Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸಿದ್ದಣ್ಣನ ರಾಜ್ಯದಲ್ಲಿ ಬಲಪಂಥೀಯರಿಗೂ ರಕ್ಷಣೆಯಿಲ್ಲ, ಎಡಪಂಥೀಯರಿಗೂ ಇಲ್ಲ, ಇಲ್ಲಿ ಬರಿಯೋಕು ಭಯ, ಮಾತನಾಡೋಕು ಭಯ

# ಮಾತು ಸತ್ತು ಹೋಗಿದೆ. ಎಂತಹ ದರಿದ್ರ ಸರ್ಕಾರ ಇದು? ರಾಜ್ಯದ ಗುಪ್ತಚರ ಇಲಾಖೆ ಸುದ್ದಿಗೋಷ್ಠಿಯಲ್ಲಿ ಬೋಂಡ ಬಜ್ಜಿ ತಿಂದು, ಟೀ ಕುಡಿಯೋಕೆ ಮಾತ್ರ ಸೀಮಿತವಾಗಿದ್ಯಾ? ರಾಜ್ಯಕೊಬ್ಬ ಗೃಹ ಸಚಿವ, ಅವರಿಗೊಬ್ಬ ಸಲಹೆಗಾರ, ಥೂ ಇವರ ಜನ್ಮಕ್ಕೆ. ಸರ್ಕಾರದ ಪ್ರಬಲ ಪ್ರತಿಪಾದಕರಿಗೆ ರಕ್ಷಣೆ ನೀಡಲಾಗದ ಸರ್ಕಾರ, ಇನ್ನು ನಮಗೆ, ನಿಮಗೆ ಏನು ಕೊಡುತ್ತೆ ? ಸಿದ್ದಣ್ಣನ ರಾಜ್ಯದಲ್ಲಿ ಬಲಪಂಥೀಯರಿಗೂ ರಕ್ಷಣೆಯಿಲ್ಲ, ಎಡಪಂಥೀಯರಿಗೂ ಇಲ್ಲ, ಇಲ್ಲಿ ಬರಿಯೋಕು ಭಯ, ಮಾತನಾಡೋಕು ಭಯ, ಛೇ… – ರಕ್ಷತ್ ಶೆಟ್ಟಿ

# ಗೃಹ ಮ಼ತ್ರಿಗಳೇ…
ಗೌರಿ ಲಂಕೇಶ್ ರನ್ನು ಕೊಲೆಗೈದವರನ್ನು ಕೂಡಲೆ ಪತ್ತೆ ಹಚ್ಚಿ ಹಾಗೂ ಹತ್ಯೆಯನ್ನು ಸಂಭ್ರಮಿಸುತ್ತಿರುವವರ ಮೇಲೆ ತಕ್ಷಣ ಕಾನೂನು ಕ್ರಮ ಜರುಗಿಸಿ. ಹಿಂದೆ ಅನಂತಮೂರ್ತಿ ತೀರಿಕೊಂಡಾಗ ಮತ್ತು ಕಲಬುರ್ಗಿ ಹತ್ಯೆಯಾದಾಗ ಸಂಭ್ರಮಿಸಿದ್ದವರ ಮೇಲೆ ಕ್ರಮ ಕೈಗೊಂಡಿದ್ದರೆ ಸಂಭ್ರಮ ಮುಂದುವರಿಯುತ್ತಿರಲಿಲ್ಲ. ನೀವು ನಿರ್ಲಕ್ಷ್ಯ ವಹಿಸಿದರೆ ಇನ್ನಷ್ಟು ಕೊಲೆಗಳನ್ನು ಅವರು ಮಾಡಬಹುದು ಹಾಗೂ ಸಂಭ್ರಮಿಸುವವರು ಇನ್ನಷ್ಟು ಮಂದಿ ಹೆಚ್ಚಬಹುದು. ಸಾಮಾಜಿಕ ಜಾಲ ತಾಣಗಳ ಮೇಲೆ ನಿಗಾ ವಹಿಸಿ. ಅಧಿಕಾರ ನಿಮ್ಮ ಕೈಯ್ಯಲ್ಲಿದೆ. – ಅಜೀಜ್ ಕಿರಗುಂದ

# ಗೌರಿ ಹತ್ಯೆ ನಮ್ಮನ್ನು ಯಾಕೆ ಇಷ್ಟು ಕಂಗೆಡಿಸುತ್ತಿದೆಯೆಂದರೆ ಹತ್ಯೆಯಲ್ಲಿ ನಾವೂ ಪಾಲುದಾರರೆಂಬ ಅಸಹ್ಯ ಭಾವ ಹುಟ್ಟಿಸುತ್ತಿರುವುದರಿಂದ. ನಾವು ಅವರನ್ನು ಉಳಿಸಿಕೊಳ್ಳಲಾಗಲಿಲ್ಲ. ನಮ್ಮದೆಂದುಕೊಂಡ ಸರ್ಕಾರವೂ ಆಕೆಯನ್ನು ಉಳಿಸಲಿಲ್ಲ. ನಾವು ಈ ಅಪರಾಧಿ ಪ್ರಜ್ಞೆಯೊಂದಿಗೆ ಸಾಯುತ್ತಿದ್ದೇವೆ.‌ ಬಡಕಲು ದೇಹ ಒಂದೇ ಏಟಿಗೆ ಸತ್ತಿರಬಹುದು.‌‌‌ ನಾವು ಇಂಚಿಂಚೇ ಸಾಯಲಿದ್ದೇವೆ ಈ ದರಿದ್ರ ಹತಾಶೆ, ಅಸಹಾಯಕತೆಯೊಂದಿಗೆ. ಅಸಹಾಯಕತೆಗಿಂತ ದೊಡ್ಡ ಶತ್ರು ಇನ್ನೇನಾದರೂ ಇದೆಯೆಂದು ಅಂದುಕೊಂಡಿದ್ದೀರಾ? ಖಂಡಿತಾ ಇಲ್ಲ. ನಮ್ಮ ಈ ದುರ್ಬರ ಬದುಕಿಗೆ ಧಿಕ್ಕಾರವಿರಲಿ. – ದಿನೇಶ್ ಕುಮಾರ್

# ನಾಗರಿಕ ಸಮಾಜ ಬೆಚ್ಚಿ ಬೀಳುವಂತಹ ಘೋರ ಕೃತ್ಯವೊಂದು ನಡೆದು ಹೋಗಿದೆ. ಸಮಾಜದ ಕಾವಲು ನಾಯಿಯಾಗಿ ಶೋಷಿತ-ದಮನಿತ ಹಾಗೂ ದುಷ್ಟ ಶಕ್ತಿಗಳ ವಿರುದ್ದ ಸದಾ ಗಂಡೆದೆಯ ಧ್ವನಿಯೆತ್ತಿ ಘರ್ಜಿಸುತ್ತಿದ್ದ ಮಹಿಳಾ ಸಾಹಿತಿ ಹಾಗೂ ಹಿರಿಯ ಪತ್ರಕರ್ತೆಯೋರ್ವರು ದುಷ್ಕರ್ಮಿಗಳ ಗುಂಡಿನ ದಾಳಿಗೆ ಲೇಖನಿ ಕೆಳಗಿಟ್ಟು ನಿಶ್ಶಬ್ದರಾಗಿದ್ದಾರೆ. ಖಂಡಿಸಲು ಪದಗಳೂ ದೊರೆಯುತ್ತಿಲ್ಲ. ಮಾತುಗಳೂ ಬರುತ್ತಿಲ್ಲ.
ಆದರೆ ಭಾರತೀಯ ಇತಿಹಾಸವೇ ಅಂತದ್ದು. ಸ್ವಾತಂತ್ರ್ಯಾ ನಂತರ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯಿಂದ ಹಿಡಿದು ಈ ಸಮಾಜದ ಏಳಿಗೆಗಾಗಿ ದುಡಿದ ಬಹುತೇಕ ಮಹಾ ಚೇತನಗಳು ಸಮಾಜದ ಏಳಿಗೆ ಬಯಸದ ದುಷ್ಟ ಶಕ್ತಿಗಳ ಕ್ರೌರ್ಯಕ್ಕೆ ಆಹುತಿಯಾಗಿರುವ ಇತಿಹಾಸವೇ ನಮ್ಮ ಕಣ್ಣ ಮುಂದೆ ಹಚ್ಚಹಸುರಾಗಿರುವಾಗ ಗೌರಿ ಲಂಕೇಶ್ ಹತ್ಯೆ ಅದೇನು ಮಹಾ ಎನ್ನುವಂತಿಲ್ಲ. ಮಹಾತ್ಮಾ ಗಾಂಧಿ, ಇಂದಿರಾ ಗಾಂಧಿ, ರಾಜೀವ ಗಾಂಧಿ ಮೊದಲಾದ ಮಹಾ ಚೇತನಗಳಿಂದ ಹಿಡಿದು ಇತ್ತೀಚೆಗೆ ಹತರಾದ ಪ್ರೊ. ಕಲಬುರ್ಗಿ ವರೆಗೂ ಸಮಾಜದ ಕ್ರೌರ್ಯ, ಭ್ರಷ್ಟತೆ, ಅಸಮಾನತೆ, ಕೋಮುವಾದದ ವಿರುದ್ದ ಎದೆತಟ್ಟಿ ಹೋರಾಡಿದ ಏಕಮಾತ್ರ ಕಾರಣಕ್ಕೆ ಈ ಪವಿತ್ರ ಮಣ್ಣಿನಲ್ಲಿ ದುಷ್ಟ ಶಕ್ತಿಗಳ ಅನ್ಯಾಯದ ಏಟಿಗೆ ರಕ್ತಸಾಕ್ಷಿಗಳಾಗಿ ಹೋಗಿದ್ದಾರೆ.  ಸೈದ್ದಾಂತಿಕವಾಗಿ ನೇರ ಸೆಣಸಾಟ ನಡೆಸಲು ಸಾಧ್ಯವಾಗದೆ ಹೇಡಿಗಳಂತೆ ಮೋಸ-ವಂಚನೆಯ ಮೂಲಕ ಈ ಎಲ್ಲಾ ಚೇತನಗಳ ಜೀವವನ್ನು ದುಷ್ಕರ್ಮಿಗಳು ಮುಕ್ಕಿ ತಿಂದಿದ್ದಾರಾದರೂ ಈ ಮಹಾ ಚೇತನಗಳು ಉಳಿಸಿ ಹೋಗಿರುವ ಆದರ್ಶ, ತತ್ವ, ಚಿಂತನೆಗಳನ್ನು ಎಂದಿಗೂ ಶಾಶ್ವತವಾಗಿ ಇಲ್ಲವಾಗಿಸಲು ಖಂಡಿತಾ ಸಾಧ್ಯವಿಲ್ಲ ಎಂಬುದು ತಿಳಿದುಕೊಳ್ಳುವುದು ಒಳಿತು. ಇಳಿವಯಸ್ಸಿನ ಜಗತ್ತಿನ ಶ್ರೇಷ್ಠ ಸಾಹಿತಿ, ಪತ್ರಕರ್ತೆ ಗೌರಿಯಮ್ಮರನ್ನು ಮುಸ್ಸಂಜೆಯ ನಸುಕಿನಲ್ಲಿ ಅನ್ಯಾಯವಾಗಿ ಹತ್ಯೆ ನಡೆಸಿರಬಹುದು. ಆದರೆ ಆಕೆ ಈ ಸಮಾಜದಲ್ಲಿ ಉಳಿಸಿ ಹೋಗಿರುವ ತತ್ವ-ಸಿದ್ದಾಂತಗಳನ್ನು ಯಥಾವತ್ತಾಗಿ ಮುಂದಿನ ಜನಾಂಗಕ್ಕೆ ಸಾರಬಲ್ಲ ಅದೆಷ್ಟೋ ಗೌರಿಗಳು, ಲಂಕೇಶನ್ನರು ಈ ಸಮಾಜದಲ್ಲಿ ತಮ್ಮ ಜೀವವನ್ನೇ ಪಣಕ್ಕಿಟ್ಟು ಜೀವಂತವಾಗಿ ಉಳಿದುಕೊಂಡಿದ್ದಾರೆ ಎಂಬುದೂ ಕೂಡಾ ಅಷ್ಟೇ ಸತ್ಯ.
ದುಷ್ಕರ್ಮಿಗಳ ಅನ್ಯಾಯದ ಏಟಿಗೆ ಬಲಿಯಾದ ಹಿರಿಯ ದಾರ್ಶನಿಕ ಚಿಂತಕಿಯ ಕೊಲೆಗಡುಕರನ್ನು ಸರಕಾರ ಯಾವುದೇ ಮುಲಾಜಿಲ್ಲದೆ ಪತ್ತೆ ಹಚ್ಚಿ ಅಂತಹವರನ್ನು ನೇಣುಗಂಬಕ್ಕೇರಿಸಿದರೆ ಅದಕ್ಕಿಂತ ದೊಡ್ಡ ಶ್ರದ್ದಾಂಜಲಿ ಬೇರೊಂದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಸರಕಾರ, ಪೊಲೀಸ್ ಇಲಾಖೆ ನಿಷ್ಪಕ್ಷಪಾತ ಹಾಗೂ ನಿರ್ದಾಕ್ಷಿಣ್ಯ ತನಿಖೆಯನ್ನು ಕೈಗೊಂಡು ಗೌರಿ ಅಮ್ಮನವರ ಕುಟುಂಬಕ್ಕೆ ನ್ಯಾಯವನ್ನು ಒದಗಿಸಿಕೊಡಲಿ ಎಂಬುದೇ ಸಮಸ್ತ ಸಾರಸ್ವತ ಲೋಕದ ಮಂದಿಯ ಒಕ್ಕೊರಳ ಆಗ್ರಹ. – ಪಿ.ಎಂ.ಅಶ್ರಫ್

# ನಿಜಕ್ಕೂ ಇದು ದುರಂತ..!
ಬಹಳ ಹಿಂದೆ ನಕ್ಸಲರ ನಾಯಕ ಸಾಕೇತ್ ರಾಜನ್‍ರನ್ನು ಗೌರಿ ಲಂಕೇಶ್ ಸಂದರ್ಶನ ಮಾಡಿದ್ದರು. ಮಲೆನಾಡಿನ ಸಮಸ್ಯಗಳು ನಕ್ಸಲ್‍ವಾದ ಹೋರಾಟಗಳ ಬಗ್ಗೆ ಅನೇಕ ಲೇಖನಗಳನ್ನು ಬರೆದಿದ್ದರು. ಮಲೆನಾಡಿನಲ್ಲಿ ಹಿಂಸೆಯ ಹೋರಾಟ ನಿಲ್ಲಬೇಕು. ಹಿಂಸೆಯ ಹಾದಿಯಿಂದ ಹೋರಾಟ ಸಲ್ಲದು ಎಂದು ಪ್ರತಿಪಾದಿಸಿದವರು ಗೌರಿ ಲಂಕೇಶ್. ಪೊಲೀಸ್ ಇಲಾಖೆಯೊಂದಿಗೆ ಮಾತನಾಡಿ ಶರಣಾಗುವ ನಕ್ಸಲರನ್ನ ಶರಣಾಗುವಂತೆ ಮಾಡಿ ಅವರನ್ನ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದ್ದರು. ಸಿರಿಮನೆ ನಾಗರಾಜ್, ನೂರ್ ಮತ್ತು ಕೆಲವರನ್ನ ಶರಣಾಗುವಂತೆ ಮಾಡಿದರು. ಈಗ ಅವರು ಮುಖ್ಯವಾಹಿವಿಯಲ್ಲಿದ್ದಾರೆ. ಕಾಡಿನಲ್ಲಿ ಬಂದೂಕು ಹಿಡಿದು ಹೋರಾಟ ಮಾಡುವುದು ತಪ್ಪು, ನಕ್ಸಲರು ಮುಖ್ಯವಾಹಿನಿಗೆ ಬರಬೇಕೆಂದು ನಕ್ಸಲ್ ಪುನರ್ ವಸತಿ ಸಮಿತಿಯ ಸದಸ್ಯರಾಗಿದ್ದ ಗೌರಿ ಲಂಕೇಶ್ ಸಾಕಷ್ಟು ಶ್ರಮಿಸಿದ್ದರು. ಮಲೆನಾಡಿನಲ್ಲಿ ನಕ್ಸಲರ ಸುದ್ಧಿ ಕೇಳಿ ಯಾವುದೋ ಕಾಲವಾಗಿದೆ. ಬಹುಶ: ಅದು ಮುಗಿದ ಅಧ್ಯಾಯ. ಈಗ ನಡೆದಿರುವ ಕೃತ್ಯ ಹೇಗಿದೆ ಎಂದರೇ, ಕಾಡಿನಲ್ಲಿ ಹಿಂಸೆ ಬೇಡಾ ಎಂದ ಗೌರಿಯವರನ್ನ ನಾಡಿನಲ್ಲೇ ಹಿಂಸೆಯಿಂದ ಕೊಂದುಬಿಟ್ಟರು. ಹಿಂಸೆಯ ಮನಸ್ಸುಗಳು ಕಾಡಿನಲ್ಲಿದೆಯಾ ನಾಡಿನಲ್ಲಿದೆಯಾ…? – ರಾ.ಪ್ರವೀಣ್

Leave a Reply

Your email address will not be published. Required fields are marked *