Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮೂಲಭೂತವಾದ ಬೌದ್ಧ ಧರ್ಮದಲ್ಲೂ ಇದೆ, ಕ್ರೈಸ್ತ ಧರ್ಮದಲ್ಲೂ ಇದೆ, ಹಿಂದೂ, ಮುಸ್ಲೀಂ, ಸಿಖ್ ರಲ್ಲೂ ಇದೆ

– ರವೀಂದ್ರ ಗಂಗಲ್, ಬೆಂಗಳೂರು.

# ಮೂವತ್ತೆರಡು ವರ್ಷದ ‘ಆಸಿಫ್ ಮೊಹಿಯುದ್ದೀನ್’ ಎಂಬ ಪ್ರಗತಿಪರ ಚಿಂತಕ ತನ್ನ ಧರ್ಮದೊಳಗಿನ ಮೌಢ್ಯತೆ ಹಾಗೂ ಪ್ರವಾದಿ ಪೈಗಂಬರರನ್ನು ವಿಮರ್ಶೆ ಮಾಡಿದ್ದಕ್ಕಾಗಿ ಬಾಂಗ್ಲಾ ಸರ್ಕಾರವು ಅವನನ್ನು ಜೈಲಿಗೆ ತಳ್ಳಿತ್ತು. ಅವನು ತನ್ನನ್ನು ತಾನು ನಾಸ್ತಿಕನೆಂದು ಘೋಷಿಸಿಕೊಂಡಿದ್ದ. ಜನವರಿ 15, 2013ರಂದು ಮುಖ್ಯ ಬೀದಿಯಲ್ಲೇ ಅವನ ಮೇಲೆ ಮಾರಣಾಂತಿಕ ದಾಳಿ ನಡೆಯಿತು. ಈ ದಾಳಿಯ ಹೊಣೆಯನ್ನು ಧಾರ್ಮಿಕ ಮೂಲಭೂತವಾದಿ ಸಂಘಟನೆಯೊಂದು ಹೊತ್ತುಕೊಂಡಿತು. ದಾಳಿಕೋರರನ್ನು ಸೆರೆ ಹಿಡಿದು ಜೈಲಿಗೆ ಹಾಕಲಾಯಿತು. ‘ಆಸಿಫ್ ಮೊಹಿಯುದ್ದೀನ್’ ತನ್ನ ಮೇಲೆ ದಾಳಿಮಾಡಿದವರನ್ನು ಜೈಲಿನಲ್ಲಿ ಭೇಟಿಯಾದ.

“ಇಸ್ಲಾಂ ಧರ್ಮವನ್ನು ಬಿಟ್ಟವನು ನೀನು. ಮುಸ್ಲಿಮನಲ್ಲ. ಪವಿತ್ರ ಗ್ರಂಥವನ್ನು ಪರಾಮರ್ಶಿಸಿ ಟೀಕೆ ಮಾಡಿದ ಪಾಪಿ ನೀನು. ಇದಕ್ಕಾಗಿ ನಾವು ಈ ದಾಳಿಯನ್ನು ಮಾಡಬೇಕಾಗಿ ಬಂತು” ಹೀಗೆ ಹೇಳಿದ್ದರು ಮತಾಂಧ ದಾಳಿಕೋರರು. ಮುಂದೆ ಇದೆ ಸೆಕ್ಯುಲರ್ ಬಾಂಗ್ಲಾದಲ್ಲಿ ಯುವ ಚಿಂತಕರ ಹತ್ಯೆಗಳಾದವು. 27 ವರ್ಷದ ವಾಷಿಕರ್ ರಹಮಾನ್, 25 ವರ್ಷದ ನಿಜಾಮುದ್ದೀನ್ ಸಮದ್, 43 ವರ್ಷದ ಫೈಸಲ್ ದಿಪನ್, 27 ವರ್ಷದ ಶಫಿ ಇಸ್ಲಾಮ್… ಎಲ್ಲರೂ ಮಂತಾಂಧ ದಾಳಿಗೆ ಒಳಗಾಗಿ ಸತ್ತುಹೋದ ಬಾಂಗ್ಲಾದೇಶದ ಯುವಚಿಂತಕರು.

ಹನ್ನೆಡನೇ ಶತಮಾನದಲ್ಲಿ ಬಸವ ಮಂತಾಂಧತೆಯನ್ನು ವಿರೋಧಿಸಿಯೇ ಸತ್ತುಹೋದ. ಇಲ್ಲಿ ಕಲಬುರ್ಗಿ, ದಾಬೋಲ್ಕರ್, ಪನ್ಸಾರೆ, ಗೌರಿ ಲಂಕೇಶರ ಹತ್ಯೆಗಳಾದವು. ಎಲ್ಲರೂ ಮೌಢ್ಯಗಳನ್ನು ವಿರೋಧಿಸಿದವರು. ಬಸವನನಿಂದ ಹಿಡಿದು ಬಾಂಗ್ಲಾ ದೇಶದಲ್ಲಿ ಹತ್ಯೆಯಾದ ಯುವಚಿಂತಕರು ಹೆಣ್ಣಿನ ಸ್ವಂತಂತ್ರದ ಬಗ್ಗೆ ಮಾತನಾಡಿದವರು. ಹೆಣ್ಣಿನ ಸ್ವಾವಲಂಬನೆಯ ಬಗ್ಗೆ ದೊಡ್ಡದಾಗಿ ದ್ವನಿ ಎತ್ತಿದವರು. ಜಾತ್ಯತೀತ ಹಾಗೂ ಪ್ರಗತಿಪರ ಪ್ರಜಾರಾಜ್ಯದ ಬಗ್ಗೆ ಬರೆದವರು. ಕೊನೆಗೆ ಸತ್ತು ಹೋದರು.

 

ಗೌರಿ ಲಂಕೇಶರ ಆಫೀಸು ನಾನು ವಾಸಿಸುವ ಮನೆಗೆ ಕೇವಲ ನಾಲ್ಕು ನೂರು ಮೀಟರ್ ದೂರದಲ್ಲಿದೆ. ಈಗ್ಗೆ ಒಂದೂವರೆ ವರ್ಷದ ಹಿಂದೆ “ಅಷ್ಟು ಕುಡಿಬೇಡ ಮರಿ. ಚಿಕ್ಕ ವಯಸ್ಸು ನಿಂದು. ನಿನ್ನಂತೋರು ಹೆಚ್ಚು ದಿನ ಬದುಕಬೇಕು…” ಅಂತ ಮೆಸೇಜ್ ಬಂತಿತ್ತು. ಮೆಸೇಜ್ ಕಳಿಸಿದ್ದು ಇದೆ ಗೌರಿ ಲಂಕೇಶ್. ನಿನ್ನೆ ಅವರ ಹತ್ಯೆಯ ಬಗ್ಗೆ ಕೇಳಿದಾಗ ನೋವಾಯಿತು. ಆದರೆ, ನನಗೆ ಆತಂಕ, ಭಯ ಆಗಲೇ ಇಲ್ಲ. ನಾನಿನ್ನು ಭೀಕರ ಸತ್ಯಗಳನ್ನಷ್ಟೇ ಮಾತನಾಡಬೇಕೆಂದು ತೀರ್ಮಾನ ಮಾಡಿದ್ದೇನೆ. ಕೆಲಸವಿಲ್ಲದ ಅಜ್ಞಾನಿ ಹುಡುಗರ ಗುಂಡಿಗೆ ಎದೆ ಕೊಟ್ಟು ಸಾಯುವಷ್ಟು ಅಜಾಗರೂಕನಾಗಬಾರದು ನಾನು ಎನ್ನಿಸಿದೆ. ಇನ್ನು ಮುಂದೆ ಮಾತನಾಡಲಿದ್ದೇನೆ ಸತ್ಯಗಳನ್ನ… ಅರಗಿಸಿಕೊಳ್ಳುವ ತಾಕತ್ತು ನಿಮಗಿರಲಿ. ಈ ಹತ್ಯೆ ನನ್ನಲ್ಲಿ ಬಲವಾದ ಧೈರ್ಯ ತುಂಬಿತೇ ಹೊರತು ಭಯ ತರಿಸಿಲ್ಲ.

ನಿಮಗೆ ನೆನಪಿರಲಿ, ಧರ್ಮಂದತೆ ಹೊಸದನ್ನು ಒಪ್ಪಿಕೊಳ್ಳಲಾರದು. ಬಹುಮುಖ್ಯವಾಗಿ ಹೆಣ್ಣಿನ ಸ್ವಾವಲಂಬನೆ ಹಾಗೂ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳಲಾರದು. ಮೂಲಭೂತವಾದ ಬೌದ್ಧ ಧರ್ಮದಲ್ಲೂ ಇದೆ, ಕ್ರೈಸ್ತ ಧರ್ಮದಲ್ಲೂ ಇದೆ. ಹಿಂದೂ, ಮುಸ್ಲಿ, ಸಿಕ್ಖ್, ಇಸಾಯಿಗಳಲ್ಲೂ ಇದೆ. ಎಲ್ಲದರ ಬಗ್ಗೆ ಮುಂದೆ ಮಾತನಾಡೋಣ. ಹೊಸದನ್ನ ಆರಿಸಿಕೊಂಡು, ಅಳವಡಿಸಿಕೊಂಡು ಸ್ವಚ್ಚಂದವಾಗಿ ಸುಂದರವಾಗಿ ಬದುಕಲು ಕಲಿಯಬೇಕು ನಾವು. ಇಲ್ಲದಿದ್ದರೆ, ಧರ್ಮದ ಹೆಣದಲ್ಲಿ ಕೊಳೆತ ಮಾಂಸ ತಿಂದು ಜೀವಿಸುವ ಹುಳುಗಳಂತೆ ಬದುಕಿ ಸತ್ತು ಹೋಗಬೇಕಾಗುತ್ತದೆ . Let’s be progressive, liberal and democratic.

Leave a Reply

Your email address will not be published. Required fields are marked *