Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅರವಿಂದ ಚೊಕ್ಕಾಡಿಯವರ ಚಿಂತನೆಗಳು

# ಫೇಸ್ ಬುಕ್ಕಿನ ಬ್ರಾಹ್ಮಣ, ಮುಸ್ಲಿಂ ಚರ್ಚೆಗಳನ್ನು ಮೀರಿ ಜನಾಭಿಪ್ರಾಯ ರೂಪುಗೊಳ್ಳುವುದಕ್ಕೆ ಒಂದು ಉದಾಹರಣೆ ಹೇಳ್ತೇನೆ. ಇವತ್ತು ಒಬ್ಬ ಡಿಗ್ರಿ ಮುಗಿಸಿದ ವಿದ್ಯಾರ್ಥಿ ಸಿಕ್ಕಿದರು. “ಯಾವುದು ಏನು ಬೇಕಾದರು ಇರಲಿ ಸಾರ್, ಸ್ಟೇಟ್ ಗವರ್ನಮೆಂಟ್ ಸಿಕ್ಕಾಪಟ್ಟೆ ಉದ್ಯೋಗಕ್ಜೆ ಕಾಲ್ಫರ್ ಮಾಡಿದೆ. ನನ್ನಂತವರಿಗೆ ಉದ್ಯೋಗ ಸಿಗ್ತದೆ” ಎಂದರು.

ಇದು ಜನರ ಅವಶ್ಯಕತೆ. ಬ್ರಾಹ್ಮಣ, ದಲಿತ ಭಾವನಾತ್ಮಕ ಅವಶ್ಯಕತೆ, ರಾಷ್ಟ್ರೀಯ ಅವಶ್ಯಕತೆ ಇರಬಹುದು, ಆದರೆ ವೈಯಕ್ತಿಕ ಅವಶ್ಯಕತೆಯ ಮುಂದೆ ಉಳಿದದ್ದೆಲ್ಲವೂ ಗೌಣವಾಗಿಬಿಡುತ್ತದೆ.

ಇಷ್ಟರಿಂದಲೆ ಓಟಿಂಗ್ ಪ್ಯಾಟರ್ನ್ ನಿರ್ಧಾರ ಆಗುವುದಿಲ್ಲ. ಆದರೆ ಜಿಜ್ಞಾಸುಗಳು ಈ ಅಗತ್ಯಗಳನ್ನೂ ಚರ್ಚೆಗೆ ಪರಿಗಣಿಸಬೇಕಾದ ಅಗತ್ಯವಿದೆ.

# 2014ರ ನಂತರ ಏನೊ ಆಗ್ತದೆ ಎಂದು ಕೆಲವರು ಭ್ರಮೆಯಲ್ಲೂ ಕೆಲವರು ಭಯದಲ್ಲೂ ಇದ್ದರು ಮತ್ತು ತಮ್ಮ ಭ್ರಮೆ ಮತ್ತು ಭಯವನ್ನು ಈಗಲೂ ಎಲ್ಲರಿಗೂ ಹಂಚುವ ಪ್ರಯಾಸದಲ್ಲಿದ್ದಾರೆ, ಆದರೆ ಎಲ್ಲರ ಹಾಗೆ ಇವರೂ, ಕೆಲವು ಫೈಲ್ಯೂರ್ ಗಳು ಕೆಲವು ಸಕ್ಸಸ್ ಗಳನ್ನು ಹೊಂದಿದ್ದಾರೆಂಬುದಷ್ಟೆ ವಾಸ್ತವ. ನನಗೆ ಕೆಲವು ಒಳ್ಳೆಯದು ಆಗಿದೆ:

ಅಭಿವ್ಯಕ್ತಿ ಸ್ವಾತಂತ್ರ್ಯದ ವಿರೋಧಿ ನಿಲುವು ಒಂದು ತಂಡದಲ್ಲಿ ಮಾತ್ರ ಇಲ್ಲ ಎರಡೂ ತಂಡದಲ್ಲಿದೆ ಎಂದು ಗೊತ್ತಾಗಿದೆ.

ಒಂದು ತಂಡಕ್ಕೆ ಮುಸ್ಲಿಮರು ತಮ್ಮ ಅಡಿಯಾಳುಗಳಾಗಿ ಇರಬೇಕೆಂದು ಇದೆಯೆಂದು ಗೊತ್ತಿತ್ತು. ಇನ್ನೊಂದು ತಂಡಕ್ಕೆ ಬ್ರಾಹ್ಮಣರು ತಮ್ಮ ಅಡಿಯಾಳುಗಳಾಗಿ ಇರಬೇಕೆಂದು ಇದೆ ಎಂದು ಗೊತ್ತಿರಲಿಲ್ಲ. ಅದು ಗೊತ್ತಾಯಿತು.

ಒಂದು ತಂಡದಲ್ಲಿ ಕಾರ್ಯಕರ್ತರು ಸರಿ ಇಲ್ಲ ಆದರೆ ಚಿಂತಕರು ಚೆನ್ನಾಗಿದ್ದಾರೆ ಎನ್ನುವುದೂ, ಇನ್ನೊಂದು ತಂಡದಲ್ಲಿ ಚಿಂತಕರು ಚೆನ್ನಾಗಿಲ್ಲ ಕಾರ್ಯಕರ್ತರು ಚೆನ್ನಾಗಿದ್ದಾರೆಂಬುದೂ ಗೊತ್ತಾಯಿತು.

ಇವೆಲ್ಲ ಸರಕಾರ ಬದಲಾದಾಗ ಆದ ಅನುಕೂಲತೆಗಳು. ಅದು ಬಿಟ್ಟರೆ ಭ್ರಷ್ಠಾಚಾರದ ವರದಿಗಳು ಕಡಿಮೆಯಾಗಿವೆ ಎಂಬುದನ್ನು ಬಿಟ್ಟರೆ ಉಳಿದದ್ದೆಲ್ಲವೂ ಹಿಂದಿನಂತೆಯೇ ಇವೆ.

# ತಿಪ್ಪರಲಾಗ ಹಾಕಿ ಸಮರ್ಥಿಸಿಕೊಂಡು ಎದುರಾಳಿಯನ್ನು ನೀಚ ದುಷ್ಟ ಎಂದೆಲ್ಲ ಬೈದಾಡಿದರೂ ಡಿಮಾನಿಟೈಸೇಷನ್ ಒಂದು ಫೈಲ್ಡ್ ಪ್ರಾಜೆಕ್ಟ್ ಅದು. ಜಿಡಿಪಿ ಮತ್ತೊಂದು ಮೊದಲೊಂದು ಯಾವ ಅಂಕಿ ಅಂಶಗಳ ದಾಖಲೆಗಳೂ ಬೇಕಾಗಿಲ್ಲ, ಒಂದು ಸಕ್ಸಸ್ಫುಲ್ ಪ್ರಾಜೆಕ್ಟ್ ಸ್ವಾಭಾವಿಕವಾಗಿ ದೈನಂದಿನ ಅನುಭವಕ್ಕೆ ದಕ್ಕುತ್ತದೆ. ಅಂತಹ ಯಾವುದೆ ಅನುಭವ ಸಿಗ್ತಾ ಇಲ್ಲ ಎಂದ ಮೇಲೆ ಅದು ಫೈಲ್ಡ್ ಪ್ರಾಜೆಕ್ಟೆ.

ಈ ಮಾತಿನಿಂದ ನನ್ನನ್ನು ಬ್ರಾಂಡ್ ಮಾಡ್ತೀರಿ ಎಂದಾದರೆ ಇನ್ನೂ ಒಂದು ಮಾತು ಹೇಳ್ತೇನೆ. ಚೀನಾ ಮತ್ತು ಶ್ರೀಲಂಕಾ ಪ್ರಾಬ್ಲಂಗಳನ್ನು ಸಾಕಷ್ಟು ಯಶಸ್ವಿಯಾಗಿಯೇ ನಿಭಾಯಿಸಲಾಗಿದೆ.

ಬೊಬ್ಬೆ ಹಾಕಿ ಸತ್ಯವನ್ನು ಸುಳ್ಳು ಮಾಡಲು ಆಗುವುದಿಲ್ಲ.

# ಎಡಪಂಥೀಯರು ಬರೆದ ಇತಿಹಾಸ ಸರಿಯೋ ಬಲಪಂಥೀಯರು ಬರೆದ ಇತಿಹಾಸ ಸರಿಯೋ ಎಂಬ ಪ್ರಶ್ನೆಯನ್ನು ಕಾಲೇಜ್ ವಿದ್ಯಾರ್ಥಿಯೊಬ್ಬರು ಕೇಳಿದರು. ಜೊತೆಗೆ ಸರಿಯಾಗಿ ಏನು ನಡೆದಿದೆ ಎಂದು ಗೊತ್ತಾಗುವುದು ಹೇಗೆ ಎಂದೂ ಸೇರಿಸಿದರು. ಉತ್ತರ ಇಷ್ಟೆ:

ಇತಿಹಾಸ ಎಂದರೆ ಕೆಲವು ಘಟನೆಗಳ ದಾಖಲೆ. ಅದನ್ನು ಎಡದವನಾದರೂ ಬರೆದಿರಲಿ ಬಲದವನಾದರೂ ಬರೆದಿರಲಿ ಅದು ಮಾನವ ಗುಣಸ್ವಭಾವಗಳ ಒಳಗೆ ನಿಲ್ಲುತ್ತದೆಯೇ ಎಂದು ಯೋಚಿಸಿ. ಮಾನವ ಸ್ವಭಾವಗಳು ಎಂದೂ ಬದಲಾಗುವುದಿಲ್ಲ. ಸ್ವಭಾವ ಪ್ರಕಟವಾಗುವ ವಿಧಾನ ಬದಲಾಗುತ್ತದೆ ಅಷ್ಟೆ. ಅವನು ಯಾವ ಜಾತಿ ಧರ್ಮ ಮತದವನಾದರೂ ಇರಲಿ ಅವನಲ್ಲಿ ದೌರ್ಬಲ್ಯಗಳಿರಲಿಲ್ಲ, ಅವನು ಎಂದೂ ಯಾವ ಕೆಟ್ಟದನ್ನೂ ಮಾಡಿಲ್ಲ ಎಂದು ಯಾರೇ ಬರೆದಿರಲಿ ಅವನು ಹಿಸ್ಟೋರಿಯನ್ ಅಲ್ಲ, ಅವನೊಬ್ಬ ಸುಳ್ಳ ಎಂದು ಭಾವಿಸಿ. ಹಾಗೆಯೇ ಯಾವನೇ ವ್ಯಕ್ತಿಯನ್ನು ಒಳ್ಳೆಯದನ್ನೆ ಮಾಡಿಲ್ಲ ಎಂದು ಬರೆದರೂ ಆತನೂ ಒಬ್ಬ ಹಿಸ್ಟೋರಿಯನ್ ಅಲ್ಲ. ಅವನೂ ಒಬ್ಬ ಸುಳ್ಳ ಎಂದು ಭಾವಿಸಿ. ಯಾರು ವ್ಯಕ್ತಿತ್ವವನ್ನು ಒಳಿತು ಕೆಡುಕುಗಳ ಮಿಶ್ರಣವೆಂದು ಬರೆಯುತ್ತಾರೋ ಅವರು ಸ್ವಲ್ಪ ಸರಿಯನ್ನು ಬರೆಯುತ್ತಿದ್ದಾರೆ ಎಂದು ಭಾವಿಸಿ. ಅದರಲ್ಲಿ ಮಾಹಿತಿ ದೋಷಗಳಿರಬಹುದು. ಆದರೆ ನಿಮ್ಮನ್ನು ಆ ಇತಿಹಾಸಕಾರ ತಪ್ಪು ದಾರಿಗೆ ಎಳೆಯುವುದಿಲ್ಲ ಎಂದು ನಂಬಬಹುದು ಎಂದೆ.

# ಈ ದೇಶದಲ್ಲಿ ಹೀರೋಗಳಿದ್ದಾರೆ. ನಾಯಕರಿಲ್ಲ. ಹೀರೋಗೆ ಜನರ ಸಿಟ್ಟಿಗೆ ಧ್ವನಿಯಾಗುವ ಶಕ್ತಿ ಇರುತ್ತದೆ. ನಾಯಕನಿಗೆ ಜನರ ಅವಶ್ಯಕತೆಗಳಿಗೆ ಧ್ವನಿಯಾಗುವ ಶಕ್ತಿ ಇರುತ್ತದೆ. ನಾಯಕನಾಗಬೇಕಾದರೆ ಮೊದಲನೆಯದಾಗಿ ಸಮಗ್ರತೆಯ ಕಲ್ಪನೆ ಇರಬೇಕು, ಎರಡನೆಯದಾಗಿ ಖಚಿತವಾದ ಒಂದು ನಿಲುವು ಇರಬೇಕು. ಅಫ್ಕೋರ್ಸ್ ಖಚಿತವಾದ ನಮ್ಮ ನಿಲುವನ್ನು ಹೇಳಿದಾಗ ನಾವು ಯಾರಿಗೂ ಪ್ರಿಯವಾಗುವುದಿಲ್ಲ. ರಾಜಕಾರಣಿಯಾದರೆ ಖವಿತವಾದ ತನ್ನ ನಿಲುವನ್ನು ಹೇಳಿದಾಗ ಸೋಲುವುದು ಶತಸ್ಸಿದ್ಧ. ಆದರೆ ಆಮೇಲೆ ಜನರಿಗೆ ಸ್ಪಷ್ಟವಾದದ್ದು ಎಲ್ಲಿ ಇದೆ ಎಂದು ಗೊತ್ತಾಗುತ್ತದೆ. ಆಮೇಲೆ ಓಟು ತಾನಾಗಿಯೇ ಅವನನ್ನು ಅರಸಿಕೊಂಡು ಬರುತ್ತದೆ.

ನಾವು ಹಿಂದೂ ಸ್ವಾಮಿಗಳನ್ನು ಡಿಫೆಂಡ್ ಮಾಡ್ಕೊಳ್ತೇವೆ ಎಂದಾದರೆ ಅದನ್ನು ಹೇಳಬೇಕು. ಅವನು ರೇಪ್ ಮಾಡಲಿ, ಕೊಲೆ ಮಾಡಲಿ ಅವನು ದೈವಾಂಶ ಸಂಭೂತನಾದುದರಿಂದ ನಾವು ಅದನ್ನು ಅಪರಾಧ ಎಂದು ಭಾವಿಸುವುದಿಲ್ಲ ಎಂದು ಹೇಳಬೇಕು. ಇಲ್ಲದಿದ್ದರೆ ರೇಪಿಸ್ಟ್ ಅನ್ನು ಈ ಕ್ಷಣವೇ ಸ್ವಾಮಿ ಎಂಬ ಸ್ಥಾನದಿಂದ ನನ್ನ ಮನಸಿನಿಂದ ಕಿತ್ತು ಹಾಕಿದ್ದೇನೆ ಎಂದು ಹೇಳಬೇಕು. ಕೌಂಟರ್ ಸೈಡ್ ನಲ್ಲು ಅಷ್ಟೆ. ಮುಸ್ಲಿಮರನ್ನು ಧರ್ಮದ ಆಧಾರದಲ್ಲಿ ಬೆಂಬಲಿಸುತ್ತೇವೆ ಎನ್ನುವುದಾದರೆ ಅವರು ಅಲ್ಪಸಂಖ್ಯಾತರಾದ್ದರಿಂದ ಅವರು ಏನೇ ಮಾಡಿದರೂ ಅವರನ್ನು ನಾನು ಬೆಂಬಲಿಸುವವನೆ ಎಂದು ಹೇಳಬೇಕು. ಅಥವಾ ದುಷ್ಟತನವನ್ನು ಯಾರೇ ಮಾಡಿದರು ತರಾಟೆಗೆ ತೆಗೆದುಕೊಳ್ಳಬೇಕು. ಆಗ ಜನರು ನಂಬ್ತಾರೆ. ಬೇರೇನಲ್ಲದಿದ್ದರೂ ಇವನು ಬಣ್ಣ ಬದಲಾಯಿಸುವುದಿಲ್ಲ ಎಂದು ಅವರಿಗೆ ಖಾತ್ರಿಯಾಗಿರುತ್ತದೆ.

ಗಾಂಧಿಯ ಕಾಲವನ್ನು ನಾನು ಅನುಭವಿಸಿಲ್ಲ. ಇಂದಿರಾ ಗಾಂಧಿಯವರ ಕಾಲದಲ್ಲಿ ನಾನಿನ್ನೂ ಚಿಕ್ಕವನು. ಅವರಿಗೆ ಈ ಶಕ್ತಿ ಇತ್ತು ಎಂದು ಹೇಳುತ್ತಾರೆ. ಈ ರೀತಿಯ ಒಂದು ಸ್ಪಷ್ಟ ನಿಲುವನ್ನು ಎರಡು ಮೂರು ವರ್ಷಗಳ ಕಾಲ ಅನುಭವಿಸಿದ್ದೆ. ಆಗ ಅಯೋಧ್ಯೆ ಹೋರಾಟ ನಡೆಯುತ್ತಿತ್ತು. ಭಾರತ ಹಿಂದೂ ರಾಷ್ಟ್ರ ಆಗಬೇಕು ಮತ್ತು ಭಾರತದಲ್ಲಿರುವವರೆಲ್ಲ ಹಿಂದೂಗಳೆ ಎಂಬ ಒಂದು ಸ್ಪಷ್ಟ ಐಡಿಯಾಲಜಿ ಎರಡು ಮೂರು ವರ್ಷಗಳ ಕಾಲ ಇತ್ತು. ಆ ನಿಲುವನ್ನು ನಾನು ಒಪ್ಪುವುದಿಲ್ಲ, ಆ ವಿಚಾರ ಬೇರೆ. ಆದರೆ ನಿಲುವಿನಲ್ಲಿ ಸ್ಪಷ್ಟತೆ ಇತ್ತು. ಆಮೇಲೆ ಇದರ ಒಳಗೆ ಏಳೆಂಟು ಐಡಿಯಾಲಜಿ ಸೇರಿ ಕಡೆಗೆ ಯಾವುದು ಏನು ಎನ್ನುವುದೇ ಗೊತ್ತಾಗದೆ ಬೇಕಾದ ಅಗತ್ಯಕ್ಕೆ ಬೇಕಾದ ಐಡಿಯಾಲಜಿ ಪ್ರಕಟವಾಗತೊಡಗಿತು. ಚುನಾವಣೆಯನ್ನು ಗೆಲ್ಲುವುದು ಯಾಕೆ ? ಒಂದೋ ತನ್ನ ಐಡಿಯಾಲಜಿಯನ್ನು ಸಂವಿಧಾನದ ವ್ಯಾಪ್ತಿಯಲ್ಲಿ ಜಾರಿಗೊಳಿಸುವುದು. ಇದನ್ನು ಮಾಡುವುದೆಂದಾದರೆ ಐಡಿಯಾಲಜಿ ಏನು ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಇದಲ್ಲ ಎನ್ನುವುದಾದರೆ ಹಣ ಮಾಡುವುದಾದರೂ ಉದ್ದೇಶ ಇರಬೇಕು. ಅದನ್ನಾದರು ಮಾಡಬೇಕಲ್ಲ.

ನಾಯಕತ್ವದ ಬಗ್ಗೆ ಪೂವಪ್ಪ ಕಣಿಯೂರು ಒಳ್ಳೆಯ ವಿಚಾರವನ್ನು ಹೇಳಿದರು. ಭೀಷ್ಮನಿಗೆ ಸೇನಾಪತಿ ಪಟ್ಟ ಕಟ್ಟುವಾಗ ಆಕ್ಷೇಪಿಸುವ ಕರ್ಣನಿಗೆ “ಇಲ್ಲಿ ನಾವು ಯೋಚಿಸುವ ಹಾಗೆಯೇ ಪಾಂಡವ ಶಿಬಿರದಲ್ಲೂ ಯೋಚಿಸುವವನೊಬ್ಬನಿದ್ದಾನೆ. ನಾವೆಲ್ಲರೂ ಸರದಿ ಪ್ರಕಾರ ಪಟ್ಟ ಕಟ್ಟಿಸಿಕೊಳ್ಳಲಿರುವವರು. ನಿನ್ನ ಸರದಿ ಬರುವ ವರೆಗೆ ಕಾಯುತ್ತಿರು” ಎನ್ನುತ್ತಾನೆ. ಭೀಷ್ಮನಿಗೆ ಇದೆಲ್ಲ ಏನು ಎಂದು ಗೊತ್ತಿತ್ತು. ಕೃಷ್ಣ ಇಡೀ ಬ್ರಹ್ಮಾಂಡವನ್ನೆ ಒಡಲಲ್ಲಿ ಇಟ್ಟುಕೊಂಡ ಭಗವಂತ. ತಾನು ಕುರುಕ್ಷೇತ್ರದಲ್ಲಿ ಯುದ್ಧ ಮಾಡುವುದಿಲ್ಲ ಎಂದು ಶಪಥ ಮಾಡಿದವನು. ಭೀಷ್ಮನ ಅಟ್ಟಹಾಸಕ್ಕೆ ಅಂತಹ ಕೃಷ್ಣನೇ ಸಂಯಮವನ್ನು ಕಳೆದುಕೊಂಡು ಚಕ್ರ ಹಿಡಿದು ನಿಂತುಬಿಡುತ್ತಾನೆ. ಆಗ ಭೀಷ್ಮ ಶಸ್ತ್ರ ತ್ಯಾಗ ಮಾಡಿ, “ನಿನ್ನ ಕೈಯಿಂದ ಹತನಾಗುವ ಸೌಭಾಗ್ಯ ನನಗೆ ಸಿಗಲಿ” ಎಂದು ಕೈಮುಗಿದು ನಿಂತುಬಿಡುತ್ತಾನೆ. ಆಗ ಕೃಷ್ಣ ನಾಚಿಕೆಯಿಂದ ತಲೆ ತಗ್ಗಿಸಿ ಚಕ್ರ ತ್ಯಜಿಸುತ್ತಾನೆ. ದೇವರನ್ನೆ ತಲೆ ತಗ್ಗಿಸುವಂತೆ ಮಾಡುವ ಶಕ್ತಿ ಭೀಷ್ಮನ ನಾಯಕತ್ವಕ್ಕೆ ಇತ್ತು. ಹೆಣ್ಣು, ಮಣ್ಣು ಎರಡಕ್ಕೂ ಬೆನ್ನು ಹಾಕಿ ನಿಂತ ಭೀಷ್ಮ ಸಾಯುವಾಗಲೂ ಮಣ್ಣಿಗೆ ಬೆನ್ನು ಹಾಕಿ ಮಣ್ಣನ್ನು ಮುಟ್ಟದೆ ಶರಶಯ್ಯೆಯಲ್ಲೆ ಸಾಯುತ್ತಾನೆ.

ನಮ್ಮದು ಆರು ಸಾವಿರ ವರ್ಷಗಳ ಪರಂಪರೆ ಅನ್ತೇವೆ.ಅಟ್ ಲೀಸ್ಟ್ ನೀವುಗಳು ಏನು ಎಂಬುದನ್ನಾದರೂ ಸ್ಪಷ್ಟಪಡಿಸಿ ಪುಣ್ಯ ಕಟ್ಟಿಕೊಳ್ಳಿ ಮಾರಾಯ್ರೆ.

 

 

Leave a Reply

Your email address will not be published. Required fields are marked *