Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಲ್ಲಡ್ಕ ಹೇಳಿಕೆ: ಅಜ್ಞಾನದ ಪರಮಾವಧಿಗೆ ಸಾಕ್ಷಿಯೇ, ಗೌರಿ ಹತ್ಯೆ ಹಿನ್ನೆಲೆಯ ಭಯವೇ ?

  • ಶ್ರೀರಾಮ ದಿವಾಣ

# ‘’ಗೌರಿಯೂ ಗೊತ್ತಿಲ್ಲ, ಅವರಪ್ಪನೂ ಗೊತ್ತಿಲ್ಲ. ಅವರು ಯಾಕೆ ನನ್ನ ಬಗ್ಗೆ ಬರೆಯುತ್ತಿದ್ದರು ಎಂಬುದೂ ತಿಳಿದಿಲ್ಲ. ಅವರ ಪತ್ರಿಕೆಯನ್ನು ನಾನು ಇಂದಿಗೂ ಓದಿಲ್ಲ’’ ಹೀಗೆಂದು ಹೇಳಿದವರು ಯಾವುದೇ ಒಂದು ಪಕ್ಷದ, ಸಂಘಟನೆಯ ಸಾಮಾನ್ಯ ಕಾರ್ಯಕರ್ತನಲ್ಲ. ಅಕ್ಷರ ವಂಚಿತ ದಿನಗೂಲಿ ಕಾರ್ಮಿಕನೂ ಅಲ್ಲ. ಅಪಾಪೋಲಿಯಾಗಲೀ, ಅಬ್ಬೆಪಾರಿಯಾಗಲೀ ಅಲ್ಲ. ಇದಾವುದೂ ಅಲ್ಲದ ವ್ಯಕ್ತಿಯೇ ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ. ಅವರು ಬೇರೆ ಯಾರೂ ಅಲ್ಲ. ಕಲ್ಲಡ್ಕ ಪ್ರಭಾಕರ ಭಟ್ಟ.

ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಅವರೊಬ್ಬ ಕೇವಲ ವ್ಯಕ್ತಿ ಎಂದು ಪರಿಗಣಿಸವಂತಿಲ್ಲ. ಕಲ್ಲಡ್ಕದಲ್ಲಿರುವ ಶ್ರೀರಾಮ ವಿದ್ಯಾ ಕೇಂದ್ರದ ಅಧ್ಯಕ್ಷರು. ಎಲ್ಲಕ್ಕೂ ಮುಕ್ಯವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಎಂಬ ದೇಶದ ಬಹುದೊಡ್ಡ ಸಂಘಟನೆಯ ಪ್ರಮುಖ ಮುಖಂಡರು.

ದೇಶ, ದೇಶಪ್ರೇಮ, ಸಂಸ್ಕೃತಿ, ಪರಂಪರೆ, ಸಂಪ್ರದಾಯ, ಇತಿಹಾಸ, ಜ್ಞಾನ ಇತ್ಯಾದಿಗಳ ಬಗ್ಗೆ ಮಾತಾಡುವ ಸಂಘಟನೆಯ ಮುಖ್ಯಸ್ಥ. ಇಂಥವರು ಹೀಗೆ ‘’ಗೌರಿಯೂ ಗೊತ್ತಿಲ್ಲ, ಅವರಪ್ಪನೂ ಗೊತ್ತಿಲ್ಲ, ಲಂಕೇಶ್ ಪತ್ರಿಕೆಯನ್ನು ಇದುವರೆಗೂ ಓದಿಲ್ಲ’’ ಎಂದು ಹೇಳುತ್ತಾರೆ ಎಂದರೆ, ಈ ಹೇಳಿಕೆಯನ್ನು ಎರಡು ರೀತಿಯಲ್ಲಿ ಅರ್ಥೈಸಿಕೊಳ್ಳಬೇಕಾಗುತ್ತದೆ. ಒಂದು, ಕಲ್ಲಡ್ಕ ಭಟ್ಟರು ಅಜ್ಞಾನದ ಪರಮಾವಧಿ. ಇನ್ನೊಂದು, ಉದ್ಧೇಶಪೂರ್ವಕ ನೀಡಿದ ಅಪ್ಪಟ ಹಸಿ ಹಸಿ ಸುಳ್ಳು ಹೇಳಿಕೆ. ಇವೆರಡರಲ್ಲಿ ಒಂದಂತೂ ಖಂಡಿತ.

ಇವೆರಡೂ ಸಹ ಗಂಭೀರವಾದ, ಚರ್ಚಿಸಲೇ ಬೇಕಾದ ವಿಷಯ. ಪಿ.ಲಂಕೇಶ್ ರವರು ನಮ್ಮ ನಾಡಿನ ಒಬ್ಬರು ಪ್ರಮುಖ ಲೇಖಕರು, ಸಾಹಿತಿ, ಪತ್ರಕರ್ತ. ಪಿ.ಲಂಕೇಶ್ ರವರ ಸಾಹಿತ್ಯಕ್ಕೆ ಅನೇಕ ಪ್ರಶಸ್ತಿಗಳು ಸಂದಿವೆ. ಸರಕಾರವನ್ನು, ಆಡಳಿತ ವ್ಯವಸ್ಥೆಯನ್ನು, ನಾಗರಿಕ ಸಮಾಜವನ್ನು ಪ್ರಭಾವಿಸಿದ ಪ್ರಭಾವೀ ಪತ್ರಿಕೆಯಾದ ‘ಲಂಕೇಶ್ ಪತ್ರಿಕೆ’ ಎಂಬ ರಾಜ್ಯದ ಅತ್ಯಂತ ಪ್ರಮುಖ ವಾರ ಪತ್ರಿಕೆಯೊಂದರ ಸಂಪಾದಕರು.

ಗೌರಿ ಲಂಕೇಶ್ ರವರು ಸಹ ಕಳೆದ ಹಲವು ವರ್ಷಗಳಿಂದ ಪ್ರಕಟವಾಗುತ್ತಿರುವ ‘ಗೌರಿ ಲಂಕೇಶ್’ ವಾರ ಪತ್ರಿಕೆಯ ಸಂಪಾದಕರು. ಇದರ ಜೊತೆಗೆ ಕೋಮುವಾದ ವಿರೋಧಿ ಹೋರಾಟದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡ ಒಬ್ಬಾಕೆ ಹೋರಾಟಗಾರ್ತಿ, ಭಾಷಣಗಾರ್ತಿ. ಇವರ ಭಾಷಣದ ವಿರುದ್ಧ, ಕಲ್ಲಡ್ಕ ಪ್ರಭಾಕರ ಭಟ್ಟರು ಯಾವ ಸಂಘಟನೆಯ ಮುಖ್ಯಸ್ಥರೋ, ಅದೇ ಸಂಘಟನೆಯ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿರುವಂಥದ್ದೇ.

ಇಂಥ ಪತ್ರಿಕೆಯನ್ನು, ವ್ಯಕ್ತಿಗಳನ್ನು ಕಲ್ಲಡ್ಕ ಭಟ್ಟರಿಗೆ ನಿಜಕ್ಕೂ ಗೊತ್ತಿಲ್ಲ ಎಂದರೆ, ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದುರಂತವೇ ಸರಿ. ಕಲ್ಲಡ್ಕ ಪ್ರಭಾಕರ ಭಟ್ಟರನ್ನು ಅಜ್ಞಾನದ ಪರಮಾವಧಿ ವ್ಯಕ್ತಿ ಎನ್ನದೇ ನಿರ್ವಾಹವೇ ಇಲ್ಲ. ಅಜ್ಞಾನದ ಪರಮಾವಧಿ ವ್ಯಕ್ತಿಯೊಬ್ಬರು ನಮ್ಮ ದೇಶದ ಬಹುದೊಡ್ಡ ಸಂಘಟನೆಯೊಂದರ ಪ್ರಮುಖ ಮುಖಂಡ ಎನ್ನುವುದು ಇನ್ನಷ್ಟೂ ವಿಷಾದನೀಯ ವಿಚಾರ. ಹಾಗೆ ಪರಿಗಣಿಸಿದರೆ, ನಮ್ಮ ದೇಶಕ್ಕೆ ಭವಿಷ್ಯವಿಲ್ಲ ಎಂದೂ ಹೇಳಬೇಕಾಗುತ್ತದೆ.

ಒಬ್ಬ ಅಜ್ಞಾನಿ, ಪ್ರಚಲಿತ ವಿದ್ಯಾಮಾನಗಳ, ಬೆಳವಣಿಗೆಗಳ, ಆಗುಹೋಗುಗಳ ಬಗ್ಗೆ, ಚರಿತ್ರೆ, ಇತಿಹಾಸ ಇತ್ಯಾದಿಗಳ ಬಗ್ಗೆ ಸಮರ್ಪಕವಾದ ಅರಿವು ಇಲ್ಲದವನು ಯಾವುದೇ ಸಂಘಟನೆಗೆ ನಾಯಕನಾಗಲೇಬಾರದು. ಇಂಥ ಅಜ್ಞಾನಿ ನಾಯಕನಾದರೆ, ತಾನು ಹೊಂಡಕ್ಕೆ ಬೀಳುವುದು ಅಲ್ಲದೆ, ಲಕ್ಷಾಂತರ ಜನರಿರುವ ಸಂಘಟನೆಯನ್ನೂ ಆತ ಹೊಂಡಕ್ಕೆ ಬೀಳಿಸಿಬಿಡುತ್ತಾನೆ. ಅಂಥ ಸಂಘಟನೆಯ ರಾಜ್ಯ ಸರಕಾರಗಳಿಗೆ, ಕೇಂದ್ರ ಸರಕಾರಕ್ಕೆ, ಜನಪ್ರತಿನಿಧಿಗಳಿಗೆ, ರಾಜಕಾರಣಿಗಳಿಗೆ ಮಾರ್ಗದರ್ಶನ ನಡುವಂಥ ಸ್ಥಾನ ಮಾನದಲ್ಲಿ ಇರುವವರಾದರೆ, ಅವರು ಇಡೀ ದೇಶವನ್ನು, ಜನರನ್ನು ಆಳವಾದ ಕಂದಕಕ್ಕೆ ಬೀಳಿಸುವುದು ಖಚಿತ ಎನ್ನುವುದರಲ್ಲಿ ಯಾವುದೇ ಅನುಮಾನವೂ ಇಲ್ಲ.

ಕಲ್ಲಡ್ಕ ಪ್ರಭಾಕರ ಭಟ್ಟರು ಎಷ್ಟೊಂದು ಅಜ್ಞಾನಿ ಎಂಬುದು ಇದೀಗ ತಡವಾಗಿಯಾದರೂ ಬಯಲಾಗಿದೆ. ಇವರನ್ನು ಸಂಘದ ಪ್ರಮುಖರನ್ನಾಗಿ ಮಾಡಿದವರು ಅದು ಯಾರು ಎಂಬುದೂ ಸಹ ಇದೀಗ ಕುತೂಹಲಕ್ಕೆ ಕಾರಣವಾಗುವ ವಿಷಯವೇ ಆಗಿದೆ. ಮುಖ್ಯವಾಗಿ ಆರ್ ಎಸ್ ಎಸ್ ಕಾರ್ಯಕರ್ತರು ಇನ್ನಾದರೂ ಒಂದು ಸತ್ಯವನ್ನು ಈ ಒಂದು ಬೆಳವಣಿಗೆಯ ಬಳಿಕವಾದರೂ ಅರ್ಥಮಾಡಿಕೊಳ್ಳಬೇಕು. ನಾವು ಇಷ್ಟರವರೆಗೂ ತೊಡಗಿಸಿಕೊಂಡಿರುವುದು ಅಜ್ಞಾನಿಯೊಬ್ಬರು ಮುಖ್ಯಸ್ಥರಾಗಿರುವ ಸಂಘಟನೆಯಲ್ಲಿ, ಸಂಘದ ಮುಖ್ಯಸ್ಥರೇ ಇಷ್ಟೊಂದು ಅಜ್ಞಾನಿಯಾಗಿದ್ದರೆ, ಇವರು ನಮಗೆ ಕೊಟ್ಟ ಕ್ಲಾಸ್ ಗಳು ಇನ್ನೆಷ್ಟು ಅಜ್ಞಾನದಿಂದ ಕೂಡಿರಬಹುದು ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ.

ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ಲಂಕೇಶ್ ವಾರ ಪತ್ರಿಕೆಯನ್ನು ಮಾತ್ರ ಗೊತ್ತಿಲ್ಲದಿರುವುದು ಅಲ್ಲ. ಅವರಿಗೆ ಪವಿತ್ರವಾದ ಋಗ್ವೇದ, ಯುಜುರ್ವೇದ, ಸಾಮವೇದ ಮತ್ತು ಅಥರ್ವ ವೇದಗಳನ್ನು ಸಹ ಗೊತ್ತಿಲ್ಲದೇ ಇರುವ ಸಾಧ್ಯತೆಯೇ ಹೆಚ್ಚು. ನನ್ನ ಪ್ರಕಾರ ವೇದಗಳ ಕನಿಷ್ಟ ಜ್ಞಾನವೂ ಈ ಭಟ್ಟರಿಗಿಲ್ಲ. ಇರುತ್ತಿದ್ದರೆ ಕನಿಷ್ಟ ತಮ್ಮ ಸಂಘದ ಕಾರ್ಯಕರ್ತರಿಗಾದರೂ ವೇದದ ಜ್ಞಾನವನ್ನು ಅವರು ಹಂಚುತ್ತಿದ್ದರು. ವೇದ ಜ್ಞಾನವನ್ನು ಅವರು ಸಂಘದ ಕಾರ್ಯಕರ್ತರಿಗೆ ಹಂಚಿಲ್ಲ ಎನ್ನುವುದೇ ಹೆಚ್ಚು ಸೂಕ್ತ ಎನಿಸುತ್ತದೆ. ಹಂಚುತ್ತಿದ್ದರೆ, ದೇವರು, ಧರ್ಮದ ವಿಚಾರವಾಗಿ ಸಂಘದ ಕಾರ್ಯಕರ್ತರು ಹೀಗೆ ಅಜ್ಞಾನಾಂಧಾರದಲ್ಲಿ ತೊಳಲಾಡುತ್ತಿರಲಿಲ್ಲ.

ಇಂಥ ಅಜ್ಞಾನಿ ಒಂದು ವಿದ್ಯಾ ಕೇಂದ್ರದ ಅಧ್ಯಕ್ಷರಾಗಿರುವುದನ್ನು ಯೋಚಿಸಿದರೆ, ಈ ವಿದ್ಯಾಕೇಂದ್ರದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಹಾಗೂ ಪೋಷಕರ ಬಗ್ಗೆ ಏಕಕಾಲಕ್ಕೆ ಅನುಕಂಪ, ಸಹಾನೂಭೂತಿ, ವಿಷಾದ ಎಲ್ಲವೂ ಜತೆಯಾಗಿ ಮೂಡುತ್ತದೆ. ಯಥಾ ರಾಜಾ, ತಥಾ ಪ್ರಜಾ ಎಂಬಂತೆ ಅಜ್ಞಾನಿಯಾದವನು ಅಜ್ಞಾನಿಗಳನ್ನು ಮಾತ್ರವೇ ಸೃಷ್ಟಿಸಬಲ್ಲ.

ಸತ್ಯ ಪರಮಾತ್ಮನನ್ನು ತಿಳಿದುಕೊಳ್ಳಬೇಕು, ನಿಜ ಧರ್ಮವನ್ನು ಅರಿತುಕೊಳ್ಳಬೇಕು, ನೆಲ, ಜಲ, ನಾಡು, ನುಡಿ, ಮಾನವ ಪ್ರೇಮದೊಂದಿಗೆ ದೇಶಪ್ರೇಮಿಯಾಗಿ ಘನತೆ-ಗೌರವದಿಂದ, ಅಭಿಮಾನ-ಹೆಮ್ಮೆಯಿಂದ ಬಾಳಿ ಬದುಕಿ ಆದರ್ಶದ, ಮಾದರಿ ಬದುಕು ಸಾಗಿಸಿ, ದೇವರು ಮೆಚ್ಚುವಂತೆ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂಬ ಉತ್ಕಟೇಚ್ಚೆ ಹೊಂದಿರುವ ಜನರು ಇನ್ನಾದರೂ ಅಜ್ಞಾನಿಗಳ ಸಂಘದಿಂದ ಮುಕ್ತರಾಗುವುದು ಒಳ್ಳೆಯದು ಎನ್ನುವುದು ನನ್ನ ಸಲಹೆ.

ನಾನು ಬಲಪಂಥೀಯನಲ್ಲ. ಆದರೂ ಬಲಪಂಥೀಯರ ಮುಖವಾಣಿಗಳಾದ ವಿಕ್ರಮ, ಪುಂಗವ, ಹೊಸದಿಗಂತದಂಥ ಪತ್ರಿಕೆಗಳನ್ನು ಖಾಯಂ ಆಗಿ ಓದುತ್ತೇನೆ. ಬಲಪಂಥೀಯರು ಬರೆಯುವ ಲೇಖನಗಳನ್ನು, ಪುಸ್ತಕಗಳನ್ನು ಓದುತ್ತೇನೆ, ಭಾಷಣಗಳನ್ನು ಕೇಳುತ್ತೇನೆ. ಅನೇಕ ಮುಸ್ಲೀಮರು ಹಿಂದೂ ಗ್ರಂಥಗಳನ್ನು ಓದಿರುವುದನ್ನು ನಾನು ಬಲ್ಲೆ. ಕಲ್ಲಡ್ಕ ಪ್ರಭಾಕರ ಭಟ್ಟರ ಹೇಳಿಕೆಯನ್ನು ಗಮನಿಸಿದಾಗ, ಆರ್ ಎಸ್ ಎಸ್ ನಲ್ಲಿ ಹೆಚ್ಚು ಓದದವರೇ ಪ್ರಮುಖ ಸ್ಥಾನದಲ್ಲಿ ಇದ್ದಾರೆ ಎನಿಸುತ್ತದೆ.

ಒಂದು ಪಕ್ಷ, ಕಲ್ಲಡ್ಕ ಪ್ರಭಾಕರ ಭಟ್ಟರು, ಮೇಲಿನ ಹೇಳಿಕೆಯನ್ನು ಉದ್ಧೇಶಪೂರ್ವಕವಾಗಿ ನೀಡಿದ್ದಾರೆ ಎಂದು ಯಾರಾದರೂ ಹೇಳುವುದಾದರೆ, ಇಂಥ ಸುಳ್ಳು ಹೇಳಿಕೆ ನೀಡಿದ ಉದ್ಧೇಶವೇನು ಎಂಬ ಬಗ್ಗೆಯೂ ಚರ್ಚಿಸುವುದು ಅಗತ್ಯ. ಗೌರಿ ಲಂಕೇಶ್ ಹತ್ಯೆಯ ಹಿಂದೆ ಹಿಂದೂ ಮೂಲಭೂತವಾದಿಗಳ ಕೈವಾಡವಿದೆ ಎಂದು ಹಲವು ಈಗಾಗಲೇ ಶಂಕೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಎಸ್ ಐ ಟಿ ಅಧಿಕಾರಿಗಳು ತನ್ನನ ವಿಚಾರಣೆ ನಡೆಸದಿರಲಿ ಎಂಬ ಭಯದಿಂದ ಕಲ್ಲಡ್ಕ ಭಟ್ಟರು ಹೀಗೆ ಸುಳ್ಳು ಹೇಳಿರಬಹುದಾ ಎಂಬುದೂ ಒಂದು ಅನುಮಾನ.

ಭಯ ಸುಮ್ಮನೇ ಹುಟ್ಟಿಕೊಳ್ಳುವುದಿಲ್ಲ. ಸತ್ಯ ತಿಳಿದಿರುವುದೂ ಕೆಲವೊಮ್ಮೆ ಭಯಕ್ಕೆ ಕಾರಣವಾಗುವ ಸಾಧ್ಯತೆ ಇರುತ್ತದೆ. ಇದುವೇ ನಿಜವೆಂದಾದರೆ, ಗೌರಿ ಹತ್ಯೆಗೆ ಸಂಬಂಧಿಸಿದಂತೆ ಯಾವುದೋ ಒಂದು ಗಹನವಾದ ಸತ್ಯ ಕಲ್ಲಡ್ಕ ಪ್ರಭಾಕರ ಭಟ್ಟರಿಗೆ ತಿಳಿದಿರಬಹುದೇ ಎಂಬ ಸಂಶಯ ಸಹಜವಾಗಿ ಮೂಡುವಂತಾಗಿದೆ. ಈ ಕಾರಣಕ್ಕೆ, ಗೌರಿ ಲಂಕೇಶ್ ಹತ್ಯೆಯಲ್ಲಿ ನಿಗೂಢತೆಯನ್ನು ಬೇಧಿಸುವ ನಿಟ್ಟಿನಲ್ಲಿ ಎಸ್ ಐ ಟಿ ಅಧಿಕಾರಿಗಳು ಇನ್ನು ವಿಳಂಬಿಸದೆ, ಕಲ್ಲಡ್ಕ ಭಟ್ಟರನ್ನು ತೀವ್ರವಾದ ವಿಚಾರಣೆಗೆ ಗುರಿಪಡಿಸುವುದು ಅನಿವಾರ್ಯವಾಗುತ್ತದೆ.

One Comment

  1. udyavaranagesh@gmail.com'

    udyavara nagesh kumar

    September 15, 2017 at 11:06 am

    ಎಲ್ಕ ಇಂದ್ರಿಯಗಳನ್ನು ಮುಚ್ಚಿ ಕೊಂಡ ಮನುಷ್ಯನೀತ

Leave a Reply

Your email address will not be published. Required fields are marked *