Realtime blog statisticsweb statistics
udupibits.in
Breaking News
ಉಡುಪಿ: ಅಂಬಲಪಾಡಿ ಶ್ರೀ ಮಹಾಕಾಳಿ-ಜನಾರ್ದನ ದೇವಸ್ಥಾನ ಸಾರ್ವಜನಿಕರಿಗೆ ಸೇರಿದ್ದು- ಜಿಲ್ಲಾಧಿಕಾರಿಗಳಿಂದ ಧಾರ್ಮಿಕ ದತ್ತಿ ಇಲಾಖಾ ಆಯಕ್ತರಿಗೆ ವರದಿ.

ಸಿಎಂ ಸಿದ್ಧರಾಮಯ್ಯ ಹ್ಯೂಬ್ಲೋಟ್ ವಾಚ್ ಹಗರಣ: udupibitsಗೆ ಮಹತ್ವದ ಫೋಟೋ ಲಭ್ಯ, ಬಿಡುಗಡೆ

ಉಡುಪಿ: ಹಾಜಿ ಅಬ್ದುಲ್ಲಾ ಸ್ಮಾರಕ ಉಡುಪಿ ಜಿಲ್ಲಾ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೊಟ್ಯಂತರ ರು. ಬೆಲೆ ಬಾಳುವ ಜಮೀನು ಸಹಿತ ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ಅಕ್ರಮವಾಗಿ ಹಸ್ತಾಂತರಿಸಿದ ಪ್ರಕ್ರಿಯೆಗೂ, ಡಾ.ಗಿರೀಶಚಂದ್ರ ವರ್ಮರವರು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಹ್ಯೂಬ್ಲೋಟ್ ವಾಚ್ ನ್ನು ಕೊಡುಗೆಯಾಗಿ ನೀಡಿರುವುದಕ್ಕೂ ನೇರಾನೇರಾ ಸಂಬಂಧವಿರುವ ಬಗ್ಗೆ ಮತ್ತೊಂದು ಮಹತ್ವಪೂರ್ಣವಾದ ದಾಖಲೆ udupibits.in ಗೆ ಲಭಿಸಿದೆ.

ಸಿದ್ದರಾಮಯ್ಯ, ಬೆಂಗಳೂರಿನ ಬಿ.ಆರ್.ಎಸ್.ಹೆಲ್ತ್ ರಿಸರ್ಚ್ ಇನ್ಸ್ ಟ್ಯೂಟ್ ಪ್ರೈವೇಟ್ ಲಿಮಿಟೆಡ್ ಅಧ್ಯಕ್ಷರಾದ ಬಿ.ಆರ್.ಶೆಟ್ಟಿ ಹಾಗೂ ಡಾ.ಗಿರೀಶಚಂದ್ರ ವರ್ಮ ಇವರು ರಹಸ್ಯ ಮಾತುಕತೆ ನಡೆಸಿದ ಬಳಿಕ ಜೊತೆಯಾಗಿ ನಿಂತು ತೆಗೆಸಿಕೊಂಡ ಗ್ರೂಪ್ ಫೋಟೋ ಇದೀಗ ಲಭ್ಯವಾಗಿದ್ದು, ಮುಖ್ಯಮಂತ್ರಿ ಸಿದ್ಧರಾಮಯ್ಯನವರು ನಡೆಸಿದ ಭ್ರಷ್ಟಾಚಾರಕ್ಕೆ ಇದೊಂದು ಸ್ಪಷ್ಟ ಪುರಾವೆಯಾಗಿದೆ.

ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಹ್ಯೂಬ್ಲೋಟ್ ವಾಚ್ ನ್ನು ಕೊಡುಗೆಯಾಗಿ ಪಡೆದುಕೊಂಡ ಬಗ್ಗೆ ವರ್ಷದ ಹಿಂದೆ ಸದನದಲ್ಲಿ ಭಾರೀ ಚರ್ಚೆ ನಡೆದಿತ್ತು. ಈ ವಾಚ್ ನ್ನು ಬಿ.ಆರ್.ಶೆಟ್ಟಿ ನೀಡಿದ್ದು ಎಂಬುದನ್ನು ಒಪ್ಪದ ಮುಖ್ಯಮಂತ್ರಿ ಸಿದ್ಧರಾಮಯ್ಯನವರು, ಮಿತ್ರರಾದ ಡಾ.ಗಿರೀಶಚಂದ್ರ ವರ್ಮ ನೀಡಿದ ವಾಚ್ ಇದಾಗಿದ್ದು, ಈ ವಾಚ್ ಗೂ, ವಾಚ್ ನೀಡಿದ ಡಾ.ಗಿರೀಶಚಂದ್ರ ವರ್ಮರಿಗೂ ಬಿ.ಆರ್ ಶೆಟ್ಟಿಯವರಿಗೂ ಸಂಬಂಧವಿಲ್ಲ ಎಂದು ಸ್ಪಷ್ಟನೆ ನೀಡಿದ್ದರು.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಭ್ರಷ್ಟಾಚಾರದ ಹಗರಣಗಳಲ್ಲಿ ರಕ್ಷಿಸುವ ಸಲುವಾಗಿಯೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಚಿಸಿದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ದ ಅಧಿಕಾರಿಗಳು ಸಹಜವಾಗಿಯೇ ಹ್ಯೂಬ್ಲೋಟ್ ವಾಚ್ ಗೆ ಸಂಬಂಧಿಸಿದ ಪ್ರಕರಣದಲ್ಲಿ ಸಿದ್ಧರಾಮಯ್ಯನವರ ಆಣತಿಯಂತೆ ತನಿಖೆ ಎಂಬ ಪ್ರಹಸನ ನಡೆಸಿ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಹ್ಯೂಬ್ಲೋಟ್ ವಾಚ್ ನೀಡಿದ ಡಾ.ಗಿರೀಶಚಂದ್ರ ವರ್ಮರಿಗೂ, ಇತರ ಯಾವುದೇ ಶಂಕೆಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲವೆಂದೂ ತನಿಖಾ ವರದಿ ಸಿದ್ದಪಡಿಸಿ ಪ್ರಕರಣಕ್ಕೆ ಮಂಗಳ ಹಾಡುವ ಮೂಲಕ ಪರಮಭ್ರಷ್ಟ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಋಣ ಸಂದಾಯ ಮಾಡಿದ್ದರು.

ಆದರೆ, ಹಾಜಿ ಅಬ್ದುಲ್ಲಾರವರು ಸರಕಾರಿ ಆಸ್ಪತ್ರೆಗೆಂದು ದಾನ ಮಾಡಿದ ಭೂಮಿಯಲ್ಲಿರುವ ಹಾಜಿ ಅಬ್ದುಲ್ಲಾ ಸ್ಮಾರಕ ಉಡುಪಿ ಜಿಲ್ಲಾ ಸರಕಾರಿ ಮಹಿಳೆಯರ ಮತ್ತು ಮಕ್ಕಳ ಆಸ್ಪತ್ರೆಯನ್ನು ಕೆಡವಿ ಅದೇ ಸ್ಥಳದಲ್ಲಿ ಬಿ.ಆರ್.ಶೆಟ್ಟಿ ನಿರ್ಮಿಸಲಿರುವ 400 ಹಾಸಿಗೆಗಳ ಎಕ್ಸ್ ಲೆನ್ಸ್ ಸೆಂಟರ್ ಆಸ್ಪತ್ರೆಯ ಶಂಕುಸ್ಥಾಪನೆ ನೆರವೇರಿಸಲು ಅಂದು ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿಯವರು ಉಡುಪಿಗೆ ಆಗಮಿಸುವುದಕ್ಕಿಂತ ವಾರದ ಮೊದಲೇ ಸರಕಾರಿ ಆಸ್ಪತ್ರೆ ಹಸ್ತಾಂತರ ಹಗರಣದ ಬಗ್ಗೆ udupibits.in ಬಹಿರಂಗಪಡಿಸಿತ್ತು.

ಡಾ.ಗಿರೀಶಚಂದ್ರ ವರ್ಮರವರು ಹ್ಯೂಬ್ಲೋಟ್ ವಾಚ್ ನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೀಡಿರುವುದಕ್ಕೂ, ಸರಕಾರಿ ಆಸ್ಪತ್ರೆಯನಗ್ನು ಜಮೀನು ಸಹಿತ ಮುಖ್ಯಮಂತ್ರಿಗಳು ಬಿ.ಆರ್.ಶೆಟ್ಟಿಯವರಿಗೆ ಹಸ್ತಾಂತರಿಸಿರುವುದಕ್ಕೂ ಸಂಬಂಧವಿರುವ ಬಗ್ಗೆ ಹಾಗೂ ಈ ಇಡೀ ಪ್ರಕ್ರಿಯೆ ಅಕ್ರಮ ಎಂಬುದಾಗಿಯೂ ವರದಿಯಲ್ಲಿ ಸ್ಪಷ್ಟಪಡಿಸಲಾಗಿತ್ತು. ಮಾತ್ರವಲ್ಲ, ಈ ವರದಿಯನ್ನು ರಾಷ್ಟ್ರಪತಿ ಭವನದ ಗಮನಕ್ಕೂ, ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಗಮನಕ್ಕೂ ತರಲಾಗಿತ್ತು, ಕೇಂದ್ರ ಗುಪ್ತಚರ ಮತ್ತು ರಾಜ್ಯ ಗುಪ್ತಚರ ಇಲಾಖೆಗಳ ಅಧಿಕೃತರಿಗೂ ವರದಿಯನ್ನು ನೀಡಲಾಗಿತ್ತು. ಆದರೆ, ಯಾವುದೇ ಪ್ರಯೋಜನವೂ ಆಗಿರಲಿಲ್ಲ. ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿಯವರು ಅಕ್ರಮ ಖಾಸಗಿ ಆಸ್ಪತ್ರೆಗೆ ಶಂಕುಸ್ಥಾಪನೆ ನೇರವೇರಿಸಿ ಕಪ್ಪುಚುಕ್ಕಿಯನ್ನು ಮೈಗಂಟಿಸಿಕೊಂಡಿದ್ದರು.

ವಾಚ್ ಹಗರಣದ ವಾಸ್ತವಾಂಶಗಳ ಬಗ್ಗೆ ದಾಖಲಾತಿಗಳ ಸಹಿತ ತಿಂಗಳ ಹಿಂದೆಯೇ ಮಾಜಿ ಡಿವೈಎಸ್ಪಿ ಅನುಪಮಾ ಶೆಣೈ ಅವರು ಪ್ರದಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಸಿಬಿಐ ತನಿಖೆಗೆ ಒತ್ತಾಯಿಸಿದ್ದರು. ಮಾತ್ರವಲ್ಲ, ಈ ಬಗ್ಗೆ ಎರಡು ದಿನದ ಹಿಂದೆ ಉಡುಪಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮುಖ್ಯಮಂತ್ರಿಗಳ ವಾಚ್ ಹಗರಣಕ್ಕೂ, ಸರಕಾರಿ ಆಸ್ಪತ್ರೆಯನ್ನು ಖಾಸಗೀಕರಣಗೊಳಿಸಿದ ಹಗರಣಕ್ಕೂ ಇರುವ ಸಂಬಂಧಗಳನ್ನು ವಿವರಿಸಿ ಪ್ರಧಾನಿಗೆ ಪತ್ರ ಬರೆದಿರುವ ಬಗ್ಗೆ ಮಾಹಿತಿಯನ್ನು ಬಹಿರಂಗಪಡಿಸಿದ್ದರು. ಡಾ.ಗಿರೀಶಚಂದ್ರ ವರ್ಮರವರು ದುಬೈ ನಲ್ಲಿರುವ ಬಿ.ಆರ್.ಶೆಟ್ಟಿ ಮಾಲೀಕತ್ವದ ಎನ್ಎಂಸಿ ಸ್ಪೆಷಾಲಿಟಿ ಹಾಸ್ಪಿಟಲ್ ನಲ್ಲಿ ಹಿರಿಯ ಹೃದಯ ತಜ್ಞರಾಗಿರುವುದನ್ನೂ ಹಾಗೂ ಉಡುಪಿ ಸರಕಾರಿ ಆಸ್ಪತ್ರೆ ಹಸ್ತಾಂತರ ಮತ್ತು ಜೋಗ ಜಲಪಾತವನ್ನು ಅಭಿವೃದ್ಧಿಪಡಿಸುವ ಯೋಜನೆಯನ್ನು ರಾಜ್ಯ ಸರಕಾರ ಬಿ.ಆರ್.ಶೆಟ್ಟಿಯವರಿಗೆ ನೀಡಿದ ಬಗ್ಗೆ ಬೆಳಕಿಗೆ ತಂದಿದ್ದರು.

ವಾಸ್ತವವಾಗಿ ಬೆಲೆಬಾಳುವ ಹ್ಯೂಬ್ಲೋಟ್ ವಾಚ್ ನ್ನು ಸ್ವತಹಾ ಬಿ.ಆರ್.ಶೆಟ್ಟಿಯವರೇ ಸಿದ್ದರಾಮಯ್ಯನವರಿಗೆ ಕೊಡುಗೆಯಾಗಿ ನೀಡಿದ್ದರು. ಸರಕಾರಿ ಆಸ್ಪತ್ರೆಯನ್ನು ಜಮೀನು ಸಹಿತ 60 ವರ್ಷಗಳಿಗೆ ಗುತ್ತಿಗೆ ನೀಡಿರುವುದಕ್ಕೆ ಪ್ರತಿಯಾಗಿ ಈ ಕೊಡುಗೆಯನ್ನು ನೀಡಿ ಕೃತಜ್ಞತೆ ಸಮರ್ಪಿಸಲಾಗಿತ್ತು. ಆದರೆ, ವಾಚ್ ವಿಚಾರ ಸದನದಲ್ಲಿ ಚರ್ಚೆಗೆ ಬಂದಾಗ ತನ್ನ ಕುತ್ತಿಗೆಗೆ ಸುತ್ತಲಿದ್ದ ಹಗರಣದಿಂದ ಬಚಾವಾಗಲು ಸತ್ಯಾಂಶವನ್ನು ಮರೆಮಾಚಿ ಬಿ.ಆರ್.ಶೆಟ್ಟಿಯವರ ಬದಲು ಅವರ ಬೇನಾಮಿ ಡಾ.ಗಿರೀಶಚಂದ್ರ ವರ್ಮರವರ ಹೆಸರನ್ನು ಹೇಳುವ ಮೂಲಕ ಸದನದ ದಾರಿ ತಪ್ಪಿಸಿ ಪ್ರಜೆಗಳ ಕಣ್ಣಿಗೆ ಮಣ್ಣೆರಚಲು ತಾತ್ಕಾಲಿಕವಾಗಿ ಯಶಸ್ವಿಯಾಗಿದ್ದರು.

ಡಾ.ಗಿರೀಶಚಂದ್ರ ವರ್ಮರವರು ಬಿ.ಆರ್.ಶೆಟ್ಟಿಯವರ ದುಬೈ ಆಸ್ಪತ್ರೆಯಲ್ಲಿ ಹಿರಿಯ ವೈದ್ಯರೇ ಹೊರತು, ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಬಿ.ಆರ್.ಶೆಟ್ಟಿಯವರ ನಡೆದ ಅಕ್ರಮ ಒಡಂಬಡಿಕೆಗೆ, ಹಗರಣಕ್ಕೆ ಸಂಬಂಧಪಡದ ವ್ಯಕ್ತಿಯಲ್ಲ ಎನ್ನುವುದು ಈಗಾಗಲೇ ಸಾಕ್ಷಿ ಪುರಾವೆ ಸಹಿತ ಖಚಿತವಾಗಿದೆ. ಇನ್ನಾದರೂ ರಾಜ್ಯದ ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಈ ಹಗರಣದ ವಿರುದ್ಧ ಪರಿಣಾಮಕಾರಿಯಾಗಿ ಧ್ವನಿ ಎತ್ತುವ ಮೂಲಕ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ಹಾಡಲು ಮೂಂದಾಗುವರೇ ಎಂಬುದನ್ನು ಕಾದುನೋಡಬೇಕು.

 

 

 

Leave a Reply

Your email address will not be published. Required fields are marked *