Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಮೂಡುಬೆಳ್ಳೆ: ಕಂದಾಯ ಅಧಿಕಾರಿಗಳಿಂದ ಬಡವರ ಮನೆಗಳು ಧ್ವಂಸ

ಉಡುಪಿ: ಉಡುಪಿ ತಾಲೂಕು ಕಾಪು ಹೋಬಳಿಯ ಬೆಳ್ಳೆ ಗ್ರಾಮದಲ್ಲಿ ಬಡವರಾದ ಪ್ರಭಾಕರ ಹಾಗೂ ವಿಘ್ನೇಶ ಎಂಬವರಿಗೆ ಸೇರಿದ ಎರಡು ಮನೆಗಳನ್ನು ಆ. 3ರಂದು ಕಂದಾಯ ಇಲಾಖೆ ಅಧಿಕಾರಿಗಳು ಧ್ವಂಸ ಮಾಡಿದ ಘಟನೆ ನಡೆದಿದೆ.

ಬೆಳ್ಳೆ ಗ್ರಾಮದ ತಿರ್ಲಪಲ್ಕೆ ಬಳಿ ಬಡವರಿಬ್ಬರು ಸರಕಾರಿ ಭೂಮಿಯಲ್ಲಿ ಮನೆ ಮಾಡಿಕೊಂಡಿದ್ದು, ಇದಕ್ಕೆ 94 ಸಿ ಯಡಿಯಲ್ಲಿ ಅರ್ಜಿ ನೀಡಿದ್ದು, ಅರ್ಜಿ ಸ್ವೀಕೃತವಾಗಿರುತ್ತದೆ. ಈ ಇಬ್ಬರೂ ಕೆಲಸಕ್ಕೆ ತೆರಳಿದ ವೇಳೆ ಹಾಗೂ ಅವರ ಮನೆಯವರು ಇಲ್ಲದ ಸಂದರ್ಭದಲ್ಲಿ ಏಕಾಏಕಿ ಕಾರ್ಯಾಚರಣೆ ನಡೆಸಿದ ಕಾಪು ಕಂದಾಯ ನಿರೀಕ್ಷಕ (ಪ್ರಭಾರ) ಮತ್ತು ಶಿರ್ವ ಗ್ರಾಮ ಕರಣಿಕ ವಿಜಯ, ಬೆಳ್ಳೆ ಗ್ರಾಮ ಕರಣಿಕ ಪ್ರದೀಪ, ಮಜೂರು ಗ್ರಾಮ ಕರಣಿಕ ಮಥಾಯಿ ಹಾಗೂ ಕುರ್ಕಾಲು ಗ್ರಾಮ ಕರಣಿಕ ಕ್ಲೇರೆನ್ಸ್‍ ಅವರ ತಂಡ ಮನೆಯವರಿಗೆ ಯಾವುದೇ ನೊಟೀಸ್‍ ನೀಡದೆ ಇಬ್ಬರು ಖಾಸಗಿ ವ್ಯಕ್ತಿಗಳ ಸಹಾಯದಿಂದ ಮನೆಗಳನ್ನು ಕೆಡವಿದ್ದು ಮಾತ್ರವಲ್ಲದೆ, ತಲಾ 15-20 ಸಾವಿರ ರೂ. ಬೆಲೆಬಾಳುವ ಶೀಟುಗಳನ್ನು ಪುಡಿಗಟ್ಟಿದ್ದಾರೆ. ಈ ಸಂದರ್ಭ ಮಜೂರು ವಿಎ ಮಥಾಯಿ ಅವರು ತಗಡು ಶೀಟುಗಳಿಗೆ ಕಲ್ಲು ಬಿಸಾಡುತ್ತಿರುವುದನ್ನು ಹಾಗೂ ಇಬ್ಬರು ಖಾಸಗಿ ವ್ಯಕ್ತಿಗಳು ಮನೆಯನ್ನು ಪುಡಿಗಟ್ಟುತ್ತಿರುವುದನ್ನು ಇಬ್ಬರು ಪ್ರತ್ಯಕ್ಷದರ್ಶಿಗಳು ತಿಳಿಸಿರುತ್ತಾರೆ.

ಇತ್ತೀಚೆಗೆ ಈ ಎರಡು ಮನೆಯವರೂ ತಮ್ಮ ಸಂಸಾರ ಸಮೇತ ಮನೆಯಲ್ಲಿದ್ದುದರ ಬಗ್ಗೆ ಭಾವಚಿತ್ರ ತೆಗೆಸಿಕೊಂಡು 94 ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಬಗ್ಗೆ ಗ್ರಾಮ ಪಂಚಾಯತ್ ಸದಸ್ಯ ಸುಧಾಕರ ಪೂಜಾರಿ ಬೆಳ್ಳೆ ವಿಎಗೆ ಮಾಹಿತಿ ನೀಡಿದ್ದಾರೆ ಎಂಬುದಾಗಿ ಅವರು ತಿಳಿಸಿದ್ದಾರೆ. ಆದರೆ ಬೆಳ್ಳೆ ವಿಎ ಯಾವುದೇ ಪರಿಶೀಲನೆಗೆ ಮುಂದಾಗಲಿಲ್ಲ. ಕನಿಷ್ಠ ಸೇವಾನುಭವದಲ್ಲಿ ಹಿರಿಯರಾಗಿರುವ ಪ್ರಭಾರ ಆರ್‍ಐ ವಿಜಯ ಅವರೂ ಇದನ್ನು ಪರಿಗಣಿಸಿಲ್ಲ ಎಂಬುದು ಖೇದಕರ.

ತಹಶೀಲುದಾರ್ ಮೌಖಿಕ ಆದೇಶ ಒಂದೇ ದಿನದಲ್ಲಿ ಪಾಲನೆ; ಲಿಖಿತ ಆದೇಶಕ್ಕೆ ವರ್ಷ ಕಳೆಯುತ್ತಿದ್ದರೂ ಕ್ರಮ ಇಲ್ಲ!

ಈ ಒತ್ತುವರಿ ತೆರವು ಪ್ರಕರಣದಲ್ಲಿ ವಿಶೇಷ ಆಸಕ್ತಿ ವಹಿಸಿದ ಕಂದಾಯ ಅಧಿಕಾರಿಗಳು, ತಹಶೀಲುದಾರರು ಮೌಖಿಕವಾಗಿ ನೀಡಿದ ಆದೇಶವನ್ನು ಒಂದೇ ದಿನದಲ್ಲಿ ಅನುಷ್ಠಾನಿಸಿ ಇಲಾಖಾ ಮಟ್ಟದಲ್ಲಿ ಭೇಶ್ ಅನಿಸಿಕೊಂಡಿದ್ದಾರೆ. ಇದು ಯಾರೂ ದಿಕ್ಕಿಲ್ಲದವರ ಹಾಗೂ ಬಡವರ ಮನೆ ಒಡೆಯುವುದರಲ್ಲಿ ಕಾನೂನಿನ ಪಾರಮ್ಯ ಹಾಗೂ ಕರ್ತವ್ಯಪಾಲನೆ ನಿಷ್ಠೆಯನ್ನು ತೋರಿಸಿಕೊಳ್ಳುವ ಅವಕಾಶವನ್ನು ಸೂಕ್ತವಾಗಿ ಬಳಸಿಕೊಂಡಿದ್ದಾರೆ. ಆದರೆ ಬಲಾಢ್ಯರ ಹಾಗೂ ರಾಜಕೀಯ ಬೆಂಬಲಿಗರ ವಿಷಯದಲ್ಲಿ ಮಾತ್ರ ಅಧಿಕಾರಿಗಳ ವರ್ತನೆ ಭಿನ್ನವಾಗಿದೆ. ಅಲ್ಲಿ ಅವರು ಕಾನೂನಿನ ಕೈಗಳನ್ನು ಸ್ವತಾಃ ಕಟ್ಟಿಕೊಳ್ಳುತ್ತಾರೆ. ಪಡುಬೆಳ್ಳೆಯಲ್ಲಿ ಎಷ್ಟೋ ಮಂದಿ ತಮಿಳರು ಅಕ್ರಮವಾಗಿ ವಾಸವಿದ್ದಾರೆ. ಇವರನ್ನು ಎಬ್ಬಿಸುವ ಅಥವಾ ಅವರ ಮೇಲೆ ಕನಿಷ್ಠ ಕ್ರಮ ಜರಗಿಸುವ ಧೈರ್ಯ ಇವರಿಗೆ ಇಲ್ಲ. ಆದರೆ ಅದೇ ಊರಿನವರಾದ ಇಬ್ಬರು ಬಡವರು ಕಟ್ಟಿದ ಮನೆಗಳನ್ನು ಇವರು ನೆಲಸಮ ಮಾಡಿದ್ದಾರೆ.

19/01/2016ರಂದು ನಂ. ಎನ್‍ಡಿ ಪಿಡಿಆರ್‍ 70/13-14ರ ಆದೇಶದಲ್ಲಿ ಉಡುಪಿ ತಹಶೀಲುದಾರರು ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿಗೆ ಸಂಬಂಧಿಸಿದಂತೆ ಒತ್ತುವರಿಯಾಗಿರುವ ಬೆಳ್ಳೆ ಗ್ರಾಮದ ಸರ್ವೆ ಸಂಖ್ಯೆ 292ರ 0.46 ಎಕರೆಯಲ್ಲಿರುವ ಒತ್ತುವರಿಯನ್ನು ತೆರವುಗೊಳಿಸಲು ಹಾಗೂ ಇದರ ವೆಚ್ಚವನ್ನು ವಾದಿಯಿಂದ ಭೂ ಕಂದಾಯದಂತೆ ವಸೂಲು ಮಾಡಲು ಆದೇಶಿಸಿರುತ್ತಾರೆ. ಆದರೆ ಈ ಬಗ್ಗೆ ಕಂದಾಯ ಅಧಿಕಾರಿಗಳು ಜರಗಿಸಿದ ಕ್ರಮ ಮಾತ್ರ ಶೂನ್ಯ. ಮಣಿಪುರ ನಿವಾಸಿ ಹೆರಾಲ್ಡ್ ಡಿ’ಸೋಜಾ ಅವರು ಈ ಬಗ್ಗೆ ದೂರು ನೀಡಿದ್ದರು. ಬಡವರ ಮನೆ ಕೆಡಹುವಾಗ ಇದ್ದ ಉತ್ಸಾಹ ಈ ಮೇಲಿನ ಪ್ರಕರಣದಲ್ಲಿ ಕಂದಾಯ ಅಧಿಕಾರಿಗಳು ತೋರಿಸಲಿಲ್ಲ. ಇಂಥ ಹಲವು ಪ್ರಕರಣಗಳನ್ನು ಇಲ್ಲಿ ಉದಾಹರಿಸಬಹುದು.

ಪತ್ನಿಯ ಚಿನ್ನ ಅಡವಿಟ್ಟು ಸಿಮೆಂಟ್ ಶೀಟ್‍ ಖರೀದಿಸಿದ್ದರು

ಕಂದಾಯ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಮತ್ತು ಇಬ್ಬರು ಖಾಸಗಿ ವ್ಯಕ್ತಿಗಳು ಪುಡಿ ಮಾಡಿದ ಸಿಮೆಂಟ್‍ ಶೀಟುಗಳನ್ನು ಹಾಗೂ ಮುರಕಲ್ಲು, ಬ್ಲಾಕ್ ಗಳನ್ನು ಕೊಳ್ಳಲು ಎರಡೂ ಮನೆಯವರು ಪತ್ನಿಯರ ಚಿನ್ನವನ್ನು ಅಡವಿಟ್ಟಿದ್ದರು. ಆದರೆ ಅವರ ಕಷ್ಟದ ಹಣ ನೆಲಸಮವಾಯಿತು.

ಒತ್ತುವರಿ ನಿಯಮ ಉಲ್ಲಂಘನೆ; ನಾಶ ನಷ್ಟಕ್ಕೆ ಪ್ರಭಾರ ಆರ್.ಐ. ವಿಜಯ ನೇರ ಹೊಣೆ

ಒತ್ತುವರಿ ತೆರವು ಸಂದರ್ಭ ನೊಟೀಸ್ ನೀಡಬೇಕು. ಎದ್ರಿದಾರರ ಅಹವಾಲು ಆಲಿಸಬೇಕು. ಮನೆಯಲ್ಲಿ ಯಾರೂ ಇಲ್ಲದಿದ್ದರೆ ಬಾಗಿಲಿಗೆ ನೊಟೀಸ್ ಅಂಟಿಸಿ ವಾರದ ಗಡು ನೀಡಬೇಕು ಇತ್ಯಾದಿ ನಿಯಮಗಳಿವೆ. ಪಂಚಾಯತ್ ಪಿಡಿಒಗೆ ಮಾಹಿತಿ ನೀಡಬೇಕೆಂಬ ನಿಯಮವೂ ಇದೆ. ಜತೆಗೆ ಒತ್ತುವರಿ ತೆರವು ಸಂದರ್ಭ ಲಭ್ಯ ವಸ್ತುಗಳನ್ನು ಏಲಂ ಮಾಡಬೇಕೆಂದು ಕರ್ನಾಟಕ ಭೂ ಕಂದಾಯ ಕಾಯಿದೆ 1964ರಲ್ಲಿ ತಿಳಿಸಿದೆ. ನೊಟೀಸ್ ಬಗ್ಗೆ ಕಾಯಿದೆಯ ಸೆಕ್ಷನ್ 104ರಲ್ಲಿ ಸ್ಪಷ್ಟವಾದ ಮಾಹಿತಿ ಇರುವುದು ಮಾತ್ರವಲ್ಲದೆ, ಈ ಬಗ್ಗೆ ಕಂದಾಯ ಇಲಾಖೆಯಲ್ಲಿ ಮಾರ್ಗದರ್ಶಿ ಸೂತ್ರಗಳು ಇವೆ ಎಂದು ನಿವೃತ್ತ ಕಂದಾಯ ಇಲಾಖೆ ಕಾರ್ಯದರ್ಶಿ ಒಬ್ಬರು ತಿಳಿಸಿದ್ದಾರೆ. ಆದರೆ ಈ ಎಲ್ಲ ನಿಯಮಗಳನ್ನು ಕಂದಾಯ ಅಧಿಕಾರಿಗಳು ಉಲ್ಲಂಘಿಸಿದ್ದು ಇದಕ್ಕೆ ಪ್ರಭಾರ ಆರ ಐ ವಿಜಯ ಅವರು ನೇರ ಹೊಣೆಯಾಗಿದ್ದಾರೆ.

ಇಬ್ಬರು ಖಾಸಗಿ ವ್ಯಕ್ತಿಗಳ ಮಧ್ಯಪ್ರವೇಶ ಯಾಕೆ?

ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಮೂಡುಬೆಳ್ಳೆಯ ಅಶೋಕ ಮತ್ತು ಆನಂದ ಎಂಬ ಇಬ್ಬರು ವ್ಯಕ್ತಿಗಳು ಇರುವುದನ್ನು ಪ್ರತ್ಯಕ್ಷ ಸಾಕ್ಷಿಗಳು ದೃಢೀಕರಿಸಿದ್ದಾರೆ. ಈ ಇಬ್ಬರು ಹೇಗೆ ಇನ್ನೊಬ್ಬರ ಮನೆಯನ್ನು ಒಡೆದರು ಎಂಬುದಕ್ಕೆ ಕಂದಾಯ ಅಧಿಕಾರಿಗಳು ಉತ್ತರಿಸಬೇಕು. ಜತೆಗೆ ಇವರಿಗೆ ಇನ್ನೊಬ್ಬನ ಮನೆಯನ್ನು ಒಡೆಯಲು ಯಾರು ಅಧಿಕಾರ ನೀಡಿದರು ಎಂಬುದೂ ಪ್ರಶ್ನಾರ್ಹ. ಇವರು ಮನೆ ಒಡೆಯುವಾಗ ಅವರನ್ನು ಪ್ರಶ್ನಿಸದೆ ಜತೆಯಲ್ಲೇ ಮಾತಾಡಿಕೊಂಡಿದ್ದ ಬೆಳ್ಳೆ ವಿಎ ಹಾಗೂ ಶೀಟಿಗೆ ಕಲ್ಲು ಎಸೆದು ನಾಶ ಮಾಡಿದ ಮಜೂರು ವಿಎ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

 

Leave a Reply

Your email address will not be published. Required fields are marked *