Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವಾರ್ತಾಭಾರತಿ ವರದಿಗಾರನ ಬಂಧನ: ಪೊಲೀಸ್ ಅಧಿಕಾರಿಗಳ ಮತಿಹೀನ ಕೃತ್ಯ !

  • ಶ್ರೀರಾಮ ದಿವಾಣ

# ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದ ಅಶ್ರಫ್ ಕಲಾಯಿ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ವ್ಯಕ್ತಿಯೊಬ್ಬರ ಮನೆಗೆ ದಾಳಿ ನಡೆಸಿದ ಪೊಲೀಸರು, ಮನೆಯೊಳಗೆ ಧರ್ಮಗ್ರಂಥವನ್ನು ಎಸೆದು ಅಪಮಾನೆಸಗಿದ್ದಾರೆ ಎಂದು ಪತ್ರಿಕೆಗೆ ವರದಿ ಮಾಡಿದ ‘ವಾರ್ತಾಭಾರತಿ’ ಬಂಟ್ವಾಳ ವರದಿಗಾರ ಇಸ್ಮಾಯಿಲ್ ತುಂಬೆ ಅವರ ವಿರುದ್ಧ ಮೊಕದ್ದಮೆ ದಾಖಲಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಆಶ್ಚರ್ಯದ ವಿಷಯ. ಖಂಡಿಸಲೇಬೇಕಾದ ವಿದ್ಯಾಮಾನ. ಮತಿಹೀನ ಪೊಲೀಸ್ ಅಧಿಕಾರಿಗಳ ಅಧಿಕ ಪ್ರಸಂಗದ ಕ್ರಮ. ಈ ಪೊಲೀಸ್ ಅಧಿಕಾರಿಗಳಿಗೆಲ್ಲ ಏನಾಗಿದೆ, ತಲೆಗಿಲೆ ಕೆಟ್ಟಿದೆಯೆ ಎಂದು ಪ್ರಶ್ನಿಸುವುದು ಅನಿವಾರ್ಯವಾಗಿದೆ. ಯಾರ ಮೇಲೆ ಯಾವಾಗ ಕಠಿಣ ಕಾನೂನು ಕ್ರಮ ಜರುಗಿಸಬೇಕೋ ಆಗ ಜಾಣಮೌನ ವಹಿಸುವುದು ಮತ್ತು ಅಗತ್ಯವೇ ಇಲ್ಲದಿದ್ದಾಗ ಅತೀ ಕ್ಷುಲ್ಲಕ ಕಾರಣಕ್ಕೆ, ಕಾರಣವೇ ಅಲ್ಲದ ಕಾರಣಕ್ಕೆ, ಕಾರಣವನ್ನು ತಾವೇ ಸ್ವಯಂ ಸೃಷ್ಟಿಸಿಕೊಂಡು ತಮಗಾಗದವರನ್ನು ಸದೆಬಡಿಯಲು ಕಾನೂನನ್ನು ದುರ್ಬಳಕೆ ಮಾಡಿಕೊಂಡು ಸಾಧನೆ ಪ್ರದರ್ಶಿಸುವುದು.

ಮನೆಗೆ ದಾಳಿ ನಡೆಸಿದ ಪೊಲೀಸರು ಧರ್ಮಗ್ರಂಥವನ್ನು ಎಸೆದು ಅವಮಾನಿಸಿದ್ದಾರೆ ಎಂಬುದು ಮನೆಮಂದಿಯ ಆರೋಪ. ವರದಿಗಾರನಾಗಿ ಇಸ್ಮಾಯಿಲ್ ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಸಹಜವಾಗಿಯೇ ಪತ್ರಿಕೆ ವರದಿ ಪ್ರಕಟಿಸಿದೆ. ಇಷ್ಟಕ್ಕೆ ಪೊಲೀಸ್ ಅಧಿಕಾರಿಗಳು ವಿಚಲಿತರಾಗಿ, ಆತಂಕಿತರಾಗಿ ವರದಿಗಾರನನ್ನು ಬಂಧಿಸುವುದು ಎಂದರೆ ಏನಿದರ ಅರ್ಥ ? ಒಂದು ವರದಿಗೆ ವರದಿಗಾರನಷ್ಟೇ ಜವಾಬ್ದಾರಿ ಸಂಪಾದಕರು ಸಹ. ಹಾಗಾದರೆ ಪೊಲೀಸರು ಸಂಪಾದಕರನ್ನು ಬಂಧಿಸಬೇಡವೇ ?

ನಿಜವಾದ ಭಯೋತ್ಪಾದಕರನ್ನು, ಉಗ್ರರನ್ನು, ಕೊಲೆಗಡುಕರು, ದರೋಡೆಕೋರರನ್ನು, ಸಮಾಜದ್ರೋಹಿಗಳನ್ನು, ವಂಚಕರನ್ನು ಬಂಧಿಸಲು ಪೊಲೀಸರಿಗೆ ಸಾಧ್ಯವಾಗುವುದಿಲ್ಲ. ಸಮರ್ಥವಾಗಿ ಬಂದೋಬಸ್ತ್ ಮಾಡಲು ಕೂಡಾ ಇವರಿಗೆ ಸಾಧ್ಯವಾಗದಿರುವುದನ್ನು ಹಲವು ಸಂದರ್ಭಗಳಲ್ಲಿ, ಕಾರ್ಯಕ್ರಮಗಳಲ್ಲಿ ನಾಗರಿಕರು ಗಮನಿಸಿದ್ದಾರೆ. ಹೀಗಿರುವಾಗ ಸಣ್ಣ ಪುಟ್ಟ ಕಾರಣಗಳನ್ನು ಸೃಷ್ಟಿಸಿಕೊಂಡು ಅನಗತ್ಯವಾಗಿ ಸಾರ್ವಜನಿಕರಲ್ಲಿ ಪೊಲೀಸರ ವಿರುದ್ಧದ ಮನೋಭಾವವನ್ನು ಪೊಲೀಸ್ ಅಧಿಕಾರಿಗಳೇ ಯಾಕೆ ಉಂಟುಮಾಡುತ್ತಿದ್ದಾರೆ, ಯಾವುದೋ ನಿರ್ಧಿಷ್ಟ ಉದ್ಧೇಶ ಸಾಧನೆಗಾಗಿ ಯಾರದಾದರೂ ಆಣತಿಯಂತೆ, ನಿರ್ದೇಣಾನುಸಾರವಾಗಿ ಪೊಲೀಸ್ ಅಧಿಕಾರಿಗಳು ಹೀಗೆ ನೀಚತನದ ಕೆಲಸವನ್ನು ನಾಚಿಕೆ ಇಲ್ಲದೆ ಮಾಡುತ್ತಿದ್ದಾರಾ ಎಂಬ ಸಂಶಯ ಉದ್ಭವಿಸುವಂತಾಗಿದೆ.

ಮಂಗಳೂರಿನ ಪೊಲೀಸರು ಎಷ್ಟು ತಿಳಿಗೇಡಿಗಳಾಗುತ್ತಿದ್ದಾರೆ ಎನ್ನುವುದಕ್ಕೆ ಇತ್ತೀಚೆಗಿನ ಇನ್ನೊಂದು ಉದಾಹರಣೆ ಎಂದರೆ, ನುಡಿಸಿರಿ ಖ್ಯಾತಿಯ ಮೋಹನ ಆಳ್ವರ ಮೂಡಬಿದ್ರೆಯಲ್ಲಿರುವ ಆಳ್ವಾಸ್ ಕಾಲೇಜಿನ ಅಪ್ರಾಪ್ತ ಪ್ರಾಯದ ವಿದ್ಯಾರ್ಥಿನಿ ಕಾವ್ಯ ಪೂಜಾರಿ ಕಟೀಲು ನಿಗೂಢವಾಗಿ, ಅನುಮಾನಾಸ್ಪದವಾಗಿ ಸಾವೀಗೀಡಾದಾಗ, ವಿಷಯ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಆಕ್ರೋಶಕ್ಕೆ ಕಾರಣವಾದಾಗ, ಮಂಗಳೂರಿನಲ್ಲಿ ಮಾಧ್ಯಮಗೋಷ್ಟಿ ನಡೆಸಿದ ಪೊಲೀಸ್ ಅದಿಕಾರಿಯೊಬ್ಬರು, ನಿಗೂಢ ಸಾವಿನ ಪ್ರಕರಣದ ತನಿಖಾ ಕಾರ್ಯದ ಬಗ್ಗೆ ಮಾತನಾಡುವುದು ಬಿಟ್ಟು, ಈ ಪ್ರಕರಣವನ್ನು ದೊಡ್ಡದು ಮಾಡಿದ್ದು ಯಾರು ಎಂಬ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಪ್ರಕಟಿಸಿದ್ದು.

ಇದರಷ್ಟು ದೊಡ್ಡ ಹಾಸ್ಯಾಸ್ಪದ ವಿಷಯ ಮತ್ತೊಂದಿರಲಾರದು. ಎಂಥೆಂಥ ಪೊಲೀಸ್ ಅಧಿಕಾರಿಗಳು ರಾಜ್ಯದಲ್ಲಿ, ದೇಶದಲ್ಲಿ ಇದ್ದಾರೆ ಎಂಬುದನ್ನು ನೆನೆದರೆ ವಿಷಾದವಾಗುತ್ತದೆ. ಗಾಂಜಾ ಮಾರಾಟ ಮಾಡುವ, ದರೋಡೆ, ಕೊಲೆ, ಅತ್ಯಾಚಾರ ಮಾಡುವ, ಸಹೋದ್ಯೋಗಿ ಮಹಿಳಾ ಪೊಲೀಸರಿಗೇನೇ ಲೈಂಗಿಕ ಕಿರುಕುಳ ಕೊಡುವ, ಹೊಲಸು ಕ್ರಿಮಿನಲ್ ರಾಜಕೀಯ ಪಕ್ಷಗಳ ನಾಯಕರ, ಉದ್ಯಮಿಗಳ ಚೇಲಾಗಳಂತೆ ವರ್ತಿಸುವ ಪೊಲೀಸ್ ಅಧಿಕಾರಿಗಳ ಸಂಖ್ಯೆ ದಿನದಿಮದ ದಿನಕ್ಕೆ ಹೆಚ್ಚುತ್ತಿರುವುದು ನಿಜಕ್ಕೂ ಆತಂಕಕಾರಿ ಬೆಳವಣಿಗೆಯೇ ಸರಿ.

ಹೊಣೆಗೇಡಿ, ಬೇಜವಾಬ್ದಾರಿ, ನಾಲಾಯಕ್ಕು ಪೊಲೀಸ್ ಅಧಿಕಾರಿಗಳಿಗೆ ಇನ್ನಾದರೂ ಸಮರ್ಪಕವಾದ ತರಬೇತಿ ಕಾರ್ಯಾರವನ್ನು ಆಯೋಜಿಸುವ ಕೆಲಸವನ್ನು ಸರಕಾರ ಮಾಡುವ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಜೊತೆಗೆ, ಸರಿಪಡಿಸಲು ಸಾಧ್ಯವೇ ಇಲ್ಲ ಎನ್ನಬಹುದಾದ ಪೊಲೀಸರನ್ನು ನೇರವಾಗಿ ಮನೆಗೆ ಕಳುಹಿಸುವ ಕೆಲಸ ಮಾಡುವಂತಾಗಬೇಕು.

 

Leave a Reply

Your email address will not be published. Required fields are marked *