Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಕಡಿಯಾಳಿ ದಾಮೋದರ ಐತಾಳರಿಗೆ ಕರ್ನಾಟಕ ಮಾಹಿತಿ ಆಯೋಗದಿಂದ 5000 ರು. ದಂಡ

ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ವಿರುದ್ಧ ಲೋಕಾಯುಕ್ತದಲ್ಲಿ ದೂರು ದಾಖಲು

ಉಡುಪಿ: ಉಡುಪಿ ತಾಲೂಕು ಮೂಡುಬೆಳ್ಳೆಯ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರನ್ನಾಗಿ ಸೇವಾ ಜೇಷ್ಠತೆಯಲ್ಲಿ ಒಂದನೇ ಸ್ಥಾನದಲ್ಲಿರುವವರನ್ನು ಕಡೆಗಣಿಸಿ, ಮೂರನೇ ಸ್ಥಾನದಲ್ಲಿರುವವರನ್ನು ನೇಮಕಾತಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾರ್ಯಕರ್ತರಾದ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಅವರು ನೀಡಿದ ದೂರನ್ನು ತನಿಖೆಗೆ ಸ್ವೀಕರಿಸಿರುವ ಕರ್ನಾಟಕ ಲೋಕಾಯುಕ್ತ ಇಲಾಖೆಯು, ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದೆ.

ಸಂತ ಲಾರೆನ್ಸ್ ಕಾಲೇಜನ್ನು ಮತೀಯ ಅಲ್ಪಸಂಖ್ಯಾತ ಸಂಸ್ಥೆ ಎಂದು ಇಲಾಖೆ ಇನ್ನೂ ಸಹ ಘೋಷಣೆ ಮಾಡದೆ ಇರುವ ಹಿನ್ನೆಲೆಯಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲರ ನೇಮಕಾತಿಯಲ್ಲಿ ಕಾಲೇಜಿನ ಸೇವಾ ಜೇಷ್ಠತೆಯಲ್ಲಿ ಮೊದಲ ಸಾಲಿನಲ್ಲಿರುವವರನ್ನೇ ಪ್ರಭಾರ ಪ್ರಾಂಶುಪಾಲರನ್ನಾಗಿ ನೇಮಕಾತಿ ಮಾಡಬೇಕಾಗಿತ್ತು. ಆದರೆ, ನಿಯಮಾವಳಿಯನ್ನು ನಿರ್ಲಕ್ಷಿಸಿದ ಕಾಲೇಜಿನ ಆಡಳಿತ ಮoಡಳಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಾಲೇಜಿನ ಸೇವಾ ಜೇಷ್ಠತೆಯಲ್ಲಿ ಮೂರನೇ ಸ್ಥಾನದಲ್ಲಿರುವವರನ್ನು ಪ್ರಭಾರ ಪ್ರಾಂಶುಪಾಲರನ್ನಾಗಿ ನೇಮಕಾತಿ ಮಾಡುವ ಮೂಲಕ, ನಿಯಮಾವಳಿ ಉಲ್ಲಂಘನೆ, ಸ್ವಜನ ಪಕ್ಷಪಾತ, ಕರ್ತವ್ಯಲೋಪ ಮತ್ತು ಈ ಸಂಬಂಧ ಇಲಾಖೆಗೆ ಬಂದ ದೂರಿನ ಮೇಲೆ ಸೂಕ್ತ ಕ್ರಮಗಳನ್ನು ಜರುಗಿಸುವಲ್ಲಿ ಉದ್ಧೇಶಪೂರ್ವಕ ವಿಳಂಬಗತಿಯನ್ನು ಅನುಸರಿಸಲಾಗಿತ್ತು. ಇದಕ್ಕೆ ಅಧಿಕಾರಿಗಳು ಭ್ರಷ್ಟಚಾರದಲ್ಲಿ ಶಾಮೀಲಾಗಿರುವುದೇ ಕಾರಣವಾಗಿದೆ ಎಂದು ಬಲವಾಗಿ ಸಂಶಯ ವ್ಯಕ್ತಪಡಿಸಲಾಗಿತ್ತು.

ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಒಟ್ಟು ಆರು ಮಂದಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಂಸ್ಥೆಯ ಆಡಳಿತ ಮಂಡಳಿಯು ಪ್ರಭಾರ ಪ್ರಾಂಶುಪಾಲರನ್ನಾಗಿ ಸೇವಾ ಜೇಷ್ಠತೆಯಲ್ಲಿ ಮೂರನೇ ಸ್ಥಾನದಲ್ಲಿರುವ ಇತಿಹಾಸ ಉಪನ್ಯಾಸಕರಾದ ನವೀನ್ ಕೊರೆಯಾ ಇವರನ್ನು ನೇಮಕ ಮಾಡಿದೆ ಮತ್ತು ಸರಕಾರದ 2014 ಜೂನ್ 18ರ ಆದೇಶದಂತೆ ಸಂಸ್ಥೆಯನ್ನು ಮತೀಯ ಅಲ್ಪಸಂಖ್ಯಾತ ಸಂಸ್ಥೆ ಎಂದು ಘೋಷಿಸಲಾಗಿಲ್ಲ ಎಂಬ ವರದಿಯನ್ನು ಸಲ್ಲಿಸಲಾಗಿದ್ದರೂ, ಜಂಟಿ ನಿರ್ದೇಶಕ (ಮಾನ್ಯತೆ ಮತ್ತು ಅನುದಾನ)ರು ಈ ಅಂಶಗಳನ್ನು ಪರಿಗಣಿಸದೆಯೇ ಪ್ರಭಾರ ಪ್ರಾಂಶುಪಾಲರನ್ನಾಗಿ ಸೇವಾ ಜೇಷ್ಠತೆಯಲ್ಲಿ ಮೂರನೇ ಸ್ಥಾನದಲ್ಲಿರುವ ನವೀನ್ ಕೊರೆಯಾ ಇವರನ್ನು ನೇಮಕ ಮಾಡಿದ ಆಡಳಿತ ಮಂಡಳಿಯ ಪ್ರಸ್ತಾವನೆಗೆ ಅನುಮೋದನೆ ನೀಡಿದ್ದಾರೆ ಎಂಬುದನ್ನು ತಮ್ಮ ವರದಿಯಲ್ಲಿ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದರು.

ಕಾಲೇಜಿನಲ್ಲಿ ಕಳೆದ 32 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸಂಖ್ಯಾಶಾಸ್ತ್ರ ಉಪನ್ಯಾಸಕರಾದ ಎಚ್.ದೇವರಾಯ ಶ್ಯಾನುಭೋಗ್ ರವರು 2020ರ ನವೆಂಬರ್ 30ರಂದು ನಿವೃತ್ತಿಯಾಗಲಿದ್ದು, ಸೇವಾ ಜೇಷ್ಠತೆಯಲ್ಲಿ ಹಿರಿಯರಾದ ಇವರನ್ನು ಕಾಲೇಜಿನ ಪ್ರಭಾರ ಪ್ರಾಂಶುಪಾಲರನ್ನಾಗಿ ನೇಮಕ ಮಾಡುವುದು ಸೂಕ್ತ ಎಂದು 2017ರ ಜನವರಿ 27ರಂದು ಜಂಟಿ ನಿರ್ದೇಶಕರಿಗೆ ಸಲ್ಲಿಸಿದ ಪ್ರಸ್ತಾವನೆಯಲ್ಲಿ ಉಪನಿರ್ದೇಶಕರು ಸ್ಪಷ್ಟಪಡಿಸಿದ್ದರು.

ವಿಷಯ ಹೀಗಿದ್ದರೂ, ಕರ್ನಾಟಕ ಪದವಿಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು, ಜಿಲ್ಲಾ ಉಪನಿರ್ದೇಶಕರ ಪ್ರಸ್ತಾವನೆಯನ್ನು ನಿರ್ಲಕ್ಷಿಸಿ, ನಿಯಮಾವಳಿಗಳನ್ನು ಕಡೆಗಣಿಸಿ, ಅಕ್ರಮ ಎಸಗಿರುವುದು ಸ್ಪಷ್ಟವಾದ ಕಾರಣ, ಅಶ್ವಿನ್ ಲಾರೆನ್ಸ್ ಅವರು ಜೂನ್ 2ರಂದು ಬೆಂಗಳೂರಿನಲ್ಲಿರುವ ಕರ್ನಾಟಕ ಲೋಕಾಯುಕ್ತ ಕಚೇರಿಗೆ ತೆರಳಿ ಖುದ್ದು ದೂರು ನೀಡಿದ್ದರು. ದೂರನ್ನು ವಿಚಾರಣೆಗೆ ಸ್ವೀಕರಿಸಿಕೊಂಡಿರುವ ಇಲಾಖೆಯು, ಜಂಟಿ ನಿರ್ದೇಶಕರ ವಿರುದ್ಧ ಕೇಸು ದಾಖಲಿಸಿಕೊಂಡಿದೆ (compt/lok/mys/1443/2017).

Leave a Reply

Your email address will not be published. Required fields are marked *