Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಬಿಜೆಪಿ, ಕಾಂಗ್ರೆಸ್ ಸರ್ಕಾರದಿಂದ ಬಹುಕೋಟಿ ಹಗರಣ: ಟೆಂಡರ್ ಕರೆಯದೆ ಎನ್ಎಟಿ ಯೋಜನೆ ಜಾರಿ!

# ಶ್ರೀರಾಮ ದಿವಾಣ

ಉಡುಪಿ: ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ಇಲಾಖೆಯು ಒಳಗೊಂಡಂತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ನ್ಯೂಕ್ಲಿಕ್ ಆಸಿಡ್ ಟೆಸ್ಟಿಂಗ್ (ಎನ್ಎಟಿ) ಹೆಸರಿನಲ್ಲಿ 2011ರಿಂದಲೂ ನಿರಂತರವಾಗಿ ಬಹುಕೋಟಿ ಹಗರಣ ನಡೆಸುತ್ತಿರುವುದು udupibits.in ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸ್ಪಷ್ಟವಾಗಿದೆ.

ಈ ಬಹುಕೋಟಿ ಹಗರಣ ನಡೆಸುವ ಸಲುವಾಗಿಯೇ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999ನ್ನು ಸಾರಾಸಗಟು ಉಲ್ಲಂಘಿಸಲಾಗಿದೆ ಮತ್ತು ಅಧಿನಿಯಮದ ಕಲಂ 4 (ಜಿ)ಯನ್ನು ನೇರವಾಗಿ ದುರ್ಬಳಕೆ ಮಾಡಿರುವುದು ಖಚಿತವಾಗಿದೆ.

ಬೆಂಗಳೂರಿನ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ (ವಿಕ್ಟೋರಿಯಾ ಹಾಗೂ ಬೌರಿಂಗ್ ಆಸ್ಪತ್ರೆಗಳು), ಮೈಸೂರು ವೈದ್ಯಕೀಯ ಮಹಾವಿದ್ಯಾಲಯ, ಹುಬ್ಬಳ್ಳಿ, ಮಂಡ್ಯ, ಹಾಸನ, ಬೀದರ್, ಬೆಳಗಾವಿ, ಶಿವಮೊಗ್ಗ, ರಾಯಚೂರು ಮತ್ತು ಬಳ್ಳಾರಿಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳು, ಇಂದಿರಾಗಾಂಧಿ ಮಕ್ಕಳ ಆಸ್ಪತ್ರೆ, ದಾವಣಗೆರೆಯ ಚಿಗಟೇರಿ ಸಾರ್ವಜನಿಕ ಆಸ್ಪತ್ರೆ, ಮಂಗಳೂರು ವೆನ್ ಲಾಕ್ ಜಿಲ್ಲಾ ಸರಕಾರಿ ಆಸ್ಪತ್ರೆ ಮತ್ತು ಗುಲ್ಬರ್ಗಾ ಸಾರ್ವಜನಿಕ ಆಸ್ಪತ್ರೆ ಇವುಗಳು ವೈದ್ಯಕೀಯ ಶಿಕ್ಷಣ ಇಲಾಖೆಗೆ ಒಳಪಟ್ಟಿವೆ. ಉಳಿದಂತೆ, ರಕ್ತನಿಧಿ ಕೇಂದ್ರಗಳಿರುವ ರಾಜ್ಯದ ಎಲ್ಲಾ ಜಿಲ್ಲಾ ಸರಕಾರಿ ಆಸ್ಪತ್ರೆಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಒಳಪಟ್ಟಿವೆ. ಇಲ್ಲೆಲ್ಲಾ ಸಾರ್ವಜನಿಕರಿಂದ ಸಂಗ್ರಹವಾಗುವ ರಕ್ತವನ್ನು ನ್ಯೂಕ್ಲಿಕ್ ಆಸಿಡ್ ಟೆಸ್ಟಿಂಗ್ ಯೋಜನೆಗೆ ಒಳಪಡಿಸಲಾಗುತ್ತಿದೆ.

 

ನ್ಯೂಕ್ಲಿಕ್ ಆಸಿಡ್ ಟೆಸ್ಟಿಂಗ್ ಯೋಜನೆಯನ್ನು ಉನ್ನತ ಮಟ್ಟದ ಪ್ರಭಾವೀ ಐಎಎಸ್ ಮತ್ತು ಇತರ ಅಧಿಕಾರಿಗಳ ಮೂಗಿನ ನೇರಕ್ಕೆ 2011ರಲ್ಲಿ ರಾಜ್ಯ ಸರಕಾರವು ಬೆಂಗಳೂರಿನ ಬೌರಿಂಗ್ ಮತ್ತು ಲೇಡಿಕರ್ಜನ್ ಆಸ್ಪತ್ರೆಯಲ್ಲಿ ಅಕ್ರಮವಾಗಿ ಜಾರಿಗೊಳಿಸಿದೆ. ರಾಜ್ಯದಾದ್ಯಂತದ ರಕ್ತನಿಧಿ ಕೇಂದ್ರಗಳಲ್ಲಿ ಸಂಗ್ರಹವಾಗುವ ರಕ್ತವನ್ನು ಬೌರಿಂಗ್ ಮತ್ತು ಲೇಡಿಕರ್ಜನ್ ಆಸ್ಪತ್ರೆಗೆ ತರಿಸಿಕೊಳ್ಳಲಾಗುತ್ತದೆ ಮತ್ತು ಇಲ್ಲಿ ಕಳೆದ ಐದೂವರೆ ವರ್ಷಕ್ಕೂ ಅಧಿಕ ಕಾಲದಿಂದ ನ್ಯೂಕ್ಲಿಕ್ ಆಸಿಡ್ ಟೆಸ್ಟಿಂಗ್ ಮಾಡಲಾಗುತ್ತಿದೆ.

ನ್ಯೂಕ್ಲಿಕ್ ಆಸಿಡ್ ಟೆಸ್ಟಿಂಗ್ ಮಾಡುವ ಯೋಜನೆಗೆ ಬೇಕಾದ ಅಗತ್ಯ ಯಂತ್ರಗಳನ್ನು ಹಗರಣದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ಬೇನಾಮಿ ಸಂಸ್ಥೆಯಿಂದ ಅಥವಾ ಅಧಿಕಾರಿಗಳಿಗೆ ಬೇಕಾದ ಖಾಸಗಿ ಸಂಸ್ಥೆಯಿಂದ ಬಾಡಿಗೆಗೆ ಪಡೆದುಕೊಳ್ಳಲಾಗಿದೆ ಇಲ್ಲವೇ ಅನಧಿಕೃತವಾಗಿ ಖರೀದಿಸಲಾಗಿದೆ. ಈ ರಕ್ತ ಪರೀಕ್ಷೆಗೆ ವರ್ಷವೊಂದಕ್ಕೆ ಲಕ್ಷಕ್ಕೂ ಅಧಿಕ ಕಿಟ್ ಗಳ ಅಗತ್ಯವಿದ್ದು, ಕಿಟ್ ಒಂದಕ್ಕೆ 950 ರು. ಅನ್ನು ಸರಕಾರವೇ ಸ್ವಯಂ ನಿಗದಿಪಡಿಸಿಕೊಂಡಿದೆ. ಈ ದರಕ್ಕೆ ಯಾವ ಮಾನದಂಡವನ್ನು ಅನುಸರಿಸಲಾಗಿದೆ ಎನ್ನುವುದು ನಿಗೂಢವಾಗಿದೆ.

ಎನ್ಎಟಿ ಗೆ ವರ್ಷವೊಂದಕ್ಕೆ ಒಂದೆರಡು ಲಕ್ಷಕ್ಕೂ ಅಧಿಕ ಕಿಟ್ ಗಳನ್ನು ಖಾಸಗಿ ಸಂಸ್ಥೆಯಾದ ಬೆಂಗಳೂರಿನ ಬೆಂಗಳೂರು ಮೆಡಿಕಲ್ ಸಿಸ್ಟಂ ನಿಂದ ನಿಯಮಾವಳಿಗಳಿಗೆ ವಿರುದ್ಧವಾಗಿ ಖರೀದಿಸಲಾಗುತ್ತಿದೆ. ಈಗಾಗಲೇ ಸಾವಿರ ಕೋಟಿ ರು. ಗಳಿಗೂ ಅಧಿಕ ಮೊತ್ತವನ್ನು ಈ ಯೋಜನೆಗಾಗಿ ಸರಕಾರ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೂಲಕ ಖಾಸಗಿ ಸಂಸ್ಥೆಗೆ ನೀಡಿದೆ. ಆದರೆ ಇಷ್ಟು ದೊಡ್ಡ ಮೊತ್ತದ ಹಣ ಕೈ ಬದಲಾಗುವ ಒಂದು ಬೃಹತ್ ಯೋಜನೆಯನ್ನು ಜಾರಿಗೊಳಿಸುವ ಸಂದರ್ಭದಲ್ಲಿ ರಾಜ್ಯ ಸರಕಾರವು ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಅಧಿನಿಯಮ 1999 ನ್ನು ಅನುಸರಿಸದೇ ಇರುವುದು ಗಂಭೀರ ಲೋಪವಾಗಿದೆ.

ಟೆಂಡರ್ ಕರೆಯದೆ ನ್ಯೂಕ್ಲಿಕ್ ಆಸಿಡ್ ಟೆಸ್ಟಿಂಗ್ ಯೋಜನೆಗೆ ಬೇಕಾದ ಯಂತ್ರಗಳನ್ನು ಮತ್ತು ಕಿಟ್ ಗಳನ್ನು ಖಾಸಗಿ ಸಂಸ್ಥೆಯಿಂದ ಖರೀದಿಸಿರುವುದು ಮತ್ತು ಈ ಯೋಜನೆಯನ್ನು ಅನುಷ್ಠಾನಕ್ಕೆ ತರುವ ಜವಾಬ್ದಾರಿಯನ್ನು ಟೆಂಡರ್ ಕರೆಯದೆ ತಮಗೆ ಬೇಕಾದ ಅಥವಾ ಅಧಿಕಾರಿಗಳ ಬೇನಾಮಿ ಎನ್ನಬಹುದಾದ ಖಾಸಗಿ ಸಂಸ್ಥೆಗೆ ವಹಿಸಿಕೊಟ್ಟಿರುವುದು ಭಾರೀ ಭ್ರಷ್ಟಾಚಾರವಾಗಿದೆ.

2011-12ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರಕಾರ ಅಡಳಿತದಲ್ಲಿ ಇದ್ದ ಅವಧಿಯಲ್ಲಿ ನ್ಯೂಕ್ಲಿಕ್ ಆಸಿಡ್ ಟೆಸ್ಟಿಂಗ್ ಯೋಜನೆಯನ್ನು ಜಾರಿಗೊಳಿಸಿದ್ದು, 2013ರ ಬಳಿಕ ಕಾಂಗ್ರೆಸ್ ಸರಕಾರ ಯೋಜನೆಯನ್ನು ಮುಂದುವರಿಸಿದೆ. ಈ ಹಿನ್ನೆಲೆಯಲ್ಲಿ ಹಾಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ, ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್, ಹಾಲಿ ಮತ್ತು ಮಾಜಿ ವೈದ್ಯಕೀಯ ಶಿಕ್ಷಣ ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರು, ಈ ಎರಡೂ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಹಗರಣದಲ್ಲಿ ಶಾಮೀಲಾಗಿರುವ ಸಾಧ್ಯತೆ ಇದ್ದೇ ಇದೆ. ಆದುದರಿಂದ, ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಈ ಹಗರಣದ ಬಗ್ಗೆ ಜಾಣ ಮೌನ ವಹಿಸಿ ಅತೀ ಬುದ್ದಿವಂತಿಕೆ ಪ್ರದರ್ಶಿಸುವ ಸಾಧ್ಯತೆಯಷ್ಟೇ ಇದ್ದು, ಇವರಿಂದ ಬೇರೇನನ್ನೂ ನಿರೀಕ್ಷಿಸಲು ಸಾಧ್ಯವಿಲ್ಲ.

ಈ ಬೃಹತ್ ಹಗರಣದ ಬಗ್ಗೆ, ಸಿಬಿಐ ಅಥವಾ ಕರ್ನಾಟಕ ಲೋಕಾಯುಕ್ತ ಸಂಸ್ಥೆಯು ಯಾವುದೇ ಒತ್ತಡಕ್ಕೂ ಒಳಗಾಗದೆ ಪ್ರಾಮಾಣಿಕವಾಗಿ ಮತ್ತು ದಕ್ಷತೆಯಿಂದ ಸಮಗ್ರವಾಗಿ ತನಿಖೆ ನಡೆಸಿದ್ದೇ ಆದಲ್ಲಿ, ಕರ್ನಾಟಕ ಸರಕಾರದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಾವಿರ ಕೋಟಿ ಮೊತ್ತದ ಭಾರೀ ಹಗರಣವೊಂದು ಬಯಲಾಗಲಿದೆ. ಮಾತ್ರವಲ್ಲ, ಹಗರಣದ ಹಿಂದೆ ಇರುವ ಉನ್ನತ ಮಟ್ಟದ ಅಧಿಕಾರಿಗಳು ಬೆಳಕಿಗೆ ಬರಲಿದ್ದಾರೆ ಮತ್ತು ಶಿಕ್ಷೆಗೆ ಒಳಗಾಗಬಹುದೆಂದು ನಿರೀಕ್ಷಿಸಬಹುದಾಗಿದೆ.

 

Leave a Reply

Your email address will not be published. Required fields are marked *