಪದವಲ್ಲವೇ ಎಂಬ ಪ್ರಶ್ನೆಯನ್ನು ಎಸಿಬಿ ಅಧಿಕಾರಿಗಳು ತಮ್ಮ ತಮ್ಮಲ್ಲಿಯೇ ಕೇಳಿಕೊಂಡು ಉತ್ತರ ಕಂಡುಕೊಳ್ಳಬೇಕು. ಇದು ಬೆಳಕಿಗೆ ಬಂದ ಕೇವಲ ಒಂದು ಪ್ರಕರಣವಷ್ಟೆ. ಇನ್ನೆಷ್ಟು ದೂರರ್ಜಿಗಳನ್ನು ಎಸಿಬಿಯ ಬೇಜವಾಬ್ದಾರಿ ಮತ್ತು ಅದಕ್ಷ ಅಧಿಕಾರಿಗಳು ಹೀಗೆ ತಪ್ಪು ವಿಳಾಸಕ್ಕೆ ವರ್ಗಾಯಿಸಿದ್ದಾರೆ, ಕಸದ ಬುಟ್ಟಿಗೆ ಎಸೆದಿದ್ದಾರೆ, ಅವೈಜ್ಞಾನಿಕ, ಅಸಮರ್ಪಕ ತನಿಖೆ ನಡೆಸಿದ್ದಾರೆ ಎನ್ನುವುದು ಇನ್ನೊಂದು ಸಮಗ್ರ ತನಿಖೆಯಿಂದಲಷ್ಟೇ ಬಹಿರಂಗಕ್ಕೆ ಬರಬೇಕಾಗಿದೆ.

Leave a Reply

Your email address will not be published. Required fields are marked *