Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಗೌರಿ ಲಂಕೇಶ್ ಹತ್ಯೆಯಲ್ಲಿ ನಕ್ಸಲ್ ಕೈವಾಡವಿರಲು ಸಾಧ್ಯವೇ ಇಲ್ಲ, ಹತ್ಯೆ ಹಿಂದೆ ಸಂಘ ಪರಿವಾರವಿದೆ: ಶರಣಾಗತ ನಕ್ಸಲ್ ನಾಯಕರ ಬಹಿರಂಗ ಹೇಳಿಕೆ

# ಈ ಪತ್ರಿಕಾ ಗೋಷ್ಠಿ ನಮ್ಮ ಮತ್ತು ನಿಮ್ಮ ಇಬ್ಬರ ದೃಷ್ಟಿಯಿಂದಲೂ ಬಹಳ ಮಹತ್ವದ್ದಾಗಿದೆ. ಏಕೆಂದರೆ ನಕ್ಸಲೀಯ ಚಳವಳಿಯ ಜೊತೆಗೆ 30ಕ್ಕೂ ಹೆಚ್ಚು ವರ್ಷ ನಂಟು ಹೊಂದಿದವರು ನಾವು. ಸಿರಿಮನೆ ನಾಗರಾಜ್ 1974ರಿಂದ ನಕ್ಸಲೀಯ ವಿಚಾರಧಾರೆಯ ಜೊತೆಗಿದ್ದವರು. ನೂರ್ ಶ್ರೀಧರ್ 1985ರಿಂದ ನಕ್ಸಲೀಯ ಚಳವಳಿಯಲ್ಲಿ ಕೆಲಸ ಮಾಡಿದ್ದಾರೆ. ಅಲ್ಲದೆ ಇಬ್ಬರೂ ಕಳೆದ ಮೂರು ವರ್ಷಗಳಲ್ಲಿ ಗೌರಿಯವರ ಆಪ್ತರಲ್ಲಿ ಒಬ್ಬರಾಗಿ ಒಡನಾಟದಲ್ಲಿದ್ದೇವೆ. ಅವರ ವೈಯಕ್ತಿಕ ಬದುಕನ್ನು, ಅವರ ಪತ್ರಿಕೋದ್ಯಮ ವೃತ್ತಿ ಬದುಕನ್ನು ಹಾಗೂ ಸಾಮಾಜಿಕ ಬದುಕನ್ನು ಹತ್ತಿರದಿಂದ ಕಂಡಿದ್ದೇವೆ. ಹಾಗಾಗಿ ಇಂದಿನ ವಿವಾದಾತ್ಮಕ ಸಂದರ್ಭದಲ್ಲಿ ನಮ್ಮ ಅಭಿಪ್ರಾಯಕ್ಕೆ ತನ್ನದೇ ಆದ ಮಹತ್ವವಿದೆ ಎಂದುಕೊಂಡಿದ್ದೇವೆ. ಇನ್ನೊಂದೆಡೆ ನಿಮ್ಮ ಸಹೋದ್ಯೋಗಿಯ ಕೊಲೆಯಾಗಿದೆ. ನಿಮ್ಮಲ್ಲಿನ ಹಲವರ ಮನ ಬಯಸಿದಂತೆ ನಿಷ್ಠೂರ ಸತ್ಯವನ್ನು ಹೊರಗೆಳೆಯುವ ಛಾತಿಯನ್ನು ತೋರಿದ್ದಕ್ಕಾಗಿ ಅವರ ಕೊಲೆಯಾಗಿದೆ. ಈಗ ಅವರ ಸಾವಿನ ಹಿಂದಿನ ಸತ್ಯವನ್ನೂ ಕೊಲೆ ಮಾಡುವ ಪ್ರಯತ್ನಗಳು ಬಿರುಸಿನಿಂದ ಆರಂಭವಾಗಿವೆ. ಹಾಗಾಗಿ ನಾವು ನೀವು ಸೇರಿಯೇ ಈ ಸತ್ಯವನ್ನು ಕಾಪಾಡಿಕೊಳ್ಳಬೇಕಿದೆ ಹಂತಕರಿಗೆ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿದೆ ಎಂದು ನಂಬಿದ್ದೇವೆ

ದಿಡ್ಡಳ್ಳಿ ಹೋರಾಟದ ನಂತರ ನಮ್ಮ ಸುತ್ತ ಕೂಡ ನಿರಂತರ ಷಡ್ಯಂತ್ರರ ರೂಪಿಸಲಾಗುತ್ತಿದೆ. ಕೊಲೆ ಬೆದರಿಕೆಗಳೂ ಬರುತ್ತಿವೆ. ಈ ಪತ್ರಿಕಾ ಗೋಷ್ಠಿಯ ತರುವಾಯ ನಮ್ಮ ಸಮಸ್ಯೆಗಳು ಮತ್ತಷ್ಟು ಹೆಚ್ಚಾಗುತ್ತವೆ. ಏಕೆಂದರೆ ಅಪಾಯಕಾರಿ ಶಕ್ತಿಗಳನ್ನು ಎದುರುಹಾಕಿಕೊಂಡು ನಾವು ಈ ಪತ್ರಿಕಾಗೋಷ್ಠಿ ನಡೆಸುತ್ತಿದ್ದೇವೆ. ಸಂಭವನೀಯ ಅಪಾಯದ ಹೊರತಾಗಿಯೂ ಗೌರಿಯವರ ಹತ್ಯೆಗೆ ನ್ಯಾಯ ಸಿಗಲೇಬೇಕು ಎಂಬ ಹೊಣೆಗಾರಿಕೆಯೊಂದಿಗೆ ಸತ್ಯವನ್ನು ಬಿಚ್ಚಿಡುವ ಕೆಲಸಕ್ಕೆ ಕೈಹಾಕಿದ್ದೇವೆ.
ಮೂರು ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ವಾಸ್ತವವನ್ನು ನಿಮ್ಮ ಮುಂದೆ ಬಿಚ್ಚಿಡಲು ಪ್ರಯತ್ನಿಸುತ್ತೇವೆ.

ನಕ್ಸಲೀಯರು ಇಂತಹ ಕೃತ್ಯವೆಸಗಲು ಸಾಧ್ಯವಿದೆಯೆ?
ನಕ್ಸಲೀಯರ ಜೊತೆ ಗೌರಿಯವರ ಸಂಬಂಧ ಎಂತಹುದು? ಗೌರಿಯವರ ಜೊತೆ ನಕ್ಸಲೀಯರಿಗೆ ವೈಷಮ್ಯವಿತ್ತೇ?
ನಕ್ಸಲೀಯರನ್ನು ಹತ್ಯೆ ಮಾಡಿರುವ ಶೇ. 99 ಭಾಗದಷ್ಟು ಸಾಧ್ಯತೆ ಯಾರ ಕಡೆ ಬೊಟ್ಟು ಮಾಡುತ್ತದೆ? ಮತ್ತು ಏಕೆ?
ನಕ್ಸಲೀಯರು ಇಂತಹ ಕೃತ್ಯವೆಸಗಲು ಸಾಧ್ಯವೆ?
ಮಾವೋಯಿಸ್ಟ್ ಪಾರ್ಟಿ ಒಂದು ಮಾಫಿಯ ಕೂಟವಲ್ಲ; ಅದೊಂದು ಶಿಸ್ತುಬದ್ಧ ರಾಜಕೀಯ ಪಕ್ಷ. ಅದಕ್ಕೊಂದು ಪ್ರಣಾಳಿಕೆ ಇದೆ, ಸಂವಿಧಾನ ಇದೆ. ಕಟ್ಟುನಿಟ್ಟಾದ ಸಂಘಟನಾ ನೀತಿ ಇದೆ. ಅದರ ಆಧಾರದ ಮೇಲೆ ಪಕ್ಷದ ಕಾರ್ಯನಿರ್ವಹಣೆ ನಡೆಯುತ್ತದೆ. ಪಕ್ಷದೊಳಗಿನ ಭಿನ್ನಾಭಿಪ್ರಾಯಗಳನ್ನು ಹೇಗೆ ನಿರ್ವಹಿಸಲಾಗುತ್ತದೆ? ಎಂಬ ಗ್ರಹಿಕೆ ಹಲವರಿಗಿಲ್ಲ. ನಮ್ಮ ಉದಾಹರಣೆಯನ್ನೇ ತೆಗೆದುಕೊಳ್ಳಿ. ಹೈದರಾಬಾದ್-ಕರ್ನಾಟಕದಲ್ಲಿ ನಾವು ವಿಫಲಗೊಳ್ಳಲು ಕಾರಣವೇನು? ಎಂಬ ಬಗ್ಗೆ, ಮಲೆನಾಡಿನಲ್ಲಿ ಸಶಸ್ತ್ರ ಹೋರಾಟ ಆರಂಭಿಸಬೇಕೇ ಬೇಡವೇ? ಎಂಬ ಕುರಿತು ಪಕ್ಷದಲ್ಲಿ 2001ರಿಂದ ಎರಡು ಅಭಿಪ್ರಾಯಗಳಿದ್ದವು. ಇದನ್ನು ಬಗೆಹರಿಸಿಕೊಳ್ಳಲಿಕ್ಕಾಗಿ ಎರಡೂ ಕಡೆಯಿಂದ 20 ವರ್ಷಗಳ ಸಮೀಕ್ಷೆಯನ್ನು, ಅದರ ಪಾಠಗಳನ್ನು ದಸ್ತಾವೇಜುಗಳಾಗಿ ಸಿದ್ಧಪಡಿಸಿ ಪಕ್ಷದೊಳಗೆ ಅನೇಕ ಸುತ್ತುಗಳ ಸಮಾಲೋಚನಾ ಸಭೆಗಳನ್ನು ನಡೆಸಲಾಯಿತು. 2003ರಲ್ಲಿ ಮತ್ತು 2006ರಲ್ಲಿ ರಾಜ್ಯ ಮಟ್ಟದ ಸಮ್ಮೇಳನಗಳನ್ನು ನಡೆಸಲಾಯಿತು. ಅದರಲ್ಲಿ ಓಟಿಂಗ್À ನಡೆಸಲಾಯಿತು. ಅಂದಿಗಾಗಲೇ ಸಾಕಷ್ಟು ಸಾವುನೋವು ಸಂಭವಿಸಿತ್ತು; ಆ ನಂತರವೂ ಅದೇ ಮಾರ್ಗವನ್ನು ಮುಂದುವರೆಸಬೇಕೆಂದು ಒಂದು ಬಣ ಪಟ್ಟು ಹಿಡಿದಿದ್ದರಿಂದ 2006ರ ಸಮ್ಮೇಳನದಲ್ಲಿ ಪಕ್ಷದಿಂದ ಹೊರ ನಡೆದು ಸಮಾಜದ ಕ್ರಾಂತಿಕಾರಿ ಬದಲಾವಣೆಗಾಗಿ ಹೊಸ ಹಾದಿಯನ್ನು ತುಳಿಯುವ ನಮ್ಮ ತೀರ್ಮಾನವನ್ನು ಅದೇ ಸಮ್ಮೇಳನದಲ್ಲಿ ಘೋಷಿಸಿದೆವು. ಎರಡೂ ಕಡೆಯವರ ಕಣ್ಣುಗಳಲ್ಲಿ ನೀರು. ಭಾರವಾದ ಮನಸ್ಸುಗಳೊಂದಿಗೆ ಪರಸ್ಪರ ಕೈಕುಲುಕಿ, ಲಾಲ್ ಸಲಾಂ ಹೇಳಿ ನಾವು ಹೊರ ನಡೆದೆವು. ಕಾಡಿನ ಅಂಚಿನವರೆಗೂ ಅಲ್ಲಿನ ಸಂಗಾತಿಗಳು ಬಂದು ನಮ್ಮನ್ನು ಕ್ಷೇಮವಾಗಿ ಕಳಿಸಿಹೋದರು. ಎಲ್ಲ ಸಂದರ್ಭದಲ್ಲೂ ಎಲ್ಲವೂ ಹೀಗೇ ನಡೆಯದಿದ್ದರೂ ಮೂಲಭೂತವಾಗಿ ಹೀಗೇ ನಡೆಯುತ್ತದೆ. ಭಿನ್ನಾಭಿಪ್ರಾಯವನ್ನು ಹೊಂದುವ, ಅದಕ್ಕಾಗಿ ಸೈದ್ಧಾಂತಿಕ ಸಂಘರ್ಷ ನಡೆಸುವ, ಬಹುಸಂಖ್ಯಾತರ ಅಭಿಪ್ರಾಯದಂತೆ ಮುನ್ನಡೆಯುವ ವಿಧಾನವಿರುತ್ತದೆ. ಆ ಪರಿಸ್ಥಿತಿಯೂ ಇಲ್ಲದಾಗ ಹೊರನಡೆಯುವ ಸ್ವಾತಂತ್ರ್ಯ ನಕ್ಸಲೀಯ ಚಳವಳಿಯ ಪ್ರತಿಯೊಬ್ಬ ಸದಸ್ಯರಿಗೂ ಇರುತ್ತದೆ.

ಮಾವೋಯಿಸ್ಟರಲ್ಲಿ ತಪ್ಪು ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳಲು ಒಂದು ವಿಧಿವಿಧಾನವಿದೆ. ಪಕ್ಷದ ಸಂವಿಧಾನವಿದೆ. ಮನವರಿಕೆ, ವಿಮರ್ಶೆ-ಆತ್ಮವಿಮರ್ಶೆ, ಎಚ್ಚರಿಕೆ, ಸಸ್ಪೆಂಡ್, ಅನಿವಾರ್ಯ ಪರಿಸ್ಥಿಗಳಲ್ಲಿ ಉಚ್ಚಾಟನೆ – ಹೀಗೆ. ಕೊಲೆ ಇರಲಿ, ದೇಹ ಮುಟ್ಟುವ ಹಕ್ಕೂ ಯಾರಿಗೂ ಇಲ್ಲ. ಒಂದು ವೇಳೆ ಯಾರಾದರೂ ಪೋಲೀಸ್ ಮಾಹಿತಿದಾರರಾಗಿ ಪರಿವರ್ತನೆಯಾಗಿದ್ದಲ್ಲಿ ಅವರಿಗೂ ಎಚ್ಚರಿಕೆ, ಪ್ರಜಾ ಪಂಚಾಯಿತಿಯಲ್ಲಿ ಚರ್ಚೆ, ಅವರ ದ್ರೋಹದ ಪ್ರಚಾರ, ಸಮಸ್ಯೆ ಕೈ ಮೀರಿ ಹೋಗುತ್ತಿದ್ದರೆ ಅಗತ್ಯವಿರುವಷ್ಟು ದೇಹ ದಂಡನೆ. ಒಂದು ವೇಳೆ ಇದರ ಹೊರತಾಗಿಯೂ ಒಬ್ಬ ವ್ಯಕ್ತಿ ಪ್ರಜ್ಞಾಪೂರ್ವಕವಾಗಿ ಜನರ ಅಥವಾ ದಳ ಸದಸ್ಯರ ಸಾವುನೋವಿಗೆ ಕಾರಣವಾಗುವಂತಹ ಕೆಲಸ ಮಾಡಿದ್ದರೆ ಆಗ ಮಾತ್ರ ಮರಣ ದಂಡನೆ ನೀಡಲಾಗುತ್ತದೆ.

ಇಂತಹ ಸಂದರ್ಭಗಳಲ್ಲಿ ಈ ದಂಡನೆ ಏಕೆ ನೀಡಲಾಗಿದೆ ಎಂಬ ಬಗ್ಗೆ ಬಹಿರಂಗ ಪ್ರಕಟಣೆ ನೀಡುವುದು ಕಡ್ಡಾಯ ಕ್ರಮವಾಗಿದೆ. “ಪಕ್ಷವು ಗೋಪ್ಯವಾಗಿರುತ್ತದೆ – ಅದರ ರಾಜನೀತಿ ಬಹಿರಂಗವಾಗಿರುತ್ತದೆ” (ಪಾರ್ಟಿ ಈಸ್ ಸೀಕ್ರೆಟ್ – ಪಾಲಿಟಿಕ್ಸ್ ಈಸ್ ಓಪನ್) ಎಂಬುದು ಅದರ ನೀತಿಯಾಗಿದೆ. ಕದ್ದುಮುಚ್ಚಿ ಕೊಲೆ ಮಾಡುವ ವಿಧಾನ ನಕ್ಸಲೀಯರು ನಂಬಿರುವ ತತ್ವ ಸಿದ್ದಾಂತಕ್ಕೇ ವಿರುದ್ಧವಾಗಿದೆ.
ಅಲ್ಲದೆ ಇದುವರೆಗೆ ವiವೋವಾದಿಗಳು ಪತ್ರಕರ್ತರನ್ನು ಕೊಂದ ಒಂದೇ ಒಂದು ಉದಾಹರಣೆ ಇಡಿ ಭಾರತದಲ್ಲೇ ಎಲ್ಲೂ ನಡೆದಿಲ್ಲ. ಮಾವೋವಾದಿಗಳನ್ನು ಉಗ್ರವಾಗಿ ಖಂಡಿಸುವ ಬಲಪಂಥೀಯ ಪತ್ರಕರ್ತರು ರಾಶಿರಾಶಿ ಇದ್ದಾರೆ. ಸುಳ್ಳು ಸುದ್ದಿಗಳನ್ನು ಬಿತ್ತರಿಸಿದವರಿದ್ದಾರೆ. ಆದರೂ ಇದುವರೆಗೆ ಟೀಕಿಸಿದರು ಎಂಬ ಕಾರಣಕ್ಕೆ ಕೊಲ್ಲುವುದಿರಲಿ, ಒಬ್ಬರ ಮೇಲೂ ಕೈ ಮಾಡಿದ ಉದಾಹರಣೆ ಸಹ ಇಲ್ಲ. ಸಾಮಾನ್ಯವಾಗಿ ವಿಚಾರಗಳನ್ನು ವಿಚಾರಗಳಿಂದ ಮಾತ್ರ ಎದುರಿಸಲಾಗುತ್ತದೆ.

ಕೆಲವೊಮ್ಮೆ ಸಿವಿಲ್ ಅಧಿಕಾರಿಗಳನ್ನು ಕಿಡ್ನಾಪ್ ಮಾಡಿದರೂ ಕೊಂದ ಉದಾಹರಣೆ ಇಲ್ಲ.
ಪೋಲೀಸ್, ಪ್ಯಾರಾಮಿಲಿಟರಿ ಜೊತೆ ಸಶಸ್ತ್ರ ಕಾರ್ಯಾಚರಣೆ ನಡೆಸುವಾಗಲೂ ನಾಗರೀಕರಿಗೆ ಹಾನಿಯಾಗದಂತೆ ವಿಶೇಷ ಎಚ್ಚರಿಕೆ ವಹಿಸಲಾಗುತ್ತದೆ.
ಇದರರ್ಥ ನಕ್ಸಲೀಯರು ದೈವಾಂಶ ಸಂಭೂತರು ಎಂದಲ್ಲ. ಇದನ್ನೆಲ್ಲಾ ಮೀರಿಯೂ ಕೆಲವು ವಿಶೇಷ ಸಂದರ್ಭದಲ್ಲಿ ಅಪಾರ್ಥ ಮಾಡಿಕೊಂಡು, ಗೊಂದಲ ಮಾಡಿಕೊಂಡು, ದುಡುಕಿ, ಕೆಲವೊಮ್ಮೆ ಅರೆಬೆಂದ ನಾಯಕರ ಮುಂಗೋಪದಿಂದ ಕೆಲವು ತಪ್ಪುಗಳು ನಡೆದಿವೆ. ಆದರೆ ಆಗ ಪಕ್ಷ ಅದಕ್ಕಾಗಿ ಸಾರ್ವಜನಿಕ ಕ್ಷಮಾಪಣೆ ಕೇಳುತ್ತದೆ. ಸರಳ ಉದಾಹರಣೆ: ಕಾಕತೀಯ ರೈಲ್ವೆ ಬೆಂಕಿ ಅನಾಹುತ ಇತ್ಯಾದಿ. ಇದು ಅದರ ಪರಿಪಾಠವಾಗಿದೆ.

ಹೀಗಿರುವಾಗ ನಕ್ಸಲೀಯರು ಪತ್ರಕರ್ತೆಯೊಬ್ಬರನ್ನು ಹತ್ಯೆಗೈಯ್ಯುವ ಸಾಧ್ಯತೆ ಇಲ್ಲವೇ ಇಲ್ಲ. ಅದರಲ್ಲೂ, ಹೇಳಿಕೆಯನ್ನೂ ನೀಡದೆ ಯಾರನ್ನೇ ಆದರೂ ಕೊಲೆ ಮಾಡುವ ಸಾಧ್ಯತೆಗಳೇ ಇಲ್ಲ.
ಆಗಲೂ ಒಂದು ಪ್ರಶ್ನೆ ಉಳಿಯುತ್ತದೆ ಕರ್ನಾಟಕದಲ್ಲಿ ಗೌರಿಯವರ ವಿಚಾರದಲ್ಲಿ ತಪ್ಪು ನಡೆದಿರಬಹುದಲ್ಲಾ?
ನಕ್ಸಲೀಯರ ಜೊತೆ ಗೌರಿಯವರ ಸಂಬಂಧ ಎಂತಹುದು? ಅವರ ಜೊತೆ ನಕ್ಸಲೀಯರಿಗೆ ವೈಷಮ್ಯವಿತ್ತೇ?
ನಕ್ಸಲ್ ಚಳವಳಿ ಜೊತೆ ಗೌರಿಯವರ ಮೊದಲ ಒಡನಾಟ ಚಿಕ್ಕಮಗಳೂರು ಕಾಡಿನಲ್ಲಿ ಸಾಕೇತ್ ರಾಜನ್ ನಡೆಸಿಕೊಟ್ಟ ಗೋಪ್ಯ ಪತ್ರಿಕಾ ಗೋಷ್ಠಿಯಿಂದ. ಗೌರಿಯಷ್ಟೇ ಅಲ್ಲ, ಆ ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದ ಎಲ್ಲಾ ಪತ್ರಕರ್ತರೂ ಅವಾಕ್ಕಾಗಿದ್ದರು. ನಕ್ಸಲ್ ಕಾರ್ಯಕರ್ತರ ವೈಚಾರಿಕ ಸ್ಪಷ್ಟತೆ, ಅಪಾರವಾದ ಸಾಮಾಜಿಕ-ರಾಜಕೀಯ ಗ್ರಹಿಕೆ, ಕಾಳಜಿ, ನಿಷ್ಠೆ ಮತ್ತು ಬದ್ಧತೆಯಿಂದ ಪ್ರಭಾವಿತರಾಗಿದ್ದರು. ಅದರಲ್ಲಿ ಗೌರಿಯೂ ಒಬ್ಬರು. ಆದರೆ ಅದೇ ಸಂದರ್ಭದಲ್ಲಿ ಸಶಸ್ತ್ರ ಹೋರಾಟ ಕರ್ನಾಟಕಕ್ಕೆ ಅಗತ್ಯವಿಲ್ಲ ಎಂಬ ನಿಲುವು ಹೊಂದಿದ್ದರು. ಅದನ್ನು ಸಾಕೇತ್ ಜೊತೆ ಮುಂದಿಟ್ಟಿದ್ದರು ಸಹ.

ಈ ಹಿನ್ನೆಲೆಯಲ್ಲಿಯೇ 2004ರಲ್ಲಿ ಕಾಡಿನಲ್ಲಿ ಪತ್ರಿಕಾ ಗೋಷ್ಠಿಗೆ ಹೋಗಿ ಬಂದ ನಂತರ ಹೋಗಿಬಂದವರೆಲ್ಲಾ ಸೇರಿ ‘ಶಾಂತಿಗಾಗಿ ನಾಗರಿಕರ ವೇದಿಕೆ’ಯ ರಚನೆ ಮಾಡಿದರು. ಸಶಸ್ತ್ರ ಸಂಘರ್ಷವನ್ನು ತಡೆಗಟ್ಟಲು ಗಂಭೀರ ಪ್ರಯತ್ನ ಆರಂಭಿಸಿದರು.
ಕೆಲ ದಿನ ಪೊಲೀಸರಿಂದ ಕೂಂಬಿಂಗ್ ನಿಲ್ಲಿಸಲಾಯಿತಾದರೂ ಸರ್ಕಾರ ಮಾತು ಉಳಿಸಿಕೊಳ್ಳಲಿಲ್ಲ. ಕಪಟ ಎನ್ಕೌಂಟರ್‍ಗಳು ಮತ್ತೆ ಶುರುವಾದವು. ಸಾಕೇತ್ ರಾಜನ್ ಸಹ ಹುತಾತ್ಮರಾದರು. ಗೌರಿಯವರು ಸರ್ಕಾರದ ನೀತಿಯನ್ನು ಖಂಡಿಸಿ ಸಾಕಷ್ಟು ಬರೆದರು. ‘ನಕ್ಸಲೈಟ್ ಬೆಂಬಲಿಗರು’ ಎಂಬ ಹಣೆಪಟ್ಟಿಯನ್ನು ಸಂಘ ಪರಿವಾರ ಅವರಿಗೆ ಕಟ್ಟಿತು. ಪತ್ರಿಕೆಯ ಮಾಲೀಕರೊಳಗೆ ಜಗಳ. ಗೌರಿ ರಾಜಿ ಮಾಡಿಕೊಳ್ಳಲು ತಯಾರಿರಲಿಲ್ಲ. ಇಂದ್ರಜಿತ್ ಗೌರಿಯನ್ನು ರಾತ್ರೋರಾತ್ರಿ ಹೊರಹಾಕಿದರು. ಬಿಳಿದಾಳೆ ಈಶ, ವಿ.ಎಸ್. ಶ್ರೀಧರ್, ಭಾನುತೇಜ್ ಮುಂತಾದ ಮಿತ್ರರು ಗೌರಿಯವರ ಬೆಂಬಲಕ್ಕೆ ನಿಂತರು. ಮುಂದಿನ ವಾರವೇ ‘ಗೌರಿ ಲಂಕೇಶ್ ವಾರಪತ್ರಿಕೆ’ ಹುಟ್ಟಿಕೊಂಡಿತು. ಗೌರಿ ಪತ್ರಿಕೆ ಎರಡು ವಿಚಾರಕ್ಕೆ ಫೋಕಸ್ ಆಗಿತ್ತು. ಒಂದು: ಬಾಬಾಬುಡನ್ ಗಿರಿಯನ್ನು ಬಾಬರಿ ಮಸೀದಿಯನ್ನಾಗಿ ಮಾಡಿಕೊಂಡು ಕರ್ನಾಟಕದಲ್ಲಿ ಕೋಮು ವೈಷಮ್ಯವನ್ನು ಬೆಳೆಸುತ್ತಿರುವ ಸಂಘ ಪರಿವಾರದ ಹುನ್ನಾರಗಳನ್ನು ಬಯಲುಗೊಳಿಸುವುದು. ಮತ್ತೊಂದು: ಮಲೆನಾಡಿನಲ್ಲಿ ಸರ್ಕಾರ ಮುಂದುವರಿಸಿದ ಎನ್ಕೌಂಟರ್ ಪ್ರಕ್ರಿಯೆಯನ್ನು ಖಂಡಿಸುವುದು, ಶಾಂತಿ ಮಾತುಕತೆಗಾಗಿ ಒತ್ತಾಯಿಸುವುದು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿತು. ಸರ್ಕಾರ ಒಪ್ಪಲಿಲ್ಲ. ಮಾತುಕತೆ ನಡೆಯಲಿಲ್ಲ.
ಪರಸ್ಪರ ಸಂಪರ್ಕ ಇಲ್ಲದಿದ್ದರೂ ಶಾಂತಿಗಾಗಿ ನಾಗರಿಕರ ವೇದಿಕೆಯ ಈ ಪ್ರಯತ್ನದ ಬಗ್ಗೆ, ಗೌರಿ ಲಂಕೇಶ್ ಪತ್ರಿಕೆ ವಹಿಸುತ್ತಿರುವ ಪಾತ್ರದ ಬಗ್ಗೆ ನಕ್ಸಲೈಟರಲ್ಲಿ ಅಪಾರ ಅಭಿಮಾನವಿತ್ತು. ನಮ್ಮೊಳಗೆ ಪರಸ್ಪರ ಭಿನ್ನಾಭಿಪ್ರಾಯವಿತ್ತು. ಆದರೆ ಎರಡು ಬಣದವರಿಗೂ ಗೌರಿಯವರ ಬಗ್ಗೆ ಅಪಾರ ಪ್ರೀತಿ, ಅಭಿಮಾನವಿತ್ತು.
2006ರ ಜುಲೈ ತಿಂಗಳಿನಲ್ಲಿ ನಾವು ಮಾವೋಮಾದಿ ಪಕ್ಷದಿಂದ ಹೊರಬಂದೆವು. ಇದಕ್ಕೂ ಗೌರಿಯವರಿಗೂ ಯಾವುದೇ ರೀತಿಯ ಸಂಬಂಧವಿಲ್ಲ. ಇದು ಪಕ್ಷದೊಳಗೆ ನಡೆದ ಆಂತರಿಕ ಸಂಘóರ್ಷದ ಪ್ರತಿಫಲ. ಗೌರಿ ಸಾಕೇತರನ್ನಾದರೂ ಆ ಪತ್ರಿಕಾ ಗೋಷ್ಠಿಯಲ್ಲಿ ಕಂಡಿದ್ದರು, ನಮ್ಮನ್ನು ನೋಡಿಯೂ ಇರಲಿಲ್ಲ. ಪಕ್ಷ ಇಬ್ಭಾಗವಾಯಿತು. ಗೌರಿಯವರಿಗೆ ಇದರ ಬಗ್ಗೆ ಮಾಹಿತಿ ಕೂಡ ಇರಲಿಲ್ಲ.

ನಾವು ಭೂಗತರಾಗಿಯೇ ಕೆಲಸ ಮುಂದುವರಿಸಿದೆವು. ಅದು ಅನಿವಾರ್ಯವಾಗಿತ್ತು. ಏಕೆಂದರೆ ನಮ್ಮಿಬ್ಬರ ತಲೆಯ ಮೇಲೆ ಸರ್ಕಾರ ಒಂದು ಲಕ್ಷ ರೂ. ಬಹುಮಾನ ಘೋಷಿಸಿತ್ತು. ಗಂಭೀರ ಕೇಸುಗಳನ್ನು ಹಾಕಲಾಗಿತ್ತು. ನಾವು ಬಹಿರಂಗವಾಗಿ ಬರಲು ಬಯಸಿದ್ದೆವು. ಆದರೆ ಅದಕ್ಕಾಗಿನ ಅವಕಾಶಗಳು ಇರಲಿಲ್ಲ.
2013ರಲ್ಲಿ ಬಿಜೆಪಿ ಸೋತು ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ಶಾಂತಿಗಾಗಿ ನಾಗರೀಕರ ವೇದಿಕೆ ಮತ್ತೆ ತನ್ನ ಒತ್ತಾಯವನ್ನು ಹೆಚ್ಚಿಸಿತು. ಸಿದ್ದರಾಮಯ್ಯನವರು ‘ಅವರು ಮಾತುಕತೆಗೆ ಬರುವುದಾದರೆ ನಾವು ಸಿದ್ಧ’ ಎಂಬ ಹೇಳಿಕೆ ಕೊಟ್ಟರು. ನಾನು ಮತ್ತು ನಾಗರಾಜ್ ಗೋಪ್ಯ ಪತ್ರಿಕಾಗೋಷ್ಠಿ ನಡೆಸಿ ‘ನಮ್ಮ ಮೇಲಿನ ಸುಳ್ಳು ಕೇಸುಗಳನ್ನು ಹಿಂಪಡೆಯುವುದಾದರೆ ನಾವು ಮುಖ್ಯವಾಹಿನಿಗೆ ಬರಲು ಸಿದ್ಧ’ ಎಂಬ ಹೇಳಿಕೆ ಕೊಟ್ಟೆವು. ಇಲ್ಲಿಂದ ನಕ್ಸಲೀಯರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಕ್ರಿಯೆ ಚಾಲನೆ ಪಡೆಯಿತು. ಅದರ ವಿವರಗಳಿಗೆ ಹೋಗುವುದಿಲ್ಲ. ಸರ್ಕಾರದ ಶರಣಾಗತಿ ನೀತಿಗೆ – ‘ಎಡಪಂಥೀಯ ಉಗ್ರಗಾಮಿಗಳ ಶರಣಾಗತಿ ಮತ್ತು ಪುನರ್ವಸತಿ ಯೋಜನೆ’ ಎಂಬ ಹೆಸರನ್ನು ‘…… ಮುಖ್ಯವಾಹಿನಿಗೆ ಮರಳುವಿಕೆ ಅಥವಾ ಶರಣಾಗತಿ ಮತ್ತು ಪುನರ್ವಸತಿ ಯೋಜನೆ’ ಎಂದು ಮಾರ್ಪಡಿಸುವುದು ಸೇರಿದಂತೆ ಹಲವು ಮಾರ್ಪಾಡುಗಳನ್ನು ಮಾಡಿ, ಅದನ್ನು ಗೌರವಯುತವಾಗಿ ಮುಖ್ಯವಾಹಿನಿಗೆ ಬರಲು ಅನುವು ಮಾಡಿಕೊಡುವ ಯೋಜನೆಯಾಗಿ ಮಾರ್ಪಡಿಸಲಾಯಿತು. ನಾಗರೀಕ ಸಮಾಜದ ಪ್ರತಿನಿಧಿಗಳನ್ನಾಗಿ ಎಚ್.ಎಸ್. ದೊರೆಸ್ವಾಮಿ, ಎ.ಕೆ. ಸುಬ್ಬಯ್ಯ ಮತ್ತು ಗೌರಿ ಲಂಕೇಶರನ್ನು ಅಧಿಕೃತವಾಗಿ ಈ ಪ್ರಕ್ರಿಯೆಯನ್ನು ನಡೆಸಿಕೊಡುವ ಉನ್ನತಾಧಿಕಾರದ ರಾಜ್ಯ ಸಮಿತಿಯ ಸದಸ್ಯರನ್ನಾಗಿ ಮಾಡಿಕೊಳ್ಳಲಾಯಿತು. ಕರ್ನಾಟಕದ ಎಲ್ಲಾ ಜನಪರ ಚಿಂತಕರು ಮತ್ತು ಸಂಘಟನೆಗಳು ಈ ಪ್ರಕ್ರಿಯೆಗೆ ತಮ್ಮದೇ ರೀತಿಯಲ್ಲಿ ಇಂಬು ಕೊಟ್ಟರು. ಪರಿಣಾಮವಾಗಿ ಹೋರಾಟಗಾರರೆಲ್ಲರ ಸಮಕ್ಷಮದಲ್ಲಿ 2014ರ ಡಿಸೆಂಬರ್ 8ರಂದು ಚಿಕ್ಕಮಗಳೂರಿನಲ್ಲಿ ನಡೆದ ವಿಶೇಷ ಸಮಾರಂಭವೊಂದರಲ್ಲಿ ನಾವು ಕರ್ನಾಟಕದ ಜನಪರ ಚಳವಳಿಗಳ ಮುಖ್ಯವಾಹಿನಿಗೆ ಮರಳಿ ಬಂದೆವು.

ಆ ನಂತರ ಈ ಪ್ರಕ್ರಿಯೆ ಹಲವು ಏರಿಳಿತಗಳ ಜೊತೆ ಸಾಗಿತು. 2016ರಲ್ಲಿ — 2017 ರಲ್ಲಿ — ಈ ಯೋಜನೆಯಡಿ ಮುಖ್ಯವಾಹಿನಿಗೆ ಮರಳಿದರು. ಗಮನಿಸಬೇಕಾದ ವಿಚಾರವೆಂದರೆ ಇವರೆಲ್ಲರೂ ಪಕ್ಷ ತೊರೆದಿದ್ದಕ್ಕೂ ಗೌರಿಗೂ ಯಾವುದೇ ಸಂಬಂಧವಿಲ್ಲ. ಅವರು ತಮ್ಮದೇ ಕಾರಣಕ್ಕಾಗಿ ತೊರೆದವರು. ಈ ಯೋಜನೆಯ ಕಾರಣಕ್ಕಾಗಿಯೂ ಅಲ್ಲ. ಈ ಯೋಜನೆಯನ್ನು ಸದುಪಯೋಗ ಮಾಡಿಕೊಂಡು ಮುಖ್ಯವಾಹಿನಿಗೆ ಮರಳಿದರಷ್ಟೇ.
ಮುಖ್ಯವಾಹಿನಿಗೆ ಬಂದಾಗ ಮಾವೋವಾದಿ ಪಕ್ಷದ ಬಗೆಗಿನ ನಮ್ಮ ವಿಮರ್ಶೆಯನ್ನು ನಾವು ಬಹಿರಂಗವಾಗಿ ಮುಂದಿಟ್ಟೆವು. ನಮ್ಮ ನಿಲುವನ್ನು ಖಂಡಿಸಿ, ಕ್ರಾಂತಿಯ ಹಾದಿಯನ್ನು ನಾವು ತೊರೆದಿರುವುದಾಗಿ ಆರೋಪಿಸಿ ಪಕ್ಷ ಪತ್ರಿಕಾ ಹೇಳಿಕೆ ನೀಡಿತು. ಆದರೆ ಗೌರಿಯವರ ವಿರುದ್ಧ ಇದುವರೆಗೂ ಒಂದೇ ಒಂದು ಖಂಡನಾ ಹೇಳಿಕೆಯಾಗಲಿ, ಕರಪತ್ರವಾಗಲಿ, ಕೈ ಬರಹದ ಪೋಸ್ಟರ್ ಆಗಲಿ ಹಾಕಿಲ್ಲ. ಬದಲಿಗೆ ಇದೇ ಅವಧಿಯಲ್ಲಿ ನಕ್ಸಲೀಯ ನಾಯಕ ಬಿ.ಜಿ. ಕೃಷ್ಣಮೂರ್ತಿಯವರು ಪೋಸ್ಟಲ್ಲಿ ಕಳುಹಿಸಿಕೊಟ್ಟ ಕವನಗಳು ಗೌರಿ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಅಂದರೆ ನಮ್ಮ ಮತ್ತು ಗೌರಿಯವರ ಒಡನಾಟ ಹೆಚ್ಚಾಗಿದ್ದರೂ ಪತ್ರಿಕೆ ಬಗೆಗಿನ ‘ಆ ಬಣ’ದವರ ಅಭಿಮಾನ ಕಡಿಮೆಯಾಗಿಲ್ಲ. ಕಡಿಮೆಯಾಗಲು ಸಾಧ್ಯವಿಲ್ಲ.

ಇನ್ನು ವಿಕ್ರಂ ಗೌಡನ ಕುರಿತು. ವಿಕ್ರಂ ಗೌಡ, ಮುಂಡಗಾರು ಲತಾ ಇವರೆಲ್ಲಾ ಮಲೆನಾಡಿನ ಆದಿವಾಸಿ ಮುಗ್ದ ಯುವಕ ಯುವತಿಯರು. ನ್ಯಾಷನಲ್ ಪಾರ್ಕ್ ಹೆಸರಿನಲ್ಲಿ ಸರ್ಕಾರವು ಆದಿವಾಸಿಗಳನ್ನು ನಿರ್ದಯವಾಗಿ ಒಕ್ಕಲೆಬ್ಬಿಸಲು ಬಂದಾಗ ತಮ್ಮ ‘ಕೊಡಿಗೆ’ಗಳನ್ನು ಉಳಿಸಿಕೊಳ್ಳುವ ಸಲುವಾಗಿ ಸಶಸ್ತ್ರ ದಳಗಳಿಗೆ ಸೇರ್ಪಡೆಯಾದವರು. ಅವರನ್ನು ಬಂದೂಕು ಹಿಡಿಯುವಂತೆ ಮಾಡಿದ್ದು ಇದೇ ಸರ್ಕಾರಗಳೇ. ಬಂದೂಕು ಹಿಡಿದರೂ, ಹೋರಾಟದ ಬದ್ಧತೆ ಹೆಚ್ಚಾಗಿದ್ದರೂ ಅವರ ಮುಗ್ದತೆ ಮರೆಯಾಗಿಲ್ಲ. ಈ ಇಬ್ಬರನ್ನೂ ನಾವು ವ್ಯಕ್ತಿಗತವಾಗಿಯೂ ಬಲ್ಲೆವು. ವಿಕ್ರಂ ಗೌಡ ಒಬ್ಬ ನಿಷ್ಠ ಕಾರ್ಯಕರ್ತ. ಅವರನ್ನು ಕುಖ್ಯಾತ ನಾಯಕನನ್ನಾಗಿ ಮಾಡಲು ಈ ವ್ಯವಸ್ಥೆ ಹೊರಟಿದೆ. ಈಗ ಗೌರಿಯವರ ಹತ್ಯೆಯ ಪಾಪದ ಕಳಂಕವನ್ನು ‘ಪಾಪದ’ ಆದಿವಾಸಿ ಯುವಕ ವಿಕ್ರಂ ಗೌಡನ ತಲೆಗೆ ಕಟ್ಟಲಾಗುತ್ತಿದೆ. ಇವರ ದುಷ್ಟ ರಾಜಕೀಯ ಷಡ್ಯಂತ್ರಗಳಿಗೆ ಆದಿವಾಸಿ ಯುವಕನ ತಲೆದಂಡ ಕೊಡಲು ಹೊರಟಿದ್ದಾರೆ. ನಾಳೆ ಅವರನ್ನು ಕೊಂದು “ಗೌರಿಯ ಹಂತಕರನ್ನು ಸಂಹಾರ ಮಾಡಿದ್ದೇವೆ” ಎಂದು ತಮ್ಮ ಕಿರೀಟಕ್ಕೆ ಗರಿ ಸಿಕ್ಕಿಸಿಕೊಂಡರೂ ಸಿಕ್ಕಿಸಿಕೊಳ್ಳಬಹುದು. ಇದೊಂದು ಲಜ್ಜೆಗೇಡಿ ವಿಚಾರ. ನಾವಿದನ್ನು ತೀವ್ರಾತಿತೀವ್ರ ಮಾತು-ಭಾವಗಳಲ್ಲಿ ಖಂಡಿಸುತ್ತೇವೆ.
ಹಾಗಾದರೆ ಶೇ. 99 ಭಾಗ ಯಾರು ಮಾಡಿರಲಿಕ್ಕೆ ಸಾಧ್ಯ?
ಉತ್ತರ ನೇರ ಮತ್ತು ಸರಳ. ಗೌರಿಯವರನ್ನು ಯಾರು ಅತಿಯಾಗಿ ದ್ವೇಷಿಸುತ್ತಿದ್ದರೋ, ಯಾರು ಅವರನ್ನು ಅತಿದೊಡ್ಡ ಶತ್ರು ಎಂದು ಪರಿಭಾವಿಸಿದ್ದರೋ ಅವರೇ ಮಾಡಿರಲಿಕ್ಕೆ ಸಾಧ್ಯ. ಯಾರು ಅವರನ್ನು ದ್ವೇಷಿಸುತ್ತಿದ್ದರು? ಗೌರಿಯವರ ಬದುಕು ಮತ್ತು ಬರಹಗಳನ್ನು ನೋಡಿದರೇ ಸಾಕು. “ಈ ಮುದುಕಿಯ ಸಾವನ್ನು ನೋಡುವ ದಿನ ಬೇಗನೇ ಬರಲಿ ದೇವರೆ” ಎಂದು ಯುವಕನೊಬ್ಬ ಬರೆದಿದ್ದಕ್ಕೆ ಗೌರಿಯವರು ಅತ್ಯಂತ ತಾಯ್ತನದಿಂದ, ಆದರೆ ತನ್ನ ಸಾವನ್ನು ಬಯಸುತ್ತಿರುವವರು ಯಾರು ಎಂಬುದನ್ನು ನಿಚ್ಚಳವಾಗಿ ಬಿಡಿಸಿಟ್ಟು ಬರೆದಿದ್ದಾರೆ. ಇಂತಹ ಅನೇಕ ಲೇಖನಗಳಿವೆ.

ಅವರ ಮೇಲೆ ಅನೇಕ ಬಾರಿ ಈ ಮೊದಲೇ ದೈಹಿಕ ದಾಳಿಯ ಪ್ರಯತ್ನಗಳು ನಡೆದಿವೆ. ಎರಡನ್ನು ಉದಾಹರಿಸುವುದಾದರೆ, ಶಿವಮೊಗ್ಗದ ಕನ್ನಡ ಸಾಹಿತ್ಯ ಸಮ್ಮೇಳನ ಮತ್ತು ಮೆಣಸಿನಹಾಡ್ಯ ಎನ್ಕೌಂಟರ್ ಸ್ಥಳಕ್ಕೆ ಭೇಟಿಕೊಟ್ಟು ಹಿಂತಿರುಗುವಾಗ ಆದ ಪ್ರಕರಣಗಳು.
ಗೌರಿಯವರು ಸಿಸಿ ಟಿವಿ ಹಾಕಿಸಿಕೊಂಡಿದ್ದೇಕೆ? ಕಲ್ಬುರ್ಗಿ ಘಟನೆಯಾದ ನಂತರ ತನ್ನ ಮೇಲೂ ದಾಳಿಯಾಗಬಹುದು ಎಂಬ ಕಾರಣಕ್ಕೇ.
ಗೌರಿ, ಕಲ್ಬುರ್ಗಿ, ಪಾನ್ಸರೆ, ಧಾಬೋಲ್ಕರರನ್ನು ಸಮಾನವಾಗಿ ದ್ವೇಷಿಸುತ್ತಿದ್ದ ಶಕ್ತಿ ಯಾವುದು? ಒಂದೇ ರೀತಿಯ ಕೊಲೆಗಳು, ಒಂದೇ ರೀತಿಯ ಶಕ್ತಿಗಳ ಜೊತೆ ವೈಷಮ್ಯ. ಇದಕ್ಕೇನು ಅರ್ಥವಿಲ್ಲವೆ? ನಕ್ಸಲೀಯರೇ ಕಲ್ಬುರ್ಗಿ, ಪಾನ್ಸರೆ, ಧಾಬೋಲ್ಕರರನ್ನೂ ಕೊಂದಿರಬಹುದೆ?
ಗೌರಿಯ ಹತ್ಯೆಯಾದ ನಂತರ ಅದನ್ನು ಸಂಭ್ರಮಿಸುತ್ತಿರುವವರು ಯಾರು?
ಗೌರಿಯ ಹತ್ಯೆಯನ್ನು ಈಗ ನಾನಾ ರೀತಿಯಲ್ಲಿ ಸಮರ್ಥಿಸುತ್ತಿರುವವರು, ಮುಚ್ಚಿಹಾಕಲು ಶ್ರಮಿಸುತ್ತಿರುವವರು ಯಾರು?
ಗೌರಿಯನ್ನು ಅತಿದೊಡ್ಡ ಶತ್ರುವೆಂದು ದ್ವೇಷಿಸುತ್ತಿದ್ದವರು, ಗೌರಿಯ ಮೇಲೆ ದಾಳಿ ಮಾಡಿಸಿದ್ದವರು, ಗೌರಿಯ ಸಾವನ್ನು ಬಯಸುತ್ತಿದ್ದವರು, ಗೌರಿಗೆ ಕೊಲೆ ಬೆದರಿಕೆಗಳನ್ನು ಹಾಕುತ್ತಿದ್ದವರು, ಗೌರಿಯಂತಹುದೇ ಚಿಂತನೆಗಳನ್ನು ಹೊಂದಿದವರನ್ನು ಕೊಂದವರು, ಗೌರಿಯ ಸಾವನ್ನು ಸಂಭ್ರಮಿಸುತ್ತಿರುವವರು, ಗೌರಿಯ ಹತ್ಯೆಯ ಕುರಿತು ಸಾರ್ವಜನಿಕರಲ್ಲಿ ಸಂದೇಹ-ಗೊಂದಲ ಮೂಡಿಸುತ್ತಿರುವವರು, ತನಿಖೆಯನ್ನು ದಿಕ್ಕುತಪ್ಪಿಸುತ್ತಿರುವವರೇ ಗೌರಿಯನ್ನು ಕೊಂದಿದ್ದಾರೆ. ಇದೆಲ್ಲವನ್ನೂ ಮಾಡಿರುವುದು-ಮಾಡುತ್ತಿರುವುದು ಸಂಘಪರಿವಾರವಲ್ಲದೆ ಮತ್ತ್ಯಾರೂ ಅಲ್ಲ.

ವಿಚಿತ್ರವೆಂದರೆ ಕೊಲೆಯಾಗುವ ದಿನದವರೆಗೆ ಗೌರಿಗೆ ನಕ್ಸಲೀಯ ಬೆಂಬಲಿಗಳೆಂಬ ಹಣೆಪಟ್ಟಿ ಕೊಟ್ಟವರೇ, ಅವರು ಹತರಾದ ಮರುಕ್ಷಣದಿಂದ ‘ಅದನ್ನು ನಕ್ಸಲೀಯರೇ ಮಾಡಿದ್ದಾರೆ’ ಎಂಬ ಪ್ರಚಾರ ಆರಂಭಿಸಿದ್ದಾರೆ. ಹೇಗಿದೆ ನೋಡಿ ತರ್ಕ! ಎರಡರಲ್ಲಿ ಒಂದು ಮಾತ್ರ ನಿಜವಿರಲು ಸಾಧ್ಯ. ಎರಡನ್ನೂ ನಂಬಿಸುವ ಪ್ರಯತ್ನ ಬಲವಾಗಿಯೇ ಸಾಗಿದೆ.
ಗೌರಿಯನ್ನು ಕೊಂದವರಿಗಿಂತ ಕೊಲ್ಲಲು ಕಳುಹಿಸಿದವರು, ಕೊಲೆಯನ್ನು ಸಮರ್ಥಿಸುತ್ತಿರುವವರು, ಕೊಲೆಯನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿರುವವರು ಹೆಚ್ಚು ಅಪಾಯಕಾರಿ. ಅವರ ಪತ್ತೆಯಾಗಬೇಕು, ಅವರನ್ನೆಲ್ಲಾ ಸಂಚಿನ ಪಾಲುದಾರರೆಂದು ಪರಿಗಣಿಸಿ ಅವರಿಗೆ ಶಿಕ್ಷೆಯಾಗಬೇಕು.

ಈ ಮಾತು ನಮಗೂ ಅನ್ವಯವಾಗುತ್ತದೆ. ಒಂದು ವೇಳೆ ಇದನ್ನು ಮಾಡಿರುವುದು ನಕ್ಸಲೀಯರೇ ಎಂದು ನಿಜವಾಗಿಯೂ ಸಾಕ್ಷ್ಯಾಧಾರಗಳ ಮೂಲಕ ಸಾಬೀತುಪಡಿಸಲು ನಿಮಗೆ ಸಾಧ್ಯವಾದಲ್ಲಿ ಅವರನ್ನು ಸಮರ್ಥಿಸಿ, ಜನತೆಯನ್ನು ದಿಕ್ಕು ತಪ್ಪಿಸಲು ಪ್ರಯತ್ನಿಸಿದ ಅಪರಾಧದ ಮೇಲೆ, ಈ ಕೊಲೆ ಸಂಚಿನಲ್ಲಿ ಭಾಗಿಗಳೆಂದು ಪರಿಗಣಿಸಿ ನಮ್ಮನ್ನೂ ಬಂಧಿಸಿ. ಇದೇ ವಿಚಾರ ಕೇಂದ್ರದ ಗೃಹ ಮಂತ್ರಿಗೂ ಅನ್ವಯವಾಗಬೇಕು, ರಿಪಬ್ಲಿಕ್ ಟಿವಿಯ ಆರ್ಣಬ್ ಗೋಸ್ವಾಮಿಯಂಥವರಿಗೂ ಅನ್ವಯವಾಗಬೇಕು.
ಕೊನೆಯ ಮಾತು: ಗೌರಿಯವರನ್ನು ಸಂಘ ಪರಿವಾರದ ವ್ಯಕ್ತಿಗಳು ಮತ್ತು ಶಕ್ತಿಗಳೇ ಕೊಲೆ ಮಾಡಿರುವ ಸಾಧ್ಯತೆ ದಟ್ಟವಾಗಿ ಕಾಣುತ್ತಿರುವುದರಿಂದ ಅದನ್ನೇ ತನಿಖೆಯ ಕೇಂದ್ರ ಬಿಂದು ಮಾಡಿಕೊಳ್ಳಬೇಕು. ಎಲ್ಲ ಕೋನಗಳನ್ನೂ ಪರಿಶೀಲಿಸಬೇಕು ಎನ್ನುವುದಾದರೆ ನಕ್ಸಲೀಯರ ಕುರಿತೂ ತನಿಖೆ ನಡೆಯಲಿ. ಆದರೆ ಹತ್ಯೆ ಮಾಡಿರಬಹುದಾದವರ ಬಗ್ಗೆ ಮಾತನಾಡದೆ, ತನಿಖೆಯನ್ನೂ ಆರಂಭಿಸದೆ, ಇತ್ತ ಸಾಕ್ಷ್ಯಾಧಾರಗಳೂ ಇಲ್ಲದೆ ಊಹೆಗಳನ್ನಾಧರಿಸಿ ನಕ್ಸಲೀಯರೇ ಮಾಡಿದ್ದಾರೆ ಎಂದು ತೀರ್ಪು ನೀಡುವುದನ್ನು ನಿಲ್ಲಿಸಿ.

‘ನೂರು ಬಾರಿ ಪುನರಾವರ್ತಿಸಿದರೆ ಸುಳ್ಳೂ ಸತ್ಯವಾಗಿಬಿಡುತ್ತದೆ’ ಎಂಬ ಹಿಟ್ಲರ್‍ನ ಪ್ರಚಾರ ಮಂತ್ರಿ ಗೋಬೆಲ್ಸನ ನೀತಿಯನ್ನಾಧರಿಸಿ, ಸಾಕ್ಷ್ಯಾಧಾರಗಳಿಲ್ಲದೆ ಜನರ ಕಿವಿಗಳಿಗೆ ಅದೇ ಸುಳ್ಳನ್ನು ಮತ್ತೆ ಮತ್ತೆ ಬಿತ್ತರಿಸುವುದನ್ನು ಮುಂದುವರಿಸಿದರೆ ಅಂತಹ ಸಂಘಟನೆಗಳ, ಸರ್ಕಾರದ, ಮಾಧ್ಯಮದ ಕಛೇರಿಗಳ ಮುಂದೆ ನಾವು ಉಪವಾಸ ಸತ್ಯಾಗ್ರಹವನ್ನು ಆರಂಭಿಸುತ್ತೇವೆ. ಇದು ಖಚಿತ. ಏಕೆಂದರೆ ಗೌರಿಯ ಹಂತಕರನ್ನು ಬಚಾವಾಗಲು ನಾವು ಬಿಡುವುದಿಲ್ಲ. ಅವರನ್ನು ಉಳಿಸಿಕೊಳ್ಳಲು ನಮ್ಮಿಂದ ಆಗಲಿಲ್ಲ, ಅವರ ಕೊಲೆಯ ಬಗೆಗಿನ ಸತ್ಯವನ್ನಾದರೂ ಕೊಲೆಯಾಗದಂತೆ ಉಳಿಸಿಕೊಳ್ಳಲೇಬೇಕಿದೆ.

– “ನಾವೂ ಗೌರಿ”
ಸಿರಿಮನೆ ನಾಗರಾಜ್ ಮತ್ತು ನೂರ್ ಶ್ರೀಧರ್.

 

Leave a Reply

Your email address will not be published. Required fields are marked *