Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ.

ವಿಐಪಿ ಸಂಸ್ಕೃತಿಯಿಂದ ಒತ್ತಡದ ಬದುಕು: ಕೇಮಾರು ಶ್ರೀ

ಉಡುಪಿ: ಪ್ರಕೃತಿದತ್ತವಾಗಿರುವಂತೆ ಸ್ವಾಭಾವಿಕ ಬದುಕು ಮುನ್ನಡೆಸುವುದನ್ನು ಮರೆಯುತ್ತಿರುವ ಜನರು ವಿಐಪಿ ಸಂಸ್ಕೃತಿಯನ್ನು ಅತಿಯಾಗಿ ನೆಚ್ಚಿಕೊಂಡ ಪರಿಣಾಮ ಮಾನಸಿಕ ಹಾಗೂ ದೈಹಿಕ ಒತ್ತಡದಿಂದ ನಲುಗಿಹೋಗಿದ್ದಾರೆ ಎಂದು ಕೇಮಾರು ಶ್ರೀಕ್ಷೇತ್ರ ಶ್ರೀ ಈಶ ವಿಟ್ಟಲದಾಸ ಸ್ವಾಮೀಜಿ ವಿಶ್ಲೇಷಿಸಿದರು.

ಮೂಡುಬೆಳ್ಳೆ ಗೀತಾಮಂದಿರದಲ್ಲಿ ಜೂ. 18ರಂದು ಜರಗಿದ ಚಿಣ್ಣರ ದಶ ಯಕ್ಷ ಸಂಭ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

ಪ್ರತಿಷ್ಠೆ, ಅಧಿಕಾರ ವ್ಯಾಮೋಹ, ದುರಹಂಕಾರ ಇತ್ಯಾದಿಗಳು ಮನುಷ್ಯನನ್ನು ಸಮಾಜದಿಂದ ವಿಮುಖಗೊಳಿಸುತ್ತವೆ. ಇವುಗಳಿಂದ ವ್ಯಕ್ತಿ ತನ್ನ ಆತ್ಮದೊಂದಿಗಿನ ಸಂಬಂಧವನ್ನು ಕಡಿದುಕೊಳ್ಳುತ್ತಾನೆ. ಕ್ರಮೇಣ ಈ ದುರ್ಗುಣಗಳು ವ್ಯಕ್ತಿಯ ಅಧಃಪತನಕ್ಕೆ ಕಾರಣವಾಗುತ್ತವೆ. ಆಗ ಆತನ ಮಾನಸಿಕ ಸ್ಥೈರ್ಯ ಕುಗ್ಗುತ್ತದೆ. ಈ ಸಂದರ್ಭ ಆತನೊಂದಿಗೆ ಸಮಾಜವೂ ಇರುವುದಿಲ್ಲ, ಅಂತಃಪ್ರೇರಣೆಗೆ ಚೈತನ್ಯವೂ ದುರ್ಲಭವಾಗುತ್ತದೆ. ಆದ್ದರಿಂದ ಜನಸಾಮಾನ್ಯನಾಗಿ ಸಮಾಜದಲ್ಲಿ ಕಲೆತು ಬದುಕುವುದೇ ಆಧ್ಯಾತ್ಮವಾಗಿದೆ ಎಂದು ಅವರು ವಿವಿಧ ದೃಷ್ಟಾಂತಗಳನ್ನು ಆಧಾರವಾಗಿರಿಸಿ ವಿವರಿಸಿದರು.

ಕೂಡಿಟ್ಟ ಸಂಪತ್ತು ಇಲ್ಲದಿದ್ದರೂ, ತನ್ನ ಅಲ್ಪಸ್ವಲ್ಪ ಆದಾಯವನ್ನು ಹೊಂದಿಸಿಕೊಂಡು ಮಕ್ಕಳಿಗೆ ಯಕ್ಷಗಾನ ತರಬೇತಿ ಆಯೋಜಿಸಿರುವ ವಿಟ್ಠಲ್ ನಾಯಕ್ ಅವರ ಶ್ರಮ ಈ ದಶ ಸಂಭ್ರಮದ ಮೂಲಕ ಸಾರ್ಥಕವಾಗಿದೆ. ಅವರ ಈ ಕಲಾ ಸೇವೆ ಮುಂದುವರಿಯಲಿ ಹಾಗೂ ಇತರರಿಗೆ ಮಾದರಿಯಾಗಲಿ ಎಂದು ಅವರು ಹಾರೈಸಿದರು.

ಅಭಿನಂದನೆ, ಗುರುವಂದನೆ

ಕಾರ್ಯಕ್ರಮದಲ್ಲಿ ಯಶಸ್ವಿ 10 ಪ್ರದರ್ಶನಗಳನ್ನು ನೀಡಿದ ಕಿಶೋರ ಯಕ್ಷ ಪ್ರತಿಭೆಗಳನ್ನು ಸ್ವಾಮೀಜಿಯವರು ಅಭಿನಂದಿಸಿದರು. ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಿ ಅಣಿಗೊಳಿಸಿದ ಯಕ್ಷ ಗುರು ಸತೀಶ್ ಉಪಾಧ್ಯಾಯ ಅಂಬಲ್ಪಾಡಿ, ಭಾಗವತ ಬೆಳ್ಳೆ ಚಂದ್ರಕಾಂತ್ ರಾವ್, ಕಲಾಭಿಮಾನಿಗಳಾದ ನಿರಂಜನ್ ರಾವ್, ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಅವರನ್ನು ಸಮ್ಮಾನಿಸಲಾಯಿತು.

ದಶ ಸಂಭ್ರಮದ ರೂವಾರಿ ವಿಟ್ಠಲ್ ನಾಯಕ್, ನಾಲ್ಕುಬೀದಿ ಅವರನ್ನು ವಿನೂತನ ಶೈಲಿಯಲ್ಲಿ ಗಾನ ಸಮ್ಮಾನದ ಮೂಲಕ ಸಮ್ಮಾನಿಸಲಾಯಿತು. ಚಂದ್ರಕಾಂತ ರಾವ್ ಅವರು ಭಾಗವತಿಕೆಯಲ್ಲಿ ಗಾನ ಸಮ್ಮಾನ ನಡೆಸಿಕೊಟ್ಟರು. ಬಳಿಕ ಸ್ವಾಮೀಜಿಗಳು ಸಹಿತ ಗಣ್ಯರು ವಿಟ್ಠಲ್ ನಾಯಕ್‌ರನ್ನು ಸಮ್ಮಾನಿಸಿದರು.

ಬೆಳ್ಳೆ ಗ್ರಾಪಂ ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೆಳ್ಳೆ ಗ್ರಾಪಂ ಅಧ್ಯಕ್ಷೆ ರಂಜನಿ ಹೆಗ್ಡೆ, ಕಾಲಾವಿದ, ನಿವೃತ್ತ ಶಿಕ್ಷಕ ಬೆಳ್ಳೆ ಪದ್ಮನಾಭ ನಾಯಕ್, ವಿಹಿಂಪ ಅಧ್ಯಕ್ಷ ಜಯ ಸೇರಿಗಾರ, ಉದ್ಯಮಿಗಳಾದ ನಾಗರಾಜ ಕಾಮತ್, ಪುಂಡಲೀಕ ನಾಯಕ್, ಗ್ರಾಪಂ ಮಾಜಿ ಅಧ್ಯಕ್ಷ ಶಶಿಧರ ವಾಗ್ಳೆ, ಪಾಣಾರ ಸ.ಸೇ. ಸಂಘದ ಅಧ್ಯಕ್ಷ ಸುಧಾಕರ್ ಪಾಣಾರ, ಗ್ರಾಪಂ ಸದಸ್ಯರಾದ ಸುಧಾಕರ್ ಪೂಜಾರಿ, ಗುರುರಾಜ್ ಭಟ್, ವಿಟ್ಠಲ್ ನಾಯಕ್‌ರ ಸಹೋದರ ದೇವೇಂದ್ರ ನಾಯಕ್ ದಂಪತಿ, ರೂಪೇಶ್ ಕಲ್ಮಾಡಿ, ವಕೀಲ ಸಂತೋಷ್‍ ಕುಮಾರ್‍ ಮೂಡುಬೆಳ್ಳೆ ಮೊದಲಾದವರು ವೇದಿಕೆಯಲ್ಲಿದ್ದರು.

ಹರೀಶ್ ಪಾಟ್ಕರ್  ಹಾಗೂ ಸಂದೀಪ್ ನಾಯಕ್‍  ನಿರೂಪಿಸಿದರು. ಸಭಾಕಾರ್ಯಕ್ರಮಕ್ಕೂ ಮೊದಲು ಚಿಣ್ಣರಿಂದ 10ನೇ ಕಾರ್ಯಕ್ರಮವಾಗಿ ಕಂಸ ದಿಗ್ವಿಜಯ ಹಾಗೂ ಕಂಸ ವಧೆ ಯಕ್ಷಗಾನ ನಡೆಯಿತು. ಮುಮ್ಮೇಳದಲ್ಲಿ ಗೌರಿ ನಾಯಕ್‍, ವೈಷ್ಣವಿ ಭಟ್‍, ಪೂಜಾಶ್ರೀ, ಸುಶ್ಮಿತಾ, ಸವಿತಾ, ತೇಜಸ್ವಿ, ಶ್ರೀದೇವಿ, ದೀಕ್ಷಾ, ರಶ್ಮಿತಾ, ಸುದೀಪ್‍, ಜೀವನ್‍ ರಂಜಿಸಿದರು.  ಸಭೆಯ ಬಳಿಕ ಯಕ್ಷ ಗಾನಾಮೃತ ಜರಗಿತು.

Leave a Reply

Your email address will not be published. Required fields are marked *