Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸತ್ಯ ಮತ್ತು ಸ್ವಾತಂತ್ರ್ಯದ ಬಗ್ಗೆ ಮಾತನಾಡಬೇಕಿದೆ…

* ರವೀಂದ್ರ ಗಂಗಲ್

# ನಾವೀಗ ಕುಳಿತು ಯೋಚಿಸಬೇಕಿದೆ. ಅವರು ಸಾವಿರಾರು ವರ್ಷಗಳಿಂದ ನಮಗೆ ಜ್ಞಾನ ಹಂಚಲಿಲ್ಲ, ನಮ್ಮಿಂದ ಅಕ್ಷರಗಳನ್ನು ಮುಚ್ಚಿಟ್ಟರು. ಆದರೂ, ನಾವು ಈ ನೆಲವನ್ನು ಉತ್ತಿದೆವು. ಬಿತ್ತಿದೆವು. ಈ ನೆಲದಲ್ಲಿ ಬೆಳೆದವು. ಬೆವರು ಹರಿಸಿದೆವು. ಮನುಷ್ಯನಿಗೆ ಮೂಲವಾಗಿ ಬೇಕಾದ ಅನ್ನವನ್ನು ಹಂಚಿದೆವು. ಆದರೆ, ಅವರು ಧರ್ಮ, ದೇವರು, ಸಂಸ್ಕಾರ ಹಾಗೂ ಸಂಸ್ಕೃತಿಯ ಹೆಸರಿನಲ್ಲಿ ನಮ್ಮನ್ನು ಭಯಗ್ರಸ್ತರನ್ನಾಗಿ ಮಾಡಿದರು. ಅನ್ನದ ಋಣವನ್ನು ಸಹ ಅವರು ನೆನಪಿಸಿಕೊಳ್ಳಲಿಲ್ಲ. ಆದರೆ, ಇವತ್ತು ಕಾಲ ಬದಲಾಗಿದೆ, ಮನುಷ್ಯ ಬದುಕುವ ಪರಿಕಲ್ಪನೆ ಬದಲಾಗಿದೆ. ನಮಗೀಗ ಎಲ್ಲವೂ ದೊರೆಯುತ್ತಿದೆ. ಎಲ್ಲವೂ ದಕ್ಕುತ್ತಿದೆ. ಆದ್ದರಿಂದ, ನಾವು ಅಮಾಯಕರಂತೆ ವರ್ತಿಸುವುದನ್ನು ಬಿಡಬೇಕು. ಅವರು ನಮ್ಮನ್ನು ಕೆರಳಿಸಲೆಂದೇ ವಯುಕ್ತಿಕ ದಾಳಿಗಳಿಗೆ ಇಳಿಯುತ್ತಾರೆ. ನಾವು ಮುಗ್ದರಂತೆ ಹಠಾತ್ತನೆ ಪ್ರತಿ ದಾಳಿಗಿಳಿಯುತ್ತೇವೆ. ಈ ಅಮಾಯಕತೆಯೇ ಅತೀ ದೊಡ್ಡ ಶಾಪವೆನಿಸುತ್ತದೆ ನನಗೆ. ಇದು ನಾವು ಮಾಡುತ್ತಿರುವ ಅತೀ ದೊಡ್ಡ ತಪ್ಪು ಕೂಡಾ.

ಈಗ ನಾವೇನು ಮಾಡಬೇಕೆಂದು ನೀವು ನನ್ನನ್ನು ಕೇಳಿದರೆ… ನನ್ನಲ್ಲಿರುವ ಉತ್ತರವಿಷ್ಟೇ… ನಾವೀಗ ಅಪಾರ ಜ್ಞಾನದ ಹುಡುಕಾಟದಲ್ಲಿ ಮುಳುಗಬೇಕು. ಹೆಚ್ಚು ಹೆಚ್ಚು ಓದಬೇಕು. ಹೆಚ್ಚು ಹೆಚ್ಚು ಅಲೆಯಬೇಕು. ಹೆಚ್ಚು ಹೆಚ್ಚು ಬರೆಯಬೇಕು. ಹೆಚ್ಚು ಹೆಚ್ಚು ಹಂಚಬೇಕು. ಮೊದಲು ನಮ್ಮ ಜೀವನಶೈಲಿ ಬದಲಾಗಬೇಕು. ಪ್ರಗತಿಪರರೆಂದರೆ ಕುಡುಕರು, ವ್ಯಸನಿಗಳು, ಅಶಿಸ್ತಿನ ಜೀವನ ಹೊಂದಿದವರು, ಹಾದರ ಮಾಡುವವರು, ಚಾರಿತ್ರ್ಯಹೀನರೆಂಬಂತೆ ಬಿಂಬಿಸುವ ಆ ಜನಕ್ಕೆ ನಾವೆಷ್ಟು ಮಾನಸಿಕ ಸ್ವಾಸ್ತ್ಯವನ್ನು ಕಾಪಾಡಿಕೊಂಡಿದ್ದೇವೆಂದು ತೋರಿಸಿಕೊಡಬೇಕು. ನಮ್ಮ ಗುರಿ ವ್ಯಕ್ತಿಯಾಗಿರದೆ, ಅವನ ವಿಚಾರಗಳನ್ನು ಸೋಲಿಸುವುದಾಗಿರಬೇಕು. ಅದಕ್ಕೆ ಹೆಚ್ಚು ಓದಿ, ಹೆಚ್ಚು ಅಲೆದಾಡಿ, ಹೆಚ್ಚು ಸ್ಪಂದಿಸಿ, ಹೆಚ್ಚು ಪ್ರೀತಿಸಲು ಕಲಿಯಬೇಕು. ಅವತ್ತು ನಮಗೆ ಮಾರ್ಗದರ್ಶನ ಮಾಡಲು ಬಸವನಿದ್ದ. ಗಾಂಧೀ ಇದ್ದ. ಅಂಬೇಡ್ಕರ್ ಇದ್ದರು. ಜಯಪ್ರಕಾಶ ನಾರಾಯಣರಿದ್ದರು. ಅವರು ನಡೆ, ನುಡಿ ಪ್ರಕಾರವಾಗಿತ್ತು. ಆದರೆ, ಇವತ್ತು ಅಂತಹ ಪ್ರಕರತೆಯುಳ್ಳ ನಾಯಕತ್ವದ ಕೊರತೆ ನಮಗಿದೆ.

ನಮಗೆ ನೋವಾಗುವಂತಹ ಘಟನೆಯೊಂದು ಜರುಗುತ್ತದೆ. ನಾವು ಹಠಾತ್ತಾಗಿ ಸಭೆ ಸೇರುತ್ತೇವೆ, ಪ್ರತಿಭಟನೆ ಮಾಡುತ್ತವೆ, ಸಾಮಾಜಿಕ ಜಾಲತಾಣಗಳಲ್ಲಿ ವಿರೋಧಿಗಳ ನಿಂದೆಗಿಳಿಯುತ್ತೇವೆ. ಕ್ರಮೇಣ ಹೋರಾಟದ ಕಿಚ್ಚು ಕಡಿಮೆಯಾಗುತ್ತದೆ. ಎಲ್ಲವನ್ನೂ ಮರೆತುಬಿಡುತ್ತೇವೆ. ಒಂದಷ್ಟು ದಿನಗಳಲ್ಲಿ ಇವೆಲ್ಲ ಅರ್ಥ ಕಳೆದುಕೊಳ್ಳುತ್ತವೆ. ಕೆಲದಿನಗಳ ನಂತರ ಮತ್ತೊಂದು ಘಟನೆ ಸಂಭವಿಸುತ್ತದೆ. ಮತ್ತೆ ಕೂಗುತ್ತೇವೆ, ಮತ್ತೆ ಪ್ರತಿಭಟಿಸುತ್ತೇವೆ, ಮತ್ತೆ ನಿಂದೆಗಿಳಿಯುತ್ತೇವೆ. ಅದು ಕೂಡ ಅಂತ್ಯ ಕಾಣುತ್ತದೆ. ನಮ್ಮ ಹೋರಾಟ, ಪ್ರತಿಭಟನೆ, ಧರಣಿ, ಸತ್ಯಾಗ್ರಹಗಳೂ ಸಹ ಪ್ಯಾಟರ್ನ್ ಆಗಿ ಹೋಗಿರುವುದು ದುರಂತ. ಇದು ಮೊದಲು ನಿಲ್ಲಬೇಕಿದೆ.

ನಾವು ಕಿರುಚುವುದು ಬೇಡ, ಕೂಗಾಡುವುದು ಬೇಡ, ಕೋಪದಿಂದ ವರ್ತಿಸುವುದು ಬೇಡ. ನಾವು ಮಾತನಾಡೋಣ, ಅಕ್ಷರಗಳನ್ನು ಹಂಚೋಣ, ಚಿಂತನಾ ದಾಸೋಹ ಆರಂಭಿಸೋಣ, ಚರ್ಚೆ, ಸಂವಾದಕ್ಕಿಳಿಯೋಣ. ನಿಮಗೆ ಹೇಳುತ್ತೇನೆ, ನನಗೊಂದು ಭರವಸೆ ಇದೆ. ನಾವು ಹಂಚುವ ಜ್ಞಾನದಿಂದ ಮುಂದಿನ ಕೆಲವು ವರ್ಷಗಳಲ್ಲಿ ಯುವಕರು ತಮ್ಮ ಆಲೋಚನೆಗಳನ್ನು ಬದಲಾಯಿಸುತ್ತಾರೆ. ಸತ್ಯ ಮತ್ತು ಸ್ವಾತಂತ್ರ್ಯದ ಬಗ್ಗೆ ಅವರಿಗೆ ಅರಿವಾಗುತ್ತೆ. ಮತ್ತೆ ನಾವು ಬಹುಸಂಖ್ಯಾತರಾಗುತ್ತೇವೆ. ಅವರು ಅಲ್ಪಸಂಖ್ಯಾತರಾಗುತ್ತಾರೆ. ಅದಕ್ಕಾಗಿ, ನಾವೀಗ ಕೇವಲ ಸತ್ಯ ಮತ್ತು ಸ್ವಾತಂತ್ರ್ಯದ ಬಗ್ಗೆ ಮಾತನಾಡಬೇಕಿದೆ. ಅವುಗಳ ಪ್ರಾಮುಖ್ಯತೆಯ ಬಗ್ಗೆ ಮಾತನಾಡಬೇಕಿದೆ.

 

Leave a Reply

Your email address will not be published. Required fields are marked *