Realtime blog statisticsweb statistics
udupibits.in
Breaking News
ಉಡುಪಿ: ಬೈಲೂರು ನಿವಾಸಿ, ಮಿಷನ್ ಕಂಪೌಂಡ್ ಸ್ಟಾಂಡ್ ನ ರಿಕ್ಷಾ ಚಾಲಕ, ಮಾಲಕ ರಾಘವೇಂದ್ರ ಭಟ್ (ರಾಘು ಭಟ್) ನಿಧನ.

ಪುಸ್ತಕಲೋಕ: ‘ಲೂಲು ಟ್ರಾವೆಲ್ಸ್’ express ಕತೆಗಳು

ಪುಸ್ತಕ: ‘ಲೂಲು ಟ್ರಾವೆಲ್ಸ್’ express ಕತೆಗಳು

ಕತೆಗಾರರು: ಪ್ರಸಾದ್ ಶೆಣೈ ಕಾರ್ಕಳ,

ಪ್ರಕಾಶನ: ಬಿಳಿಕಲ್ಲು ಪ್ರಕಾಶನ, ಬೋರ್ಗಲ್ ಗುಡ್ಡೆ, ಅಂಚೆ: ನಿಟ್ಟೆ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ, ಪಿನ್ ಕೋಡ್: 574110, ಮೊಬೈಲ್: 8762055656.

ಪ್ರಥಮ ಮುದ್ರಣ: 2015, ಪುಟಗಳು: 190+4, ಬೆಲೆ: 100.00.

# ಕಾರ್ಕಳದಲ್ಲಿ ಜನಿಸಿದ ಕತೆಗಾರ ಪ್ರಸಾದ್ ಶೆಣೈ ಯವರು, ಇಲ್ಲಿನ ಭುವನೇಂದ್ರ ಕಾಲೇಜಿನಲ್ಲಿ ಕಲಾ ವಿಭಾಗದಲ್ಲಿ ಪದವಿವನ್ನು ಪಡೆದು, ಉಜಿರೆಯ ಎಸ್.ಡಿ.ಎಂ. ಕಾಲೇಜಿನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನೂ ಪಡೆದವರು. ಪ್ರಸ್ತುತ ಪತ್ರಕರ್ತರಾಗಿರುವ ಇವರು, ಆರಂಭದಲ್ಲಿ ವಿಜಯ ಕರ್ನಾಟಕ, ಬಳಿಕ ಪ್ರಜಾವಾಣಿ ಮತ್ತು ಸಧ್ಯ ಉದಯವಾಣಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ತಾನು ಬರೆದ ಕತೆಗಳ ಪೈಕಿ, ಒಟ್ಟು ಹದಿನೇಳು ಕತೆಗಳನ್ನು ಆಯ್ದು ‘ಲೂಲು ಟ್ರಾವೆಲ್ಸ್’ ಮೂಲಕ ಓದುಗರಿಗಾಗಿ ಕಟ್ಟಿಕೊಟ್ಟಿದ್ದಾರೆ.

# ಮೊದಲ ಕತೆ ಕನ್ನಡಪ್ರಭ ಸಾಪ್ತಾಹಿಕದ ಮುಖಪುಟದಲ್ಲಿ ಪ್ರಕಟಗೊಂಡಾಗ ನಾನು ಕಳೆದೇ ಹೋಗಿದ್ದೆ. ಆ ಮೇಲೆ ಕಾಡಿದ ಪ್ರಕರಣಗಳನ್ನೆಲ್ಲಾ ತೀವ್ರ ಕಾಡಿದ ಚಿತ್ರಗಳನ್ನೆಲ್ಲಾ ನಮ್ಮ ನಡುವೆಯೇ ಇದ್ದ ವಿಭಿನ್ನ ವ್ಯಕ್ತಿಗಳನ್ನೆಲ್ಲಾ ಹಿಡಕೊಂಡು ಕತೆ ಬರೆಯೋ ಹುಚ್ಚು ಶುರುವಾಯ್ತು. ಬರೆದ ಕತೆಗಳಿಗೆ ಪ್ರಜಾವಾಣಿ, ವಿಜಯವಾಣಿ, ತುಷಾರ, ವಿಜಯ ನೆಕ್ಸ್ಟ್ ಪತ್ರಿಕೆಗಳಿಂದ ಪುರಸ್ಕಾರ ಲಭಿಸಿವೆ. ಬರೆದದ್ದೆಲ್ಲಾ ಪ್ರಕಟವಾದಾಗ, ಪತ್ರಿಕೆಯ ಕಥಾ ಸ್ಪರ್ಧೆಗಳಲ್ಲಿ ಬಹುಮಾನ ಬಂದಾಗ ’ನಿಜವಾಗ್ಲೂ ನನ್ನ ಕತೆಗೆ ಬಹುಮಾನ ಬಂತಾ !’ ಎಂದು ಬೆರಗಾಗುತ್ತಾ ಇನ್ನೂ ಸ್ವಲ್ಪ ಬರೆಗೆ. ಹಾಗೆ ಹುಟ್ಟಿದ ಕತೆಗಳು ಈ ಲೂಲು ಟ್ರಾವೆಲ್ಸ್ ನಲ್ಲಿವೆ. ಬೆಳ್ತಂಗಡಿ, ನಾರಾವಿ, ಹೊಸ್ಮಾರು, ನೆಲ್ಲಿಕಾರು, ನಲ್ಲೂರು ಇವೆಲ್ಲ ಪಶ್ಚಿಮ ಘಟ್ಟದ ತಡಿಯಲ್ಲಿ ಕನಸು ಕಾಣುತ್ತಾ ಮಲಗಿರುವ ಪುಟ್ಟ ಊರುಗಳು. ಕಡ್ತೂರಿರಂಗನ್ ವರದಿಯ ಭಯದ ಕರಿನೆರಳಲ್ಲಿ ಬಿದ್ದು, ಹುಲಿ ಯೋಜನೆಯ ಚಿಂತೆಯಲ್ಲಿ ಒಮ್ಮೊಮ್ಮೆ ಕಂಗಾಲಾಗುತ್ತಾ, ಇದ್ದುದರಲ್ಲಿ ತೃಪ್ತಿಪಟ್ಟುಕೊಳ್ಳುವ ಇಲ್ಲಿನ ಜನರ ಬದುಕು ಭಯಾನಕ. ಅಷ್ಟೇ ರೋಚಕ. ಈ ಊರಿನ ಎಲ್ಲಾ ಕನಸುಗಳನ್ನು ಅತ್ತಿಂದಿತ್ತ ಸರಬರಾಜು ಮಾಡುವ ಒಂದಿಷ್ಟು ಬಸ್ಸುಗಳು ಇಲ್ಲಿನ ಕತೆಗಳಿಗೆ ಮೂಲ. ಹಾಗಾಗಿ ಇಲ್ಲಿನ ಅನೇಕ ಕತೆಗಳಲ್ಲಿ ಬಸ್ಸಿನ ಹಾರ್ನು ಕೇಳಿದರೆ ಅದು ಬಸ್ಸು ನನ್ನ ಮೇಲೆ ಮಾಡಿದ ಪ್ರಭಾವವಷ್ಟೆ. ಉಳಿದೆಲ್ಲಾ ಪಾತ್ರಗಳು ನಮ್ಮ ಸುತ್ತಣ ತೋಟದಲ್ಲಿ ಬೆಳೆದ ದಾಸವಾಳುಗಳು. (‘ಬಸ್ಸು ಹೊರಡುವ ಮುನ್ನ’ ದಲ್ಲಿ ಕತೆಗಾರ ಪ್ರಸಾದ್ ಶೆಣೈ)

# ಬರೆಯುತ್ತಾ ಬರೆಯುತ್ತಾ ಲೇಖಕನ ವಯಸ್ಸೂ, ಲೋಕಾನುಭವಗಳೂ ಬೆಳೆಯುತ್ತಾ ಹೋದ ಹಾಗೇ ಆತ ತನಗೆ ತಾನೇ ತನ್ನ ಬರಹಗಳನ್ನು ಸಂಕಲಿಸುತ್ತಾ ಹೋಗುತ್ತಾನೆ. ಹಿಂದೆ ಬರೆದದ್ದು ಆತನಿಗೆ ಕೆಲವೊಮ್ಮೆ ಬಾಲಿಶವಾಗಿಯೂ ಕಾಣಿಸಬಹುದು. ಹಿಂದೆ ಬರೆದಾಗ ಜುಮ್ಮೆನಿಸಿದ ಸಂಗತಿಗಳು ಈಗ ಓದಿದಾಗ ನಗುವನ್ನೂ ತರಿಸಬಹುದು. ಹೀಗೆ ನಗು ಬಾರದೆ ಲೇಖಕನೊಬ್ಬ ತಾನು ಬರೆದ್ದೆಲ್ಲ ಮಂತ್ರ ಅಂತ ಅಂದುಕೊಂಡರೆ ಅದು ಅವನ ಅವನತಿ ಎಂದು ಸುಲಭವಾಗಿ ಗ್ರಹಿಸಲ್ಪಡುತ್ತದೆ. ಕಥೆಗಾರನ ಜೊತೆ ಜೊತೆಗೇ ಬೆಳೆಯುವ ಪಾತ್ರಗಳಿಗೂ ವಯಸ್ಸಾದ ಮೇಲೆ ಇಂತಹದೇ ನಗು ಬರಬಹುದು. ಉದಾಹರಣೆಗೆ ಈ ಸಂಕಲನದ ಮೊದಲ ಕತೆ ‘ಕತೆಯಂತಹ ಕತೆ’ಯ ಕಥಾ ನಾಯಕಿಯ ಮಿಡ್ಲ್ ಕ್ಲಾಸ್ ಜೀವನ ಶೈಲಿ. ಬರೆದ ಕಥೆಗಾರನಿಗೂ ಬದುಕಿದ ಕಥಾ ನಾಯಕಿಗೂ ಹಲವು ಕಾಲದ ನಂತರ ಇದೆಲ್ಲಾ ಸುಳ್ಳು ಅನಿಸಬಹುದು. ಸಾಧಾರಣ ಕಥೆಗಳಿಗಿರುವ  ಮಿತಿ ಇದು.  ಇಂತಹ ಮಿತಿಗಳಿಲ್ಲದ ಕಥೆಗಳು ಕಾಲವನ್ನು ದಾಟಿಯೂ ಬದುಕುತ್ತವೆ. ಅಂತಹ ಹಲವು ಕಥೆಗಳನ್ನು ನೀವು ಈ ಸಂಕಲನದಲ್ಲಿ ಬರೆದಿದ್ದೀರಿ. ನಮ್ಮ ಸುತ್ತಲಿನ ಹಲವು ಸೃಜನಶೀಲ ಯುವ ಮನಸ್ಸುಗಳು ತಮ್ಮೆಲ್ಲ ಶಕ್ತಿ ಸಾಮರ್ಥ್ಯಗಳನ್ನು ಮರೆತು ಅಸಹನೆ ಮತ್ತು ಅಪನಂಬಿಕೆಗಳ ಅಗ್ನಿಕುಂಡದ ಸುತ್ತ ಚಳಿ ಕಾಯಿಸಿಕೊಳ್ಳುತ್ತಿರುವಂತಹ ಈ ಹೊತ್ತಲ್ಲಿ ನೀವು ಕಥೆ ಹೇಳುವ ದಾರಿ ಹಿಡಿದು ಹೊರಟಿರುವುದು ನನಗಂತೂ ಖುಷಿಯ ವಿಷಯ.  (‘ಮುನ್ನುಡಿ’ಯಲ್ಲಿ ಅಬ್ದುಲ್ ರಶೀದ್)

 

Leave a Reply

Your email address will not be published. Required fields are marked *