Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ನ್ಯಾಯಾಂಗ ನಿಂದನೆಯತ್ತ ಬೆಳ್ಳೆ ಗ್ರಾಪಂ!

ಉಡುಪಿ: ಆರು ತಿಂಗಳೊಳಗೆ ಕಟ್ಟಿಂಗೇರಿ ಗ್ರಾಮದಲ್ಲಿ ಹಿಂದೂ ರುದ್ರಭೂಮಿ ನಿರ್ಮಿಸಲು ಹೈಕೋರ್ಟ್ ಆದೇಶಿಸಿ 2 ತಿಂಗಳು ಸಮೀಪಿಸುತ್ತಿದ್ದರೂ ಬೆಳ್ಳೆ ಗ್ರಾಮ ಪಂಚಾಯತ್ ಹೈಕೋರ್ಟ್ ಆದೇಶವನ್ನು ಗಂಭೀರವಾಗಿ ತೆಗೆದುಕೊಳ್ಳದೆ ನಿರ್ಲಕ್ಷಿಸಿದ್ದು, ನ್ಯಾಯಾಂಗ ನಿಂದನೆಯತ್ತ ಹೆಜ್ಜೆ ಹಾಕುತ್ತಿದೆ. ಒಂದೊಮ್ಮೆ ಗ್ರಾಪಂ ನ್ಯಾಯಾಂಗ ನಿಂದನೆ ಎಸಗಿದ್ದಲ್ಲಿ ಗ್ರಾಪಂ ಅಧಿಕೃತರಿಗೆ  ಜೈಲುಶಿಕ್ಷೆಯೊಂದಿಗೆ ದಂಡವನ್ನೂ ಪಾವತಿಸಬೇಕಾಗಿ ಬರಲಿದೆ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

          ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಸ್‍.ಕೆ. ಮುಖರ್ಜಿ ಹಾಗೂ ನ್ಯಾ| ಪಿ.ಎಸ್‍. ದಿನೇಶ್‍ಕುಮಾರ್‍ ಅವರ ಪೀಠವು ಜೂನ್‍ 5ರಂದು ತೀರ್ಪು ನೀಡಿದ್ದು, ಮುಂದಿನ ಆರು ತಿಂಗಳೊಳಗೆ ಕಟ್ಟಿಂಗೇರಿ ಗ್ರಾಮದ ಕಪ್ಪಂದಕರಿಯ ಎಂಬಲ್ಲಿ ಸರ್ವೆ ಸಂಖ‍್ಯೆ 171/1ಸಿಯಲ್ಲಿ ಸರಕಾರ ಮೀಸಲಿರಿಸಿದ ಸ್ಥಳದಲ್ಲೇ ಹಿಂದೂ ರುದ್ರಭೂಮಿ ನಿರ್ಮಿಸುವಂತೆ ಉಡುಪಿ ಜಿಲ್ಲಾಧಿಕಾರಿ, ಕುಂದಾಪುರ ಉಪ ವಿಭಾಗಾಧಿಕಾರಿ, ಉಡುಪಿ ತಹಶೀಲುದಾರರು ಮತ್ತು ಬೆಳ್ಳೆ ಗ್ರಾಮ ಪಂಚಾಯತ್‍ಗೆ ಆದೇಶಿಸಿತ್ತು.

          ಈ ನಡುವೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರ ಕಚೇರಿಯಿಂದ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಅವರು ನ್ಯಾಯಾಲಯದ ಆದೇಶವನ್ನು ಗಂಭೀರವಾಗಿ ಪರಿಗಣಿಸಿದ್ದು, ರುದ್ರಭೂಮಿ ನಿರ್ಮಿಸುವರೆ ತುರ್ತು ಕ್ರಮ ವಹಿಸುವಂತೆ ಸೂಚಿಸಿ ಉಡುಪಿ ತಾ.ಪಂ. ಇಒ ಗೆ ಪತ್ರ ಬರೆದಿದ್ದಾರೆ. ಆದರೆ ಇಒ ಅವರು ಮಾತ್ರ ಈ ಬಗ್ಗೆ ಈ ವರೆಗೆ ಯಾವುದೇ ತುರ್ತು ಕ್ರಮ ತೆಗೆದುಕೊಳ್ಳದೆ ಕಡೆಗಣಿಸಿದ್ದಾರೆ. ಅಪರ ಜಿಲ್ಲಾಧಿಕಾರಿ ಅನುರಾಧಾ ಜಿ. ಅವರು ಸಹಾ ಈ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳುವಂತೆ ಇಒ ಹಾಗೂ ತಹಶೀಲುದಾರರಿಗೆ ಲಿಖಿತ ಆದೇಶ ಹೊರಡಿಸಿದ್ದಾರೆ. ಮಾತ್ರವಲ್ಲದೆ ಬೆಳ್ಳೆ ಗ್ರಾಮ ಕರಣಿಕರಿಗೆ ಮೌಖಿಕ ಆದೇಶ ಮಾಡಿದ್ದಾರೆಂದು ತಿಳಿದು ಬಂದಿದೆ.

          ಆದೇಶವಾಗಿ 2 ತಿಂಗಳು ಸಮೀಪಿಸುತ್ತಿದ್ದರೂ ಗ್ರಾಮ ಪಂಚಾಯತ್ ರುದ್ರಭೂಮಿ ನಿರ್ಮಿಸುವ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತಿಲ್ಲ. ಬದಲಾಗಿ ಗ್ರಾಮ ಪಂಚಾಯತ್ ಅಧ್ಯಕ್ಷೆ ರಂಜನಿ ಹೆಗ್ಡೆ ಅವರು ರುದ್ರಭೂಮಿ ನಿರ್ಮಾಣ ವಿಷಯದಲ್ಲಿ ಮುಂದುವರಿಯದಂತೆ ಪಂಚಾಯತ್ ಕಾರ್ಯದರ್ಶಿ ಹಾಗೂ ಸಿಬಂದಿಗಳಿಗೆ ಖಡಕ್ ಆಗಿ ಸೂಚಿಸಿದ್ದಾರೆಂದು ಗ್ರಾಮ ಪಂಚಾಯತ್ ಸದಸ್ಯರು ಆರೋಪಿಸಿದ್ದಾರೆ.

          ಇತ್ತೀಚೆಗೆ ನಿಯೋಗವೊಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಒ, ಉಪವಿಭಾಗಾಧಿಕಾರಿ, ಅಪರ ಜಿಲ್ಲಾಧಿಕಾರಿ ಹಾಗೂ ತಾಪಂ ಇಒ ಅವರಿಗೆ ನ್ಯಾಯಾಲಯದ ಆದೇಶದ ದೃಢೀಕೃತ ಪ್ರತಿಯೊಂದಿಗೆ ಮನವಿ ಸಲ್ಲಿಸಿ ಕೂಡಲೇ ರುದ್ರಭೂಮಿ ನಿರ್ಮಾಣ ಪ್ರಕ್ರಿಯೆ ಆರಂಭಿಸುವಂತೆ ಒತ್ತಾಯಿಸಿದೆ. ನಿಯೋಗದಲ್ಲಿ ಗ್ರಾಪಂ ಸದಸ್ಯ, ಮಾಜಿ ಅಧ್ಯಕ್ಷ ರಾಜೇಂದ್ರ ಶೆಟ್ಟಿ, ಸದಸ್ಯ ಸುಧಾಕರ್ ಪೂಜಾರಿ, ವಕೀಲ ಸಂತೋಷ್ ಕುಮಾರ್ ಮೂಡುಬೆಳ್ಳೆ, ಮಾಹಿತಿ ಹಕ್ಕು ಕಾರ್ಯಕರ್ತ ಅಶ್ವಿನ್ ಲಾರೆನ್ಸ್ ಮೂಡುಬೆಳ್ಳೆ ಹಾಗೂ ಮಾನವ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಇದ್ದರು.

Leave a Reply

Your email address will not be published. Required fields are marked *