Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಕಡಿಯಾಳಿ ದಾಮೋದರ ಐತಾಳರಿಗೆ ಕರ್ನಾಟಕ ಮಾಹಿತಿ ಆಯೋಗದಿಂದ 5000 ರು. ದಂಡ

ರಾಸಾಯನಿಕ ಹಗರಣದ ವರದಿ ಕೇಳಿದ ಆಯುಕ್ತ ಸುಭೋದ್ ಯಾದವ್ ವರ್ಗಾವಣೆ !

ಉಡುಪಿ: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ದಕ್ಷ ಐಎಎಸ್ ಅಧಿಕಾರಿ ಸುಭೋದ್ ಯಾದವ್ ಅವರನ್ನು ರಾಜ್ಯ ಸರಕಾರ ತರಬೇತಿಗಾಗಿ ಅಮೇರಿಕಾಕ್ಕೆ ಕಳುಹಿಸಿಕೊಡುವ ನೆಪದಲ್ಲಿ ಇಲಾಖಾ ಆಯುಕ್ತ ಹುದ್ದೆಯಿಂದ ಮುಕ್ತಗೊಳಿಸಿದೆ. ಇವರಿಂದ ತೆರವಾದ ಆಯಕ್ತರ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ, ರಾಜ್ಯ ನೋಂದಣಿ ಮಹಾ ಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರಾದ ಮನೋಜ್ ಕುಮಾರ್ ಮೀನಾ ಇವರನ್ನು ಸಮವರ್ತಿತ ಪ್ರಭಾರ ಆಯುಕ್ತರನ್ನಾಗಿ ನೇಮಿಸಿ ಸರಕಾರ ಆಗಸ್ಟ್ 11ರಂದು ಆದೇಶ ಹೊರಡಿಸಿದೆ.

ಪ್ರಸ್ತುತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖಾ ಸಚಿವರಾಗಿರುವ ಯು.ಟಿ.ಖಾದರ್ ಅವರು ಆರೋಗ್ಯ ಸಚಿವರಾಗಿದ್ದ ಅವಧಿಯಲ್ಲಿ, ಇಲಾಖೆಯ ಉನ್ನತ ಅಧಿಕಾರಿಗಳೊಂದಿಗೆ ಶಾಮೀಲಾಗಿ ವಿಧಾನ ಮಂಡಲಕ್ಕೆ ತಪ್ಪು ಮಾಹಿತಿ ನೀಡಿ ಅಧಿಕೃತವಾಗಿ ಮುಚ್ಚಿಹಾಕಿದ ಬಹುಕೋಟಿ ಮೊತ್ತದ ಪ್ರಯೋಗ ಶಾಲಾ ರಾಸಾಯನಿಕಗಳ ಖರೀದಿ ಹಗರಣದ ಬಗ್ಗೆ, ಇಲಾಖೆಯ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಸುಭೋದ್ ಯಾದವ್ ಅವರು ಇಲಾಖೆಯ ನಿಯಂತ್ರಣಾಧಿಕಾರಿಗಳಿಂದ ವರದಿ ಕೇಳಿದ್ದರು. ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಒತ್ತಾಯಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಶ್ರೀರಾಮ ದಿವಾಣ ಸಲ್ಲಿಸಿದ ಮನವಿಯ ಮೇಲೆ ಸುಭೋದ್ ಯಾದವ್ ಈ ಕ್ರಮ ತೆಗೆದುಕೊಂಡಿದ್ದರು.

ಆಯುಕ್ತರಾಗಿ ವರ್ಷ ಪೂರೈಸುವ ಮೊದಲೇ, ಬಹುಕೋಟಿ ಮೊತ್ತದ ರಾಸಾಯನಿಕ ಖರೀದಿ ಹಗರಣಕ್ಕೆ ಮರುಜೀವ ನೀಡಿದ ಬೆನ್ನಿಗೆ, ಸುಭೋದ್ ಯಾದವ್ ಅವರನ್ನು ರಾಜ್ಯ ಸರಕಾರ ಅಮೇರಿಕಾಕ್ಕೆ ತರಬೇತಿಗೆ ಕಳುಹಿಸಿಕೊಡುವ ನೆಪದಲ್ಲಿ ಇಲಾಖಾ ಆಯುಕ್ತ ಹುದ್ದೆಯಿಂದ ಬಿಡುಗಡೆಗೊಳಿಸಿರುವುದು ಗಂಭೀರ ಅನುಮಾನಕ್ಕೆ ಕಾರಣವಾಗಿದೆ. ಆಯುಕ್ತರು ನಿಯಂತ್ರಣಾಧಿಕಾರಿಗಳಿಂದ ವರದಿ ಕೇಳಿದ್ದು, ಇದೀಗ ‘’ಆಯುಕ್ತರು ನಿಯಂತ್ರಣಾಧಿಕಾರಿಗಳಿಂದ ಕೋರಿದ ವರದಿಯನ್ನು ಸ್ಥಗಿತಗೊಳಿಸಲಾಗಿದೆ’’ ಎಂದು ಇಲಾಖೆಯ ಆಡಳಿತಾಧಿಕಾರಿ (ಸಾಮಾನ್ಯ)ಯವರು ಲಿಖಿತ ಮಾಹಿತಿ ನೀಡಿದ್ದಾರೆ.

ರಾಜ್ಯದ 19 ಜಿಲ್ಲೆಗಳಲ್ಲಿ ನಡೆದ ರಾಸಾಯನಿಕ ಖರೀದಿ ಹಗರಣದ ಬಗ್ಗೆ, ಇಲಾಖೆಯ ಅಧಿಕೃತ ಮತ್ತು ಕಾನೂನುಬದ್ದ ತನಿಖಾ ಸಂಸ್ಥೆಯಾದ ಜಾಗೃತಕೋಶದ ಮುಖ್ಯ ಜಾಗೃತಾಧಿಕಾರಿಯಾಗಿದ್ದ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ತನಿಖೆ ನಡೆಸಿ, ತನಿಖಾ ವರದಿಯನ್ನು 2013ರ ಮೇ 17ರಂದು ಆಯಕ್ತರಿಗೆ ಸಲ್ಲಿಸಿದ್ದರು.

ಆಯುಕ್ತರು ಮಾರ್ಚ್ 25ರಂದು ಹಗರಣದ ಬಗ್ಗೆ ತನಿಖೆ ನಡೆಸುವಂತೆ ಮುಖ್ಯ ಜಾಗೃತಾಧಿಕಾರಿಯವರಿಗೆ ಆದೇಶ ನೀಡಿದ್ದರು. ಮುಖ್ಯ ಜಾಗೃತಾಧಿಕಾರಿ ಡಾ.ಕೆ.ಎಚ್.ನರಸಿಂಹಮೂರ್ತಿಯವರಿಗೆ ತನಿಖೆ ನಡೆಸುವಂತೆ ಆದೇಶ ನೀಡಿದ ಬಳಿಕ, ದಕ್ಷ ಅಧಿಕಾರಿಯಾಗಿರುವ ಡಾ.ಕೆ.ಎಚ್.ನರಸಿಂಹಮೂರ್ತಿಯವರು ತನಿಖೆ ಆರಂಭಿಸಿದ ಬಳಿಕ, ತನಿಖಾ ಪ್ರಕ್ರಿಯೆಯನ್ನು ನಿಷ್ಪಕ್ಷಪಾತವಾಗಿ ನಡೆಸುತ್ತಿರುವುದನ್ನು ಮನಗಂಡು, ಉನ್ನತ ಅಧಿಕಾರಿಗಳ ಮೌಖಿಕ ಸಲಹೆ ಸೂಚನೆಯಂತೆ ಅವರಿಗೆ ಬೇಕಾದಂತೆ ತನಿಖಾ ವರದಿಯನ್ನು ಸಿದ್ಧಪಡಿಸಲೊಪ್ಪದ ಕಾರಣಕ್ಕೆ, ಆಯುಕ್ತರು ಹಗರಣವನ್ನು ಮುಚ್ಚಿ ಹಾಕುವ ಸಲುವಾಗಿಯೇ, ವೈದ್ಯಕೀಯ ಉಪ ನಿರ್ದೆಶಕರಾದ ಡಾ.ಕೆ.ಬಿ.ಈಶ್ವರಪ್ಪ ಅವರಿಗೂ ತನಿಖೆ ನಡೆಸುವಂತೆ ಆದೇಶಿಸಿದ್ದರು.

ಬಳಿಕ, ಆಯುಕ್ತರಾಗಿದ್ದ ವಿ.ಬಿ.ಪಾಟೀಲ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿದ್ದ ಮದನ್ ಗೋಪಾಲ್ ರವರು ಸೇರಿಕೊಂಡು ಡಾ.ಕೆ.ಬಿ.ಈಶ್ವರಪ್ಪ ಸಲ್ಲಿಸಿದ ವರದಿಯನ್ನು ಅಂಗೀಕರಿಸಿ, ಡಾ.ಕೆ.ಎಚ್.ನರಸಿಂಹಮೂರ್ತಿಯವರು ಸಲ್ಲಿಸಿದ ತನಿಖಾ ವರದಿಯನ್ನು ಅಂಗೀಕರಿಸದೆ ಬಹುಕೋಟಿ ರಾಸಾಯನಿಕ ಖರೀದಿ ಹಗರಣವನ್ನು ಮುಚ್ಚಿ ಹಾಕಿದ್ದರು.

ಮಾಹಿತಿ ಹಕ್ಕು ಕಾಯ್ದೆಯಡಿಯಲ್ಲಿ ಎರಡೂ ತನಿಖಾ ವರದಿಯನ್ನು ಪ್ರತ್ಯೇಕವಾಗಿ ಇಲಾಖೆಯಿಂದ ಕೇಳಿದಾಗ, ಡಾ.ಕೆ.ಬಿ.ಈಶ್ವರಪ್ಪರವರು ಸಲ್ಲಿಸಿದ ವರದಿಯನ್ನು ನೀಡಿದ್ದು, ಡಾ.ಕೆ.ಎಚ್.ನರಸಿಂಹಮೂರ್ತಿಯವರು ಸಲ್ಲಿಸಿದ ತನಿಖಾ ವರದಿಯನ್ನು ನೀಡದೆ ನಿರಾಕರಿಸಿದ್ದರು. ‘’ತನಿಖಾ ಕ್ರಮಕ್ಕೆ ಅಥವಾ ಅಪರಾಧಿಗಳ ದಸ್ಥಗಿರಿಗೆ ಅಥವಾ ಪ್ರಾಸಿಕ್ಯೂಷನ್ ಕಾರ್ಯಕ್ಕೆ ಅಡಚಣೆಯನ್ನುಂಟು ಮಾಡುವಂಥ ಮಾಹಿತಿ’’ ಎಂಬ ಕಾರಣ ಮುಂದಿಟ್ಟು, ಡಾ.ಕೆ.ಎಚ್.ನರಸಿಂಹಮೂರ್ತಿಯವರು ಆಯುಕ್ತರಿಗೆ ಸಲ್ಲಿಸಿದ ತನಿಖಾ ವರದಿಯನ್ನು ನೀಡಲು ಆರೋಗ್ಯ ಇಲಾಖಾ ಅಧಿಕಾರಿಗಳು ನಿರಾಕರಿಸಿದ್ದರು.

ಡಾ.ಕೆ.ಎಚ್.ನರಸಿಂಹಮೂರ್ತಿಯವರು ಸಲ್ಲಿಸಿದ ತನಿಖಾ ವರದಿಯನ್ನು ಆಯಯುಕ್ತರಾಗಿದ್ದ ವಿ.ಬಿ.ಪಾಟೀಲ್ ರವರು, ತನಿಖಾ ವರದಿಯ ಮೇಲೆ ಮುಂದಿನ ಕ್ರಮಕ್ಕಾಗಿ ಸರಕಾರದ ಪ್ರಧಾನ ಕಾರ್ಯದರ್ಶಿ ಮದನ್ ಗೋಪಾಲ್ ರವರಿಗೆ ಸಲ್ಲಿಸಬೇಕಾಗಿತ್ತು. ಆದರೆ, ವಿ.ಬಿ.ಪಾಟೀಲ್ ಹಾಗೆ ಮಾಡದೆ, ಡಾ.ಕೆ.ಎಚ್.ನರಸಿಂಹಮೂರ್ತಿಯವರು ಸಲ್ಲಿಸಿದ ತನಿಖಾ ವರದಿಯನ್ನು ಶಿಸ್ತು ಪ್ರಾಧಿಕಾರಕ್ಕೆ ಸಲ್ಲಿಸಿ ಕೈತೊಳೆದುಕೊಂಡಿದ್ದರು. ಶಿಸ್ತು ಪ್ರಾಧಿಕಾರವು, ತನಿಖಾ ವರದಿಯ ಮೇಲೆ ಯಾವುದೇ ಶಿಸ್ತು ಕ್ರಮಗಳನ್ನೂ ತೆಗೆದುಕೊಳ್ಳದೆ ಜಾಣ ಮೌನ ವಹಿಸಿತ್ತು ಮತ್ತು ತಪ್ಪಿತಸ್ಥ ಅಧಿಕಾರಿಗಳನ್ನು ರಕ್ಷಿಸಿತ್ತು. ಆರೋಗ್ಯ ಇಲಾಖೆಯ ಶಿಸ್ತು ಪ್ರಾಧಿಕಾರದ ಕರ್ತವ್ಯಗಳೇನು ? ಭ್ರಷ್ಟರನ್ನು ರಕ್ಷಿಸುವುದಷ್ಟೇ ಈ ಪ್ರಾಧಿಕಾರದ ಕೆಲಸವೇ ಎಂಬುದು ಪ್ರಶ್ನೆಯಾಗಿದೆ.

ಬಳಿಕ, 2015ರಲ್ಲಿ, ವಿಧಾನ ಪರಿಷತ್ ಸದಸ್ಯ (ಸ್ಥಳೀಯ ಸಂಸ್ಥೆಗಳ ಕ್ಷೇತ್ರ)ರಾದ ಪಟೇಲ್ ಶಿವರಾಂ ರವರು ಈ ಬಗ್ಗೆ ಕೇಳಿದ (ಚುಕ್ಕೆ ಗುರುತಿಲ್ಲದ ಪ್ರಶ್ನೆ) ಪ್ರಶ್ನೆಗೆ ವಿದಾನ ಮಂಡಲದಲ್ಲಿ ಉತ್ತರಿಸಿದ ಸಚಿವ ಯು.ಟಿ.ಖಾದರ್ ಅವರು ಸದನಕ್ಕೆ ತಪ್ಪು ಮಾಹಿತಿ ನೀಡುವ ಮೂಲಕ ಹಗರಣವನ್ನು ಎರಡನೇ ಬಾರಿ ಅಧಿಕೃತವಾಗಿ ಮುಚ್ಚಿ ಹಾಕಿದ್ದರು.

ಡಾ.ಕೆ.ಎಚ್.ನರಸಿಂಹಮೂರ್ತಿಯವರು ರಾಸಾಯನಿಕ ಖರೀದಿ ಹಗರಣದ ಬಗ್ಗೆ ಸಲ್ಲಿಸಿದ ತನಿಖಾ ವರದಿ ಬಗ್ಗೆ ವಿಧಾನ ಮಂಡಲದಲ್ಲಿ ಪ್ರಶ್ನಿಸುವಂತೆ ಶ್ರೀರಾಮ ದಿವಾಣ ಅವರು ಉಡುಪಿ ಜಿಲ್ಲೆಯ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರಿಗೆ ಪತ್ರ ಬರೆದು ಕೋರಿಕೊಂಡಿದ್ದರು. ಯಾರನ್ನು ಕೋರಲಾಗಿತ್ತೋ, ಅವರಾರೂ ಈ ಬಗ್ಗೆ ಪ್ರಶ್ನೆ ಮಾಡಿರಲಿಲ್ಲ. ಆದರೆ, ಪಟೇಲ್ ಶಿವರಾಂ ಈ ಬಗ್ಗೆ ಪ್ರಶ್ನಿಸಿರುವುದು ಸಂಶಯಕ್ಕೆ ಕಾರಣವಾಗಿದೆ.

ವಿಧಾನ ಮಂಡಲದ ಮೂಲಕ ಅಧಿಕೃತವಾಗಿಯೇ ಹಗರಣವನ್ನು ಮುಚ್ಚಿ ಹಾಕುವ ಸಲುವಾಗಿಯೇ ಪಟೇಲ್ ಶಿವರಾಂ ಅವರಲ್ಲಿ ಈ ಪ್ರಶ್ನೆಯನ್ನು ಕೇಳಿಸಿಕೊಂಡು, ಸಚಿವರು ಉತ್ತರ ನೀಡುವ ಮೂಲಕ ಹಗರಣವನ್ನು ಮುಚ್ಚಿ ಹಾಕುವ ಕೆಲಸವನ್ನು ಸರಕಾರ ಅತ್ಯಂತ ವ್ಯವಸ್ಥಿತವಾಗಿ ಮಾಡಿದೆ ಎಂದು ಭಾವಿಸಲಾಗಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಿರಂತರವಾಗಿ ರಾಸಾಯನಿಕ ಖರೀದಿ ಹಗರಣ ನಡೆದಿರುವುದರಿಂದ, ಎರಡೂ ಪಕ್ಷಗಳೂ ಈ ಭ್ರಷ್ಟಾಚಾರ ಹಗರಣದ ಬಗ್ಗೆ ಜಾಣ ಮೌನ ವಹಿಸಿದೆ.

Leave a Reply

Your email address will not be published. Required fields are marked *