Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗೌರಿ ಲಂಕೇಶ್ ಹತ್ಯೆ ರಣಹೇಡಿಗಳ ಹತಾಶೆಯ ಕೃತ್ಯ: ಸರಕಾರದ ವಿಫಲತೆಯೇ ಹಂತಕರಿಗೆ ಪ್ರೇರಣೆ !

# ದಿಟ್ಟ ಪತ್ರಕರ್ತೆ, ಶೋಷಿತರ ಪ್ರಬಲ ಧ್ವನಿ, ಪ್ರಗತಿಪರ ಚಳುವಳಿಯ ಶಕ್ತಿ, ಸಾಹಿತಿ, ಗೌರಿ ಲಂಕೇಶ್ ವಾರಪತ್ರಿಕೆಯ ಸಂಪಾದಕಿ ಗೌರಿ ಲಂಕೇಶ್ ಅವರನ್ನು ದುಷ್ಟ ಶಕ್ತಿಗಳು ಗುಂಡು ಹಾರಿಸಿ ಹತ್ಯೆಗೈದಿದ್ದಾರೆ. ಇದು ರಣಹೇಡಿಗಳು ನಡೆಸಿದ ಅತ್ಯಂತ ಹೇಯತನದ ಕೃತ್ಯ. ಖಂಡನೀಯವಾದುದು.

ಪ್ರಗತಿಪರ, ಜನಪರ ಹೋರಾಟಕ್ಕೆ, ಕೋಮುವಾದಿ ವಿರೋಧಿ ಹೋರಾಟಕ್ಕೆ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟಕ್ಕೆ ಗೌರಿಯವರ ಹತ್ತುಂಯೆಯಿಂದಾಗಿ ತುಂಬಲಾರದ ನಷ್ಟವಾಗಿದೆ. ಗೌರಿಯವರು, ತಂದೆ ಲಂಕೇಶ್ ರವರ ನಿಧನಾನಂತರ ಮತ್ತು ಸಹೋದರ ಇಂದ್ರಜಿತ್ ಲಂಕೇಶ್ ಜೊತೆಗಿನ ಭಿನಭಿಪ್ರಾಯದ ಬಳಿಕ ಹೊಸದಾಗಿ ಮತ್ತು ಸ್ವತಂತ್ರವಾಗಿ ಗೌರಿ ಲಂಕೇಶ್ ವಾರಪತ್ರಿಕೆಯನ್ನು ಆರಂಭಿಸಿದಾಗ, ಇದರ ಪ್ರಥಮ ಸಂಚಿಕೆಯಿಂದ ಆರಂಭಿಸಿ ಎರಡು ಮೂರು ವರ್ಷಗಳ ಕಾಲ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವರದಿಗಾರನಾಗಿ ಕೆಲಸ ಮಾಡಿರುವುದರಿಂದಲೂ, ಆ ಸಮಯದಲ್ಲಿ ಪ್ರಗತಿಪರ ಚಳುವಳಿಯಲ್ಲಿ ಸಕ್ರಿಯವಾಗಿದ್ದುದರಿಂದಲೂ ಗೌರಿಯವರ ಹತ್ತಿರದ ಮತ್ತು ಆತ್ಮೀಯ ಒಡನಾಟ ನನಗಿತ್ತು.

ಅವರಲ್ಲಿದ್ದ ಮಾನವೀಯ ಕಾಳಜಿ, ಜೀವ ವಿರೋಧಿ ಶಕ್ತಿಗಳ ಬಗ್ಗೆ ಅವರಲ್ಲಿದ್ದ ಆಕ್ರೋಶ, ಎಂಥ ಸವಾಲುಗಳನ್ನಾದರೂ ಸ್ವೀಕರಿಸುವ ಧೀಶಕ್ತಿಯನ್ನು ಹತ್ತಿರದಿಂದ ಗಮನಿಸಿದವರಿಗೆ ಗೊತ್ತೇ ಇರುವಂಥದ್ದು. ಇಂಥ ಗೌರಿಯವರ ನಿಜಕ್ಹಕೂ ಬೇಸರ ಕೊಡುವಂಥದ್ದೇ. ಈ ಹತ್ಯೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕೊಲೆಯೂ ಹೌದು. ಪ್ರಜಾತಂತ್ರದ ಕೊಲೆಯೂ ಹೌದು.

ದುಷ್ಟ ಶಕ್ತಿಗಳು ಗೌರಿ ಲಂಕೇಶ್ಯ ರವರ ದೇಹವನ್ನು ಹತ್ಯೆಗೈದಿದ್ದಾರೆಯೇ ಹೊರತು, ಗೌರಿಯವರು ಪ್ರತಿಪಾದಿಸುತ್ತಿದ್ದ ವಿಚಾರಗಳನ್ನು ಖಂಡಿತಾ ಅಲ್ಲ. ವಿಚಾರಗಳಿಗೆ ಸಾವಿಲ್ಲ

ಸಿದ್ಧರಾಮಯ್ಯ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರಕಾರವೂ ಗೌರಿಯವರ ಹತ್ಯೆಗೆ ಪರೋಕ್ಷ ಕಾರಣ ಎಂದರೆ ತಪ್ಪಾಗಲಾರದು. ಕರ್ನಾಟಕದಲ್ಲಿ ಈ ಹಿಂದೆ ನಡೆದ ಇಂಥದ್ದೇ ಹತ್ಯೆಗಳನ್ನು ಮಾಡಿದ ದುಷ್ಕರ್ಮಿಗಳನ್ನು ಗುರುತಿಸಿ ಅವರ ಹೆಡೆಮುರಿ ಕಟ್ಟುವಲ್ಲಿ ಸರಕಾರ ವಿಫಲವಾದುದೇ ಗೌರಿಯವರ ಹತ್ಯೆಗೆ ಪ್ರೇರಣೆಯಾಗಿದೆ ಎನ್ನುವುದೇ ಹೆಚ್ಚು ಸೂಕ್ತ.

ಸರಕಾರ ಇನ್ನಾದರೂ ಇಂಥ ರಣಹೇಡಿಗಳನ್ನು ಮತ್ತು ಇಂಥ ರಣಹೇಡಿಗಳ ಪಡೆಯನ್ನು ಸೃಷ್ಟಿಸುತ್ತಿರುವ ಸಂಘಟನಾತ್ಮಕ ದುಷ್ಟಶಕ್ತಿಗಳನ್ನು ಸದೆಬಡಿಯಲು ಪ್ರಜ್ಞಾಪೂರ್ವಕವಾಗಿ ಕೆಲಸ ಮಾಡಲಿ.   – ಶ್ರೀರಾಮ ದಿವಾಣ.

Leave a Reply

Your email address will not be published. Required fields are marked *