Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗೌರಿ ಲಂಕೇಶ್ ಹತ್ಯೆ: ಸರಕಾರ-ಪೊಲೀಸ್-ನಕ್ಸಲ್, ಪ್ರಶ್ನೆ-ಅನುಮಾನ-ಗೊಂದಲ !

  • ಶ್ರೀರಾಮ ದಿವಾಣ

# ಬೆಂಗಳೂರಿನಿಂದ ಪ್ರಕಟವಾಗುವ ಪ್ರತಿಷ್ಟಿತ ‘ಗೌರಿ ಲಂಕೇಶ್’ ವಾರಪತ್ರಿಕೆಯ ಸಂಪಾದಕಿ ಮತ್ತು ಕರ್ನಾಟಕ ಸರಕಾರದ ನಕ್ಸಲ್ ಶರಣಾಗತಿ ಪ್ಯಾಕೇಜ್ ಸಮಿತಿಯ ಮುಖ್ಯಸ್ಥೆ ಗೌರಿ ಲಂಕೇಶ್ ರವರನ್ನು ದುಷ್ಕರ್ಮಿಗಳ ತಂಡವೊಂದು ಗುಂಡು ಹಾರಿಸಿ ಹತ್ಯೆಗೈದ ಹೇಯ ದುಷ್ಕೃತ್ಯಕ್ಕೆ ಈಗಾಗಲೇ ನಾಲ್ಕು ದಿನಗಳೇ ಕಳೆದಿವೆ. ಹಂತಕರ ಪತ್ತೆಕಾರ್ಯಕ್ಕಾಗಿ ಪೊಲೀಸ್ ಅಧಿಕಾರಿಗಳ ಮೂರು ಪ್ರತ್ಯೇಕ ವಿಶೇಷ ತನಿಖಾ ತಂಡ (ಸ್ಪೆಷಲ್ ಇನ್ವಿಸ್ಟಿಗೇಷನ್ ಟೀಮ್/ ಎಸ್ಐಟಿ)ಗಳನ್ನು ರಾಜ್ಯ ಸರಕಾರ ರಚಿಸಿದೆಯಾದರೂ,  ಇನ್ನೂ ಕೂಡಾ ಹಂತಕರ ಹೆಜ್ಜೆ ಜಾಡನ್ನು ಪತ್ತೆಹಚ್ಚಲು ಸಾಧ್ಯವಾಗದಿರುವುದು ನಾಚಿಗೆಗೇಡಿನ ವಿಷಯವಾಗಿದೆ.

ಸೆ.5ರಂದು ರಾತ್ರಿ 7.50ರಿಂದ 8 ಗಂಟೆ ನಡುವೆ, ಕನಿಷ್ಟ ಮೂವರು ಯುವಕರ ತಂಡ ಗೌರಿಯವರ ಮನೆ ಮುಂಭಾಗದಲ್ಲಿಯೇ ಅವರನ್ನು ಹತ್ಯೆಗೈದಿದೆ. ಹಂತಕರ ಪೈಕಿ ಒಬ್ಬಾತ ಮನೆ ಪಕ್ಕದಲ್ಲಿಯೇ ಕಾದು ನಿಂತಿದ್ದಿರಬಹುದೆಂದೂ, ಇನ್ನಿಬ್ಬರು ಗೌರಿಯವರ ಕಾರನ್ನು ದ್ವಿಚಕ್ರ ವಾಹನದಲ್ಲಿ ಹಿಂಬಾಲಿಸಿಕೊಂಡು ಬಂದಿರಬಹುದೆಂದೂ, ಹಂತಕರು ತಲೆಗೆ ಹೆಲ್ಮೆಟ್ ಧರಿಸಿ ಗುಂಡು ಹಾರಿಸಿ ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆಂದೂ ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ.

ಇಲ್ಲಿ, ಗುಂಡು ಹಾರಿಸಿದ ಕೃತ್ಯವೆಸಗಿದ ಶಾರ್ಪ್ ಶೂಟರ್ ಯಾರು ಎಂಬುದು ಮೊತ್ತ ಮೊದಲು ಉತ್ತರ ಸಿಗಬೇಕಾದ ಪ್ರಶ್ನೆ. ದ್ವಿಚಕ್ರ ವಾಹನದಲ್ಲಿ ಬಂದವರೋ ಅಲ್ಲಾ ಮನೆ ಪಕ್ಕ ಕಾದು ನಿಂತಿದ್ದವನೋ ಎಂಬುದು ಮೊದಲಿಗೆ ಸ್ಪಷ್ಟವಾಗಬೇಕು. ದ್ವಿಚಕ್ರ ವಾಹನದಲ್ಲಿ ಬಂದವರು ಸಹಜವಾಗಿಯೇ ಹೆಲ್ಮೆಟ್ ಧರಿಸಿರಬಹುದಾದ ಸಾಧ್ಯತೆ ಇದೆ. ಇದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಮನೆ ಪಕ್ಕ ಕಾದು ನಿಂತಿದ್ದವನು ರಸ್ತೆ ಬದಿ ಹಾಗೆ ಹೆಲ್ಮೆಟ್ ಧರಿಸಿ ನಿಂತುಕೊಂಡಿರುವ ಸಾಧ್ಯತೆ ಕಡಿಮೆ. ಮನೆ ಪಕ್ಕ ಕಾದು ನಿಂತುಕೊಂಡಿದ್ದ ದುಷ್ಕರ್ಮಿ ಹೆಲ್ಮೆಟ್ ಧರಿಸಿದ್ದ ಎಂದಾದರೆ, ಇದೊಂದು ಅಸಹಜವಾದ ವಿದ್ಯಾಮಾನವಾಗುತ್ತದೆ. ಹೆಲ್ಮೆಟ್ ಧರಿಸಿ ಒಬ್ಬ ವ್ಯಕ್ತಿ ಮನೆ ಪಕ್ಕ ಸುಮ್ಮನೇ ನಿಂತುಕೊಂಡಿದ್ದ, ಸುತ್ತಾಡುತ್ತಿದ್ದ ಎಂದಾದರೆ ಈ ಅನುಮಾಸ್ಪದ ನಡೆ ಯಾಕೆ ಯಾರೊಬ್ಬರಿಗೂ ಅಸಹಜವಾಗಿ ಕಂಡು ಬಂದಿಲ್ಲ ಎಂಬ ಪ್ರಶ್ನೆ ಮೂಡುತ್ತದೆ. ಈತ ಹೆಲ್ಮೆಟ್ ಧರಿಸಿರಲಿಲ್ಲ ಎಂದಾದರೆ, ಈತನನ್ನು ಪರಿಸರವಾಸಿಗಳು, ಪರಿಸರದಲ್ಲಿ ನಡೆದುಕೊಂಡು ಹೋದವರಲ್ಲಿ ಕೆಲವರಾದರೂ ನೋಡಿರುವ ಸಾದ್ಯತೆ ಇದೆ. ಸಮಾಜದ್ರೋಹಿ ಹಂತಕರು ಹೀಗೆ ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡು, ಇನ್ನೊಂದೇ ವರ್ಷದಲ್ಲಿ ಇನ್ನೊಂದು ಹತ್ಯೆಗೆ ಮುಂದಾಗಬಾರದೆಂಬ ಕನಿಷ್ಟ ಸಮಾಜಿಕ, ಮಾನವೀಯ ಕಾಳಜಿ ಇದ್ದುದೇ ಆದರೆ ಹಂತಕರನ್ನು ನೋಡಿದವರು ಪೊಲೀಸರಿಗೆ ಮಾಹಿತಿ ನೀಡಿ ಸಹಕರಿಸಬೇಕಾದುದು ಭಾರತದ ಒಬ್ಬ ಪ್ರಜ್ಞಾವಂತ ಪ್ರಜೆಯಾಗಿ ಅವರ ಕರ್ತವ್ಯವಾಗುತ್ತದೆ. ನೋಡಿದ ಸಾಧ್ಯತೆ ಇರುವವರು ಈ ಕನಿಷ್ಟ ಕರ್ತವ್ಯವನ್ನು ನಿರ್ವಹಿಸುತ್ತಿಲ್ಲವೆಂದಾದರೆ, ಪೊಲೀಸರು ಮೊತ್ತಮೊದಲು ಇಂಥವರನ್ನು ಗುರುತಿಸಿ ಯಾವ ಮುಲಾಜೂ ಇಲ್ಲದೆ ತೀವ್ರತರವಾದ ವಿಚಾರಣೆಗೆ ಒಳಪಡಿಸಿಯಾದರೂ ಹಂತಕರ ಮುಖ ಚಹರೆಯನ್ನಾದರೂ ಪತ್ತೆಹಚ್ಚುವ ಪ್ರಾಥಮಿಕ ಕಾರ್ಯವನ್ನು ಮಾಡಬೇಕಾಗುತ್ತದೆ.

ರಾಜರಾಜೇಶ್ವರಿ ನಗರದ ಹೆದ್ದಾರಿ ಪಕ್ಕವೇ ಗೌರಿ ಲಂಕೇಶ್ ರವರ ಮನೆ ಇದೆ. ಮನೆ ಮುಂಭಾಗದಲ್ಲಿಯೇ ಹಂತಕರು ಗೌರಿಯವರನ್ನು ಹತ್ಯೆಗೈದಿದ್ದಾರೆ. ಹಂತಕರು ಸ್ಥಳಕ್ಕೆ ಬಂದುದು ಮತ್ತು ಪರಾರಿಯಾದುದು ದ್ವಿಚಕ್ರ ವಾಹನದಲ್ಲಿ. ಅಂದರೆ, ದ್ವಿಚಕ್ರ ವಾಹನದಲ್ಲಿ ಸ್ಥಳದಿಂದ ಬಹಳ ದೂರಕ್ಕೆ ಅತೀ ವೇಗವಾಗಿ ಪಲಾಯನ ಮಾಡಲು ಅಷ್ಟು ಸುಲಭದಲ್ಲಿ ಸಾಧ್ಯವಿಲ್ಲ. ಇಲ್ಲಿ, ಪೊಲೀಸರ ನಾಕಾಬಂಧಿಯ ವಿಫಲತೆಯನ್ನು ಇದು ತೋರಿಸಿಕೊಡುತ್ತದೆ. ಹಂತಕರು ಅಲ್ಲೇ ಪಕ್ಕದಲ್ಲಿಯೇ ಯಾವುದಾದರೂ ವಾಣಿಜ್ಯ ಮಳಿಗೆಯಲ್ಲೋ, ಯಾರದಾದರೂ ಮನೆಯಲ್ಲೋ ಆಶ್ರಯ ಪಡೆದುಕೊಂಡು, ಪರಿಸ್ಥಿತಿಯನ್ನು ಅವಲೋಕಿಸಿಕೊಂಡು ಸರಿಯಾದ ಸಮಯಕ್ಕೆ ಸ್ಥಳದಿಂದ ಕಾಲ್ಕಿತ್ತಿರಬಹುದೆಂದು ಊಹಿಸಬಹುದಾಗಿದೆ. ಆದರೆ, ಇಲ್ಲಿಯೂ ಎಷ್ಟು ಮನೆಗಳನ್ನು, ವಾಣಿಜ್ಯ ಮಳಿಗೆಗಳನ್ನು ಪೊಲೀಸರು ತಪಾಸಣೆ ನಡೆಸಿದರು ಎಂಬ ಬಗ್ಗೆ ಮಾಹಿತಿಯಿಲ್ಲ. ಹೀಗೆ ತಪಾಸಣೆ ನಡೆಸುವ ಕೆಲಸವನ್ನೇ ಪೊಲೀಸರು ಮಾಡಿಲ್ಲ ಎನ್ನುವುದೇ ಹೆಚ್ಚು ಸೂಕ್ತವೆನಿಸುತ್ತದೆ.

ಇದಕ್ಕೆಲ್ಲ ಮುಖ್ಯ ಕಾರಣ, ಪೊಲೀಸರು ನಿಜವಾದ ತನಿಖಾ ಕಾರ್ಯದಲ್ಲಿ ಆಸಕ್ತಿಯೇ ತೋರಿಸದಿರುವುದು. ತನಿಖಾ ವಿಜ್ಞಾನದಲ್ಲಿ, ಕೌಶಲ್ಯದಲ್ಲಿ ನಮ್ಮ ದೇಶದ ಪೊಲೀಸರಿಗೆ ಸೂಕ್ತ ತರಬೇತಿಯೇ ಇಲ್ಲದಿರುವುದು. ಈ ಮಾತಿಗೆ ಅಪವಾದವಿರಬಹುದು. ಇಲ್ಲವೆಂದಲ್ಲ. ಆದರೆ, ಅಪವಾದದ ಪೊಲೀಸ್ ಅಧಿಕಾರಿಗಳ ಸಂಖ್ಯೆ ಬೆರಳೆಣಿಕೆಯಷ್ಟೆ. ಸಭೆ ಸಮಾರಂಭ, ಮೆರವಣಿಗೆ ಇತ್ಯಾದಿಗಳಿಗೆ ಬಂದೋಬಸ್ತ್ ಮಾಡುವುದು, ರಾಜಕಾರಣಿಗಳಿಗೆ, ಉದ್ಯಮಿಗಳಿಗೆ, ವಂಚಕರಿಗೆ, ಕ್ರಿಮಿನಲ್ ಗಳಿಗೆ ರಕ್ಷಣೆ ಕೊಡುವುದು ಇತ್ಯಾದಿಗಳೇ ಪೊಲೀಸರ ಕೆಲಸ ಎಂಬಂತಾಗಿದೆ.

ಗೌರಿ ಲಂಕೇಶ್ ಹಂತಕರನ್ನು ಪತ್ತೆ ಹಚ್ಚಲು ರಚಿಸಿದ ಎಸ್ಐಟಿಯಲ್ಲಿರುವ ಅಧಿಕಾರಿಗಳು ಎಷ್ಟು ಪ್ರಾಮಾಣಿಕರು, ದಕ್ಷರು, ನಿಷ್ಪಕ್ಷಪಾತಿಗಳು ಎಂಬ ಪ್ರಶ್ನೆ ಇದ್ದೇ ಇದೆ. ಈ ನಿಟ್ಟಿನಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬಹುದಾಗಿದೆ. ಅವರು ಯಾವ ಕಾರಣಕ್ಕೆ, ಉದ್ಧೇಶಕ್ಕೆ ಮತ್ತು ಯಾವ ಹಿನ್ನೆಲೆಯಲ್ಲಿ ಕೆಲವೊಂದು ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲವಾದರೂ, ಅವರ ಮಾತುಗಳನ್ನು ಅಷ್ಟು ಸುಲಭಕ್ಕೆ ಬಿಟ್ಟುಹಾಕುವಂತಿಲ್ಲ. ಎಸ್ಐಟಿಗೆ ಅಧಿಕಾರಿಗಳನ್ನು ಆಯ್ಕೆ ಮಾಡಿದ್ದು ಕೆಂಪಯ್ಯರೋ, ಹೀಗೆ ಆಯ್ಕೆ ಆದ ಅಧಿಕಾರಿಗಳು ಭ್ರಷ್ಟರೋ, ಭ್ರಷ್ಟರೆಂದಾದರೆ ಈ ಪ್ರಕರಣದಲ್ಲೂ ಭ್ರಷ್ಟತೆಗೆ ಬಲಿಯಾಗಿ ತನಿಖೆಯಲ್ಲಿ ಅಡ್ಡದಾರಿ ಹಿಡಿಯಬಹುದೇ ಎಂಬಿತ್ಯಾದಿ ಹತ್ತು ಹಲವು ಪ್ರಶ್ನೆಗಳೆಳುತ್ತವೆ. ಈ ಪೊಲೀಸ್ ಅಧಿಕಾರಿಗಳು ಪತ್ರಿಕೆಗಳ, ಪತ್ರಕರ್ತರ, ಸಂಘಟನೆಗಳ ನಾಯಕರ ಪ್ರಭಾವಕ್ಕೆ ಒಳಗಾಗಿ ತನಿಖೆ ನಡೆಸುತ್ತಾರಾ ಇಲ್ಲ ತಮ್ಮದೇ ಆದ ಸ್ವಂತ ಯೋಚನಾಶಕ್ತಿಯನ್ನು ಉಪಯೋಗಿಸಿಕೊಂಡು ತನಿಖೆ ನಡೆಸುತ್ತಾರಾ ಎಂಬಂಥ ಪ್ರಶ್ನೆಗಳೂ ಉದ್ಭವವಾಗಿವೆ.

ಮುಖ್ಯಮಂತ್ರಿ ಸಿದ್ಧರಾಮಯ್ಯ ಈಗ ಏನೇ ಮಾಡಲಿ, ಏನು ಬೇಕಾದರೂ ಹೇಳಲಿ. ಒಂದಂತೂ ಹೇಳಲೇಬೇಕು. ಗೌರಿ ಲಂಕೇಶ್ ಹತ್ಯೆಯಾಗಲು ಪರೋಕ್ಷವಾಗಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಪಾಲೂ ಇದೆ. ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದ ಗೌರಿಯವರಿಗೆ ಗೌರಿಯವರು ಕೇಳಲಿ, ಬಿಡಲಿ ಸೂಕ್ತ ಭದ್ರತೆ ಒದಗಿಸುವುದು ಸರಕಾರದ ಆದ್ಯ ಪ್ರಥಮ ಕರ್ತವ್ಯವೇ ಆಗಿತ್ತು. ಆದರೆ, ಈ ವಿಷಯದಲ್ಲಿ ಸಿದ್ಧರಾಮಯ್ಯ ಎಡವಿರುವುದಂತೂ ನಿಜವೇ. ಈ ನಿಟ್ಟಿನಲ್ಲಿ ಕೇಂದ್ರ ಮಂತ್ರಿ ರವಿಶಂಕರ ಪ್ರಸಾದ್ ರವರ ಪ್ರಶ್ನೆ ಸಹಜವಾದುದೇ ಆಗಿದೆ. ಕೇಂದ್ರ ಮಂತ್ರಿಯ ಪ್ರಶ್ನೆಗೆ ಸಿದ್ಧರಾಮಯ್ಯ ಉತ್ತರಿಸಲೇಬೇಕಾಗುತ್ತದೆ.

ಗೌರಿಯವರನ್ನು ನಕ್ಸಲರು ಹತ್ಯೆ ಮಾಡಿರಲಾರರು ಎಂಬುದು ಹೆಚ್ಚು ಸರಿಯಾದರೂ, ನಕ್ಸಲರ ಶರಣಾಗತಿ ಪ್ರಕ್ರಿಯೆಯಲ್ಲಿ ಮುಂಚೂಣಿಯಲ್ಲಿದ್ದ ಗೌರಿಯವರಿಗೆ ಆ ಕಾರಣಕ್ಕಾಗಿ ಸೂಕ್ತ ಭದ್ರತೆ ಒದಗಿಸಲೇಬೇಕಾಗಿತ್ತು ಸರಕಾರ. ಹಾಗೆ ಮಾಡುತ್ತಿದ್ದರೆ, ಇಂದು ಗೌರಿಯವರ ಜೀವ ಉಳಿಯುತ್ತಿತ್ತೋ ಏನೋ.

ಗೌರಿ ಲಂಕೇಶ್ ರವರನ್ನು ನಕ್ಸಲರು ಹತ್ಯೆ ಮಾಡುತ್ತಿದ್ದರೆ ಇಷ್ಟರಲ್ಲೇ ನಕ್ಸಲರು ಅವರೆಲ್ಲಿದ್ದಾರೋ ಅಲ್ಲಿಯೇ ಅಥವಾ ಅವರಿರುವಲ್ಲಿಂದ ಯಾವುದೇ ರಿತಿಯಲ್ಲಾದರೂ ಗೌರಿಯವರನ್ನು ನಾವೇ ಹತ್ಯೆ ಮಾಡಿದ್ದೇವೆ ಮತ್ತು ಈ ಹತ್ಯೆಗೆ ಕಾರಣವೇನು ಎಂಬ ಬಗ್ಗೆ ಅವರಿಗಾಗಲೇ ಹೇಳಿಕೆಯನ್ನೋ, ಭಿತ್ತಿಪತ್ರವನ್ನೋ ಬಿಡುಗಡೆಗೊಳಿಸುತ್ತಿದ್ದರು. ಹತ್ಯೆಯಾಗಿ ನಾಲ್ಕು ದಿನಗಳಾದರೂ ಅವರು ಹಾಗೆ ಮಾಡಿಲ್ಲ ಎಂದರೆ ಅವರು ಹತ್ಯೆ ಮಾಡಿಲ್ಲವೆಂದೇ ಅರ್ಥೈಸಬಹುದಾಗಿದೆ. ಮಾಡಿದ ಹತ್ಯೆಯನ್ನು ಒಪ್ಪಿಕೊಳ್ಳುವುದು ಮತ್ತು ಸಮರ್ಥಿಸಿಕೊಳ್ಳುವುದು ಹಾಗೂ ತಮ್ಮ ಪಕ್ಷದ ವಿಚಾರ, ಶಕ್ತಿಯ ಬಗ್ಗೆ ಸಾರ್ವಜನಿಕರ ನಡುವೆ ಪ್ರಚಾರಕ್ಕೆ ಇದನ್ನೆಲ್ಲಾ ಬಳಸುವುದು ನಕ್ಸಲರ ಒಂದು ಕಾರ್ಯಶೈಲಿ. ಇಲ್ಲಿ ನಕ್ಸಲರು ಇದಾವುದನ್ನೂ ಮಾಡಿಲ್ಲ.

ಗೌರಿಯನ್ನು ನಕ್ಸಲರೇ ಮಾಡಿರಬಹುದೆಂದು ಕೆಲವು ಬಲಪಂಥೀಯ ಪತ್ರಿಕೆಗಳು, ಟಿವಿ ಛಾನೆಲ್ ಗಳು ಅಪಪ್ರಚಾರ ಮಾಡುತ್ತಿವೆ. ಹೀಗೆ ಮಾಡಲು ಹೀಗೆ ಮಾಡುತ್ತಿರುವ ಪತ್ರಕರ್ತರಿಗೆ ಯಾವುದಾದರೂ ಸಂಘಟನೆಗಳ ನಾಯಕರು ಸುಪಾರಿ ನೀಡಿರಬಹುದೇ ಎಂಬ ಬಗ್ಗೆಯೂ ತನಿಖೆ ನಡೆಸಿದರೆ ಗೌರಿ ಹಂತಕರ ಪತ್ತೆ ಕಾರ್ಯಕ್ಕೆ ಸಹಕಾರಿಯಾಗಬಹುದು ಎನಿಸುತ್ತಿದೆ. ಇಷ್ಟಾಗಿಯೂ, ಬಲಪಂಥೀಯ ಮಾಧ್ಯಮಗಳು ನಿರಂತರವಾಗಿ ಇಷ್ಟೆಲ್ಲಾ ಅಪಪ್ರಚಾರದಲ್ಲಿ ನಿರತವಾಗಿರುವಾಗಲೂ, ಗೌರಿಯನ್ನು ನಾವು ಕೊಂದಿಲ್ಲ ಎಂಬುದನ್ನಾದರೂ ನಕ್ಸಲರು ಈಗಾಗಲೇ ಪ್ರಕಟಿಸಬೇಕಾಗಿತ್ತು. ಇವರು ಹೀಗೆ ಮಾಡದಿರುವುದು ಕೂಡಾ ಕೆಲವು ಸಂಶಯಗಳಿಗೆ ಎಡೆಮಾಡಿಕೊಡುತ್ತವೆ.

ದಶಕದ ಹಿಂದೆ ಭಟ್ಕಳದಲ್ಲಿ ನಡೆದ ಶಾಸಕರಾಗಿದ್ದ ಚಿತ್ತರಂಜನ್ ರವರನ್ನು ಹತ್ಯೆಗೈದ ಹಂತಕರನ್ನು ಪತ್ತೆಹಚ್ಚಲೇ ಇದುವರೆಗೆ ಸಿಬಿಐಗೆ ಸಾಧ್ಯವಾಗಿಲ್ಲ. ಈಗಂತೂ ಗೌರಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದರೆ, ಬಿಜೆಪಿ ಸರಕಾರದ ಪಂಜರದ ಗಿಳಿಯಾಗಿರುವ ಸಿಬಿಐ, ಭೂಗತ ನಕ್ಸಲರ ಹೆಸರನ್ನು ಹಾಕಿ ಇವರೇ ಗೌರಿಯ ಹಂತಕರೆಂದು ಘೋಷಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸುವ ಸಾಧ್ಯತೆಯೇ ಹೆಚ್ಚು. ಇದಕ್ಕಿಂತ ಎಸ್ಐಟಿ ತನಿಖೆಯೇ ಸೂಕ್ತ. ಆದರೆ, ಎಸ್ ಐ ಟಿ ಗೆ ನಿಗೂಢ ಹತ್ಯೆಗಳನ್ನು ಪತ್ತೆಹಚ್ಚುವಲ್ಲಿ ಹೆಚ್ಚು ಪರಿಣತಿ ಪಡೆದಿರುವ, ಅನುಭವಿಗಳಾದ ದಕ್ಷ, ಸಮರ್ಥ, ನಿಷ್ಪಕ್ಷಪಾತ ಅಧಿಕಾರಿಗಳನ್ನು ಆಯ್ಕೆ ಮಾಡಬೇಕು ಅಷ್ಟೆ.

Leave a Reply

Your email address will not be published. Required fields are marked *