Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹಾಜಿ ಅಬ್ದುಲ್ಲಾ ಸರಕಾರಿ ಆಸ್ಪತ್ರೆ ಖಾಸಗೀಕರಣ ವಿವಾದ: ಕಾನೂನುಬದ್ಧ ವಿಚಾರಣೆ ನಡೆಸಲು ಕಿರಿಯ ನ್ಯಾಯಾಲಯಕ್ಕೆ ಹಿರಿಯ ನ್ಯಾಯಾಲಯ ಆದೇಶ !

ಉಡುಪಿ: ಹಾಜಿ ಅಬ್ದುಲ್ಲಾ ಸ್ಮಾರಕ ಉಡುಪಿ ಜಿಲ್ಲಾ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರ ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿ ಅವರಿಗೆ ಬಹುಕೋಟಿ ಮೌಲ್ಯದ ಜಮೀನಿನ ಸಹಿತ  ಅಕ್ರಮವಾಗಿ ಹಸ್ತಾಂತರಿಸಿದ ಪ್ರಕರಣದ ಬಗ್ಗೆ ಹಾಜಿ ಅಬ್ದುಲ್ಲಾರವರ ಸಂಬಂಧಿ ಹಾಗೂ ಇತರರು ಸಲ್ಲಿಸಿದ ಅಪೀಲನ್ನು ವಿಚಾರಣೆ ನಡೆಸಿದ ಉಡುಪಿ ಹೆಚ್ಚುವರಿ ಹಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ವಿವೇಕಾನಂದ ಎಸ್.ಪಂಡಿತ್ ಅವರು, ಪ್ರರಕಣವನ್ನು ಕಾನೂನುಬದ್ಧವಾಗಿ ಮರು ವಿಚಾರಣೆ ನಡೆಸಿ ಇತ್ಯರ್ಥಪಡಿಸುವಂತೆ ಆದೇಶಿಸಿ ಮೂರನೇ ಹೆಚ್ಚುವರಿ ಕಿರಿಯ ನ್ಯಾಯಾಲಯಕ್ಕೆ ಅಪೀಲು ಪ್ರಕರಣದ ದಾಖಲೆಗಳನ್ನು ವರ್ಗಾಯಿಸಿದ್ದಾರೆ.

ಹಾಜಿ ಅಬ್ದುಲ್ಲಾ ಸ್ಮಾರಕ ಜಿಲ್ಲಾ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಗೆ ಹಾಜಿ ಅಬ್ದುಲ್ಲಾರವರು 1902-03ರ ಅವಧಿಯಲ್ಲಿ  ಜಮೀನು ದಾನ ಮಾಡಿದ್ದರು. ಆಸ್ಪತ್ರೆಗಾಗಿ ಜಮೀನು ದಾನ ಮಾಡುವ ಸಂದರ್ಭದಲ್ಲಿ ಆಸ್ಪತ್ರೆಯನ್ನು ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ಹಸ್ತಾಂತರಿಸಬಾರದು ಎಂಬ ಪ್ರಮುಖ ಶರತ್ತಿನೊಂದಿಗೆ ಇತರ ಕೆಲವು ಶರತ್ತುಗಳನ್ನೂ ಹಾಜಿ ಅಬ್ದುಲ್ಲಾ ಸಾಹೇಬರು ಅಂದಿನ ಮದ್ರಾಸ್ ಸರಕಾರದೊಂದಿಗೆ ಮಾಡಿದ ಒಪ್ಪಂದ ಪತ್ರದಲ್ಲಿ ಶರತ್ತು ವಿಧಿಸಿದ್ದರು. ದಾನ ಮಾಡಿದ ಜಮೀನಿನಲ್ಲಿ ಆಸ್ಪತ್ರೆ ನಿರ್ಮಿಸಲು ಸಹ ಹಾಜಿ ಅಬ್ದುಲ್ಲಾ ಸಾಹೇಬರು ಆರ್ಥಿಕ ನೆರವು ನೀಡಿದ್ದರು.

ರಾವ್ ಬಹದ್ದೂರ್ ಖಾಜಿ ಹಾಜಿ ಅಬ್ದುಲ್ಲಾ ಸಾಹೇಬರು ದಾನ ಮಾಡಿದ ಜಮೀನು ಸಹಿತ ಆಸ್ಪತ್ರೆ ಕಟ್ಟಡವನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ, ಆರೋಗ್ಯ ಸಚಿವ ರಮೇಶ್ ಕುಮಾರ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಇವರ ನೇತೃತ್ವದ ಕರ್ನಾಟಕದ ಕಾಂಗ್ರೆಸ್ ಸರಕಾರ ಅಕ್ರಮವಾಗಿ ಹಾಗೂ ಏಕಪಕ್ಷೀಯವಾಗಿ ಬಹುಕೋಟಿ ಉದ್ಯಮಿ ಬಿ.ಆರ್ ಶೆಟ್ಟಿಯವರಿಗೆ ಹಸ್ತಾಂತರಿಸಿ ಜನದ್ರೋಹವೆಸಗಿತ್ತು.

ಕಳೆದ ವರ್ಷ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ವಜ್ರ ಖಚಿತ ಕೈ ಗಡಿಯಾರವೊಂದನ್ನು ಉಡುಗೊರೆಯಾಗಿ ಪಡೆದ ಪ್ರಕರಣ ವಿವಾದಕ್ಕೆ ಕಾರಣವಾಗಿದ್ದು, ಆ ಕೈ ಗಡಿಯಾರವನ್ನು ಬಿ.ಆರ್.ಶೆಟ್ಟಿಯವರಿಗೆ ಸೇರಿದ ಆಸ್ಪತ್ರೆಯಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಯೊಬ್ಬರು ಸಿದ್ಧರಾಮಯ್ಯನವರಿಗೆ ನೀಡಿದ್ದರು ಎಂದು ಬಳಿಕ ಹೇಳಲಾಗಿತ್ತು. ಹಾಜಿ ಅಬ್ದುಲ್ಲಾರವರು ದಾನ ಮಾಡಿದ ಜಮೀನಿನಲ್ಲಿರುವ ಸರಕಾರಿ ಆಸ್ಪತ್ರೆಯನ್ನು ಹಸ್ತಾಂತರಿಸಿದ್ದಕ್ಕೆ ಪ್ರತಿಯಾಗಿ ಸಿದ್ಧರಾಮಯ್ಯನವರಿಗೆ ಕೈಗಡಿಯಾರವನ್ನು ಉಡುಗೊರೆಯಾಗಿ ನೀಡಲಾಯಿತು ಎಂದೂ ಈ ನಡುವೆ ಬಲವಾಗಿ ಶಂಕಿಸಲಾಗಿದೆ.

ಈ ಮಧ್ಯೆ, ಹಾಜಿ ಅಬ್ದುಲ್ಲಾ ಸಾಹೇಬರವರ ಶರತ್ತುಗಳನ್ನು ಸಾರಾ ಸಗಟು ಉಲ್ಲಂಘಿಸಿ, ಅಕ್ರಮವಾಗಿ ಆಸ್ಪತ್ರೆಯನ್ನು ಬಿ.ಆರ್.ಶೆಟ್ಟಿಯವರಿಗೆ ಹಸ್ತಾಂತರಿಸಿರುವುದನ್ನು ವಿರೋಧಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿ, ಹಲವು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗದ ಹಿನ್ನೆಲೆಯಲ್ಲಿ, ಹಾಜಿ ಅಬ್ದುಲ್ಲಾ ಸಾಹೇಬರವರ ಸಂಬಂಧಿ ಖುರ್ಷಿದ್ ಅಹಮ್ಮದ್ ಹಾಗೂ ಇತರ 17 ಮಂದಿ ಸಾರ್ವಜನಿಕ ಪ್ರತಿನಿಧಿಗಳು ಎರಡು ತಿಂಗಳ ಹಿಂದೆ ಉಡುಪಿ ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಪಬ್ಲಿಕ್ ರೆಪ್ರೆಸೆಂಟಿಟೀವ್ ದಾವೆಯನ್ನು ದಾಖಲಿಸಿದ್ದರು.

ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರಾದ ರಾಮ ಪ್ರಶಾಂತ್ ಅವರು, ದಾವೆಯನ್ನು ಸರಿಯಾಗಿ ವಿಚಾರಣೆಗೆ ಒಳಪಡಿಸದೆ, ಆಸ್ಪತ್ರೆ ಹಸ್ತಾಂತರವನ್ನು ಪ್ರಾಶ್ನಿಸುವ ಹಕ್ಕು ನಿಮಗಿಲ್ಲ ಎಂದು ತೀರ್ಪು ನೀಡಿ ಖುರ್ಷಿದ್ ಅಹಮ್ಮದ್ ಹಾಗೂ ಇತರರ ದಾವೆಯನ್ನು ವಜಾಗೊಳಿಸಿದ್ದರು.

ಕಿರಿಯ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ದಾವೆಯನ್ನು ಸರಿಯಾಗಿ ವಿಚಾರಣೆ ನಡೆಸದೆ ವಜಾಗೊಳಿಸಿದ್ದಾರೆ ಎಂಬ ವಾದದೊಂದಿಗೆ ಖುರ್ಷಿದ್ ಅಹಮ್ಮದ್ ಹಾಗೂ ಇತರರು, ಹೆಚ್ಚುವರು ಹಿರಿಯ ಸಿವಿಲ್ ನ್ಯಾಯಾಲಯಕ್ಕೆ ಅಪೀಲ್ ಸಲ್ಲಿಸಿದ್ದರು. ಅಪೀಲ್ ನ್ನು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ವಿವೇಕಾನಂದ ಎಸ್.ಪಂಡಿತ್ ಅವರು, ಅಪೀಲ್ ದಾರರ ಪರ ನ್ಯಾಯವಾದಿ ಎಂ.ಕೃಷ್ಣರಾಜ ಆಚಾರ್ಯರವರ ವಾದವನ್ನು ಪುರಸ್ಕರಿಸಿ, ಪ್ರಕರಣವನ್ನು ಸರಿಯಾಗಿ ವಿಚಾರಣೆ ನಡೆಸಿ ಕಾನೂನುಬದ್ಧವಾಗಿ ಇತ್ಯರ್ಥಪಡಿಸುವಂತೆ ಸೂಚಿಸಿ ಜುಲೈ 10ರಂದು ಪ್ರಕರಣವನ್ನು ಕಡತಗಳ ಸಹಿತ ಕಿರಿಯ ಸಿವಿಲ್ ನ್ಯಾಯಾಲಯಕ್ಕೆ ವರ್ಗಾಯಿಸಿದ್ದಾರೆ. ಕೂಡಲೇ ಪ್ರಕರಣದ ಟ್ರಯಲ್ ನ್ನು ಆರಂಭಿಸುವಂತೆ ಆದೇಶಿಸಿದ್ದಾರೆ.

ಹಿರಿಯ ಸಿವಿಲ್ ನ್ಯಾಯಾಲಯವು ಸಾರ್ವಜನಿಕ ಪ್ರತಿನಿಧಿತ್ವದ ದಾವೆದಾರರ ಪರವಾಗಿ ನೀಡಿದ ಆದೇಶದಿಂದಾಗಿ, ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಗೆ ತನ್ನ ಹೋರಾಟದಲ್ಲಿ ಮಹತ್ವದ ಮುನ್ನಡೆ ಸಿಕ್ಕಿದಂತಾಗಿದೆ. ಮಾತ್ರವಲ್ಲ, ಕಿರಿಯ ಸಿವಿಲ್ ನ್ಯಾಯಾಲಯದಲ್ಲಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿಯ ಪರವಾಗಿ ಖುರ್ಷಿದ್ ಅಹಮ್ಮದ್ ಹಾಗೂ ಇತರರು ದಾಖಲಿಸಿದ ದಾವೆಯನ್ನು ನ್ಯಾಯಾಧೀಶರಾದ ರಾಮ ಪ್ರಶಾಂತ್ ಅವರು ಸರಿಯಾಗಿ ಮತ್ತು ಕಾನೂನುಬದ್ಧವಾಗಿ ವಿಚಾರಣೆ ನಡೆಸದೆ ದಾವೆಯನ್ನು ವಜಾಗೊಳಿಸಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ. ನ್ಯಾಯಾಧೀಶರು ಯಾಕೆ ಹೀಗೆ ಮಾಡಿದರು ಎಂಬುದು ಇದೀಗ ಸಾರ್ವಜನಿಕ ಚರ್ಚೆಗೂ ಕಾರಣವಾಗಿದೆ.

ರಾಜ್ಯ ಸರಕಾರವು ಅಕ್ರಮವಾಗಿ ಸರಕಾರಿ ಆಸ್ಪತ್ರೆಯನ್ನು ಬಿ.ಆರ್.ಶೆಟ್ಟಿಯವರಿಗೆ ಹಸ್ತಾಂತರಿಸಿದ ಬಳಿಕ, ಆಸ್ಪತ್ರೆ ಜಮೀನಿನ ಒಂದು ಭಾಗದಲ್ಲಿ ನೂತನ ಆಸ್ಪತ್ರೆ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ಇನ್ನೊಂದು ಭಾಗದಲ್ಲಿ ನಿರ್ಮಿಸಲಿರುವ ಆಸ್ಪತ್ರೆ ಕಟ್ಟಡಕ್ಕೆ, ಇತ್ತೀಚೆಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಊಡುಪಿ ಕೃಷ್ಣ ದೇವಸ್ಥಾನದ ರಾಜಾಂಗಣದಲ್ಲಿ ಪೇಜಾವರ ಸ್ವಾಮೀಜಿ, ಸಚಿವರಾದ ರಮೇಶ್ ಕುಮಾರ್, ಪ್ರಮೋದ್ ಮಧ್ವರಾಜ್ ಮೊದಲಾದವರ ಸಮಕ್ಷಮ ಶಿಲನ್ಯಾಸ ನೆರವೇರಿಸಿದ್ದರು. ತಾವು ಶಿಲನ್ಯಾಸ ನೆರವೇರಿಸುತ್ತಿರುವುದು ಅಕ್ರಮವಾಗಿ ಹಸ್ತಾಂತರಿಸಿದ ಆಸ್ಪತ್ರೆ ಜಮೀನಿನಲ್ಲಿ ಎನ್ನುವುದನ್ನು ಹಲವರು ಪತ್ರ ಬರೆದು, ಈ ಮೇಲ್ ಮಾಡಿ, ಫ್ಯಾಕ್ಸ್ ಸಂದೇಶ ಕಳುಹಿಸಿ ರಾಷ್ಟ್ರಪತಿಯವರಿಗೆ ಎಚ್ಚರಿಸಿದ್ದರಾದರೂ, ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಸಾರ್ವಜನಿಕ ವಿರೋಧವನ್ನು ಕಡೆಗಣಿಸಿ ಅಕ್ರಮ ಆಸ್ಪತ್ರೆ ಕಟ್ಟಡಕ್ಕೆ ಶಿಲನ್ಯಾಸ ನೆರವೇರಿಸಿದ್ದರು.

 

 

ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರ ಈ ಖಾಸಗಿ ಕಾರ್ಯಕ್ರಮಕ್ಕಾಗಿ ಅವರ ಕೆಲವೇ ಕೆಲವು ಗಂಟೆಗಳ ಕಾಲದ ವಿಶ್ರಾಂತಿಗಾಗಿ, ರಾಜ್ಯ ಸರಕಾರ ಮತ್ತು ಉಡುಪಿ ಜಿಲ್ಲಾಡಳಿತವು ಬನ್ನಂಜೆ ಪ್ರವಾಸಿ ಬಂಗಲೆಯಲ್ಲಿನ ಒಂದು ಕೊಠಡಿಯನ್ನು 35 ಲಕ್ಷ ರು. ವೆಚ್ಚ ಮಾಡಿ ಅತ್ಯಾಧುನಿಕವಾಗಿ ಪುನರ್ ನಿರ್ಮಾಣ ಮಾಡಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಹಾಜಿ ಅಬ್ದುಲ್ಲಾ ಸಾಹೇಬರವರ ಸಂಬಂಧಿ ಖುರ್ಷಿದ್ ಅಹಮ್ಮದ್ ಹಾಗೂ ಇತರ 17 ಮಂದಿ ಸಲ್ಲಿಸಿದ ದಾವೆಯನ್ನು ಕಾನೂನುಬದ್ಧವಾಗಿ ಮತ್ತು ಸರಿಯಾಗಿ ವಿಚಾರಣೆ ನಡೆಸದೆ ವಜಾಗೊಳಿಸಿದ ಅದೇ ನ್ಯಾಯಾಧೀಶರು ಇದೀಗ ಮತ್ತೆ ಇದೇ ದಾವೆಯನ್ನು ವಿಚಾರಣೆ ನಡೆಸಬೇಕಾಗಿದೆ. ಈಗ ಮತ್ತೆ ಅದೇ ನ್ಯಾಯಾಧೀಶರು ಎಷ್ಟು ಸರಿಯಾಗಿ ಈ ದಾವೆಯನ್ನು ವಿಚಾರಣೆಗೆ ಒಳಪಡಿಸಬಹುದು ಎಂಬುದು ಈಗ ನಾಗರಿಕರ ನಡುವೆ ಚೆರ್ಚೆಯಲ್ಲಿರುವ ಸಹಜವಾದ ಪ್ರಶ್ನೆಯಾಗಿದೆ.

 

 

 

Leave a Reply

Your email address will not be published. Required fields are marked *